x

ಪಾಕಿಸ್ತಾನ ಆಕ್ರಮಿತ ಕಾಶ್ಮೀರ| ಶಾರದಾ ಸರ್ವಜ್ಞ ಪೀಠದ ಪವಿತ್ರ ನಿಧಿ ಪತ್ತೆ

ಕಾಶ್ಮೀರದ ಐತಿಹಾಸಿಕ ಶಾರದಾ ಸರ್ವಜ್ಞ ಪೀಠಕ್ಕೆ ಸಂಬಂಧಿಸಿದ ಮುಖವಾಡ, ಮುಕುಟ ಸೇರಿದಂತೆ ಪವಿತ್ರ ಅವಶೇಷಗಳು ಟಿಕ್ಕರ್ ಆಶ್ರಮದಲ್ಲಿ ಪತ್ತೆಯಾಗಿವೆ. ಶಾರದಾ ಪೀಠದ ಇತಿಹಾಸ ಮತ್ತು ಕಾರಿಡಾರ್ ತೆರೆಯುವ ಬೇಡಿಕೆಯ ಕುರಿತು ಮಾಹಿತಿ.


Click the Play button to hear this message in audio format

ಕಾಶ್ಮೀರದ ಐತಿಹಾಸಿಕ ಶಾರದಾ ಸರ್ವಜ್ಞ ಪೀಠಕ್ಕೆ ಸಂಬಂಧಿಸಿದ ಅಮೂಲ್ಯ ಧಾರ್ಮಿಕ ಅವಶೇಷಗಳು ಹಲವು ದಶಕಗಳ ಬಳಿಕ ಪತ್ತೆಯಾಗಿದ್ದು, ಕಾಶ್ಮೀರಿ ಪಂಡಿತ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದೆ. ಶಾರದಾದೇವಿಯ ಮುಖವಾಡ, ಮುಕುಟ ಸೇರಿದಂತೆ ಹಲವು ಪವಿತ್ರ ವಸ್ತುಗಳು ಜಮ್ಮು-ಕಾಶ್ಮೀರದ ಟಿಕ್ಕರ್ ಆಶ್ರಮದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಶಾರದಾ ಸರ್ವಜ್ಞ ಪೀಠದ ಮುಕ್ತಿ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಮಂಜುನಾಥ್ ಶರ್ಮ ತಿಳಿಸಿದ್ದಾರೆ.

ದಿ ಫೆಡರಲ್ ಕರ್ನಾಟಕದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ವಿಭಜನೆಗೂ ಮುನ್ನ ಶಾರದಾ ಪೀಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸ್ವಾಮಿ ನಂದಲಾಲಜಿ ಅವರು, ದಾಳಿಗಳ ಭೀತಿಯಿಂದ ಕೆಲವು ಅಮೂಲ್ಯ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ವ್ಯವಸ್ಥೆ ಮಾಡಿದ್ದರು ಎಂದು ವಿವರಿಸಿದರು. ಸ್ಥಳೀಯ ನಂಬಿಕಸ್ತ ಕುಟುಂಬಗಳು ಈ ವಸ್ತುಗಳನ್ನು ತಮ್ಮ ಮನೆಗಳಲ್ಲಿ ಬಚ್ಚಿಟ್ಟಿದ್ದವು. ಬಳಿಕ ಅವುಗಳನ್ನು ಕುಪ್ಪವಾರ ಜಿಲ್ಲೆಯ ಟಿಕ್ಕರ್ ಆಶ್ರಮಕ್ಕೆ ತಂದು ಸಂರಕ್ಷಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

1989ರಿಂದ ಕಾಶ್ಮೀರದಲ್ಲಿ ಉಗ್ರರ ದಾಳಿಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರು ತಮ್ಮ ನೆಲೆಗಳನ್ನು ತೊರೆಯಬೇಕಾಯಿತು. ಈ ಬೆಳವಣಿಗೆಗಳ ನಡುವೆ ಶಾರದಾ ಪೀಠಕ್ಕೆ ಸಂಬಂಧಿಸಿದ ಅನೇಕ ವಸ್ತುಗಳ ಸುಳಿವು ಕಳೆದುಹೋಗಿತ್ತು. ಇದೀಗ ಕಾಶ್ಮೀರಿ ಪಂಡಿತರು, ಧಾರ್ಮಿಕ ಮಠಗಳ ಸಹಕಾರದೊಂದಿಗೆ ನಡೆಸಿದ ಹುಡುಕಾಟದಿಂದ ಕೆಲವು ಅವಶೇಷಗಳು ಪತ್ತೆಯಾಗಿವೆ.

ಶಾರದಾದೇವಿ ಕಾಶ್ಮೀರಿ ಪಂಡಿತರ ಆರಾಧ್ಯ ದೇವಿಯಾಗಿದ್ದು, ಈ ಅವಶೇಷಗಳ ಮರುಪಡೆಯುವಿಕೆ ಅವರಿಗೆ ವಿಶೇಷ ಭಾವನಾತ್ಮಕ ಮಹತ್ವ ಹೊಂದಿದೆ. ಪತ್ತೆಯಾದ ವಸ್ತುಗಳನ್ನು ಆಶ್ರಮದಲ್ಲೇ ಸುರಕ್ಷಿತವಾಗಿ ಸಂರಕ್ಷಿಸಲಾಗುತ್ತಿದೆ. ಅವುಗಳ ರಕ್ಷಣೆಗೆ ಭದ್ರತಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಶರ್ಮ ತಿಳಿಸಿದ್ದಾರೆ.

ಇದೇ ವೇಳೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಸರ್ವಜ್ಞ ಪೀಠಕ್ಕೆ ಭಾರತೀಯ ಭಕ್ತರು ಭೇಟಿ ನೀಡಲು ಅನುಕೂಲವಾಗುವಂತೆ ಕಾರಿಡಾರ್ ತೆರೆಯಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ. ಕರ್ನಾಟಕದ ಶೃಂಗೇರಿ ಮಠ ಸೇರಿದಂತೆ ದಕ್ಷಿಣ ಭಾರತದ ಧಾರ್ಮಿಕ ಸಂಸ್ಥೆಗಳ ಸಹಕಾರದಿಂದ ಈ ಪ್ರಯತ್ನಕ್ಕೆ ಮತ್ತಷ್ಟು ಬಲ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

Read More
Next Story