ಬದುಕಿದ್ದಾಗಲೇ ತಮ್ಮ ತಿಥಿಗೆ ಅಧಿಕಾರಿಗಳಿಗೆ ಆಹ್ವಾನ! ರೈತನ ವಿನೂತನ ಪ್ರತಿಭಟನೆ
x

ಬದುಕಿದ್ದಾಗಲೇ ತಮ್ಮ 'ತಿಥಿ'ಗೆ ಅಧಿಕಾರಿಗಳಿಗೆ ಆಹ್ವಾನ! ರೈತನ ವಿನೂತನ ಪ್ರತಿಭಟನೆ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಳಿಯೂರು ಗ್ರಾಮದ ಶ್ರೀಗಂಧ ಬೆಳೆಗಾರ ಟಿ.ಎನ್. ವಿಶುಕುಮಾರ್ ಮತ್ತು ಇತರ 22 ರೈತರು ಈ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.


Click the Play button to hear this message in audio format

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಶ್ರೀಗಂಧ ಬೆಳೆದ ರೈತರೊಬ್ಬರು ಸರ್ಕಾರದ ವಿರುದ್ಧ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವಿನೂತನ ಹಾಗೂ ಅಷ್ಟೇ ಆಘಾತಕಾರಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಬದುಕಿರುವಾಗಲೇ ತಮ್ಮದೇ 'ತಿಥಿ' (ಉತ್ತರಕ್ರಿಯೆ) ಕಾರ್ಯಕ್ಕೆ ದಿನ ನಿಗದಿಪಡಿಸಿ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಆಹ್ವಾನಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಳಿಯೂರು ಗ್ರಾಮದ ಶ್ರೀಗಂಧ ಬೆಳೆಗಾರ ಟಿ.ಎನ್. ವಿಶುಕುಮಾರ್ ಮತ್ತು ಇತರ 22 ರೈತರು ಈ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.

ಸುಮಾರು 3 ಎಕರೆ 30 ಗುಂಟೆ ಜಮೀನಿನಲ್ಲಿ ರೈತರು ಕಷ್ಟಪಟ್ಟು ಬೆಲೆಬಾಳುವ ಶ್ರೀಗಂಧದ ಮರಗಳನ್ನು ಬೆಳೆಸಿದ್ದರು. ಆದರೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಈ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಶ್ರೀಗಂಧದ ಮರಗಳಿಗೆ, ಅಧಿಕಾರಿಗಳು ನಿಗದಿಪಡಿಸಿರುವ ಪರಿಹಾರ ಮೊತ್ತ ಕೇಳಿ ರೈತರು ಕಂಗಾಲಾಗಿದ್ದಾರೆ.

ಒಂದು ಮರಕ್ಕೆ ಕೇವಲ 420 ರೂ. ಪರಿಹಾರ?

ರೈತರು ಹೇಳುವ ಪ್ರಕಾರ, ಒಟ್ಟು ಬೆಳೆ ಮತ್ತು ಜಮೀನಿಗೆ ಸುಮಾರು 62 ಕೋಟಿ ರೂಪಾಯಿ ಪರಿಹಾರ ಸಿಗಬೇಕಿತ್ತು. ಆದರೆ, ಅಧಿಕಾರಿಗಳು ಒಂದು ಶ್ರೀಗಂಧದ ಮರಕ್ಕೆ ಕೇವಲ 420 ರೂಪಾಯಿ ಬೆಲೆ ಕಟ್ಟಿದ್ದಾರೆ. ಇಡೀ ಜಮೀನಿಗೆ ಸೇರಿ ಕೇವಲ 1.50 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ.

ಇದರಿಂದ ನೊಂದ ರೈತ ವಿಶುಕುಮಾರ್, "ಇದು ನಮ್ಮ ಬದುಕಿನ ಪ್ರಶ್ನೆ. ನ್ಯಾಯ ಸಿಗದೇ ಹೋದರೆ ಸಾಯುವುದೇ ಲೇಸು," ಎಂದು ಹಿಂದೆ ಮೊಬೈಲ್ ಟವರ್ ಏರಿ ಪ್ರತಿಭಟಿಸಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ, "ನನ್ನನ್ನು ಸರ್ಕಾರ ಮತ್ತು ಅಧಿಕಾರಿಗಳೇ ಕೊಂದಂತಾಗಿದೆ. ಹಾಗಾಗಿ, ನನ್ನ ತಿಥಿ ಕಾರ್ಯಕ್ಕೆ ಬನ್ನಿ," ಎಂದು ವ್ಯಂಗ್ಯ ಮತ್ತು ಆಕ್ರೋಶದ ಆಹ್ವಾನ ನೀಡಿದ್ದಾರೆ.

ನಾಳೆ ಸಂತಾಪ ಸಭೆ!

ಸೋಮವಾರ ( ಫೆಬ್ರುವರಿ 9ರಂದು) ಬೆಳಿಗ್ಗೆ 10 ಗಂಟೆಗೆ ಹುಳಿಯೂರು ಗ್ರಾಮದಲ್ಲಿ 'ಸಂತಾಪ ಸಭೆ' ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ, ಹೆದ್ದಾರಿ ಪ್ರಾಧಿಕಾರ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಅಧಿಕೃತ ಆಹ್ವಾನ ನೀಡಲಾಗಿದೆ ಎಂದು ರೈತರು ತಿಳಿಸಿದ್ದಾರೆ. ಈ ವಿನೂತನ ಪ್ರತಿಭಟನೆ ಈಗ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದು, ಸರ್ಕಾರ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read More
Next Story