ಸಾರಿಗೆ ನೌಕರರ ಪ್ರತಿಭಟನೆಗೆ ಮಣಿದ ಸರ್ಕಾರ: 1,271 ಕೋಟಿ ರೂ. ಹಿಂಬಾಕಿ ಬಿಡುಗಡೆಗೆ ಆದೇಶ
x

ಸಾರಿಗೆ ನೌಕರರ ಪ್ರತಿಭಟನೆಗೆ ಮಣಿದ ಸರ್ಕಾರ: 1,271 ಕೋಟಿ ರೂ. ಹಿಂಬಾಕಿ ಬಿಡುಗಡೆಗೆ ಆದೇಶ

ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ಅವರ ಏಕಸದಸ್ಯ ಸಮಿತಿಯ ಶಿಫಾರಸ್ಸಿನಂತೆ, 14 ತಿಂಗಳ ಹಿಂಬಾಕಿಗಾಗಿ 718.93 ಕೋಟಿ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ.


​ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಅಸ್ತು ಎಂದಿದೆ.

ಈ ಸಂಬಂಧ ಒಟ್ಟು 1,271.92 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಸರ್ಕಾರ ಬುಧವಾರ ರಾತ್ರಿ ಆದೇಶ ಹೊರಡಿಸಿದೆ.

01.01.2021 ರಿಂದ 28.02.2023 ರವರೆಗಿನ ಒಟ್ಟು 26 ತಿಂಗಳ ಬಾಕಿ ವೇತನವನ್ನು ಪಾವತಿಸಲು ಸರ್ಕಾರ ಅನುಮೋದನೆ ನೀಡಿದೆ. ದಿನಾಂಕ 01.04.2025 ರಿಂದ ಜಾರಿಗೆ ಬರುವಂತೆ ಹೊಸ ವೇತನ ಪರಿಷ್ಕರಣೆ ಕುರಿತು ಕಾರ್ಮಿಕ ಸಂಘಟನೆಗಳೊಂದಿಗೆ ಸಂಧಾನ ಪ್ರಕ್ರಿಯೆ ಮತ್ತು ಮಾತುಕತೆ ಆರಂಭಿಸಲು ಸೂಚಿಸಲಾಗಿದೆ.

ಶ್ರೀನಿವಾಸ ಮೂರ್ತಿ ಸಮಿತಿ ಶಿಫಾರಸು

ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ಅವರ ಏಕಸದಸ್ಯ ಸಮಿತಿಯ ಶಿಫಾರಸ್ಸಿನಂತೆ, 14 ತಿಂಗಳ ಹಿಂಬಾಕಿಗಾಗಿ 718.93 ಕೋಟಿ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ.

ಉಳಿದ 12 ತಿಂಗಳ (2021ರ ಅವಧಿ) ಹಿಂಬಾಕಿಗಾಗಿ ಸುಮಾರು 552.99 ಕೋಟಿ ರೂ. ಗಳ ಅನುದಾನವನ್ನು ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

​ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಸಂಸ್ಥೆಯ ಬಲವರ್ಧನೆಗೆ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿದ್ದಾರೆ.

ಕಳೆದ ಎರಡುವರೆ ವರ್ಷಗಳಲ್ಲಿ ಸುಮಾರು 10,000 ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ 3,510 ಕೋಟಿ ರೂ. ವೆಚ್ಚದಲ್ಲಿ 7,800 ಹೊಸ ಬಸ್ಸುಗಳನ್ನು ರಸ್ತೆಗೆ ಇಳಿಸಲಾಗಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಕಳೆದ 2 ವರ್ಷಗಳಲ್ಲಿ 1,219.23 ಕೋಟಿ ರೂ. ಮೋಟಾರು ವಾಹನ ತೆರಿಗೆಯನ್ನು ಮನ್ನಾ ಮಾಡಲಾಗಿದೆ.

ಸಾಲ ಮರುಪಾವತಿ

​ ನೌಕರರ ಭವಿಷ್ಯ ನಿಧಿ (PF) ಮತ್ತು ಡೀಸೆಲ್ ಬಾಕಿ ತೀರಿಸಲು ಪಡೆದಿದ್ದ 2,000 ಕೋಟಿ ರೂ. ಸಾಲದ ಅಸಲು ಮತ್ತು ಬಡ್ಡಿಯನ್ನು ಸರ್ಕಾರವೇ ಪಾವತಿಸುತ್ತಿದೆ.

​ಪ್ರತಿಭಟನೆಗೆ‌‌ ಕಾರಣವೇನು?

​2020ರಿಂದ ಜಾರಿಯಾದ ಶೇ. 15ರಷ್ಟು ವೇತನ ಹೆಚ್ಚಳದ 38 ತಿಂಗಳ ಪೂರ್ಣ ಹಿಂಬಾಕಿಯನ್ನು ನೀಡಬೇಕು ಎಂಬುದು ನೌಕರರ ಪ್ರಬಲ ಬೇಡಿಕೆಯಾಗಿತ್ತು. ಈ ಮೊದಲು ಸರ್ಕಾರವು ಕೇವಲ 20 ತಿಂಗಳ ಬಾಕಿ ನೀಡಲು ಮುಂದಾಗಿತ್ತು. ಆದರೆ 'ಬೆಂಗಳೂರು ಚಲೋ' ಪ್ರತಿಭಟನೆಯಿಂದಾಗಿ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾದಾಗ, ಸರ್ಕಾರವು ತನ್ನ ನಿರ್ಧಾರವನ್ನು ಬದಲಿಸಿ 26 ತಿಂಗಳಿಗೆ ಬಾಕಿಯನ್ನು ಹೆಚ್ಚಿಸಿದೆ.

