
Karnataka Budget 2026| ಪಂಚ ಗ್ಯಾರಂಟಿ ಯೋಜನೆಗಳ ನಿಯಮ ಮಾರ್ಪಾಡು ಸಾಧ್ಯತೆ
ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳ ಪಾಲು ಗಣನೀಯವಾಗಿದೆ. ಇದರಿಂದ ನೀರಾವರಿ, ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯದಂತಹ ಮೂಲಸೌಕರ್ಯ ಕ್ಷೇತ್ರಗಳಿಗೆ ಮೀಸಲಿಡಬೇಕಾದ ಬಂಡವಾಳ ವೆಚ್ಚ ಕುಂಠಿತಗೊಂಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ದೃಷ್ಟಿಯಿಂದ ಕ್ರಾಂತಿಕಾರಿ ಎನಿಸಿಕೊಂಡರೂ, ಸರ್ಕಾರದ ಬೊಕ್ಕಸಕ್ಕೆ ಸವಾಲಾಗಿದೆ. ವಾರ್ಷಿಕ ಸುಮಾರು 50 ಸಾವಿರ ಕೋಟಿ ರೂ.ನಿಂದ 60 ಸಾವಿರ ಕೋಟಿ ರೂ.ವರೆಗೆ ಯೋಜನೆಗಳಿಗೆ ವೆಚ್ಚವಾಗುತ್ತಿರುವ ಕಾರಣ ಇತರೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೊರತೆ ಎದುರಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಕೆಲವು ನಿಬಂಧನೆಗಳನ್ನು ಹಾಕಿ ಕಠಿಣಗೊಳಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಒಟ್ಟು ಬಜೆಟ್ ಗಾತ್ರದಲ್ಲಿ ಗ್ಯಾರಂಟಿ ಯೋಜನೆಗಳ ಪಾಲು ಗಣನೀಯವಾಗಿದೆ. ಇದರಿಂದಾಗಿ ನೀರಾವರಿ, ರಸ್ತೆ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಸೌಕರ್ಯ ಕ್ಷೇತ್ರಗಳಿಗೆ ಮೀಸಲಿಡಬೇಕಾದ ಬಂಡವಾಳ ವೆಚ್ಚ ಕುಂಠಿತಗೊಂಡಿದೆ. ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಮತ್ತು ಸಾಲದ ಹೊರೆಯನ್ನು ಕಡಿಮೆ ಮಾಡಲು, ಈ ಯೋಜನೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬದಲು, ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿವೆ.
ಅನ್ನಭಾಗ್ಯ ಯೋಜನೆಯಲ್ಲಿ ಬದಲಾವಣೆ ನಿರೀಕ್ಷೆ
ಸರ್ಕಾರ ಈಗಾಗಲೇ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಆದಾಯ ತೆರಿಗೆ ಪಾವತಿದಾರರು ಮತ್ತು ಐಷಾರಾಮಿ ಕಾರು ಹೊಂದಿರುವವರನ್ನು ಕೈಬಿಡುವುದರಿಂದ ಕೋಟ್ಯಂತರ ರೂ. ಉಳಿತಾಯವಾಗಲಿದೆ. ಅಲ್ಲದೇ, ಜನತೆಯ ಆರ್ಥಿಕತೆಯ ಮೇಲೆ ಬಿಪಿಎಲ್ ಕಾರ್ಡ್‌ನಿಂದ ಎಪಿಲ್ ಕಾರ್ಡ್‌ಗೆ ಮಾಡುತ್ತಿರುವುದರಿಂದ ಹಣಕಾಸಿನ ಹೊರೆ ತಗ್ಗಿಸಬಹುದಾಗಿದೆ. ಅಂತ್ಯೋದಯ ಕಾರ್ಡ್ ಹೊಂದಿರುವ ಅತ್ಯಂತ ಬಡವರಿಗೆ ಮಾತ್ರ ಯೋಜನೆಯನ್ನು ಸೀಮಿತಗೊಳಿಸಿ, ಸಾಮಾನ್ಯ ಬಿಪಿಎಲ್ ಕಾರ್ಡ್‌ದಾರರಿಗೆ ಸಬ್ಸಿಡಿ ದರದಲ್ಲಿ ಅಕ್ಕಿ ನೀಡುವ ವ್ಯವಸ್ಥೆ ಜಾರಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಶಕ್ತಿ ಯೋಜನೆಯಲ್ಲಿನ ಸುಧಾರಣೆಗಳು
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯು ಸಾರಿಗೆ ಸಂಸ್ಥೆಗಳ ಮೇಲೆ ಭಾರಿ ಒತ್ತಡ ಹೇರಿದೆ. ಬಸ್‌ಗಳ ಕೊರತೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದರಿಂದ ಕೆಲವು ಬದಲಾವಣೆಗಳು ಅನಿವಾರ್ಯವಾಗಿವೆ. ಪ್ರಸ್ತುತ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣವಿದೆ. ಆದರೆ, ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವ ಮಹಿಳೆಯರ ಸಂಚಾರದಲ್ಲಿ ಕೆಲವು ನಿಯಮಗಳನ್ನು ಪರಿಚಯಿಸುವ ಚರ್ಚೆ ನಡೆದಿದೆ. ಯೋಜನೆಯ ಪಾರದರ್ಶಕತೆಗಾಗಿ ಸ್ಮಾರ್ಟ್ ಕಾರ್ಡ್‌ಗಳನ್ನು ಕಡ್ಡಾಯಗೊಳಿಸಿ, ಆ ಮೂಲಕ ಪ್ರಯಾಣದ ಅಂಕಿ-ಅಂಶಗಳನ್ನು ಆಧರಿಸಿ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮುಂದಾಗಬಹುದು. ಇದು ದುರುಪಯೋಗವನ್ನು ತಡೆಯುತ್ತದೆ ಎಂದು ಹೇಳಲಾಗಿದೆ.
