ಪಶ್ಚಿಮಘಟ್ಟದ ದುರ್ಗಮ ಹಾದಿಯಲ್ಲಿ ವಿದ್ಯುತ್ ರೈಲು ಕ್ರಾಂತಿ ಮಾಡಿದ ಕೆಪಿಟಿಸಿಎಲ್‌
x

ಪಶ್ಚಿಮಘಟ್ಟದ ದುರ್ಗಮ ಹಾದಿಯಲ್ಲಿ ವಿದ್ಯುತ್ ರೈಲು ಕ್ರಾಂತಿ ಮಾಡಿದ ಕೆಪಿಟಿಸಿಎಲ್‌

ವಿದ್ಯುತ್ ರೈಲುಗಳ ನಿರಂತರ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ಬೃಹತ್ 'ಟ್ರಾಕ್ಷನ್ ಪವರ್' ಜಾಲವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಯಶಸ್ವಿಯಾಗಿ ಸಜ್ಜುಗೊಳಿಸಿದೆ.


Click the Play button to hear this message in audio format

ಕರ್ನಾಟಕದ ಅತ್ಯಂತ ಕ್ಲಿಷ್ಟಕರ ಹಾಗೂ ಪ್ರಾಕೃತಿಕ ವೈವಿಧ್ಯತೆಯಿಂದ ಕೂಡಿದ ಪಶ್ಚಿಮ ಘಟ್ಟ ಶ್ರೇಣಿಯ ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ಈಗ ಹೊಸ ಯುಗವೊಂದು ಆರಂಭವಾಗಿದೆ. ದಶಕಗಳ ಕಾಲ ಕೇವಲ ಡೀಸೆಲ್ ಎಂಜಿನ್‌ಗಳ ಮೊರೆಹೋಗಿದ್ದ ಈ ಹಸಿರು ಕಣಿವೆಯ ರೈಲು ಮಾರ್ಗವು ಸಂಪೂರ್ಣ ವಿದ್ಯುದ್ದೀಕರಣಗೊಂಡಿದ್ದು, ವಿದ್ಯುತ್ ರೈಲುಗಳ ನಿರಂತರ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ಬೃಹತ್ 'ಟ್ರಾಕ್ಷನ್ ಪವರ್' ಜಾಲವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಯಶಸ್ವಿಯಾಗಿ ಸಜ್ಜುಗೊಳಿಸಿದೆ.

ಶುಕ್ರವಾರ ಆರಂಭವಾಗಲಿರುವ ಪ್ರತಿಷ್ಠಿತ ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಈ ಹೊಸ ವಿದ್ಯುದ್ದೀಕೃತ ಘಾಟ್ ವಿಭಾಗದಲ್ಲಿ ಅಧಿಕೃತವಾಗಿ ಸಂಚರಿಸಲಿರುವ ಮೊದಲ ಅತಿವೇಗದ ವಿದ್ಯುತ್ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಹಿನ್ನೆಲೆಯಲ್ಲಿ, ಅತ್ಯಂತ ಕಠಿಣ ಭೌಗೋಳಿಕ ಪರಿಸ್ಥಿತಿಯ ನಡುವೆಯೂ ವಿಶ್ವದರ್ಜೆಯ ಪ್ರಸರಣ ಮೂಲಸೌಕರ್ಯವನ್ನು ನಿರ್ಮಿಸಿ, ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಿದ ಕೆಪಿಟಿಸಿಎಲ್‌ನ ಸಾಧನೆಯನ್ನು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಶ್ಲಾಘಿಸಿದ್ದಾರೆ.

ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ನಡುವಿನ ಸುಮಾರು 55 ಕಿಲೋಮೀಟರ್‌ಗಳ ಘಾಟ್ ವಿಭಾಗವು ಭಾರತೀಯ ರೈಲ್ವೆಯಲ್ಲೇ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ಒಂದಾಗಿದೆ. ಈ ಮಾರ್ಗವು ಕಡಿದಾದ ಬೆಟ್ಟಗಳು, ಆಳವಾದ ಕಣಿವೆಗಳು, ಹತ್ತಾರು ಸುರಂಗಗಳು, ಎತ್ತರದ ಸೇತುವೆಗಳು ಮತ್ತು ತೀವ್ರ ತಿರುವುಗಳಿಂದ ಕೂಡಿದೆ. ಜೊತೆಗೆ ಈ ಭಾಗದಲ್ಲಿ ಸುರಿಯುವ ಧಾರಾಕಾರ ಮಳೆ, ಮಣ್ಣುಕುಸಿತದ ಭೀತಿ ಹಾಗೂ ದಟ್ಟ ಅರಣ್ಯ ಪ್ರದೇಶವು ವಿದ್ಯುತ್ ಪ್ರಸರಣ ಮಾರ್ಗಗಳನ್ನು ನಿರ್ಮಿಸಲು ಪ್ರಮುಖ ಅಡೆತಡೆಗಳಾಗಿದ್ದವು. ವಿದ್ಯುತ್ ರೈಲುಗಳು, ಅದರಲ್ಲೂ ವಿಶೇಷವಾಗಿ ವಂದೇ ಭಾರತ್‌ನಂತಹ ಹೈ-ಸ್ಪೀಡ್ ರೈಲುಗಳು ಕಡಿದಾದ ಏರು ಹಾದಿಯಲ್ಲಿ ಚಲಿಸುವಾಗ ಅಪಾರ ಪ್ರಮಾಣದ ನಿರಂತರ ವಿದ್ಯುತ್ ಶಕ್ತಿಯ ಅಗತ್ಯವಿರುತ್ತದೆ. ಸಣ್ಣ ಪ್ರಮಾಣದ ವೋಲ್ಟೇಜ್ ಏರಿಳಿತ ಅಥವಾ ವಿದ್ಯುತ್ ವ್ಯತ್ಯಯವೂ ರೈಲಿನ ಸಂಚಾರಕ್ಕೆ ಅಡ್ಡಿ ಉಂಟುಮಾಡಬಹುದು. ಇಂತಹ ಸಂಕೀರ್ಣ ಸವಾಲುಗಳನ್ನು ಕೆಪಿಟಿಸಿಎಲ್‌ನ ಎಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಅತ್ಯಂತ ದಕ್ಷತೆಯಿಂದ ಎದುರಿಸಿದ್ದಾರೆ. ಪರಿಸರಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಿ, ಸುರಂಗ ಮತ್ತು ಬೆಟ್ಟಗಳ ಸಾಲಿನಲ್ಲಿ ಅತ್ಯಾಧುನಿಕ ಭೂಗತ ಕೇಬಲ್‌ಗಳು ಹಾಗೂ ಓವರ್‌ಹೆಡ್ ಪ್ರಸರಣ ಮಾರ್ಗಗಳನ್ನು ಅಳವಡಿಸುವ ಮೂಲಕ ತಾಂತ್ರಿಕ ಚಾಕಚಕ್ಯತೆಯನ್ನು ಮೆರೆದಿದ್ದಾರೆ.

ಸಚಿವ ಕೆ.ಜೆ. ಜಾರ್ಜ್ ಅವರ ಸಮನ್ವಯ

ಯೋಜನೆಯು ಕಾಲಮಿತಿಯೊಳಗೆ ಪೂರ್ಣಗೊಳ್ಳಲು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿರಂತರ ಮೇಲ್ವಿಚಾರಣೆ ಪ್ರಮುಖ ಕಾರಣವಾಗಿದೆ. ಘಾಟ್ ವಿಭಾಗದ ವಿದ್ಯುದ್ದೀಕರಣವು ಕೇವಲ ಒಂದು ಇಲಾಖೆಗೆ ಸೀಮಿತವಾಗಿರದೆ, ರೈಲ್ವೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಕೆಪಿಟಿಸಿಎಲ್ ನಡುವೆ ನಿರಂತರ ಸಮನ್ವಯವನ್ನು ಬೇಡುವ ಯೋಜನೆಯಾಗಿತ್ತು. ಸಚಿವ ಕೆ.ಜೆ. ಜಾರ್ಜ್ ಅವರು ಕಾಲಕಾಲಕ್ಕೆ ಸರಣಿ ಪರಿಶೀಲನಾ ಸಭೆಗಳನ್ನು ನಡೆಸಿ, ಕಾಮಗಾರಿಗಳಲ್ಲಿ ಎದುರಾದ ಕಾನೂನು ಹಾಗೂ ತಾಂತ್ರಿಕ ತೊಡಕುಗಳನ್ನು ಬಗೆಹರಿಸಿದರು. "ಪಶ್ಚಿಮ ಘಟ್ಟದಂತಹ ಅತ್ಯಂತ ದುರ್ಗಮ ಪರಿಸರದಲ್ಲಿ ವಿಶ್ವಾಸಾರ್ಹ ಟ್ರಾಕ್ಷನ್ ಪವರ್ ಒದಗಿಸುವುದು ಸಾಮಾನ್ಯ ಕೆಲಸವಲ್ಲ. ಇದು ಅತ್ಯುನ್ನತ ತಾಂತ್ರಿಕ ಜವಾಬ್ದಾರಿಯಾಗಿದ್ದು, ಕೆಪಿಟಿಸಿಎಲ್ ಸಿಬ್ಬಂದಿ ತಮ್ಮ ಬದ್ಧತೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಿದ್ದಾರೆ. ಅವರ ಪರಿಶ್ರಮ ಮತ್ತು ಅಧಿಕಾರಿಗಳ ಸಂಘಟಿತ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ" ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಪಿಟಿಸಿಎಲ್‌ನ ಪ್ರಮುಖ ತಾಂತ್ರಿಕ ಕಾಮಗಾರಿಗಳ ಪಕ್ಷಿನೋಟ

