ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಿ ಸೌಲಭ್ಯ ಪಡೆಯದಿರಲು ಶರಣಗೌಡ ಕಂದಕೂರ್ ನಿರ್ಧಾರ
x

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಿ ಸೌಲಭ್ಯ ಪಡೆಯದಿರಲು ಶರಣಗೌಡ ಕಂದಕೂರ್ ನಿರ್ಧಾರ

ಕಳೆದ ವರ್ಷದಂತೆ ಈ ಬಾರಿಯೂ ಸಂಪೂರ್ಣವಾಗಿ ಸ್ವಂತ ಖರ್ಚಿನಲ್ಲಿಯೇ ಅಧಿವೇಶನದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರಿ ಸಭಾಧ್ಯಕ್ಷರಿಗೆ ಶಾಸಕ ಶರಣಗೌಡ ಕಂದಕೂರ್‌ ಪತ್ರ ಸಲ್ಲಿಸಿದ್ದಾರೆ


Click the Play button to hear this message in audio format

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದಿಂದ ನೀಡಲಾಗುವ ವಸತಿ, ಊಟೋಪಚಾರ ಹಾಗೂ ಇನ್ನಿತರ ಯಾವುದೇ ರೀತಿಯ ಭತ್ಯೆಗಳನ್ನು ಸ್ವೀಕರಿಸದಿರಲು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ್ ಅವರು ಪ್ರಕಟಿಸಿದ್ದಾರೆ. ಕಳೆದ ವರ್ಷದಂತೆ ಈ ಬಾರಿಯೂ ಸಂಪೂರ್ಣವಾಗಿ ಸ್ವಂತ ಖರ್ಚಿನಲ್ಲಿಯೇ ಅಧಿವೇಶನದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರಿ ಸಭಾಧ್ಯಕ್ಷರಿಗೆ ಪತ್ರ ಸಲ್ಲಿಸಿದ್ದಾರೆ.

ಶಾಸಕ ಶರಣಗೌಡ ಕಂದಕೂರ್ ಅವರು ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳು, ರೈತರ ಸಂಕಷ್ಟ, ಜನರ ವಲಸೆ ಮತ್ತು ಬೆಳಗಾವಿ ಅಧಿವೇಶನದ ಫಲಶ್ರುತಿಯ ಕುರಿತು ತಮ್ಮ ತೀವ್ರ ಅಸಮಾಧಾನ ಹಾಗೂ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಅಧಿವೇಶನದ ಮೂಲ ಉದ್ದೇಶವನ್ನು ಸ್ಮರಿಸಿರುವ ಶರಣಗೌಡ ಕಂದಕೂರ್ ಅವರು, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಆ ಭಾಗಗಳಿಗೆ ಸೂಕ್ತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ರಾಜ್ಯದಲ್ಲಿ ಪ್ರಾದೇಶಿಕ ಸಮತೋಲನವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಪರಂಪರೆಯನ್ನು ಪ್ರಾರಂಭಿಸಿರುವ ಉದ್ದೇಶ ಬಹಳ ಚೆನ್ನಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ವಾಸ್ತವದಲ್ಲಿ ಈ ಆಶಯ ಈಡೇರುತ್ತಿಲ್ಲ ಎಂಬುದು ಶಾಸಕರ ಆರೋಪವಾಗಿದೆ. ಅಧಿವೇಶನವು ಕೇವಲ ಹೆಸರಿಗೆ ಮಾತ್ರ ನಡೆಯುತ್ತಿದ್ದು, ಸದನದಲ್ಲಿ ಚರ್ಚೆಯಾಗುವ ವಿಷಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಇದರಿಂದಾಗಿ ಈ ಭಾಗದ ಜನತೆಗೆ ಇದು ಕೇವಲ ಕಣ್ಣೊರೆಸುವ ತಂತ್ರವಾಗಿ ಪರಿಣಮಿಸಿದೆ ಎಂದು ತಾವು ಹಿಂದಿನಿಂದಲೂ ಜೋರು ದನಿಯಲ್ಲಿ ಬಲವಾಗಿ ವಿರೋಧಿಸಿದ್ದಾಗಿ ತಿಳಿಸಿದ್ದಾರೆ. ಇದೇ ಕಾರಣದಿಂದ ಕಳೆದ ಬಾರಿಯ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿಯೂ ತಾವು ಸರ್ಕಾರದಿಂದ ನೀಡಲಾಗುವ ವಸತಿ ವ್ಯವಸ್ಥೆ, ಊಟೋಪಚಾರ ಹಾಗೂ ಯಾವುದೇ ದಿನಭತ್ಯೆ ಅಥವಾ ಇತರ ಸೌಲಭ್ಯಗಳನ್ನು ಸ್ವೀಕರಿಸದೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾಗಿ ಅವರು ತಿಳಿಸಿದ್ದಾರೆ. ಸರ್ಕಾರಿ ಸೌಲಭ್ಯಗಳನ್ನು ನಿರಾಕರಿಸಿದ್ದರೂ ಸಹ, ಅಧಿವೇಶನದ ಕಲಾಪಗಳಲ್ಲಿ ಒಂದು ದಿನವೂ ಗೈರಾಗದೆ ಸ್ವಂತ ಖರ್ಚಿನಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಿದ್ದೆ ಎಂಬ ಅಂಶವನ್ನು ಅವರು ಸಭಾಧ್ಯಕ್ಷರ ಗಮನಕ್ಕೆ ತಂದಿದ್ದಾರೆ.

