
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರೆಡ್ ಸಿಗ್ನಲ್; ಕೇಂದ್ರದ ತಜ್ಞರ ಸಮಿತಿ ಶಿಫಾರಸು ಏನು?
2024 ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆಯ ಡಿಪಿಆರ್ ತಯಾರಿಸಲು ಒಪ್ಪಿಗೆ ನೀಡಿತ್ತು. ಕಳೆದ ಜುಲೈ ತಿಂಗಳಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ತಾತ್ವಿಕ ಅನುಮೋದನೆ ನೀಡಿತ್ತು.
ಮಲೆನಾಡಿನಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ್ದ ʼಶರಾವತಿ ಪಂಪ್ಡ್ ಸ್ಟೋರೆಜ್ʼ ಯೋಜನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ತಜ್ಞರ ಸಮಿತಿ ರೆಡ್ ಸಿಗ್ನಲ್ ನೀಡಿದೆ. ಇದರಿಂದ ಮಲೆನಾಡಿನ ಜನ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಇಡೀ ದೇಶದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಯೋಜನೆಗೆ ಅನುಮತಿ ನೀಡಬಾರದು ಎಂದು ಸ್ಪಷ್ಟವಾಗಿ ಯೋಜನೆಯ ಪ್ರಸ್ತಾವನೆ ತಿರಸ್ಕರಿಸಲು ಸಮಿತಿ ಶಿಫಾರಸು ಮಾಡಿದೆ.
ಯೋಜನೆ ಅಪಾಯಗಳ ಕುರಿತು ಹೋರಾಟಗಾರರ ಪ್ರಶ್ನೆಗಳನ್ನು ಕೂಲಕಂಷವಾಗಿ ಪರಿಶೀಲಿಸಿದ ಸಮಿತಿಯು, ಸ್ಥಳ ಅಧ್ಯಯನ ಮಾಡಿ, ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಈ ಶಿಫಾರಸು ಮಾಡಿದೆ. ಹೋರಾಟಗಾರರ ಆತಂಕ ಮತ್ತು ಅನುಮಾನ ಲೇವಡಿ ಮಾಡಿದ್ದ ಸ್ಥಳೀಯ ಮತ್ತು ರಾಜ್ಯ ಮಟ್ಟದ ಕಾಂಗ್ರೆಸ್ ಮುಖಂಡರು ಜನರ ಕ್ಷಮೆ ಕೋರಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ತಜ್ಞರ ಸಮಿತಿ ಶಿಫಾರಸು ಏನು?
10 ಸಾವಿರ ಕೋಟಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವನೆಯು ತಾಂತ್ರಿಕ ಅರ್ಹತೆ, ಪರಿಸರ ಸುಸ್ಥಿರತೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲದ ಕಾರಣ ಯೋಜನೆಗೆ ಅನುಮತಿ ನೀಡಬಾರದು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿ ಸದಸ್ಯರಾದ ಡಾ.ಎಚ್.ಎಸ್.ಸಿಂಗ್, ಪ್ರೊ.ರಾಮನ್ ಸುಕುಮಾರನ್ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಹಾನಿರ್ದೇಶಕ ಶಿವಕುಮಾರ್ ನೇತೃತ್ವದ ಸಮಿತಿಯು 2025 ಡಿ.27 ರಿಂದ 30 ರವರೆಗೆ ಯೋಜನಾ ಪ್ರದೇಶದಲ್ಲಿ ಸಂಚರಿಸಿ ಸ್ಥಳೀಯ ಅಭಿಪ್ರಾಯದೊಂದಿಗೆ ಪರಿಶೀಲನೆ ನಡೆಸಿತ್ತು. ಸುಮಾರು 42 ಪುಟಗಳ ವರದಿಯಲ್ಲಿ ಈ ಮಹತ್ವದ ಶಿಫಾರಸು ಮಾಡಿದ್ದಾರೆ.
