Mysore Silk:  ಕೆಎಸ್‌ಐಸಿ ಆವರಣದಲ್ಲಿ ಕ್ರೀಡಾಂಗಣ; ಭಾರೀ ವಿರೋಧ, ಮರಗಳ ರಕ್ಷಣೆಗೆ ಒತ್ತಾಯ
x

Mysore Silk: ಕೆಎಸ್‌ಐಸಿ ಆವರಣದಲ್ಲಿ ಕ್ರೀಡಾಂಗಣ; ಭಾರೀ ವಿರೋಧ, ಮರಗಳ ರಕ್ಷಣೆಗೆ ಒತ್ತಾಯ

500ಕ್ಕೂ ಹೆಚ್ಚು ಮರಗಳನ್ನು ಕಡಿದು ಕ್ರೀಡಾಂಗಣ ನಿರ್ಮಿಸಲು ಸರ್ಕಾರ ಮುಂದಾಗಿರುವ ಬಗ್ಗೆ "ದ ಫೆಡರಲ್‌ ಕರ್ನಾಟಕ" ವಿಶೇಷ ವರದ ಪ್ರಕಟಿಸಿತ್ತು. ವರದಿ ಬಳಿಕ ರಾಜಕೀಯ ನಾಯಕರು ನರಸೀಪುರಕ್ಕೆ ಭೇಟಿ ನೀಡಿದ್ದರು.


Click the Play button to hear this message in audio format

ವಿಶ್ವದ ಪ್ರಸಿದ್ಧ ರೇಷ್ಮೆ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ "ಮೈಸೂರು ಸಿಲ್ಕ್" ಸೀರೆಗೆ ನೂಲು ಪೂರೈಸುವ ಟಿ. ನರಸೀಪುರದ 'ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ' (KSIC) ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾಂಗಣಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಸರ್ಕಾರದ ನಿರ್ಧಾರ ಖಂಡಿಸಿ, ರೇಷ್ಮೆ ಗೂಡಿನಿಂದ ನೂಲು ತೆಗೆಯುವ ಘಟಕದ (ಫಿಲೇಚರ್) ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭಾಗವಹಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರೊಂದಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಸಹ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕ್ರೀಡಾಂಗಣದ ನೆಪದಲ್ಲಿ ಅಲ್ಲಿನ ಮರಗಳನ್ನು ಕಡಿಯಬಾರದು ಮತ್ತು ಯೋಜನೆಯನ್ನು ಕೈಬಿಡಬೇಕೆಂದು ಮನವಿ ಮಾಡಿದ್ದಾರೆ.

ಶತಮಾನ ದಾಟಿರುವ ಐತಿಹಾಸಿಕ ಕೆಎಸ್‌ಐಸಿಯ ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರವಿರುವ ಆವರಣದಲ್ಲಿಯೇ ತಾಲ್ಲೂಕು ಕ್ರೀಡಾಂಗಣ ನಿರ್ಮಿಸಲು ತಾಲ್ಲೂಕು ಆಡಳಿತ ಮುಂದಾಗಿದೆ. ಇದರಿಂದಾಗಿ ಈ ಆವರಣದಲ್ಲಿನ 500ಕ್ಕೂ ಹೆಚ್ಚು ಮರಗಳ ಮಾರಣಹೋಮ ನಡೆಯಲಿದೆ ಎಂಬ ಬಗ್ಗೆ (ಫೆ. 25) ಬುಧವಾರವಷ್ಟೇ "ದ ಫೆಡರಲ್ ಕರ್ನಾಟಕ" ಸಂಸ್ಥೆಯು 'ಕೃಷ್ಣರಾಜ ಒಡೆಯರ್ ಖ್ಯಾತಿಯ ಮೈಸೂರು ರೇಷ್ಮೆ ಘಟಕಕ್ಕೆ ಗ್ರಹಣ' ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ವರದಿಯ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಹಾಗೂ ಸಂಸದರು ಎಚ್ಚೆತ್ತುಕೊಂಡಿದ್ದು, ಹೋರಾಟಗಾರರ ಪರ ನಿಂತಿದ್ದಾರೆ. ಕ್ರೀಡಾಂಗಣದ ನೆಪದಲ್ಲಿ ಒಂದು ವೇಳೆ ಕೆಎಸ್‌ಐಸಿ ಆವರಣದಲ್ಲಿ ಮರಗಳ ಮಾರಣಹೋಮ ನಡೆದರೆ, ಇಲ್ಲಿ ದುಡಿಯುತ್ತಿರುವ 200ಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಜೊತೆಗೆ ನೂರಾರು ಪಕ್ಷಿಗಳು ಹಾಗೂ ವಿವಿಧ ಜಾತಿಯ ಚಿಟ್ಟೆಗಳ ಬದುಕು ಅತಂತ್ರಗೊಳ್ಳುವ ಆತಂಕ ಹೆಚ್ಚಾಗಿದೆ.