ಅತಿವೃಷ್ಟಿ–ಅನಾವೃಷ್ಟಿಯ ನಡುವೆ ನಲುಗಿದ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ

ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರು ಎದುರಿಸುತ್ತಿರುವ ನಿತ್ಯದ ಬವಣೆಗಳನ್ನು ಶಾಸಕ ಕಂದಕೂರ್, ಈ ಭಾಗದ ಜನತೆಗೆ ಬರಗಾಲ ಎಂಬುದು ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರೈತರ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಅವರು, "ಒಮ್ಮೆ ಅತಿವೃಷ್ಟಿಯಾಗಿ ರೈತ ಕಷ್ಟಪಟ್ಟು ಬಿತ್ತಿದ ಬೆಳೆಯೆಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋದರೆ, ಮತ್ತೊಮ್ಮೆ ಅನಾವೃಷ್ಟಿಯಾಗಿ ರೈತ ಬಿತ್ತಿದ ಬೀಜ ಭೂಮಿಯಲ್ಲಿಯೇ ಬತ್ತಿ ಹೋಗುತ್ತದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕಿತ್ತು ತಿನ್ನುವ ಬಡತನವಲ್ಲದೆ ಜನರ ಬದುಕಿನಲ್ಲಿ ಮತ್ತೇನು ಇರಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ. ಪ್ರಾಕೃತಿಕ ವಿಕೋಪಗಳ ನಿರಂತರ ಹೊಡೆತದಿಂದ ಈ ಭಾಗದ ರೈತ ಸಮುದಾಯ ಆರ್ಥಿಕವಾಗಿ ಸಂಪೂರ್ಣವಾಗಿ ಕುಸಿದಿದೆ ಎಂಬುದನ್ನು ಅವರು ಎತ್ತಿ ತೋರಿಸಿದ್ದಾರೆ.