ಅಭಯಾರಣ್ಯದ ಮಧ್ಯಭಾಗ ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ಪಂಪ್ ಮೂಲಕ ಹಿಂದಕ್ಕೆ ಕೊಂಡೊಯ್ದು ಎಂಟು ಜಲ ವಿದ್ಯುತ್ ಉತ್ಪಾದನಾ ಘಟಕಗಳಿಂದ ಒಟ್ಟು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಜಾರಿಗೆ ಸರ್ಕಾರ ಮುಂದಾಗಿತ್ತು. 2024 ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆಯ ಡಿಪಿಆರ್ ತಯಾರಿಸಲು ಒಪ್ಪಿಗೆ ನೀಡಿತ್ತು. ಕಳೆದ ಜುಲೈ ತಿಂಗಳಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ತಾತ್ವಿಕ ಅನುಮೋದನೆ ನೀಡಿತ್ತು. ಹೋರಾಟ ತೀವ್ರವಾದ ಬಳಿಕ ಯೋಜನೆ ಮರುಪರಿಶೀಲನೆಗೆ ಅರಣ್ಯ ಹಾಗೂ ಪರಿಸರ ಸಚಿವಾಲಯ ತಜ್ಞರ ಸಮಿತಿ ರಚಿಸಿತ್ತು.
ಸಿಂಗಳೀಕಗಳ ಆವಾಸ ಸ್ಥಾನಕ್ಕೆ ಧಕ್ಕೆ ಆತಂಕ
ಪ್ರಪಂಚದಲ್ಲಿ ಕೇವಲ 2500 ಸಿಂಹ ಬಾಲದ ಸಿಂಗಳೀಕಗಳಿವೆ. ಅವುಗಳಲ್ಲಿ ಸುಮಾರು 730 ಸಿಂಗಳೀಕಗಳು ಶರಾವತಿ ಅಭಯಾರಣ್ಯದಲ್ಲೇ ಇವೆ. ಹಾಗಾಗಿ ಸಿಂಗಳೀಕಗಳ ಸಂತತಿಯಲ್ಲಿ ಸಿಂಹಪಾಲು ಶರಾವತಿ ಅಭ್ಯಯಾರಣ್ಯದ್ದಾಗಿದೆ. ಪ್ರಸ್ತುತ, ಅಭಯಾರಣ್ಯದಲ್ಲೇ ಯೋಜನೆ ಕೇಂದ್ರೀಕೃತವಾಗಿರುವ ಹಿನ್ನೆಲೆಯಲ್ಲಿ ಅವುಗಳ ಆವಾಸ ಸ್ಥಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬುದು ಪರಿಸರವಾದಿಗಳು ಹಾಗೂ ಪ್ರಾಣಿಪ್ರಿಯರ ಆತಂಕ ವ್ಯಕ್ತಪಡಿಸಿದ್ದರು.
ಇದೇ ಪ್ರದೇಶದಲ್ಲಿ ಪಾಂಗೋಲಿನ್, ಹಾರ್ನ್ ಬಿಲ್, ನಾಗರಹಾವು, ಕಾಳಿಂದ ಸರ್ಪಗಳಿವೆ. ಇಂತಹ ಜೀವವೈವಿದ್ಯ ಹೊಂದಿರುವ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನೆಯ ಯೋಜನೆ ಜಾರಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಪರಿಣಾಮ ಮತ್ತು ಮೌಲ್ಯಮಾಪವನ ವರದಿ(ಇಐಎ) ತಿರಸ್ಕರಿಸುವಂತೆ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟವು ಆನ್ಲೈನ್ ಸಹಿ ಆಂದೋಲನ ಕೂಡ ಮ್ಮಿಕೊಂಡಿದ್ದು, ಯೋಜನೆ ಅನಾನುಕೂಲಗಳ ಕುರಿತು ಜಾಗೃತಿ ಮೂಡಿಸಿತ್ತು.
ಸುಪ್ರೀಂಕೋರ್ಟ್ ತೀರ್ಪಿಗೆ ವ್ಯತಿರಿಕ್ತ
ಅರಣ್ಯ ವ್ಯಾಪ್ತಿಯಲ್ಲಿ ಯಾವುದೇ ಯೋಜನೆ ಅನುಷ್ಠಾನ ಮಾಡುವಾಗ ಅರಣ್ಯ ಇಲಾಖೆ ಅನುಮೋದನೆಗೂ ಮುನ್ನ ಅರಣೇತರ ಅನುಮತಿ ತೆಗೆದುಕೊಳ್ಳಬೇಕು ಎಂದು 2011 ರಲ್ಲಿ ಸುಪ್ರೀಂಕೋರ್ಟ್ ಆಂಧ್ರಪ್ರದೇಶ ವರ್ಸಸ್ ಭಾರತ ಒಕ್ಕೂಟ ಪ್ರಕರಣದಲ್ಲಿ ಸ್ಪಷ್ಟವಾಗಿ ಹೇಳಿದೆ.