ಟಿ. ನರಸೀಪುರದಲ್ಲಿನ ಕೆಎಸ್‌ಐಸಿ ಆವರಣದಲ್ಲಿ ಫಿಲೇಚರ್ ಕಾರ್ಮಿಕರ ಹೋರಾಟಕ್ಕೆ ದನಿಗೂಡಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, "ಕಮಿಷನ್ ಆಸೆಗಾಗಿ ಹಾಗೂ ಕೆಎಸ್‌ಐಸಿ ಮುಚ್ಚಿಹಾಕಲು ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಈ ಯೋಜನೆ ಕೈಬಿಡದಿದ್ದರೆ ಬಿಜೆಪಿಯಿಂದ 'ಸೇವ್ ಮೈಸೂರು ಸಿಲ್ಕ್' ಎಂಬ ಹೆಸರಿನ ಜನಾಂದೋಲನ ರೂಪಿಸುತ್ತೇವೆ" ಎಂದರು.

400 ಕಾರ್ಮಿಕರಿದ್ದಾರೆ

ಇಲ್ಲಿನ ನೂಲು ತೆಗೆಯುವ ಕಾರ್ಖಾನೆಯು 13 ಎಕರೆ ಜಾಗದಲ್ಲಿದ್ದು, ಅದರಲ್ಲಿ 6 ಎಕರೆಯನ್ನು ಕ್ರೀಡಾ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ಘಟಕವನ್ನು ನಂಬಿಕೊಂಡು ಚನ್ನಪಟ್ಟಣದ ಕೇಂದ್ರ ಕಾರ್ಖಾನೆಯಲ್ಲಿ ಸುಮಾರು 400 ಕಾರ್ಮಿಕರಿದ್ದಾರೆ. ಅಲ್ಲಿಂದ ತಿಂಗಳಿಗೆ 1,400 ಸೀರೆಗಳು ತಯಾರಾಗುತ್ತಿದ್ದು, ಅವು ಒಂದೇ ದಿನದಲ್ಲಿ ಮಾರಾಟವಾಗುತ್ತವೆ. ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಇದೇ ಸೀರೆಯನ್ನು ಉಡಿಸಲಾಗುತ್ತದೆ. ಮದುವೆ, ಆರತಕ್ಷತೆಗೂ ಇದನ್ನೇ ಬಳಸಲಾಗುತ್ತದೆ. ಹೀಗಾಗಿ ಈ ಸೀರೆಗೆ ಪವಿತ್ರತೆ ಹಾಗೂ ಪರಂಪರೆಯಿದೆ.

ಈ ವರ್ಷ ಕೆಎಸ್‌ಐಸಿ ನಿಗಮಕ್ಕೆ 96 ಕೋಟಿ ರೂ. ಲಾಭ ಬಂದಿದೆ. ಇದನ್ನು ನಿಗಮದ ಸುಧಾರಣೆಗೆ ಬಳಸದೆ ಬೆಸ್ಕಾಂಗೆ ನೀಡಲಾಗಿದೆ. ನಿಗಮದ ಅಭಿವೃದ್ಧಿ ಮಾಡಲು ಅಧಿಕಾರಿಗಳು ವಿದೇಶಿ ಪ್ರವಾಸ ಮಾಡಿ 1.40 ಕೋಟಿ ರೂ. ಖರ್ಚು ಮಾಡಿದ್ದಾರೆ. ಬೇಡಿಕೆಗಿಂತ ಹತ್ತು ಪಟ್ಟು ಅಧಿಕ ಮಾರುಕಟ್ಟೆ ಇಲ್ಲಿದೆ. ಸುಮಾರು 2 ಸಾವಿರ ಜನರಿಗೆ ಕೆಲಸದ ಅವಕಾಶವಿದೆ. ಇಂತಹ ಸಂಸ್ಥೆಯ ಜಾಗದಲ್ಲೇ ಕ್ರೀಡಾಂಗಣ ಮಾಡಲು ಯೋಜನೆ ರೂಪಿಸಲಾಗಿದೆ. ಇದೇ ಜಾಗದಲ್ಲಿ ಕ್ರೀಡಾಂಗಣ ಮಾಡಬೇಕೆಂದೇನೂ ಇಲ್ಲ. ಕಾರ್ಖಾನೆಯಲ್ಲಿ ಬಾಯ್ಲರ್‌ಗಳಿದ್ದು, ಹೆಚ್ಚಿನ ತಾಪಮಾನ ಹಾಗೂ ದುರ್ವಾಸನೆ ಬರುತ್ತದೆ. ಅದಕ್ಕಾಗಿಯೇ ಕಾರ್ಖಾನೆಯ ಆವರಣದಲ್ಲಿ ಮರಗಳನ್ನು ಬೆಳೆಸಲಾಗಿದ್ದು, ಇದರಿಂದ ತಾಪಮಾನ ಇಳಿಕೆಯಾಗಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಕ್ರೀಡಾಂಗಣ ನಿರ್ಮಿಸಿದರೆ 430 ಮರಗಳನ್ನು ಕಡಿದು ಹಾಕಬೇಕಾಗುತ್ತದೆ. ಕ್ರೀಡಾಂಗಣ ನಿರ್ಮಾಣವಾದರೂ ಪಕ್ಕದಲ್ಲೇ ಬಾಯ್ಲರ್ ಇರುತ್ತದೆ. ಹೀಗಾಗಿ ಕ್ರೀಡಾಂಗಣದಲ್ಲಿ ಚಟುವಟಿಕೆ ನಡೆಸಲು ಅನುಮತಿ ಸಿಗುವುದಿಲ್ಲ. ಏನಾದರೂ ಅನಾಹುತವಾದರೆ ಯಾರು ಜವಾಬ್ದಾರಿ ಹೊರುತ್ತಾರೆ? ಈ ಭಾಗದಲ್ಲಿ ಶುದ್ಧ ನೀರು ಸಿಗುವುದರಿಂದ ಸೀರೆಯ ಗುಣಮಟ್ಟ ಹೆಚ್ಚಿದೆ. ಇಂತಹ ಸ್ಥಳದಲ್ಲೇ ಕ್ರೀಡಾಂಗಣ ಮಾಡಲು ನಿರ್ಧರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದರಿಂದ ಮನವಿ

