ಜಾತಿ ಗಣತಿ ಜಾರಿಗೆ ಬೃಹತ್ ಸಮಾವೇಶ: ಸಿದ್ದರಾಮಯ್ಯ ಬತ್ತಳಿಕೆಯಲ್ಲಿ ಮತ್ತೆ ಅಹಿಂದಾಸ್ತ್ರ!
ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿರುವುದರಿಂದ ಜಾತಿಗಣತಿ ವರದಿ ಅನುಷ್ಟಾನಗೊಳಿಸದೇ ಬೇರೆ ಮಾರ್ಗವಿಲ್ಲ. ವರದಿ ಜಾರಿ ಮಾಡದಿದ್ದರೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇರಲಿದೆ.
ಕರ್ನಾಟಕ ರಾಜಕಾರಣದಲ್ಲಿ 'ಅಹಿಂದ' ಶಕ್ತಿ ಮತ್ತೊಮ್ಮೆ ವಿಜೃಂಬಿಸಲು ಸಿದ್ಧವಾಗಿದೆ. ಸೆ.06 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಹಾಗೂ ಅಹಿಂದ ಸಮುದಾಯಗಳು ಆಯೋಜಿಸುತ್ತಿರುವ ಬೃಹತ್ 'ಅಹಿಂದ ಸಮಾವೇಶ'ವು ಕಾಂಗ್ರೆಸ್ ಪಾಳಯದಲ್ಲಿ ರಾಜ್ಯ ನಾಯಕತ್ವ ಮತ್ತು 2028ರ ವಿಧಾನಸಭೆ ಚುನಾವಣೆಗೆ ಪ್ರಮುಖ ದಿಕ್ಸೂಚಿಯಾಗಿ ಬದಲಾಗಲಿದೆ.
ಸಿದ್ದರಾಮಯ್ಯ ಬೆಂಬಲಿಗರ ಈ ಸಮಾವೇಶದ ಹಿಂದಿರುವ ರಾಜಕೀಯ ತಂತ್ರಗಾರಿಕೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಯಾವ ರೀತಿಯ ಸಂದೇಶ ರವಾನಿಸಲಾಗುತ್ತದೆ ಎಂಬ ಕುತೂಹಲ ಗರಿಗೆದರಿದೆ.
2006ರಲ್ಲಿ ಜೆಡಿಎಸ್‌ನಿಂದ ಹೊರಬಂದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದು ಇದೇ ಅರಮನೆ ಮೈದಾನದಲ್ಲಿ. ಈಗ ಕಾಂಗ್ರೆಸ್‌ನಲ್ಲಿ 20 ವರ್ಷಗಳ ಪಯಣ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಅದೇ ಮೈದಾನದಲ್ಲಿ ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಬೆಂಬಲಿಗರು ಸಜ್ಜಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ನಡೆದ 'ಸಿದ್ದರಾಮೋತ್ಸವ' ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿತ್ತು. ಆ ಬೃಹತ್ ಸಮಾವೇಶದ ಫಲವಾಗಿಯೇ 2023ರಲ್ಲಿ ಕಾಂಗ್ರೆಸ್ 135ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರ ಹಿಡಿಯಿತು. ಸಿದ್ದರಾಮಯ್ಯ ಅವರು 2005 ಆಗಸ್ಟ್ 3 ರಂದು ಜೆಡಿಎಸ್ ಪಕ್ಷದಿಂದ ಉಚ್ಛಾಟನೆಯಾದರು. ಸೆ.3 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. 2007 ಡಿಸೆಂಬರ್ 7ರಂದು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು.
