'ಆಶಾʼ ಬೆನ್ನಲ್ಲೇ ಸಮರಕ್ಕೆ ಸಜ್ಜಾದ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ನೌಕರರಿಗೆ ಕಾರ್ಮಿಕ ಸ್ಥಾನಮಾನ, ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕೆಂದು ಸಿಐಟಿಯು ನಾಯಕಿ ಎಸ್. ವರಲಕ್ಷ್ಮಿ ಆಗ್ರಹಿಸಿದ್ದಾರೆ. ಡಿಸೆಂಬರ್ 1ರಿಂದ ದೆಹಲಿಯಲ್ಲಿ ಒಂದು ಲಕ್ಷ ಕಾರ್ಮಿಕರ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.
ದೇಶದ ಆರೋಗ್ಯ, ಆಹಾರ ಮತ್ತು ಶಿಕ್ಷಣ ವ್ಯವಸ್ಥೆಯ ತಳಮಟ್ಟದಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ನೌಕರರ ಶ್ರಮಕ್ಕೆ ತಕ್ಕ ಗೌರವ ಮತ್ತು ಸೌಲಭ್ಯ ಸಿಗುತ್ತಿಲ್ಲ ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿ ಫೆಡರಲ್ ಕರ್ನಾಟಕದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಯೋಜನಾ ಕಾರ್ಮಿಕರನ್ನು ಇಂದಿಗೂ ಕಾರ್ಮಿಕರೆಂದು ಗುರುತಿಸದೆ ಸ್ವಯಂಸೇವಕರು ಎಂಬ ಹಣೆಪಟ್ಟಿ ನೀಡಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಕಾರ್ಮಿಕ ಸ್ಥಾನಮಾನ ನೀಡಿದರೆ ಕನಿಷ್ಠ ವೇತನ, ಪಿಂಚಣಿ, ಇಎಸ್‌ಐ ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಸರ್ಕಾರಗಳು ಅವರನ್ನು ಕಾರ್ಮಿಕರೆಂದು ಪರಿಗಣಿಸುತ್ತಿಲ್ಲ ಎಂಬುದು ಅವರ ಆರೋಪ.
1975ರಲ್ಲಿ ಆರಂಭವಾದ ಅಂಗನವಾಡಿ ಯೋಜನೆ, 2001ರ ಬಿಸಿಯೂಟ ಯೋಜನೆ ಮತ್ತು 2005ರಲ್ಲಿ ಪರಿಚಯಿಸಲಾದ ಆಶಾ ಯೋಜನೆಗಳು ಕೋಟ್ಯಂತರ ಜನರಿಗೆ ಸೇವೆ ಒದಗಿಸುತ್ತಿವೆ. ಆದರೆ ಈ ಯೋಜನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಸಮರ್ಪಕ ವೇತನ, ಮೂಲಸೌಕರ್ಯ ಮತ್ತು ಸೇವಾ ಭದ್ರತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಯೋಜನೆಗಳಿಗೆ ನೀಡುತ್ತಿದ್ದ ಅನುದಾನದ ಪ್ರಮಾಣ ಕಡಿಮೆಯಾಗಿದ್ದು, 2014ರ ಬಳಿಕ ಕೇಂದ್ರ-ರಾಜ್ಯಗಳ ನಡುವೆ 60:40ರ ಅನುದಾನ ಹಂಚಿಕೆ ಜಾರಿಯಾಗಿದೆ. ಬೆಲೆ ಏರಿಕೆಗೆ ಅನುಗುಣವಾಗಿ ಆಹಾರ ವೆಚ್ಚ ಮತ್ತು ಅನುದಾನ ಹೆಚ್ಚಳವಾಗದಿರುವುದರಿಂದ ಯೋಜನೆಗಳ ಅನುಷ್ಠಾನಕ್ಕೂ ತೊಂದರೆಯಾಗುತ್ತಿದೆ ಎಂದು ವರಲಕ್ಷ್ಮಿ ಆರೋಪಿಸಿದ್ದಾರೆ.
ಯೋಜನಾ ಕಾರ್ಮಿಕರಿಗೆ ಕಾರ್ಮಿಕ ಸ್ಥಾನಮಾನ, ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು ಎಂಬುದು ಸಿಐಟಿಯು ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆಗಳ ಈಡೇರಿಕೆಗಾಗಿ ಡಿಸೆಂಬರ್ 1ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಸುಮಾರು ಒಂದು ಲಕ್ಷ ಕಾರ್ಮಿಕರೊಂದಿಗೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಪ್ರಧಾನಿ ಮಾತುಕತೆಗೆ ಬರಬೇಕು ಎಂಬ ಒತ್ತಾಯವನ್ನೂ ಸಂಘಟನೆ ಮುಂದಿಟ್ಟಿದೆ.
ಜನರ ಆರೋಗ್ಯ, ಶಿಕ್ಷಣ ಮತ್ತು ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಮಹಿಳಾ ಕಾರ್ಮಿಕರ ಬದುಕಿಗೆ ಸರ್ಕಾರಗಳು ಯಾವಾಗ ನ್ಯಾಯ ಒದಗಿಸುತ್ತವೆ ಎಂಬ ಪ್ರಶ್ನೆಯನ್ನು ಈ ಹೋರಾಟ ಮತ್ತೆ ಮುನ್ನೆಲೆಗೆ ತಂದಿದೆ.