ಆದರೆ, ಪಶ್ಚಿಮ ಘಟ್ಟದಲ್ಲಿ ಕೈಗೊಂಡಿರುವ ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆಗೆ ಅರಣ್ಯ ಇಲಾಖೆಯ ಅನುಮತಿಯನ್ನೇ ಪಡೆದಿಲ್ಲ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಈವರೆಗೆ ಡಿಪಿಆರ್ ಮಾಹಿತಿ ಒದಗಿಸಿಲ್ಲ. ಆರ್ ಟಿಐ ಕಾಯ್ದೆಯಡಿ ಮಾಹಿತಿ ಕೇಳಿದರೆ, ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಎಂದು ಹೇಳಿ ಮಾಹಿತಿ ನಿರಾಕರಿಸಲಾಗಿದೆ. ಹಾಗಾಗಿ ಯೋಜನೆಯು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅಖಿಲೇಶ್ ಚಿಪ್ಪಳಿ ಆರೋಪಿಸಿದ್ದರು.
ವಿವಾದದ ಹಿನ್ನೆಲೆ
ಹಲವು ಯೋಜನೆಗಳಿಂದ ಮತ್ತೆ ಮತ್ತೆ ಘಾಸಿಗೊಂಡಿರುವ ಪಶ್ಚಿಮ ಘಟ್ಟದ ಶರಾವತಿ ಕಣಿವೆಯಲ್ಲಿ ಸರಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ ಜಾರಿಗೆ ಮುಂದಾಗಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು.
ಭೂಮಿಯ ಒಡಲಾಳದಲ್ಲಿ ಸುರಂಗ ಮಾಡುವ ಈ ಯೋಜನೆ ಬೇಡವೇ ಬೇಡ ಎಂದು ಪರಿಸರ ಪ್ರಿಯರು ಕೂಗೆಬ್ಬಿಸಿದ್ದರು. ಭೂಕುಸಿತಗಳು ಹೆಚ್ಚಾಗಿರುವ ಕಾಲಘಟ್ಟದಲ್ಲಿ ಪರಿಸರಘಾತುಕ ಯೋಜನೆಯ ವಿರುದ್ಧ ಮಲೆನಾಡಿನಲ್ಲಿ ಹೋರಾಟ ಭುಗಿಲೆದ್ದಿತ್ತು. ಮಲೆನಾಡಿನ ಜನರೇ ಬೀದಿಗಿಳಿದು ಹೋರಾಟ ಮಾಡಿದ್ದರಿಂದ ಕುದುರೆಮುಖದಲ್ಲಿ ಗಣಿಗಾರಿಕೆ ನಿಂತಿದೆ. ಈಗ ಮತ್ತೊಂದು ಆ ಪರಿಯ ಹೋರಾಟ ಜಯದ ಹಾದಿಯಲ್ಲಿದೆ.
ಶಕ್ತಿ ನದಿ ಶರಾವತಿ ಕೊಳ್ಳದಲ್ಲಿ ರಾಜ್ಯ ಸರಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ , ಆರಂಭಿಕ ಹಂತದಲ್ಲಿ 8,500 ಕೋಟಿ ರೂ. ಮೊತ್ತದ ಯೋಜನಾ ವರದಿ ಸಿದ್ದವಾಗಿತ್ತು. ಯೋಜನೆ ಕಾಮಗಾರಿ ಆರಂಭವಾದ ಬಳಿಕ ಇದು ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಲಿದ್ದು, ಯೋಜನಾ ಗಾತ್ರ ಹೆಚ್ಚಾಗುವ ಸಂಭವವಿದೆ ಎಂದು ಆರೋಪಿಸಲಾಗಿತ್ತು.
ಏನಿದು ಯೋಜನೆ?