ಈಗ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಆಗಸ್ಟ್ 31 ರಂದು ಅಹಿಂದ ಶಕ್ತಿ ಪ್ರದರ್ಶಿಸಲು ಸಜ್ಜಾಗುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರ್ಪಡೆಗೂ ಮುನ್ನ ದೊಡ್ಡ ಮಟ್ಟದ ಅಹಿಂದ ಸಮಾವೇಶ ನಡೆಸಿದ್ದರು. ಅಧಿಕಾರಕ್ಕೆ ತರವಾಗಲೂ ಸಿದ್ದರಾಮೋತ್ಸವ ನಡೆಸಿದ್ದರು. ಅಂದಿನಿಂದ ಅಹಿಂದ ನೇತಾರರಾಗಿ ಸಿದ್ದರಾಮಯ್ಯ ಗುರುತಿಸಿಕೊಂಡಿದ್ದರು. ಈಗ ಮತ್ತೊಮ್ಮೆ ತಮ್ಮ ಬೆಂಬಲಿಗರ ಮೂಲಕ ಅಹಿಂದ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರು 'ಅಹಿಂದ' ಮತಗಳನ್ನು ಒಂದೆಡೆ ಕ್ರೋಢೀಕರಿಸಿದ ಪರಿಣಾಮ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಕಾರಣವಾಯಿತು. ಅದೇ ರೀತಿ 2015ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆರಂಭವಾದ ಜಾತಿಗಣತಿ ಸಮೀಕ್ಷೆ ರಾಜ್ಯದ ಜನಸಂಖ್ಯೆ, ಜಾತಿವಾರು ಅಂಕಿಅಂಶ ಹಾಗೂ ಶೈಕ್ಷಣಿಕ-ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಕಲೆ ಹಾಕಿತು. ಸುಮಾರು 162 ಕೋಟಿ ವೆಚ್ಚದಲ್ಲಿ ಸಮೀಕ್ಷೆ ನಡೆಯಿತು. 2018ರ ಚುನಾವಣೆಗೂ ಮುನ್ನ ದತ್ತಾಂಶ ಸೋರಿಕೆಯಾಗಿ ವಿವಾದ ಸೃಷ್ಟಿಯಾಯಿತು. ಪ್ರಬಲ ಸಮುದಾಯಗಳ ಜನಸಂಖ್ಯೆ ಲೆಕ್ಕಾಚಾರಗಳು ಬುಡಮೇಲಾದವು. ಇದರ ಪರಿಣಾಮ, ಜೆಡಿಎಸ್ ಮತ್ತು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ವರದಿ ಧೂಳು ಹಿಡಿಯಿತು.
2020ರಲ್ಲಿ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಕಾಂತರಾಜು ವರದಿಯನ್ನು ಪರಿಷ್ಕರಿಸಲು ಮುಂದಾಯಿತು. 2023 ರ ಮತ್ತೆ ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ 2025 ಏಪ್ರಿಲ್ 11 ರಂದು ಪರಿಷ್ಕೃತ ಕಾಂತರಾಜ್ ವರದಿಯನ್ನು ಕ್ಯಾಬಿನೆಟ್ ಮುಂದೆ ತರಲಾಯ್ತು. ವರದಿಯಲ್ಲಿ OBC ಮೀಸಲಾತಿಯನ್ನು ಶೇ. 32 ರಿಂದ ಶೇ. 51 ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿತ್ತು. ಆದರೆ, "ವರದಿ 10 ವರ್ಷ ಹಳೆಯದ್ದು, ವೈಜ್ಞಾನಿಕವಾಗಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾದವು. ಆಗ ಕಾಂಗ್ರೆಸ್ ಹೈಕಮಾಂಡ್ ಹೊಸದಾಗಿ ಜಾತಿಗಣತಿ ಸಮೀಕ್ಷೆ ನಡೆಸಲು ರಾಜ್ಯ ನಾಯಕರಿಗೆ ಸೂಚಿಸಿತು.
