
ಸುಂಟರಗಾಳಿ ಖ್ಯಾತಿಯ ಲಲಿತಮ್ಮ ನಿಧನ: ಅನಾರೋಗ್ಯದಿಂದ ಬಳಲುತ್ತಿದ್ದ ಕಲಾವಿದೆ ವಿಧಿವಶ
ಬದುಕಿನ ಕಡೆಯ ದಿನಗಳಲ್ಲಿ ಅನಾಥರಾಗಿ, ಕಷ್ಟದ ಪರಿಸ್ಥಿತಿಯಲ್ಲಿದ್ದ ಅವರನ್ನು ಅಮ್ಮನ ಮಡಿಲು ಟ್ರಸ್ಟ್ ಆಸರೆ ನೀಡಿ ಆರೈಕೆ ಮಾಡುತ್ತಿತ್ತು. ಕೆಲ ತಿಂಗಳಿನಿಂದ ಪಾರ್ಶ್ವವಾಯುನಿಂದ ಬಳಲುತ್ತಿದ್ದರು.
ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ನಟಿ, ದಶಕಗಳ ಕಾಲ ತಮ್ಮ ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಲಲಿತಮ್ಮ (65) ಅವರು ಭಾನುವಾರ ನಿಧನರಾಗಿದ್ದಾರೆ. ಕಳೆದ ಎರಡೂವರೆ ತಿಂಗಳಿನಿಂದ ಪಾರ್ಶ್ವವಾಯು ಕಾರಣದಿಂದಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಬದುಕಿನ ಕಡೆಯ ದಿನಗಳಲ್ಲಿ ಅನಾಥರಾಗಿ, ಕಷ್ಟದ ಪರಿಸ್ಥಿತಿಯಲ್ಲಿದ್ದ ಅವರನ್ನು ‘ಅಮ್ಮನ ಮಡಿಲು ಟ್ರಸ್ಟ್’ ಆಸರೆ ನೀಡಿ ಆರೈಕೆ ಮಾಡುತ್ತಿತ್ತು.
ಲಲಿತಮ್ಮ ಅವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ, ರಂಗಭೂಮಿಯಲ್ಲೂ ಅಪಾರವಾದ ಅನುಭವವನ್ನು ಹೊಂದಿದ್ದರು. ತಮ್ಮ ವೃತ್ತಿಜೀವನದಲ್ಲಿ 180ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿರುವ ಅವರು, ನಾಟಕೀಯ ಅಭಿನಯದಲ್ಲಿ ಎತ್ತಿದ ಕೈ ಆಗಿದ್ದರು. ರಂಗಭೂಮಿಯಲ್ಲಿ ಗಳಿಸಿದ ಅನುಭವವೇ ಅವರನ್ನು ಬೆಳ್ಳಿ ಪರದೆಯತ್ತ ಸೆಳೆಯಿತು. ಕಿರುತೆರೆಯಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದರು. ಜನಪ್ರಿಯ ಧಾರಾವಾಹಿ ‘ರಂಗೋಲಿ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅವರು ಮನೆಮಾತಾಗಿದ್ದರು. ಹಿರಿಯ ನಟಿಯಾಗಿ ಅವರು ನಿರ್ವಹಿಸುತ್ತಿದ್ದ ಪಾತ್ರಗಳು ಪ್ರೇಕ್ಷಕರಿಗೆ ಸಹಜವಾಗಿ ಕಾಣುತ್ತಿದ್ದವು.