ಅಭಿವೃದ್ಧಿ ಕಾಮಗಾರಿಗಳ ಮೇಲೆ ಗ್ಯಾರಂಟಿಗಳ ಪ್ರಭಾವ
ಗ್ಯಾರಂಟಿಗಳಿಗೆ ಹಣ ಹೊಂದಿಸಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಇಲಾಖಾವಾರು ಅನುದಾನಗಳಲ್ಲಿ ಕಡಿತ ಮಾಡಲಾಗಿದೆ. ಅಲ್ಲದೇ, ಬೆಂಗಳೂರಿನಂತಹ ನಗರಗಳ ಮೂಲಸೌಕರ್ಯ ಮತ್ತು ಗ್ರಾಮೀಣ ಭಾಗದ ನೀರಾವರಿ ಯೋಜನೆಗಳಿಗೆ ಹಣದ ಕೊರತೆಯಾಗಿದೆ. ಮುಂಬರುವ ಬಜೆಟ್‌ನಲ್ಲಿ ಗ್ಯಾರಂಟಿಗಳಿಗೆ ಹಣ ಮೀಸಲಿಡುವ ಜತೆಗೆ ಬಾಹ್ಯ ನೆರವು ಪಡೆಯುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ನಡೆಯಬಹುದು ಎನ್ನಲಾಗಿದೆ. ಯಾವುದೇ ಬದಲಾವಣೆಯು ಜನಸಾಮಾನ್ಯರಲ್ಲಿ ಅಸಮಾಧಾನ ಮೂಡಿಸಬಹುದು ಎಂಬ ಭೀತಿ ಸರ್ಕಾರಕ್ಕಿದೆ. ಹೀಗಾಗಿ, ಯೋಜನೆಯನ್ನು ನಿಲ್ಲಿಸುವುದಿಲ್ಲ, ಬದಲಿಗೆ ಬಲಪಡಿಸುತ್ತೇವೆ ಎಂಬ ಸಂದೇಶವನ್ನು ನೀಡಲು ಸರ್ಕಾರ ಯತ್ನಿಸುತ್ತಿದೆ. ಪ್ರತಿಕ್ಷಗಳ ಟೀಕೆಯಿಂದ ದೂರವಾಗಲು ವೈಜ್ಞಾನಿಕವಾಗಿ ಅನರ್ಹರನ್ನು ಗುರುತಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ.
ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿವೆ ಎಂಬುದು ವಾಸ್ತವ. ಆದರೆ, ರಾಜ್ಯದ ಆರ್ಥಿಕ ಹಿತದೃಷ್ಟಿಯಿಂದ ಕೆಲವೊಂದು ಕ್ರಮ ಕೈಗೊಳ್ಳುವ ಅಗತ್ಯತೆ ಇದೆ. ಕೇವಲ ಅರ್ಹ ಬಡವರಿಗೆ ಮಾತ್ರ ಸೌಲಭ್ಯ ಸೀಮಿತಗೊಳಿಸುವ ಉದ್ದೇಶ ಇದೆ. ಉಚಿತ ಸೇವೆಯ ಜತೆಗೆ ಗುಣಮಟ್ಟದ ಮೂಲಸೌಕರ್ಯಕ್ಕೂ ಹಣ ಮೀಸಲಿಡುವ ಬಗ್ಗೆ ಚರ್ಚೆ ನಡೆಸಿದೆ. ಅಬಕಾರಿ, ಮುದ್ರಾಂಕ ಮತ್ತು ಮೋಟಾರು ವಾಹನ ತೆರಿಗೆಗಳ ಹೆಚ್ಚಳದ ಮೂಲಕ ಗ್ಯಾರಂಟಿಗಳ ಹೊರೆಯನ್ನು ಸರಿದೂಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