ಸಂಘರ್ಷಕ್ಕೆ ಕಾರಣವಾದ ಬೇಡಿಕೆಗಳು

​ವೇತನ ಪರಿಷ್ಕರಣೆ ಮತ್ತು ಹಿಂಬಾಕಿ ಪಾವತಿಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ನೌಕರರು ಒಗ್ಗಟ್ಟಾಗಿ ಮುಷ್ಕರಕ್ಕೆ ಕರೆ ನೀಡಿದ್ದರು. ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ನೌಕರರು ಸೇರಲು ನಿರ್ಧರಿಸಿದ್ದರಿಂದ ಗುರುವಾರ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು.

​ನೌಕರರ ಬೇಡಿಕೆ: 2020ರಿಂದ ಜಾರಿಯಾದ ಶೇ. 15ರಷ್ಟು ವೇತನ ಹೆಚ್ಚಳದ 38 ತಿಂಗಳ ಪೂರ್ಣ ಹಿಂಬಾಕಿ ನೀಡಬೇಕು ಮತ್ತು 2024ರಿಂದಲೇ ಹೊಸ ವೇತನ ಪರಿಷ್ಕರಣೆ ಜಾರಿಯಾಗಬೇಕು.

​ಸರ್ಕಾರದ ಪಟ್ಟು: ಈ ಮೊದಲು ಕೇವಲ 20 ತಿಂಗಳ ಬಾಕಿ ನೀಡುವುದಾಗಿ ಮತ್ತು 2026ರಿಂದ ಪರಿಷ್ಕರಣೆ ಮಾಡುವುದಾಗಿ ಸರ್ಕಾರ ಹೇಳಿತ್ತು.

​ಆದರೆ ಪ್ರತಿಭಟನೆಯ ತೀವ್ರತೆಯನ್ನು ಅರಿತ ಸರ್ಕಾರ, ಈಗ ಹಿಂಬಾಕಿಯನ್ನು 26 ತಿಂಗಳಿಗೆ ಹೆಚ್ಚಿಸಿ ಹಣ ಬಿಡುಗಡೆ ಮಾಡಿದೆ. ಅಲ್ಲದೆ, ವೇತನ ಪರಿಷ್ಕರಣೆ ಕುರಿತು ನೌಕರರ ಸಂಘಟನೆಗಳ ಜೊತೆ ಮುಕ್ತ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದೆ.

​ಒಂದು ವೇಳೆ ಸಂಧಾನ ವಿಫಲವಾಗಿ ಮುಷ್ಕರ ನಡೆದರೆ ಸಾರಿಗೆ ನಿಗಮಕ್ಕೆ ಮತ್ತು ಸಾರ್ವಜನಿಕರಿಗೆ ದೊಡ್ಡ ಹೊಡೆತ ಬೀಳುವ ಸಾದ್ಯತೆಯಿತ್ತು.

​ದೈನಂದಿನ ಆದಾಯ ಸುಮಾರು 15.32 ಕೋಟಿ ರೂ. (ಶಕ್ತಿ ಯೋಜನೆ ಸೇರಿದಂತೆ) ಇದ್ದು, ನಿತ್ಯ ಸುಮಾರು 34.70 ಲಕ್ಷ ಜನರು ಸಾರಿಗೆ ಬಸ್‌ಗಳನ್ನು ಅವಲಂಬಿಸಿದ್ದಾರೆ. 25,000ಕ್ಕೂ ಹೆಚ್ಚು ಬಸ್‌ಗಳು ರಸ್ತೆಗೆ ಇಳಿಯದಿದ್ದರೆ ಇಡೀ ರಾಜ್ಯದ ಜನಜೀವನ ಅಸ್ತವ್ಯಸ್ತಗೊಳ್ಳುವ ಅವಕಾಶವಿತ್ತು.

ಪ್ರತಿಭಟನೆ ವಾಪಸ್?

​ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ನಡೆಸಿದ ಸಂಧಾನ ಸಭೆಗಳು ವಿಫಲವಾಗಿದ್ದವು. ಈಗ ಬಿಡುಗಡೆ ಮಾಡಲಾದ 1,271 ಕೋಟಿ ರೂ. ಅನುದಾನವು ನೌಕರರನ್ನು ತಣಿಸುತ್ತದೆಯೇ ಅಥವಾ ನೌಕರರು ತಮ್ಮ ಪಟ್ಟು ಮುಂದುವರಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

​ಸರ್ಕಾರದ ಈ ಆದೇಶದ ಹೊರತಾಗಿಯೂ ನೌಕರರ ಸಂಘಟನೆಗಳು ಪ್ರತಿಭಟನೆಯನ್ನು ಹಿಂಪಡೆಯುವ ಬಗ್ಗೆ ಅಧಿಕೃತ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

Read More
Next Story