ಸುಂಟರಗಾಳಿಯ ವಿಲನ್ ಪಾತ್ರ
ಚಲನಚಿತ್ರಗಳಲ್ಲಿ ಲಲಿತಮ್ಮ ಅವರು ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸುಂಟರಗಾಳಿ ಸಿನಿಮಾ ಅವರಿಗೆ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಯಿತು. ಆ ಚಿತ್ರದಲ್ಲಿ ಅವರು ನಿರ್ವಹಿಸಿದ ಖಳನಾಯಕಿ (ವಿಲನ್) ಪಾತ್ರ ಪ್ರೇಕ್ಷಕರಿಗೆ ಇಂದಿಗೂ ನೆನಪಿದೆ. ತೀಕ್ಷ್ಣವಾದ ಸಂಭಾಷಣೆ ಮತ್ತು ಹಾವಭಾವಗಳ ಮೂಲಕ ಆ ಪಾತ್ರಕ್ಕೆ ಅವರು ಜೀವ ತುಂಬಿದ್ದರು. ಈ ಚಿತ್ರದ ನಂತರ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿತು. ನಂತರ ‘ಜಂಗ್ಲಿ’, ‘ಲೈಫ್ ಇಷ್ಟೇನೆ’ ಮುಂತಾದ ಪ್ರಮುಖ ಸಿನಿಮಾಗಳಲ್ಲಿಯೂ ಅವರು ಅಭಿನಯಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಲಲಿತಮ್ಮ ಅವರ ಜೀವನದ ಕಡೆಯ ದಿನಗಳು ಬಹಳ ನೋವಿನಿಂದ ಕೂಡಿದ್ದವು. ಅನಾರೋಗ್ಯವು ಅವರ ಬದುಕನ್ನು ಅತಂತ್ರಗೊಳಿಸಿತ್ತು. ಸ್ಟ್ರೋಕ್‌ನಿಂದಾಗಿ ಹಾಸಿಗೆ ಹಿಡಿದಿದ್ದ ಅವರಿಗೆ ಶುಶ್ರೂಷೆ ಮಾಡಲು ಅಥವಾ ನೋಡಿಕೊಳ್ಳಲು ಕುಟುಂಬದವರು ಯಾರೂ ಇಲ್ಲದ ದುಸ್ಥಿತಿ ನಿರ್ಮಾಣವಾಗಿತ್ತು. ಕಷ್ಟದ ಪರಿಸ್ಥಿತಿಯಲ್ಲಿ ಅತಂತ್ರರಾಗಿದ್ದ ಲಲಿತಮ್ಮ ಅವರಿಗೆ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಯ ನೀಡಿತ್ತು.
ಕಳೆದ ಹತ್ತು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಟ್ರಸ್ಟ್‌ನವರು ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಹಾರೈಕೆಯನ್ನು ಒದಗಿಸುತ್ತಿದ್ದರು. ಆದರೆ, ವಿಧಿಯಾಟದ ಮುಂದೆ ಯಾರೂ ಅಸಹಾಯಕರಾಗಿದ್ದರು. ಅಂತಿಮವಾಗಿ ಅಕ್ಟೋಬರ್ 4ರಂದು ಅವರು ಇಹಲೋಕ ತ್ಯಜಿಸಿದರು. ಟ್ರಸ್ಟ್‌ನ ಶಶಿಕಲಾ ಅವರು ವಿಡಿಯೋ ಸಂದೇಶದ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದು, ಹಿರಿಯ ಕಲಾವಿದೆಯೊಬ್ಬರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಲಲಿತಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಒಂದು ಕಾಲದಲ್ಲಿ ನೂರಾರು ನಾಟಕಗಳಲ್ಲಿ ನಟಿಸಿ ರಂಗಭೂಮಿಯನ್ನು ರಂಜಿಸಿದ ಕಲಾವಿದೆ, ಕೊನೆಯ ದಿನಗಳಲ್ಲಿ ಇಂತಹ ಅಸಹಾಯಕ ಸ್ಥಿತಿಯಲ್ಲಿ ಮೃತಪಟ್ಟಿರುವುದು ಚಿತ್ರರಂಗದ ಕೆಲವೊಂದು ಕಹಿ ವಾಸ್ತವಗಳನ್ನು ಎತ್ತಿ ತೋರಿಸುತ್ತಿದೆ.
