
ಶಿಡ್ಲಘಟ್ಟ ಪೌರಾಯುಕ್ತೆ ಧಮ್ಕಿ ಪ್ರಕರಣ: ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಜಾಮೀನು
ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಶಾ ಅವರು ರಾಜೀವ್ ಗೌಡ ಅವರಿಗೆ ಜಾಮೀನು ಮಂಜೂರು ಮಾಡುವ ವೇಳೆ ಹಲವು ಕಠಿಣ ಷರತ್ತುಗಳನ್ನು ವಿಧಿಸಿದ್ದಾರೆ.
ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರಿಗೆ ಶಿಡ್ಲಘಟ್ಟದ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ (ಜ. 30) ಜಾಮೀನು ಮಂಜೂರು ಮಾಡಿದೆ.
ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಶಾ ಅವರು ರಾಜೀವ್ ಗೌಡ ಅವರಿಗೆ ಜಾಮೀನು ಮಂಜೂರು ಮಾಡುವ ವೇಳೆ ಹಲವು ಕಠಿಣ ಷರತ್ತುಗಳನ್ನು ವಿಧಿಸಿದ್ದಾರೆ. ಆರೋಪಿಯು 50,000 ರೂ. ಮೌಲ್ಯದ ಶ್ಯೂರಿಟಿ ಬಾಂಡ್ ನೀಡಬೇಕು. ಜಾಮೀನು ಸಿಕ್ಕ ಖುಷಿಯಲ್ಲಿ ನ್ಯಾಯಾಲಯದ ಆವರಣದ ಒಳಗಾಗಲೀ ಅಥವಾ ಹೊರಗಾಗಲೀ ಪಟಾಕಿ ಸಿಡಿಸುವುದು, ಜೈಕಾರ ಹಾಕುವುದು ಅಥವಾ ಮೆರವಣಿಗೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪೊಲೀಸ್ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೂಚಿಸಲಾಗಿದೆ.
ಒಂದು ವೇಳೆ ಈ ಷರತ್ತುಗಳನ್ನು ಉಲ್ಲಂಘಿಸಿದರೆ ಅದು ನ್ಯಾಯಾಲಯಕ್ಕೆ ಮಾಡಿದ ಅಗೌರವ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಅಳವಡಿಕೆ ವಿಚಾರವಾಗಿ ಪೌರಾಯುಕ್ತೆ ಅಮೃತಾ ಗೌಡ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ರಾಜೀವ್ ಗೌಡ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಅವರನ್ನು ಪೊಲೀಸರು ಸುಮಾರು 24 ದಿನಗಳ ಬಳಿಕ ಬಂಧಿಸಿದ್ದರು. ಮಂಗಳೂರಿನಲ್ಲಿ ಮಹಜರು ಪ್ರಕ್ರಿಯೆ ಮುಗಿಸಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜನವರಿ 28 ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಆದೇಶವನ್ನು ಜನವರಿ 30ಕ್ಕೆ ಕಾಯ್ದಿರಿಸಿತ್ತು. ಇದೀಗ ಷರತ್ತುಬದ್ಧ ಜಾಮೀನು ದೊರೆತಿದ್ದು, ರಾಜೀವ್ ಗೌಡ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