ಹಳೆಯ ದತ್ತಾಂಶದ ಆಕ್ಷೇಪಣೆ ಬಗೆಹರಿಸಿ, ಹೊಸದಾಗಿ ಸಮೀಕ್ಷೆ ನಡೆಸಲು ಮಧುಸೂದನ್ ಆರ್. ನಾಯಕ್ ನೇತೃತ್ವದ ಆಯೋಗವು 2025 ಅಕ್ಟೋಬರ್ನಲ್ಲಿ ರಾಜ್ಯಾದ್ಯಂತ ಡಿಜಿಟಲ್ ರೂಪದಲ್ಲಿ ಹೊಸ 'ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿತು. ಈ ಸಮೀಕ್ಷೆಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರಂತಹ ಪ್ರಮುಖರು ಭಾಗವಹಿಸದೆ ಹೊರಗುಳಿದದ್ದು ಭಾರಿ ಚರ್ಚೆಗೆ ಗ್ರಾಸವಾಯಿತು. ಜಾತಿಗಣತಿ ವರದಿ ಅನುಷ್ಟಾನಕ್ಕೆ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ 2026 ಮೇ27ರಂದು ಸಿದ್ದರಾಮಯ್ಯ ಅವರು ವರದಿಯನ್ನು ಸ್ವೀಕರಿಸಿದರು. ಆದರೆ, ಈವರೆಗೂ ಅದು ಜಾರಿಯಾಗಿಲ್ಲ.
ಜೂನ್ 3ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡರು. ಈ ಹಿಂದೆ ಕಾಂತರಾಜು ವರದಿಯ ದತ್ತಾಂಶಗಳನ್ನು ಪ್ರಶ್ನಿಸಿದ್ದ ಡಿ.ಕೆ. ಶಿವಕುಮಾರ್ ಅವರೇ, ಈಗ ಸಿಎಂ ಆಗಿರುವುದರಿಂದ ಜಾತಿಗಣತಿ ವರದಿ ಅನುಷ್ಟಾನಗೊಳಿಸದೇ ಬೇರೆ ಮಾರ್ಗವಿಲ್ಲ. ಏಕೆಂದರೆ ಕಾಂಗ್ರೆಸ್ ಸರ್ಕಾರ ಕೂಡ ಸಾಮಾಜಿಕ ನ್ಯಾಯ ಒದಗಿಸುವ ಬದ್ಧತೆಯೊಂದಿಗೇ ಅಧಿಕಾರಕ್ಕೆ ಬಂದಿದೆ. ಈಗ ವರದಿ ಜಾರಿ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇರಲಿದೆ.
ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ವರ್ಗಗಳೇ ಪ್ರಮುಖ ವೋಟ್ ಬ್ಯಾಂಕ್. ಹೀಗಿರುವಾಗ ಅದರ ನಾಯಕನಿಗೆ ಸಲ್ಲಬೇಕಾದ ಗೌರವ, ಆದ್ಯತೆಗಳು ಕಡಿಮೆಯಾದಾಗ ಇಂತಹ ಸಮಾವೇಶಗಳು ಆಯೋಜನೆಯಾಗುತ್ತವೆ. ಇತ್ತೀಚೆಗೆ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ಆಪ್ತರನ್ನು ಕಡೆಗಣಿಸಿರುವುದು ಈಗ ಸಮಾವೇಶ ಆಯೋಜನೆಗೆ ಕಾರಣ ಎನ್ನಲಾಗುತ್ತಿದೆ. ನೂತನ ಸಚಿವರ ಪ್ರಮಾಣವಚನದ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರು ಗೈರಾಗುವ ಮೂಲಕ ತಮ್ಮ ವಿರೋಧ ಅಥವಾ ಆಕ್ಷೇಪವನ್ನು ನೇರವಾಗಿ ಹೈಕಮಾಂಡ್ಗೆ ದಾಖಲಿಸಿದ್ದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾದರೂ, ಕಾಂಗ್ರೆಸ್ ಗೆಲುವಿಗೆ ಅಹಿಂದ ಸಮುದಾಯವೇ ಪ್ರಮುಖ ಕಾರಣ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹಾಗಾಗಿ, ಅಹಿಂದ ಇಲ್ಲದ ಕಾಂಗ್ರೆಸ್ ಪಕ್ಷ ಊಹೆಗೂ ನಿಲುಕದು ಎಂಬುದು ಮೊದಲ ಸಂದೇಶ.
ಎರಡನೆಯದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಕ್ಷ ಸಂಘಟನೆಯ ಸಾಂಸ್ಥಿಕ ಬಲ ಹೊಂದಿದ್ದರೆ, ಸಿದ್ದರಾಮಯ್ಯ ಅವರಿಗೆ ಜನಬೆಂಬಲದ ವರ್ಚಸ್ಸಿದೆ. ಈ ಎರಡು ಸಂದೇಶಗಳನ್ನು ಹೈಕಮಾಂಡ್ ಗೆ ಮತ್ತೊಮ್ಮೆ ಮನದಟ್ಟು ಮಾಡಿಕೊಡುವುದು ಅಹಿಂದ ಸಮಾವೇಶದ ಉದ್ದೇಶ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಅವರು ತಮ್ಮ ಸಂಘಟನಾ ಶಕ್ತಿ ಮತ್ತು ಜನಪ್ರಿಯತೆ ಪ್ರದರ್ಶಿಸುವ ಮೂಲಕ ಅಧಿಕಾರ ಹಂಚಿಕೆ ಅಥವಾ ನಾಯಕತ್ವ ನಿರ್ಧರಿಸುವ ವಿಚಾರಗಳಲ್ಲಿ ಸಾರ್ವಭೌಮತೆ ಕಾಯ್ದುಕೊಳ್ಳುವುದು. ತಾವು ಕೇವಲ ಒಬ್ಬ ನಾಯಕರಷ್ಟೇ ಅಲ್ಲ, ರಾಜ್ಯದ ದೊಡ್ಡ ಸಾಮಾಜಿಕ ಗುಂಪಿನ ನಾಯಕ ಎಂಬುದನ್ನು ತೋರಿಸಿಕೊಡುವುದಾಗಿದೆ.
ಬೆಳಗಾವಿ, ಕಲ್ಯಾಣ ಕರ್ನಾಟಕ ಅಥವಾ ಹಳೆಯ ಮೈಸೂರು ಭಾಗದಲ್ಲಿ ಅಹಿಂದ ಮತಗಳನ್ನು ಒಗ್ಗೂಡಿಸದೆ ಕಾಂಗ್ರೆಸ್ ಮುಂದಿನ ಸವಾಲು ಎದುರಿಸಲು ಸಾಧ್ಯವಿಲ್ಲ. ಆದ್ದರಿಂದ ಡಿಕೆ ಶಿವಕುಮಾರ್ ಅವರು ತಮ್ಮ ನಾಯಕತ್ವದ ಜೊತೆಗೆ ಸಿದ್ದರಾಮಯ್ಯ ಅವರ ಅಹಿಂದ ಬೆಂಬಲ ಜೊತೆಗೂಡಿಸಿಕೊಂಡು ಹೋಗುವುದು ಅನಿವಾರ್ಯ ಎಂಬ ಸಂದೇಶ ನೀಡುವುದು ಸಮಾವೇಶದ ಉದ್ದೇಶ ಎನ್ನಲಾಗಿದೆ.
ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ನಿರ್ಲಕ್ಷಿಸಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಲ್ಲ ಎಂಬುದನ್ನು ಹೈಕಮಾಂಡ್ಗೆ ಮನವರಿಕೆ ಮಾಡಿಕೊಡುವುದು ಕೂಡ ಸಮಾವೇಶ ಗುರಿಯಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.
