
ಲಿಖಿತ ಒಪ್ಪಂದ ಸಾಧ್ಯವಿಲ್ಲ, ಸರ್ಕಾರವನ್ನು ಬ್ಲಾಕ್ಮೇಲ್ ಮಾಡಲಾಗದು - ಸಿಎಂ
ಪ್ರತಿಭಟನಾನಿರತರಿಗೆ ಲಿಖಿತವಾಗಿ ಒಪ್ಪಂದ ಬರೆದುಕೊಡಲು ಸಾಧ್ಯವಿಲ್ಲ, ಮುಖ್ಯಮಂತ್ರಿಗಳ ಮಾತಿನ ಮೇಲೆ ವಿಶ್ವಾಸವಿಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದ್ದು, ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡುತ್ತೇವೆ. ನಮ್ಮ ಮೇಲೆ ನಂಬಿಕೆಯಿಟ್ಟು ಪ್ರತಿಷ್ಠೆ ಬಿಟ್ಟು ಪ್ರತಿಭಟನೆ ಹಿಂತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೇರೆಯವರು ತಮ್ಮ ರಾಜಕಾರಣಕ್ಕಾಗಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರವನ್ನು ಹೆದರಿಸಲು ಅಥವಾ ಬ್ಲಾಕ್ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. 17 ಇಲಾಖೆಗಳಲ್ಲಿ ಇದೇ ರೀತಿಯ ಬೇಡಿಕೆಗಳಿವೆ ಮತ್ತು ಸರ್ಕಾರಕ್ಕೂ ಒಂದು ಮಿತಿಯಿದೆ. ಪ್ರತಿಭಟನಾನಿರತರಿಗೆ ಲಿಖಿತವಾಗಿ ಒಪ್ಪಂದ ಬರೆದುಕೊಡಲು ಸಾಧ್ಯವಿಲ್ಲ, ಮುಖ್ಯಮಂತ್ರಿಗಳ ಮಾತಿನ ಮೇಲೆ ವಿಶ್ವಾಸವಿಡಬೇಕು ಎಂದು ಹೇಳಿದರು. ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂಪಾಯಿ ಹಾಗೂ ಉಚಿತ ವಿದ್ಯುತ್ ಸೇರಿದಂತೆ ನಾಲ್ಕು ಗ್ಯಾರಂಟಿಗಳನ್ನು ಜನರ ಒಳಿತಿಗಾಗಿ ಜಾರಿ ಮಾಡಲಾಗಿದೆ. ಗೌರವ ಧನವನ್ನು ಈಗಾಗಲೇ ಹೆಚ್ಚಿಸಿದ್ದು, ಅಧಿವೇಶನದಲ್ಲಿ ಚರ್ಚಿಸಿ ಮತ್ತೊಮ್ಮೆ ಹೆಚ್ಚಿಸುವ ನಿರ್ಧಾರ ಮಾಡಲಾಗುವುದು ಎಂದು ಅಶ್ವಾಸನೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರದಿರುವುದೇಕೆ ಮತ್ತು ಕೇಂದ್ರದ ಜವಾಬ್ದಾರಿಯನ್ನು ಏಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಿದರು. ಆರೋಗ್ಯ ಸಚಿವರ ಹೇಳಿಕೆ ಕುರಿತು “ಅದೆಲ್ಲ ಸುಳ್ಳು, ನಮಗೆ ಎಲ್ಲರೂ ಬೇಕು” ಎಂದು ಸ್ಪಷ್ಟಪಡಿಸಿದ ಅವರು, ಸಚಿವ ನರೇಂದ್ರಸ್ವಾಮಿ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದರು. ಸಂಸದ ಮಂಜುನಾಥ್ ಅವರು 1,500 ರೂ. ಪ್ರೋತ್ಸಾಹ ಧನ ಹೆಚ್ಚಿಸುವ ಭರವಸೆ ನೀಡಿರುವ ಕುರಿತ ಪ್ರಶ್ನೆಗೆ, “ಅವರು ಬಹಳ ದೊಡ್ಡವರು, ಅವರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ” ಎಂದು ಪ್ರತಿಕ್ರಿಯಿಸಿದರು.
