
ಹಿರಿಯ ಪತ್ರಕರ್ತ, ಮಾಜಿ ಎಂಎಲ್‌ಸಿ ಪಿ. ರಾಮಯ್ಯ ನಿಧನ, ಗಣ್ಯರಿಂದ ಸಂತಾಪ
ಹಿರಿಯ ಪತ್ರಕರ್ತ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ (93) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸಿಎಂ ಸಿದ್ಧರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
ಪತ್ರಿಕೋದ್ಯಮದಲ್ಲಿ ಐದು ದಶಕಗಳ ಕಾಲ ಅಪ್ರತಿಮ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ. ರಾಮಯ್ಯ (93) ಅವರು ಇಂದು ರಾತ್ರಿ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಕಾಯಿಲೆ ಹಾಗೂ ವಿವಿಧ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 9 ಗಂಟೆಗೆ ಕೊನೆಯುಸಿರೆಳೆದರು ಎಂದು ಅವರ ಪುತ್ರ ಡಾ. ಬಾಲಾಜಿ ತಿಳಿಸಿದ್ದಾರೆ.
ಐದು ದಶಕಗಳ ಪತ್ರಿಕಾ ವೃತ್ತಿ
1933 ಸೆಪ್ಟೆಂಬರ್ 12ರಂದು ಜನಿಸಿದ ರಾಮಯ್ಯ ಅವರು 'ದಿ ಹಿಂದೂ' ಪತ್ರಿಕೆಯಲ್ಲಿ ಸುಮಾರು 50 ವರ್ಷಗಳ ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಸಂಸದೀಯ ವ್ಯವಹಾರಗಳ ವರದಿಗಾರಿಕೆಯಲ್ಲಿ ಅವರದ್ದು ಎತ್ತಿದ ಕೈ. ನಂತರದ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರಾಗಿ (MLC) ನೇಮಕಗೊಂಡು ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು.
ಸಣ್ಣ ಪತ್ರಿಕೆಗಳ ಧ್ವನಿ
ಸಣ್ಣ ಪತ್ರಿಕೆಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಲು ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಅವರು ಮಹತ್ವದ ಸೇವೆ ಸಲ್ಲಿಸಿದ್ದರು. ಈ ಸಮಿತಿಯ ಮೂಲಕ ಸಣ್ಣ ಪತ್ರಿಕೆಗಳ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದರು.
ಗೌರವ ಮತ್ತು ಪ್ರಶಸ್ತಿಗಳು
ಪತ್ರಿಕೋದ್ಯಮ ಮತ್ತು ಸಮಾಜ ಸೇವೆಗಾಗಿ ಅವರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮತ್ತು ಕೆಂಪೇಗೌಡ ಪ್ರಶಸ್ತಿಗಳನ್ನು ಅವರು ಮುಡಿಗೇರಿಸಿಕೊಂಡವರು.
ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಮತ್ತು ಪತ್ರಕರ್ತರ ಕಲ್ಯಾಣ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಅಂತಿಮ ದರ್ಶನ
ಮೃತರ ಪಾರ್ಥಿವ ಶರೀರವನ್ನು ನಾಳೆ (ಗುರುವಾರ) ಬೆಳಿಗ್ಗೆ 9 ಗಂಟೆಯಿಂದ ಸದಾಶಿವನಗರದ ಅವರ ನಿವಾಸದಲ್ಲಿ (ಮನೆ ಸಂಖ್ಯೆ: 295/12/1, 7ನೇ ಮೇನ್, 16ನೇ ಕ್ರಾಸ್, ಸದಾಶಿವನಗರ ಕ್ಲಬ್ ಸಮೀಪ) ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗುವುದು.
ಸಿಎಂ ಸಿದ್ಧರಾಮಯ್ಯ ಸಂತಾಪ
ಹಿರಿಯ ಪತ್ರಕರ್ತರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. "ದಿ ಹಿಂದೂ ಪತ್ರಿಕೆಯಲ್ಲಿ ಐದು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ರಾಮಯ್ಯ ಅವರು ನನ್ನ ಹಿತಚಿಂತಕರಾಗಿದ್ದರು. ಇತಿಹಾಸ, ರಾಜಕೀಯ ಮತ್ತು ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಅಪಾರ ಜ್ಞಾನ ಬೆರಗುಗೊಳಿಸುವಂತಿತ್ತು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ," ಎಂದು ಸಿಎಂ ಕಂಬನಿ ಮಿಡಿದಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಸಂತಾಪ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪಿ. ರಾಮಯ್ಯ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಅವರನ್ನು ತಮ್ಮ 'ಮಾರ್ಗದರ್ಶಕರು' ಮತ್ತು 'ಗುರು' ಎಂದು ಸ್ಮರಿಸಿದ್ದಾರೆ.
"ಕರ್ನಾಟಕ ಪತ್ರಿಕೋದ್ಯಮದ ಮಹಾವೃಕ್ಷ ಎಂದೇ ಹೆಸರಾಗಿದ್ದ ನನ್ನ ಗುರು, ಪಿತೃ ಸಮಾನರೂ ಆಗಿದ್ದ ಶ್ರೀ ಪಿ. ರಾಮಯ್ಯನವರು ನಿಧನರಾದರೆಂಬ ವಾರ್ತೆ ಕೇಳಿ ಬಹಳ ದುಃಖವಾಯಿತು. ಮೌಲ್ಯಾಧರಿತ ಪತ್ರಿಕಾ ಧರ್ಮದ ಶ್ರೇಷ್ಠ ಪ್ರತಿನಿಧಿಯಾಗಿದ್ದ ಅವರು, ಜನಮಾನಸದಲ್ಲಿ 'ಹಿಂದೂ ರಾಮಯ್ಯ' ಎಂದೇ ಜನಪ್ರಿಯರಾಗಿದ್ದರು. ಸರಳತೆ ಮತ್ತು ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದ ಅವರು ವೈಯಕ್ತಿಕವಾಗಿ ನನಗೆ ಅತ್ಯಂತ ಆತ್ಮೀಯರಾಗಿದ್ದರು. ಅನೇಕ ಕಠಿಣ ಸಂದರ್ಭಗಳಲ್ಲಿ ಅವರು ನನಗೆ ಮಾರ್ಗದರ್ಶನ ಮಾಡಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ದೊಡ್ಡ ನಷ್ಟ," ಎಂದು ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ.