ಶರಾವತಿ ನದಿಗೆ ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಿರುವ ತಲಕಳಲೆ ಮತ್ತು ಗೇರುಸೊಪ್ಪ ಅಣೆಕಟ್ಟುಗಳ ನಡುವೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ನಿರ್ಮಾಣ ಮಾಡುವ ಉದ್ದೇಶವಿದೆ. 8500 ಕೋಟಿ ರೂ. ಮೊತ್ತದ ಈ ಯೋಜನೆಯಲ್ಲಿ ಐದು ಬೃಹತ್ ಸುರಂಗಗಳು ಮತ್ತು ಎಂಟು ಪಂಪಿಂಗ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡುವ ಉದ್ದೇಶವಿದೆ. ಈಗಾಗಲೇ ಇರುವ ಎರಡು ಅಣೆಕಟ್ಟುಗಳ ನಡುವೆ ಮತ್ತೊಂದು ಅಣೆಕಟ್ಟು ನಿರ್ಮಾಣ ಮಾಡಲಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾಗಿ ನದಿಗೆ ಹರಿಯುವ ನೀರನ್ನು ಮತ್ತೆ ಮೇಲಕ್ಕೆತ್ತಿ ಅದನ್ನು ಸುರಂಗದ ಮೂಲಕ ಕೆಳಕ್ಕೆ ಬಿಟ್ಟು ಅಲ್ಲಿ ವಿದ್ಯುತ್ ಉತ್ಪಾದನೆಗೆ ಮರುಬಳಕೆ ಮಾಡಿಕೊಳ್ಳುವ ಉದ್ದೇಶ ಯೋಜನೆಯಲ್ಲಿದೆ.
ಯೋಜನೆಗೆ 133.81 ಎಕರೆ ಅರಣ್ಯ ಬಳಕೆಯಾಗುತ್ತದೆ. ಅಂದಾಜು 16 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಯೋಜನಾ ವರದಿಯಲ್ಲಿ ತಿಳಿಸಲಾಗಿದೆ. ಯೋಜನೆಯಿಂದ ಒಟ್ಟು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಉಳಿದ ವಿದ್ಯುತ್ ಯೋಜನೆಗಳಿಗೆ ಹೋಲಿಸಿಕೊಂಡರೆ ಜಲವಿದ್ಯುತ್ ಉತ್ಪಾದನಾ ವೆಚ್ಚ ಅತ್ಯಂತ ಕಡಿಮೆಯದ್ದಾಗಿದೆ. ಈ ಕಾರಣದಿಂದಲೇ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಗೆ ಸರಕಾರ ಮುಂದಾಗಿತ್ತು.
ವಿರೋಧ ಯಾಕೆ?
ಅತ್ಯಂತ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟದ ಮೇಲೆ ನಿರಂತರವಾಗಿ ಮಾನವ ಹಸ್ತಕ್ಷೇಪವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭೂ ಕುಸಿತ, ಮೇಘ ಸ್ಫೋಟಗಳಂತಹ ಪ್ರಾಕೃತಿಕ ವಿಕೋಪದಿಂದಾಗಿ ಭಾರೀ ಅನಾಹುತಗಳು ಸಂಭವಿಸುತ್ತಿವೆ. ಪಶ್ಚಿಮ ಘಟ್ಟ ಪ್ರದೇಶವೂ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಜಲ ವಿದ್ಯುತ್ ಯೋಜನೆಗಾಗಿಯೇ ಶರಾವತಿ ಕೊಳ್ಳದಲ್ಲಿ ಏಳಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಈ ಬೃಹತ್ ಯೋಜನೆಯಿಂದ ಲಕ್ಷಾಂತರ ಹೆಕ್ಟೇರ್ ಅರಣ್ಯ ನಾಶವಾಗಿದೆ. ಜಲ ಬಾಂಬ್‌ಗಳಂತೆ ಈ ಅಣೆಕಟ್ಟುಗಳು ನಿಂತಿವೆ. ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಮುಳುಗಡೆಯಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈಗ ಮತ್ತೆ ಭೂ ಗರ್ಭದಾಳದಲ್ಲಿ ಸುರಂಗಗಳನ್ನು ನಿರ್ಮಾಣಮಾಡಲಾಗುತ್ತದೆ. ಕೆಳಗಿಂದ ನೀರನ್ನು ಪಂಪ್ ಮಾಡಿ ಸಂಗ್ರಹ ಮಾಡಲಾಗುತ್ತದೆ. ಈ ಪಂಪಿಂಗ್ ಪ್ರಕ್ರಿಯೆಗೆ ಯಥೇಚ್ಚ ವಿದ್ಯುತ್ ಬಳಕೆಯಾಗುತ್ತದೆ ಆದ್ದರಿಂದ ಇದೊಂದು ಕಾರ್ಯ ಸಾಧುವಲ್ಲದ ಯೋಜನೆಯಾಗಿದೆ.
