
ಬೆದರಿ ಓಡಿದ ಅಂಬಾರಿ ಆನೆ: ವೈಜ್ಞಾನಿಕ ವರದಿಗೆ ಸಚಿವ ಮಧು ಬಂಗಾರಪ್ಪ ಸೂಚನೆ
ವನ್ಯಜೀವಿ ತಜ್ಞರು, ಪಶುವೈದ್ಯರಿಂದ ವೈಜ್ಞಾನಿಕ ವರದಿ ತರಿಸಿಕೊಳ್ಳಲು ಅಧಿಕಾರಿಗಳಿಗೆ ಆದೇಶಲಾಗಿದೆ. ವರದಿ ಬಂದ ನಂತರವಷ್ಟೇ ವಾಸ್ತವ ಸಂಗತಿ ಹೊರಬರಲಿವೆ ಎಂದು ಮಧುಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಎಂಬ ಆನೆ ಏಕಾಏಕಿ ಗಾಬರಿಗೊಂಡು ಓಡಿದ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಸಮಗ್ರ ಹಾಗೂ ವೈಜ್ಞಾನಿಕ ತನಿಖಾ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಮತ್ತು ತಜ್ಞರ ವೈಜ್ಞಾನಿಕ ವರದಿ ಕೈಸೇರಿದ ನಂತರವಷ್ಟೇ ಘಟನೆಗೆ ನಿಖರ ಕಾರಣ ತಿಳಿಯಲಿದ್ದು, ಆ ಬಳಿಕ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಅಥವಾ ಲೋಪಗಳ ವಿರುದ್ಧ ಮುಂದಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗ ನಗರದಲ್ಲಿ ದಸರಾ ಹಬ್ಬದ ಅಂಗವಾಗಿ ಅತ್ಯಂತ ವೈಭವದಿಂದ ಜಂಬೂಸವಾರಿ ಮೆರವಣಿಗೆ ಆಯೋಜಿಸಲಾಗಿತ್ತು. ತಾಯಿ ಚಾಮುಂಡೇಶ್ವರಿಯ ವಿಗ್ರಹ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಬೇಕಿದ್ದ ಸೋಮಣ್ಣ ಎಂಬ ಆನೆ, ಮೆರವಣಿಗೆಯ ಮಾರ್ಗಮಧ್ಯೆ ಏಕಾಏಕಿ ನಿಯಂತ್ರಣ ತಪ್ಪಿ ದಿಕ್ಕಾಪಾಲಾಗಿ ಓಡಲು ಆರಂಭಿಸಿತ್ತು. ಅಂಬಾರಿ ಹೊತ್ತ ಆನೆಯೇ ಬೆದರಿ ಓಡಿದ್ದನ್ನು ಕಂಡ ಸಾರ್ವಜನಿಕರು ಮತ್ತು ಭಕ್ತಾದಿಗಳು ಪ್ರಾಣಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದರು. ಕ್ಷಣಕಾಲ ಇಡೀ ಪ್ರದೇಶದಲ್ಲಿ ಕಾಲ್ತುಳಿತದಂತಹ ಭೀಕರ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಮಾವುತರು ಮತ್ತು ಕಾವಾಡಿಗರು ಅತ್ಯಂತ ಧೈರ್ಯ ಹಾಗೂ ಸಮಯಪ್ರಜ್ಞೆಯಿಂದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಆನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಪವಾಡಸದೃಶವಾಗಿ ತಪ್ಪಿತ್ತು.
ಘಟನೆ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, “ಆನೆ ಇದ್ದಕ್ಕಿದ್ದಂತೆ ಬೆದರಿ ಓಡಲು ನಿಖರವಾದ ಕಾರಣ ಇದುವರೆಗೆ ನಮಗೆ ತಿಳಿದುಬಂದಿಲ್ಲ. ಈ ಕುರಿತು ಅರಣ್ಯ ಇಲಾಖೆಯ ವನ್ಯಜೀವಿ ತಜ್ಞರು ಮತ್ತು ಪಶುವೈದ್ಯರಿಂದ ವೈಜ್ಞಾನಿಕ ವರದಿ ತರಿಸಿಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ವರದಿ ಬಂದ ನಂತರವಷ್ಟೇ ವಾಸ್ತವ ಸಂಗತಿಗಳು ಹೊರಬರಲಿವೆ” ಎಂದರು. “ಘಟನೆಯ ಸಂಪೂರ್ಣ ಮಾಹಿತಿ ಪಡೆಯಲು ಶನಿವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳ ತುರ್ತು ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಎಲ್ಲ ಆಯಾಮಗಳಿಂದಲೂ ಚರ್ಚೆ ನಡೆಸಲಾಗುವುದು” ಎಂದು ಮಾಹಿತಿ ನೀಡಿದರು. “ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಜಮಾಯಿಸಿದ್ದರು. ಅಂತಹ ಸಂದರ್ಭದಲ್ಲಿ ಆನೆ ನಿಯಂತ್ರಣ ತಪ್ಪಿದಾಗ ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆಯಿತ್ತು. ಆದರೆ ತಾಯಿ ಚಾಮುಂಡೇಶ್ವರಿಯ ಅಪಾರ ಕೃಪೆಯಿಂದ ಯಾವುದೇ ಪ್ರಾಣಹಾನಿ ಅಥವಾ ಅಹಿತಕರ ಘಟನೆಗಳು ಸಂಭವಿಸದೆ ದೊಡ್ಡ ಅನಾಹುತ ತಪ್ಪಿದೆ” ಎಂದರು.
ಆನೆ ಬೆದರಲು ಕಾರಣಗಳೇನು?
