ಪ್ರಧಾನಿ ಮೋದಿ ರಾಜೀನಾಮೆ ನೀಡಲಿ: ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ವಿರುದ್ಧ ಸಿದ್ದರಾಮಯ್ಯ ಕಿಡಿ!
x

'ಪ್ರಧಾನಿ ಮೋದಿ ರಾಜೀನಾಮೆ ನೀಡಲಿ': ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ವಿರುದ್ಧ ಸಿದ್ದರಾಮಯ್ಯ ಕಿಡಿ!

"ಅಮೆರಿಕದ ಸುಂಕ ಬೆದರಿಕೆಗಳು ಮತ್ತು ಸಾರ್ವಜನಿಕ ಎಚ್ಚರಿಕೆಗಳಿಗೆ ಹೆದರಿ ಮೋದಿ ಸರ್ಕಾರ ಮಂಡಿಯೂರಿದೆ. ಇದು ರಾಜತಾಂತ್ರಿಕತೆಯಲ್ಲ, ಶರಣಾಗತಿ," ಎಂದು ಸಿಎಂ ಹೇಳಿದ್ದಾರೆ.


Click the Play button to hear this message in audio format

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಹೊಸ ಮಧ್ಯಂತರ ವಾಣಿಜ್ಯ ಒಪ್ಪಂದವನ್ನು (Interim Trade Deal) ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು "ಸಮಾನ ಮತ್ತು ನ್ಯಾಯಯುತ ಮಾತುಕತೆಯಲ್ಲ, ಬದಲಿಗೆ ಶರಣಾಗತಿ" ಎಂದು ಟೀಕಿಸಿರುವ ಅವರು, ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅವರ ಆಕ್ಷೇಪಗಳೇನು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ಸುದೀರ್ಘ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಈ ಒಪ್ಪಂದದ ಹಿಂದಿನ ಅಪಾಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ: "ಅಮೆರಿಕದ ಸುಂಕ ಬೆದರಿಕೆಗಳು ಮತ್ತು ಸಾರ್ವಜನಿಕ ಎಚ್ಚರಿಕೆಗಳಿಗೆ ಹೆದರಿ ಮೋದಿ ಸರ್ಕಾರ ಮಂಡಿಯೂರಿದೆ. ಇದು ರಾಜತಾಂತ್ರಿಕತೆಯಲ್ಲ, ಶರಣಾಗತಿ," ಎಂದು ಅವರು ಕಿಡಿಕಾರಿದ್ದಾರೆ.

ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸುವುದರಿಂದ, ಅಮೆರಿಕದ ಅಗ್ಗದ ಮತ್ತು ಸಬ್ಸಿಡಿ ಸಹಿತ ಕೃಷಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇದರಿಂದ ಭಾರತದ 72 ಕೋಟಿ ರೈತರು ಮತ್ತು ಕೃಷಿ ಕಾರ್ಮಿಕರ ಬದುಕು ಬೀದಿಗೆ ಬೀಳಲಿದೆ," ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

"ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಶೇ.18ರಷ್ಟು ಸುಂಕ ಮುಂದುವರಿಸಲಿದೆ. ಆದರೆ ಭಾರತ ಮಾತ್ರ ಶೂನ್ಯ ಸುಂಕಕ್ಕೆ ಒಪ್ಪಿಕೊಂಡಿದೆ. ಇದು ಆರ್ಥಿಕ ದಬ್ಬಾಳಿಕೆ," ಎಂದು ಅವರು ದೂರಿದ್ದಾರೆ.

"ಗೌತಮ್ ಅದಾನಿ ವಿರುದ್ಧದ ಅಮೆರಿಕದ ಕೋರ್ಟ್ ಪ್ರಕರಣಗಳು ಮತ್ತು ಇತ್ತೀಚೆಗೆ ಕೇಳಿಬರುತ್ತಿರುವ ಎಪ್ಸ್ಟೀನ್ ಕಡತಗಳ (Epstein Files) ವಿವಾದಗಳಿಂದ ಪಾರಾಗಲು, ಮೋದಿ ದೇಶದ ಹಿತಾಸಕ್ತಿಯನ್ನು ಬಲಿಗೊಟ್ಟಿದ್ದಾರೆ," ಎಂಬ ಗಂಭೀರ ಆರೋಪವನ್ನೂ ಸಿದ್ದರಾಮಯ್ಯ ಮಾಡಿದ್ದಾರೆ.

ನೆಹರು, ಇಂದಿರಾ ಮಾದರಿ ನೆನಪಿಸಿದ ಸಿಎಂ

ನೆಹರು ಅವರ ಅಲಿಪ್ತ ನೀತಿ, ಇಂದಿರಾ ಗಾಂಧಿಯವರ ದಿಟ್ಟತನ ಮತ್ತು ವಾಜಪೇಯಿ ಅವರ ಪರಮಾಣು ಪರೀಕ್ಷೆಯ ಧೈರ್ಯವನ್ನು ಸ್ಮರಿಸಿರುವ ಸಿದ್ದರಾಮಯ್ಯ, "ಮೋದಿ ಈ ಪರಂಪರೆಯನ್ನು ಮುರಿದು ದೇಶದ ಘನತೆಗೆ ಧಕ್ಕೆ ತಂದಿದ್ದಾರೆ," ಎಂದು ವಾಗ್ದಾಳಿ ನಡೆಸಿದ್ದಾರೆ.

"ದೇಶದ ಸಾರ್ವಭೌಮತ್ವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ 'ರಾಜಿ ಮಾಡಿಕೊಂಡ' (Compromised) ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ರಾಜೀನಾಮೆ ನೀಡಬೇಕು," ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Read More
Next Story