ಆನೆಗಳ ನಿಯಂತ್ರಣ ಸುಲಭವಲ್ಲ
ರಾಜ್ಯದಲ್ಲಿನ ಆನೆ–ಮಾನವ ಸಂಘರ್ಷದ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಆನೆಗಳನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ; ತಮ್ಮ ಮನೆ ಪಕ್ಕದಲ್ಲೇ 550 ಆನೆಗಳು ಹಾದು ಹೋಗಿವೆ ಹಾಗೂ ಕೊಡಗಿನ ಐಎಫ್ಎಸ್ ಅಧಿಕಾರಿ ಕುಟುಂಬದ ಮನೆ ತೋಟದೊಳಗೇ ಆನೆಗಳು ಬರುತ್ತಿರುವ ಬಗ್ಗೆ ತಾವು ಕೇಳಿದ್ದಾಗಿ ತಿಳಿಸಿದರು. ಗಡಿಗಳಲ್ಲಿ ದೊಡ್ಡ ಆನೆ ಹಿಂಡುಗಳನ್ನು ಕಳಿಸುವುದು ಸರಿಯಲ್ಲ ಎಂದ ಅವರು, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಭಾಗದ ಪ್ಲಾಂಟೇಷನ್ಗಳ ರಕ್ಷಣೆಗೆ ಅರಣ್ಯ ಸಚಿವ ರಾಮಲಿಂಗರೆಡ್ಡಿ ಹಾಗೂ ಶಾಸಕಿ ನಯನಾ ಮೋಟಮ್ಮ ಸೇರಿದಂತೆ ಸ್ಥಳೀಯ ಶಾಸಕರು ಸಮಸ್ಯೆ ಬಗೆಹರಿಸಲು ಕ್ರಮ ವಹಿಸಿದ್ದಾರೆ ಎಂದರು. ಕ್ಲೀನ್ ಚಿಟ್ ಸಿಕ್ಕಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವ ಕುರಿತ ಪ್ರಶ್ನೆಗೆ, ತಾವು ಆ ಬಗ್ಗೆ ಪತ್ರಿಕೆಗಳಲ್ಲಿ ಮಾತ್ರ ಓದಿರುವುದಾಗಿಯೂ, ಯಾವುದೇ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದೂ ಸ್ಪಷ್ಟಪಡಿಸಿದರು.
ಸಂವಿಧಾನ ದಿನದ ಹಿನ್ನೆಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿದ ಸಿಎಂ, ತಾವು ಕೆಪಿಸಿಸಿ ಅಧ್ಯಕ್ಷರಾದಾಗ ರೆಹಮಾನ್ ಖಾನ್ ಅವರ ಕೈಯಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಮೂಲಕ ಜಾಗೃತಿ ಅಭಿಯಾನ ಆರಂಭಿಸಿದ್ದಾಗಿ ತಿಳಿಸಿದರು. ಹಿಂದೆ ಮಹದೇವಪ್ಪ ಹಾಗೂ ಈಗ ಮುನಿಯಪ್ಪ ಅವರು ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಶಾಲಾ–ಕಾಲೇಜುಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪೀಠಿಕೆ ಓದುವ ಆದೇಶ ಮತ್ತು ‘ಜೈ ಭೀಮ್, ಜೈ ಬಾಪು, ಜೈ ಸಂವಿಧಾನ್’ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ತಾವೆಲ್ಲರೂ ಸಂವಿಧಾನವನ್ನು ಪ್ರಾಣ ಗ್ರಂಥವೆಂದು ಗೌರವಿಸಿ ಪ್ರಮಾಣ ವಚನ ಸ್ವೀಕರಿಸಿದ್ದು, ಅದನ್ನು ಉಳಿಸಿಕೊಂಡು ಹೋಗಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
