ಎಸ್‌ಐಆರ್‌ ಪ್ರಕ್ರಿಯೆ ವಿವಾದ: ಬಿಜೆಪಿ–ಜೆಡಿಎಸ್‌ ಜಂಟಿ ಹೋರಾಟಕ್ಕೆ ಸಿದ್ಧತೆ; ಕೋಲಾರದಲ್ಲಿ ಅಧಿಕಾರಿಗಳಿಗೆ ನೋಟಿಸ್
x

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ

ಎಸ್‌ಐಆರ್‌ ಪ್ರಕ್ರಿಯೆ ವಿವಾದ: ಬಿಜೆಪಿ–ಜೆಡಿಎಸ್‌ ಜಂಟಿ ಹೋರಾಟಕ್ಕೆ ಸಿದ್ಧತೆ; ಕೋಲಾರದಲ್ಲಿ ಅಧಿಕಾರಿಗಳಿಗೆ ನೋಟಿಸ್

ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಎಲ್‌ಒಗಳು ಮನೆಗೆ ಹೋಗದೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿಸಿ ಮಾಹಿತಿ ಪಡೆಯುತ್ತಿದ್ದಾರೆಂದು ಬಿಜೆಪಿ-ಜೆಡಿಎಸ್ ಅಕ್ರಮದ ಆರೋಪ ಮಾಡಿವೆ.


ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ಆರೋಪಿಸಿದ್ದು, ಈ ವಿಚಾರವನ್ನು ರಾಜ್ಯಾದ್ಯಂತ ಹೋರಾಟದ ರೂಪಕ್ಕೆ ತೆಗೆದುಕೊಂಡು ಹೋಗಲು ಉಭಯ ಪಕ್ಷಗಳು ಸಿದ್ಧತೆ ನಡೆಸಿವೆ.

ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು. ಆದರೆ ರಾಜ್ಯದ ಹಲವು ಭಾಗಗಳಲ್ಲಿ ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡುವ ಬದಲು ದೇವಸ್ಥಾನ, ಮಸೀದಿ, ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳಲ್ಲಿ ಸಾರ್ವಜನಿಕರನ್ನು ಗುಂಪುಗೂಡಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ಆರೋಪಿಸಿವೆ. ಈ ರೀತಿಯ ಪ್ರಕ್ರಿಯೆಯು ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿದ್ದು, ಮತದಾರರ ಪಟ್ಟಿಯಲ್ಲಿ ಅಕ್ರಮಕ್ಕೆ ಅವಕಾಶ ಕಲ್ಪಿಸಬಹುದು ಎಂದು ಪ್ರತಿಪಕ್ಷಗಳು ಹೇಳಿವೆ.

ಜಂಟಿ ಹೋರಾಟದ ರೂಪುರೇಷೆ ಕೇಂದ್ರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದ ವತಿಯಿಂದ ಜಂಟಿ ಹೋರಾಟ ನಡೆಸುವ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಹಾಗೂ ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್‌ ಒತ್ತಾಯಿಸಿವೆ.

ದೂರು ಸಲ್ಲಿಕೆ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ರಾಜಕೀಯ ವಿವಾದದ ಕೇಂದ್ರಬಿಂದುವಾಗಿದ್ದು, ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಹೊಸದಾಗಿ ನಿಯಮಬದ್ಧವಾಗಿ ನಡೆಸುವಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಿಯೋಗವು ಶುಕ್ರವಾರ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದ್ದು, ಪ್ರಸ್ತುತ ನಡೆಯುತ್ತಿರುವ ಪ್ರಕ್ರಿಯೆಯನ್ನು ರದ್ದುಗೊಳಿಸಿ ಹೊಸದಾಗಿ ಪರಿಷ್ಕರಣೆ ನಡೆಸುವಂತೆ ಆಗ್ರಹಿಸಿದರು. ಅಲ್ಲದೆ, ಸ್ಥಳೀಯ ಅಧಿಕಾರಿಗಳ ಬದಲು ಹೊರ ರಾಜ್ಯಗಳ ಬೂತ್‌ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ನೇಮಕ ಮಾಡಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವಂತೆ ಚುನಾವಣಾ ಆಯೋಗವನ್ನು ಕೋರಿರುವುದಾಗಿ ತಿಳಿಸಿದ್ದಾರೆ.

ಸೋಮವಾರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು

"ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕೇಂದ್ರ ಚುನಾವಣಾ ಆಯೋಗದ ಮುಂದೆ ಇಡುತ್ತೇನೆ. ಈಗ ನಡೆಯುತ್ತಿರುವ ಪ್ರಕ್ರಿಯೆಯನ್ನು ನಿಲ್ಲಿಸಿ, ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವಂತೆ ಮನವಿ ಮಾಡುತ್ತೇನೆ" ಎಂದು ಹೇಳಿದರು.

ಈ ವಿಷಯವು ಸರ್ಕಾರದ ನಿರ್ಧಾರಕ್ಕಿಂತ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವುದರಿಂದ ಕೇಂದ್ರದ ರಾಜಕೀಯ ನಾಯಕರಿಗಿಂತ ಚುನಾವಣಾ ಆಯೋಗದೊಂದಿಗೆ ಚರ್ಚೆ ನಡೆಸುವುದು ಮುಖ್ಯ ಎಂದು ಅವರು ಸ್ಪಷ್ಟಪಡಿಸಿದರು.

'ಮನೆ ಮನೆಗೆ ತೆರಳುವ ಬದಲು ಸಾಮೂಹಿಕವಾಗಿ ಮಾಹಿತಿ ಸಂಗ್ರಹ' ಆರೋಪ

ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಬಿಎಲ್‌ಒಗಳು ಮನೆ ಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಪರಿಶೀಲಿಸಿ ಪರಿಷ್ಕರಣೆ ನಡೆಸಬೇಕು. ಆದರೆ ರಾಜ್ಯದ ಹಲವು ಭಾಗಗಳಲ್ಲಿ ದೇವಸ್ಥಾನಗಳು, ಮಸೀದಿಗಳು, ಸಮುದಾಯ ಭವನಗಳು, ಕಲ್ಯಾಣ ಮಂಟಪಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಗುಂಪುಗೂಡಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜೆಡಿಎಸ್‌ ಆರೋಪಿಸಿದೆ.

ಈ ರೀತಿಯ ಪ್ರಕ್ರಿಯೆಯು ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದ್ದು, ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನೆ ಮೂಡಿಸಿದೆ ಎಂದು ಪಕ್ಷ ಹೇಳಿದೆ.

ಹೊಸದಾಗಿ ಎಸ್‌ಐಆರ್‌ ನಡೆಸುವಂತೆ ಆಗ್ರಹ

ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಹೊಸದಾಗಿ ಆರಂಭಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆ ಸಂಪೂರ್ಣ ಪಾರದರ್ಶಕವಾಗಿರಬೇಕು. ಇದಕ್ಕಾಗಿ ಹೊರ ರಾಜ್ಯದ ಬಿಎಲ್‌ಒಗಳನ್ನು ನೇಮಕ ಮಾಡುವುದನ್ನೂ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.

ಕೋಲಾರದಲ್ಲಿ ಅಧಿಕಾರಿಗಳಿಗೆ ನೋಟಿಸ್

ಎಸ್‌ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಮತದಾರರನ್ನು ಗುಂಪು ಸೇರಿಸಿ ಮಾಹಿತಿ ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ ಹಾಗೂ ಐವರು ಬಿಎಲ್‌ಒಗಳಿಗೆ ಜಿಲ್ಲಾಡಳಿತ ನೋಟಿಸ್ ಜಾರಿಮಾಡಿದೆ.

ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಸಾರ್ವಜನಿಕರನ್ನು ಸಾಮೂಹಿಕವಾಗಿ ಸೇರಿಸಿ ಮಾಹಿತಿ ಸಂಗ್ರಹಿಸಬಾರದು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.

ಮೈಸೂರಿನಲ್ಲೂ ಅಕ್ರಮ ಆರೋಪ

ಮೈಸೂರಿನ ಎನ್‌.ಆರ್‌. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಬಿಎಲ್‌ಒಗಳು ಮನೆ ಮನೆಗೆ ತೆರಳದೆ ಸಾರ್ವಜನಿಕ ಸ್ಥಳಗಳು ಹಾಗೂ ಮತಗಟ್ಟೆ ಕೇಂದ್ರಗಳಲ್ಲಿ ಜನರನ್ನು ಸೇರಿಸಿ ಎಸ್‌ಐಆರ್‌ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಚುನಾವಣಾ ಆಯೋಗದ ನಿಯಮಗಳ ಪ್ರಕಾರವೇ ಪರಿಷ್ಕರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Read More
Next Story