
ತಿರುಗೇಟು ನೀಡಿದ ಸ್ನೇಹಮಯಿ ಕೃಷ್ಣ: ಗಿರೀಶ್ ಮಟ್ಟಣ್ಣವರ ಟೀಕೆಗಳಿಗೆ ಪೋಸ್ಟ್ ವಾರ್
ಗಿರೀಶ್ ಮಟ್ಟಣ್ಣವರ ಅವರಿಗೆ ತಿರುಗೇಟು ನೀಡಿರುವ ಸ್ನೇಹಮಯಿ ಕೃಷ್ಣ, ಸೌಜನ್ಯ ಸಾವಿಗೆ ಯಾರು ಕಾರಣ ಎಂಬುದನ್ನು ಖಚಿತ ಪಡಿಸುತ್ತೇನೆ ಎಂದು ಸವಾಲೆಸಿದ್ದಾರೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತಮ್ಮ ಆರೋಪಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಸ್ನೇಹಮಯಿ ಕೃಷ್ಣ, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಅವರ ಆರೋಪಗಳಿಗೆ ಸವಾಲು ಹಾಕಿದ್ದಾರೆ.
ಮುಡಾ ಹಗರಣದ ಆರೋಪಿ ಡಿ.ಬಿ. ನಟೇಶ್‌ಗೆ ಬಡ್ತಿ ನೀಡುವ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಹೆಸರನ್ನು ತಪ್ಪಾಗಿ ಉಲ್ಲೇಖಿಸಿದ್ದಕ್ಕಾಗಿ ಸ್ನೇಹಮಯಿ ಕೃಷ್ಣ ಇತ್ತೀಚೆಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಈ ಕ್ಷಮೆಯಾಚನೆಯನ್ನೇ ಅಸ್ತ್ರವಾಗಿಸಿಕೊಂಡಿದ್ದ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್, "ಸ್ನೇಹಮಯಿ ಕೃಷ್ಣ ಅವರು ಆಧಾರವಿಲ್ಲದೆ ಸುಳ್ಳು ಆರೋಪಗಳನ್ನು ಮಾಡುತ್ತಾರೆ" ಎಂದು ವೀಡಿಯೋ ಮೂಲಕ ಟೀಕಿಸಿದ್ದರು. ಇದಕ್ಕೆ ಪೋಸ್ಟ್ ಮೂಲಕ ಉತ್ತರಿಸಿರುವ ಕೃಷ್ಣ, "ಕೇವಲ ಹೆಸರಿನ ಗೊಂದಲಕ್ಕೆ ಕ್ಷಮೆ ಕೇಳಿದ್ದನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
"ನಾನು ದಾಖಲೆಗಳಿಲ್ಲದೆ ಸುಳ್ಳು ಆರೋಪ ಮಾಡಿದ್ದರೆ, ನಾನು ಮೊಕದ್ದಮೆ ದಾಖಲಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕುಟುಂಬದ ಹೆಸರಿನಲ್ಲಿದ್ದ 60 ಕೋಟಿ ಮೌಲ್ಯದ 14 ನಿವೇಶನಗಳನ್ನು ಏಕೆ ವಾಪಸ್ ನೀಡುತ್ತಿದ್ದರು? ಜಾರಿ ನಿರ್ದೇಶನಾಲಯದವರು (ED) ಇದುವರೆಗೆ 460 ಕೋಟಿ ಮೌಲ್ಯದ ಸ್ವತ್ತುಗಳನ್ನು ಏಕೆ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು? ಮುಡಾದ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಸುಮಾರು 70 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇಡಲು ಸಾಧ್ಯವಾಗುತ್ತಿತ್ತೇ? ನಾನು ದೂರು ನೀಡಿದ ಕೇವಲ ಒಂದೂವರೆ ವರ್ಷದಲ್ಲಿ ಇಷ್ಟೆಲ್ಲಾ ಪ್ರಗತಿಯಾಗಿದೆ. ಆದರೆ ಗಿರೀಶ್ ಮಟ್ಟಣ್ಣವರ್ ಅವರು ಕಳೆದ 13 ವರ್ಷಗಳಿಂದ ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವುದಾಗಿ ಬರೀ ಹೇಳಿಕೆಗಳನ್ನು ನೀಡುತ್ತಿದ್ದಾರೆ ಹೊರತು, ನನ್ನಂತೆ ಸಾಕ್ಷ್ಯಾಧಾರಗಳೊಂದಿಗೆ ಕೆಲಸ ಮಾಡುತ್ತಿಲ್ಲ" ಎಂದು ಕೃಷ್ಣ ಪೋಸ್ಟ್ ಮಾಡಿದ್ದಾರೆ.
ಸೌಜನ್ಯ ಪ್ರಕರಣದ ತನಿಖೆಗೆ ಸವಾಲು
ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣ್ಣವರ್ ಅವರಿಗೆ ಸವಾಲು ಹಾಕಿರುವ ಸ್ನೇಹಮಯಿ ಕೃಷ್ಣ, "ಸೌಜನ್ಯ ಪ್ರಕರಣದ ಮರು ತನಿಖೆಗೆ ಸರ್ಕಾರ ಆದೇಶ ನೀಡಲಿ, ಆ ಸಾವಿಗೆ ನಿಜವಾದ ಕಾರಣ ಯಾರು ಎಂಬುದನ್ನು ನಾನು ಸಾಬೀತುಪಡಿಸುತ್ತೇನೆ" ಎಂದು ಹೇಳಿದ್ದಾರೆ.
ವಿವಾದದ ಹಿನ್ನೆಲೆ ಏನು?
ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್‌ಗೆ ಬಡ್ತಿ ನೀಡುವ ವಿಚಾರದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಸ್ನೇಹಮಯಿ ಕೃಷ್ಣ ಕ್ಷಮೆಯಾಚಿಸಿದ್ದರು. ಆದರೆ, "ನಟೇಶ್ ಬಡ್ತಿಗಾಗಿ ಲಂಚ ನೀಡಿರುವುದು ಸತ್ಯ, ಆ ನಿಲುವಿಗೆ ನಾನು ಬದ್ಧ" ಎಂದಿದ್ದಾರೆ.
"ಈ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿಯವರ ಹೆಸರನ್ನು ಉಲ್ಲೇಖಿಸಿದ್ದಕ್ಕೆ ಮಾತ್ರ ನಾನು ಕ್ಷಮೆ ಕೇಳಿದ್ದೇನೆ. ಸಾಕ್ಷ್ಯಾಧಾರ ಒದಗಿಸಿದ್ದ ವಿನೋದ್ ಎಂಬ ವ್ಯಕ್ತಿ ಈಗ ಮಾತು ಬದಲಿಸಿದ್ದಾನೆ. ನಟೇಶ್ ಬಡ್ತಿ ಪಡೆಯಲು ಪ್ರಭಾವಿ ವ್ಯಕ್ತಿಯೊಬ್ಬರಿಗೆ ಲಂಚ ನೀಡಿರುವುದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ವಿನೋದ್ ಈ ಹಿಂದೆ ನೀಡಿದ್ದನು. ಆ 'ಪ್ರಭಾವಿ' ವ್ಯಕ್ತಿ ಯಾರು ಎಂಬುದು ತನಿಖೆಯಿಂದ ಹೊರಬರಬೇಕಿದೆ" ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ.ತ್ತಾರೆ ಎಂದಿದ್ದರು.