ಸಿದ್ದರಾಮಯ್ಯ ಅವರು ಅಹಿಂದ ಸಮಾವೇಶದ ಮೂಲಕ ತಮ್ಮ ಸಾಮರ್ಥ್ಯ, ಪ್ರಭಾವವನ್ನು ಅಚ್ಚೊತ್ತಿದರೆ ಸಿಎಂ ಡಿ.ಕೆ. ಶಿವಕುಮಾರ್ ಸುಮ್ಮನಿರುತ್ತಾರಾ ಎಂಬ ಪ್ರಶ್ನೆ ಮೂಡುತ್ತದೆ. ಏಕೆಂದರೆ ಈ ಹಿಂದೆ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹಾಸನದಲ್ಲಿ ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನೆರವಿನೊಂದಿಗೆ ಅದನ್ನು 'ಪ್ರಜಾಧ್ವನಿ' ಕಾರ್ಯಕ್ರಮವನ್ನಾಗಿ ಪರಿವರ್ತಿಸಿ, ಸಿದ್ದರಾಮಯ್ಯಗೆ ಸಲ್ಲುತ್ತಿದ್ದ ಕ್ರೆಡಿಡ್‌ಗೆ ಬ್ರೇಕ್ ಹಾಕಿದ್ದರು.
ಹೈಕಮಾಂಡ್ ನಾಯಕರಿಗೆ ಹಾಗೂ ಪಕ್ಷಕ್ಕೆ ನಿಷ್ಠರಾಗಿರುವ ಡಿಕೆ ಶಿವಕುಮಾರ್ ಈಗ ಸಿಎಂ ಸ್ಥಾನದಲ್ಲಿ ಕುಳಿತಿದ್ದಾರೆ. 'ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ' ಎಂಬುದು ಅವರ ಘೋಷವಾಕ್ಯ. ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರಿ ಅಹಿಂದ ಸಮಾವೇಶವನ್ನು ಪಕ್ಷದ ಬ್ಯಾನರ್ ಅಡಿ ತರಲು ಪ್ರಯತ್ನಿಸಬಹುದು. ಇಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಸಿದ್ದರಾಮಯ್ಯ ಆಪ್ತರಾದರೂ ಹೈಕಮಾಂಡ್ ನಾಯಕರ ನಿಕಟವರ್ತಿ. ಇದೇ ಅಸ್ತ್ರ ಬಳಸಿಕೊಂಡು ಡಿಕೆ ಶಿವಕುಮಾರ್ ಅಹಿಂದ ಸಮಾವೇಶ ತಡೆಯಲು ಯತ್ನಿಸಬಹುದು. ಆದರೆ, ಸಮಾವೇಶವು ಪಕ್ಷದ ಸಾಂಸ್ಥಿಕ ಚೌಕಟ್ಟಿನಲ್ಲಿ ಇಲ್ಲ. ಅಹಿಂದ ಸಮುದಾಯಗಳು ಹಾಗೂ ಸಿದ್ದರಾಮಯ್ಯ ಬೆಂಬಲಿಗರು ನಡೆಸುತ್ತಿರುವ ಸಮಾವೇಶ. ಹೀಗಿರುವಾಗ ನೇರವಾಗಿ ಹೈಕಮಾಂಡ್ ಆಗಲಿ, ಸಿಎಂ ಡಿ.ಕೆ.ಶಿವಕುಮಾರ್ ಅವರಾಗಲಿ ಸಮಾವೇಶ ತಡೆಯುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಲೋಕಸಭಾ ಚುನಾವಣೆ ಹಾಗೂ ರಾಜ್ಯ ರಾಜಕಾರಣದ ಸೂಕ್ಷ್ಮತೆ ಗಮನಿಸಿದರೆ, ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರನ್ನು ಅಥವಾ ಅಹಿಂದ ವರ್ಗವನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ. ಡಿ.ಕೆ. ಶಿವಕುಮಾರ್ ಅವರು ಸಮಾವೇಶವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದರೂ ಅದರ ರಾಜಕೀಯ ಲಾಭ ಮತ್ತು ನಾಯಕತ್ವದ ಶ್ರೇಯಸ್ಸು ಅಂತಿಮವಾಗಿ ಸಿದ್ದರಾಮಯ್ಯ ಅವರಿಗೇ ತಲುಪುತ್ತದೆ.