ಸಾಮಾನ್ಯವಾಗಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ತಿಂಗಳುಗಳ ಕಾಲ ಕಠಿಣ ತಾಲೀಮು ಮತ್ತು ಶಬ್ದ ನಿಯಂತ್ರಣದ ತರಬೇತಿ ನೀಡಲಾಗುತ್ತದೆ. ಆದರೆ ಶಿವಮೊಗ್ಗದಲ್ಲಿ ಸೋಮಣ್ಣ ಆನೆ ಬೆದರಲು ಹಲವು ಶಂಕೆಗಳು ವ್ಯಕ್ತವಾಗಿವೆ. ಮೆರವಣಿಗೆಯಲ್ಲಿ ಬಳಸಲಾದ ಬ್ಯಾಂಡ್ ವಾದ್ಯಗಳು, ಡಿಜೆ ಸೌಂಡ್ಗಳು, ವಾದ್ಯಮೇಳಗಳ ಭೀಕರ ಶಬ್ದ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದ ಬೃಹತ್ ಜನಸಾಗರವನ್ನು ಕಂಡು ಆನೆ ಮಾನಸಿಕವಾಗಿ ವಿಚಲಿತಗೊಂಡು ಬೆದರಿರಬಹುದು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. “ಕಳೆದ ವರ್ಷ ಶಿವಮೊಗ್ಗ ದಸರಾ ಅತ್ಯಂತ ಶಾಂತಿಯುತವಾಗಿ, ಸಡಗರದಿಂದ ನಡೆದಿತ್ತು. ಆದರೆ ಕಳೆದ ವರ್ಷ ಭಾಗವಹಿಸಿದ್ದ ಆನೆಯನ್ನು ಬಿಟ್ಟು ಈ ಬಾರಿ ಸೋಮಣ್ಣ ಆನೆಯನ್ನು ಅಂಬಾರಿ ಹೊರಲು ಆಯ್ಕೆ ಮಾಡಿದ್ದು ಏಕೆ? ಆನೆ ಬದಲಾವಣೆಗೆ ಕಾರಣವೇನು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಸೋಮಣ್ಣ ಆನೆ ದೈಹಿಕವಾಗಿ ಸಂಪೂರ್ಣ ಆರೋಗ್ಯವಾಗಿತ್ತು ಎಂಬ ಮಾಹಿತಿ ಇದೆ. ಆದರೂ ಈ ಆನೆಗೆ ಜನದಟ್ಟಣೆ ಮತ್ತು ವಾದ್ಯಗಳ ಶಬ್ದಕ್ಕೆ ಹೊಂದಿಕೊಳ್ಳುವ ಸೂಕ್ತ ತಾಲೀಮು ನೀಡಲಾಗಿತ್ತೇ ಎಂಬುದನ್ನು ವೈಜ್ಞಾನಿಕ ವರದಿಯೇ ಖಚಿತಪಡಿಸಬೇಕಿದೆ. ಘಟನೆ ನಡೆದ ತಕ್ಷಣವೇ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವುದು ಅಥವಾ ಲೋಪ ಎಸಗಿದ್ದಾರೆ ಎಂದು ತೀರ್ಮಾನಕ್ಕೆ ಬರುವುದು ಸರಿಯಲ್ಲ. ಮೊದಲು ತಜ್ಞರ ವರದಿ ಬರಲಿ. ಅಧಿಕಾರಿಗಳ ಕಡೆಯಿಂದ ಏನಾದರೂ ಕರ್ತವ್ಯಲೋಪ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಸಮರ್ಥಿಸಿಕೊಂಡರು.
ಸಚಿವರನ್ನು ತಡೆದ ಘಟನೆಗೆ ಸಿಎಂ ತನಿಖೆ ಆದೇಶ
ಇದೇ ಸಂದರ್ಭದಲ್ಲಿ, ಐತಿಹಾಸಿಕ ಮೈಸೂರು ದಸರಾದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ವೇಳೆ ಮೂವರು ಸಚಿವರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಡೆದಿದ್ದಾರೆ ಎನ್ನಲಾದ ಗಂಭೀರ ವಿವಾದದ ಕುರಿತು ಮಧು ಬಂಗಾರಪ್ಪ ಮಾತನಾಡಿ, “ಬಿಜೆಪಿಯವರು ಇದನ್ನು ದಲಿತ ಸಚಿವರಿಗೆ ಮಾಡಿದ ಅವಮಾನ ಎಂದು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಆದರೆ ನನ್ನ ಸ್ಪಷ್ಟ ಅಭಿಪ್ರಾಯವೇನೆಂದರೆ, ತಡೆಯಲಾದ ಸಚಿವರು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದು ಕೇವಲ ಒಂದು ಕಾಕತಾಳೀಯ ಇರಬಹುದು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದ ಯಾವುದೇ ಸಚಿವರಿಗಾಗಲಿ, ಇಂತಹ ಪರಿಸ್ಥಿತಿ ಅಥವಾ ಅವಮಾನ ಎದುರಾಗಬಾರದು. ಶಿಷ್ಟಾಚಾರ ಪಾಲನೆಯಲ್ಲಿ ಇಂತಹ ಪ್ರಮಾದಗಳು ನಡೆಯಬಾರದಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಗಂಭೀರ ಶಿಷ್ಟಾಚಾರ ಉಲ್ಲಂಘನೆ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆಯ ಸತ್ಯಾಸತ್ಯತೆ ಕುರಿತು ಸಮಗ್ರ ತನಿಖೆ ನಡೆಸಿ ತಕ್ಷಣವೇ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳು ಖುದ್ದು ಸೂಚನೆ ನೀಡಿದ್ದಾರೆ. ತನಿಖೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಹಂತದಲ್ಲಿ ನಾನು ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದರು.