ಈಗ ವಿದ್ಯುತ್ ಉತ್ಪಾದನೆಗೆ ಸೌರ ವಿದ್ಯುತ್ ಯೋಜನೆ ಸೇರಿದಂತೆ ಪರ್ಯಾಯ ಮಾರ್ಗಗಳಿವೆ. ಹೀಗಿರುವಾಗ ಪರಿಸರಕ್ಕೆ ಧಕ್ಕೆಯುಂಟು ಮಾಡುವ ಯೋಜನೆ ಬೇಡವೇ ಬೇಡ ಎಂಬ ವಾದ ಪರಿಸರವಾದಿಗಳದ್ದಾಗಿದೆ. ಕೃಷಿ, ಕೈಗಾರಿಕೆ, ರಸ್ತೆ ,ರೈಲ್ವೆ ಮಾರ್ಗ, ಪ್ರವಾಸೋದ್ಯಮ ಇತ್ಯಾದಿಗಳಿಂದಾಗಿ ಪಶ್ಚಿಮಘಟ್ಟದ ಪರಿಸರ ಮೇಲೆ ಸಾಕಷ್ಟು ಘಾಸಿಯಾಗಿದೆ ಎಂಬ ಕಾರಣಕ್ಕೆ ಪರಿಸರವಾದಿಗಳು ಈ ಯೋಜನೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ.
ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ಶರಾವತಿ ಕೊಳ್ಳದ ಹೆನ್ನಿ ಎಂಬ ಗ್ರಾಮದ ಸುತ್ತಮುತ್ತ 35 ಎಕರೆಗೂ ಹೆಚ್ಚು ಕಂದಾಯ ಭೂಮಿ ಹಾಗೂ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಬಳಸಿಕೊಳ್ಳಲಾಗುತ್ತದೆ. ಈ ಊರುಗಳಲ್ಲಿ ರೈತರಿಗೆ ಪರಿಹಾರ ಕೊಟ್ಟು ಪುನರ್ವಸತಿ ಕಲ್ಪಿಸಲಾಗುತ್ತದೆ. ಆದರೆ ಈ ಯೋಜನಾ ವ್ಯಾಪ್ತಿಯಲ್ಲಿ ಬರುವ ಬಗರ್‌ಹುಕುಂ ಸಾಗುವಳಿದಾರರಿಗೆ ಸಂಕಷ್ಟ ಎದುರಾಗಿದೆ. ವಾಸಿಸುವ ಮತ್ತು ಉಳುವ ಭೂಮಿಗೆ ಯಾವುದೇ ಹಕ್ಕು ಪತ್ರ ಇಲ್ಲದ ಕಾರಣ ಈ ರೈತರು ದಿಕ್ಕುಗಾಣದಂತಾಗಿದ್ದಾರೆ.
ಬೆಂಗಳೂರಿಗೆ ಕುಡಿವ ನೀರು?
ಈ ಯೋಜನೆಯ ಹಿಂದೆ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರನ್ನು ಕೊಂಡೊಯ್ಯುವ ಉದ್ದೇಶವೂ ಇದೆ ಎಂದು ಹೇಳಲಾಗಿದೆ. ಶರಾವತಿ ನದಿಯ ನೀರು ಅತ್ಯಂತ ಶುಭ್ರವಾದುದಾಗಿದೆ. ಕೇವಲ 128 ಕಿಲೋಮೀಟರ್ ಹರಿಯುವ ನದಿಯು ನಂತರ ಅರಬ್ಬೀ ಸಮುದ್ರವನ್ನು ಸೇರುತ್ತದೆ. ವಿದ್ಯುತ್ ಉತ್ಪಾದನೆಯ ಬಳಿಕ ಸಮುದ್ರ ಸೇರುವ ಈ ನದಿಯ ನೀರನ್ನು ಪಂಪ್ ಮಾಡಿ ಮೇಲಕ್ಕೆತ್ತಲಾಗುತ್ತದೆ. ಉದ್ದೇಶಿತ ಅಣೆಕಟ್ಟೆಯಿಂದ 50 ಟಿಎಂಸಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಉದ್ದೇಶವೂ ಇದೆ. ಬೇಡಿಕೆ ಇದ್ದಾಗ ಮಾತ್ರ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶಿತ ಯೋಜನೆಯಿಂದ ಬೆಂಗಳೂರಿಗೆ ಶರಾವತಿ ನೀರನ್ನು ಹರಿಸುವ ದೂರಾಲೋಚನೆಯೂ ಇದೆ ಎಂದು ಹೇಳಲಾಗುತ್ತಿದೆ.