ರಾಜ್ಯದಲ್ಲಿ ಸುಮಾರು ಶೇ 75 ಕ್ಕೂ ಹೆಚ್ಚಿರುವ ಅಹಿಂದ ಸಮುದಾಯಗಳನ್ನು ಒಂದೇ ವೇದಿಕೆಯಡಿ ತರುವ ಸಾಮರ್ಥ್ಯ ಸಿದ್ದರಾಮಯ್ಯ ಅವರಿಗಿದೆ. ಈ ಒಗ್ಗಟ್ಟು ವಿಪಕ್ಷಗಳಿಗೆ ತಮ್ಮ ಸಾಂಪ್ರದಾಯಿಕ ಹಾಗೂ ಜಾತಿ ಆಧಾರಿತ ಮತಬ್ಯಾಂಕ್‌ಗಳನ್ನು ವಿಭಜಿಸುವ ಆತಂಕವಿದೆ. ಬಿಜೆಪಿ ಹಿಂದುತ್ವ ಪ್ರತಿಪಾದಿಸಿದರೆ, ಜೆಡಿಎಸ್ ಒಕ್ಕಲಿಗ ಸಮುದಾಯವನ್ನೇ ನೆಚ್ಚಿಕೊಂಡಿದೆ. ಕಾಂಗ್ರೆಸ್ ವಿರುದ್ಧ ವಿಪಕ್ಷಗಳು ಏನೇ ಹೋರಾಟ ರೂಪಿಸಿದರೂ ಅಹಿಂದ ಸಮಾವೇಶಗಳೇ ಆ ತಂತ್ರಗಾರಿಕೆಯನ್ನು ಹಳಿ ತಪ್ಪಿಸಲಿವೆ.
ಇಡೀ ರಾಜ್ಯದಾದ್ಯಂತ ಸ್ವಂತ ಬಲದಿಂದ ಮತ ತರಬಲ್ಲ ಜನಾಕರ್ಷಕ ನಾಯಕ ಸಿದ್ದರಾಮಯ್ಯ. ಅವರನ್ನು ನಿರ್ಲಕ್ಷಿಸಿದರೆ ಪಕ್ಷವು ದೊಡ್ಡ ಮಟ್ಟದ ನಾಯಕತ್ವದ ಶೂನ್ಯತೆ ಎದುರಿಸಬೇಕಾಗುತ್ತದೆ. ಪಕ್ಷದಲ್ಲಿ ಸಿದ್ದರಾಮಯ್ಯ ಬೆಂಬಲಿತ ಶಾಸಕರು ಮತ್ತು ಸಚಿವರ ಸಂಖ್ಯೆ ದೊಡ್ಡದಿದೆ. ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟರೆ ಪಕ್ಷದಲ್ಲಿ ಆಂತರಿಕ ಕಲಹ ಏರ್ಪಟ್ಟು, ಸರ್ಕಾರ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.
ಒಟ್ಟಾರೆ, ಆಗಸ್ಟ್ 31ರ ಅರಮನೆ ಮೈದಾನದ ಅಹಿಂದ ಘರ್ಜನೆ ಕೇವಲ ಸಂಭ್ರಮಾಚರಣೆಯಲ್ಲ. ಅದು ಕಾಂಗ್ರೆಸ್ ಒಳಗಿನ ಆಂತರಿಕ ಅಧಿಕಾರ ಸಮೀಕರಣವನ್ನು ಮರು ಹೊಂದಿಸುವ ಮತ್ತು 2028ರ ರಾಜಕೀಯ ಚದುರಂಗದಾಟಕ್ಕೆ ದಾರಿದೀಪವಾಗುವ ಶಕ್ತಿ ಪ್ರದರ್ಶನವಾಗಿರಲಿದೆ.