ಹಸಿವು, ನಿರುದ್ಯೋಗ ಮತ್ತು ಮಹಾನಗರಗಳಿಗೆ ಜನರ ವಲಸೆ

ಕೇವಲ ಕೃಷಿ ಸಂಕಷ್ಟ ಮಾತ್ರವಲ್ಲದೆ, ಮೂಲಭೂತ ಸೌಕರ್ಯಗಳ ಕೊರತೆಯೂ ಈ ಭಾಗವನ್ನು ಕಾಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಸಿವು, ಬಡತನ, ನಿರುದ್ಯೋಗ ಸಮಸ್ಯೆಗಳ ಜೊತೆಗೆ ಗುಣಮಟ್ಟದ ಶಾಲೆಗಳು, ಆಸ್ಪತ್ರೆಗಳು ಮತ್ತು ಶುದ್ಧ ಕುಡಿಯುವ ನೀರಿನಂತಹ ಅಗತ್ಯ ಸೌಲಭ್ಯಗಳ ಕೊರತೆ ಸೇರಿದಂತೆ ನೂರಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಜನತೆ ದಿಕ್ಕು ತೋಚದೆ ಕಂಗಾಲಾಗಿ ಹೋಗಿದೆ ಎಂದು ತಿಳಿಸಿದ್ದಾರೆ. ಉದ್ಯೋಗ ಮತ್ತು ಬದುಕು ಕಟ್ಟಿಕೊಳ್ಳಲು ಸ್ಥಳೀಯವಾಗಿ ಅವಕಾಶಗಳಿಲ್ಲದ ಕಾರಣ ಈ ಭಾಗದ ಜನರು ವಲಸೆ ಹೋಗುತ್ತಿರುವ ಹೃದಯವಿದ್ರಾವಕ ಚಿತ್ರಣವನ್ನು ಅವರು ಸಭಾಧ್ಯಕ್ಷರ ಮುಂದಿಟ್ಟಿದ್ದಾರೆ. "ಗೇಣುದ್ದದ ಹೊಟ್ಟೆಯನ್ನು ತುಂಬಿಕೊಳ್ಳಲು, ಮಾರುದ್ದದ ಮಕ್ಕಳನ್ನು ಕಟ್ಟಿಕೊಂಡು ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್‌ನಂತಹ ಮಹಾನಗರಗಳಿಗೆ ಜನರು ಗುಳೆ ಹೋಗುತ್ತಿರುವ ದೃಶ್ಯವನ್ನು ನೋಡಿದರೆ ಎಂಥವರ ಕರುಳೂ ಕಿತ್ತು ಬರುತ್ತದೆ, ಕಣ್ಣೀರು ಕಡಲಾಗಿ ಹರಿದು ಹೋಗುತ್ತದೆ" ಎಂದು ಅವರು ಭಾವನಾತ್ಮಕವಾಗಿ ಬರೆದಿದ್ದಾರೆ.

'ನಾವು ಶಾಸಕರಾಗಿರುವುದು ಯಾವ ಪುರುಷಾರ್ಥಕ್ಕೆ?' – ಶಾಸಕರ ಆತ್ಮಾವಲೋಕನ

ಜನಪ್ರತಿನಿಧಿಗಳ ಜವಾಬ್ದಾರಿಯ ಕುರಿತು ಆತ್ಮಾವಲೋಕನ ಮಾಡಿಕೊಂಡಿರುವ ಶರಣಗೌಡ ಕಂದಕೂರ್ ಅವರು, ಚುನಾವಣೆಯ ಸಂದರ್ಭದಲ್ಲಿ ಭರವಸೆಗಳ ಗೋಪುರವನ್ನು ಕಟ್ಟಿ ಜನತೆಯಿಂದ ಮತವನ್ನು ಪಡೆದು ಜನಪ್ರತಿನಿಧಿಗಳಾಗಿ ಆಯ್ಕೆಯಾದ ನಂತರ, ಆ ಜನತೆಯ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ "ನಾವು ಶಾಸಕರಾಗಿರುವುದು ಯಾವ ಪುರುಷಾರ್ಥಕ್ಕೆ" ಎಂಬ ತೀವ್ರ ನಿರಾಶಾ ಭಾವ ತಮ್ಮಲ್ಲಿ ಮೂಡುತ್ತಿದೆ ಎಂದು ಪತ್ರದಲ್ಲಿ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ. ಜನರ ಮತಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗದ ಸ್ಥಿತಿಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಮಾಡಲಾಗುವ ಭಾರಿ ವೆಚ್ಚದ ಬಗ್ಗೆಯೂ ಶಾಸಕರು ಗಮನ ಸೆಳೆದಿದ್ದಾರೆ. ಹೋದ ಸಾಲಿನ ಅಧಿವೇಶನ ಮುಗಿದು ಇದೀಗ ಮತ್ತೊಂದು ಅಧಿವೇಶನ ಎದುರಾಗಿದ್ದರೂ, ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಇದರಿಂದ ಯಾವುದೇ ನಿರೀಕ್ಷಿತ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದ್ದಾರೆ. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ನಡೆಸುವ ಈ ಅಧಿವೇಶನದಿಂದ ಈ ಭಾಗದ ಜನತೆಗೆ ನಯಾ ಪೈಸೆಯೂ ಪ್ರಯೋಜನವಾಗದಿದ್ದರೆ, ಜನತೆಯ ಬೆವರಿನ ತೆರಿಗೆ ಹಣವನ್ನು ಪೋಲು ಮಾಡಿದ ಪಾಪ ಸರ್ಕಾರಕ್ಕೆ ಖಂಡಿತವಾಗಿಯೂ ಸುತ್ತಿಕೊಳ್ಳುತ್ತದೆ" ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸ್ವಂತ ಖರ್ಚಿನಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿಕೆ

ಈ ಎಲ್ಲಾ ಕಾರಣಗಳಿಂದಾಗಿ, ಕಳೆದ ವರ್ಷದ ಚಳಿಗಾಲದ ಅಧಿವೇಶನದಲ್ಲಿ ತಾವು ಕೈಗೊಂಡಿದ್ದ ನಿರ್ಧಾರವನ್ನೇ ಈ ಬಾರಿಯೂ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿಯೂ ತಾವು ಸರ್ಕಾರದಿಂದ ವಸತಿ, ಊಟ ಅಥವಾ ಯಾವುದೇ ಭತ್ಯೆಗಳನ್ನು ಪಡೆಯದೆ, ಸ್ವಂತ ಖರ್ಚಿನಲ್ಲಿಯೇ ವೈಯಕ್ತಿಕ ಸೌಲಭ್ಯಗಳನ್ನು ಮಾಡಿಕೊಂಡು ಸದನದ ಕಲಾಪಗಳಲ್ಲಿ ಭಾಗವಹಿಸಲು ತಮಗೆ ಅನುಮತಿ ನೀಡಬೇಕು ಎಂದು ಅವರು ಸಭಾಧ್ಯಕ್ಷರಲ್ಲಿ ವಿನಂತಿಸಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿ ವರ್ಷ ನಡೆಯುವ ಚಳಿಗಾಲದ ಅಧಿವೇಶನವು ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸಮಾನತೆ ನಿವಾರಣೆಯ ಪ್ರತೀಕವೆಂದು ಪರಿಗಣಿಸಲ್ಪಟ್ಟಿದೆ. ಆಡಳಿತ ಯಂತ್ರವನ್ನು ಉತ್ತರ ಕರ್ನಾಟಕಕ್ಕೆ ಕೊಂಡೊಯ್ದು ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರಗಳ ಘೋಷಿತ ಆಶಯವಾಗಿದೆ. ಆದರೆ, ಚರ್ಚೆಗಳು ಕೇವಲ ಕಾಗದಕ್ಕೆ ಸೀಮಿತವಾಗದೆ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ನೀರಾವರಿ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಶಾಸಕ ಶರಣಗೌಡ ಕಂದಕೂರ್ ಅವರು ಸರ್ಕಾರಿ ಸೌಲಭ್ಯಗಳನ್ನು ತ್ಯಜಿಸಿ ಸ್ವಂತ ಖರ್ಚಿನಲ್ಲಿ ಅಧಿವೇಶನಕ್ಕೆ ಹಾಜರಾಗುವ ತಮ್ಮ ಪ್ರತಿಭಟನಾತ್ಮಕ ನಿರ್ಧಾರವನ್ನು ಮುಂದುವರಿಸಿರುವುದು ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವ ರೀತಿಯ ಗಂಭೀರ ಚರ್ಚೆಗಳು ನಡೆಯಲಿವೆ ಮತ್ತು ಜನರ ನಿರೀಕ್ಷೆಗಳಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Read More
Next Story