ಕೆಎಸ್‌ಐಸಿ ಫಿಲೇಚರ್ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಯುವಜನ ಮತ್ತು ಕ್ರೀಡಾ ಇಲಾಖೆಗೆ 6 ಎಕರೆ 8 ಗುಂಟೆ ಜಾಗವನ್ನು ಹಸ್ತಾಂತರಿಸುವ ನಿರ್ಧಾರವನ್ನು ಕೈಬಿಡುವಂತೆ ಕಾರ್ಖಾನೆಯ ನೌಕರರ ಪರವಾಗಿ ಸಂಸದ ಯದುವೀರ್ ಒಡೆಯರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಏನಿದು ಕೆಎಸ್‌ಐಸಿ ಘಟಕ?

ಟಿ. ನರಸೀಪುರದಲ್ಲಿ 13.5 ಎಕರೆಯಷ್ಟು ಭೂಮಿ ಹೊಂದಿರುವ ಕೆಎಸ್‌ಐಸಿ ಆವರಣದಲ್ಲಿ ಫಿಲೇಚರ್ ಘಟಕವಿದೆ. ಇದೇ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಸಂಬಂಧ ಆವರಣದ 5 ಎಕರೆ ಜಮೀನನ್ನು ಕಂದಾಯ ಇಲಾಖೆಯು ಇತ್ತೀಚೆಗಷ್ಟೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದೆ. ಆದರೆ, ಈ 5 ಎಕರೆ ಜಾಗವು ದಟ್ಟವಾದ ಮರಗಿಡಗಳಿಂದ ಕೂಡಿದ್ದು, ಕಿರು ಅರಣ್ಯದಂತಿದೆ. ಹಚ್ಚ ಹಸಿರಿನ ಭೂಮಿಯಲ್ಲಿರುವ ಕೆಎಸ್‌ಐಸಿ ಘಟಕದ ಆವರಣದೊಳಗಿನ 500ಕ್ಕೂ ಹೆಚ್ಚು ಮರಗಳನ್ನು ಕಡಿದು ಕ್ರೀಡಾಂಗಣ ನಿರ್ಮಿಸುತ್ತಿರುವುದನ್ನು ವಿರೋಧಿಸಿ ಪರಿಸರಪ್ರೇಮಿಗಳು ಹೋರಾಟ ಆರಂಭಿಸಿದ್ದಾರೆ.

ಈ ಘಟಕದಲ್ಲಿ ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಕೆಎಸ್‌ಐಸಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಮರಗಳಿಗೆ ಕೊಡಲಿ ಪೆಟ್ಟು ಬಿದ್ದರೆ ಕಾರ್ಮಿಕರಿಗೆ ಆರೋಗ್ಯ ಸಮಸ್ಯೆ ಉಂಟಾಗಲಿದೆ. ಜೊತೆಗೆ ಇಲ್ಲಿನ 40ಕ್ಕೂ ಹೆಚ್ಚು ಪಕ್ಷಿ ಸಂಕುಲಗಳು ಮತ್ತು 30ಕ್ಕೂ ಹೆಚ್ಚು ತಳಿಯ ಚಿಟ್ಟೆಗಳ ಆವಾಸಸ್ಥಾನವನ್ನೇ ಕಸಿದುಕೊಂಡಂತಾಗುತ್ತದೆ.

Read More
Next Story