ವಂದೇ ಭಾರತ್ ಸೇರಿದಂತೆ ಎಲ್ಲಾ ವಿದ್ಯುತ್ ರೈಲುಗಳಿಗೆ ತಡೆರಹಿತ ವಿದ್ಯುತ್ ಒದಗಿಸಲು ಕೆಪಿಟಿಸಿಎಲ್ ಬೃಹತ್ ಜಾಲವನ್ನೇ ಸಜ್ಜುಗೊಳಿಸಿದೆ. ಈ ಯೋಜನೆಯ ಪ್ರಮುಖ ತಾಂತ್ರಿಕ ಮೈಲಿಗಲ್ಲುಗಳು ರೈಲ್ವೆ ಮಾರ್ಗದ ಉದ್ದಕ್ಕೂ ಇರುವ 22 ರೈಲ್ವೆ ಎಳೆತ ಉಪಕೇಂದ್ರಗಳಿಗೆ ಕೆಪಿಟಿಸಿಎಲ್‌ನ 22 ಪ್ರಮುಖ ವಿದ್ಯುತ್ ಉಪಕೇಂದ್ರಗಳಿಂದ ನೇರ ಹಾಗೂ ವಿಶ್ವಾಸಾರ್ಹ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸಿದ್ದಾಪುರ ಭಾಗಕ್ಕೆ ವಿದ್ಯುತ್ ಪೂರೈಕೆ ಬಲಪಡಿಸಲು 4.5 ಕಿ.ಮೀ ಉದ್ದದ 66 ಕೆವಿ ಪ್ರಸರಣ ಮಾರ್ಗವನ್ನು ನಿರ್ಮಿಸಲಾಗಿದೆ. ಅತ್ಯಂತ ಪ್ರಮುಖ ಜಂಕ್ಷನ್ ಆದ ಸಕಲೇಶಪುರಕ್ಕೆ 220 ಕೆವಿ ಸಾಮರ್ಥ್ಯದ ಸುರಂಗ ಹಾಗೂ ಓವರ್‌ಹೆಡ್ ಪ್ರಸರಣ ಸಂಪರ್ಕವನ್ನು ಒದಗಿಸಲಾಗಿದೆ. ಬೆಟ್ಟಗುಡ್ಡಗಳ ಸವಾಲನ್ನು ಮೆಟ್ಟಿ ನಿಲ್ಲಲು ನೆರಳಕಟ್ಟೆ ವ್ಯಾಪ್ತಿಯಲ್ಲಿ 2.760 ಕಿ.ಮೀ ಉದ್ದದ 220 ಕೆವಿ ಸಾಮರ್ಥ್ಯದ ಬೃಹತ್ ಸುರಂ ವಿದ್ಯುತ್ ಕೇಬಲ್ ಅಳವಡಿಸಲಾಗಿದೆ. ಅಂಚೆಪಾಳ್ಯ ಹಾಗೂ ಯಾಚೇನಹಳ್ಳಿ ಉಪಕೇಂದ್ರಗಳಲ್ಲಿ ಹೆಚ್ಚುವರಿ ವಿದ್ಯುತ್ ಹೊರೆಯನ್ನು ನಿಭಾಯಿಸಲು 220/66 ಕೆವಿ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ಗಳ ಉನ್ನತೀಕರಣ ಮಾಡಲಾಗಿದೆ. ಮುರುಡೇಶ್ವರ, ಕುಮಟಾ ಮತ್ತು ಕಾರವಾರ ಆರ್‌ಟಿಎಸ್‌ಎಸ್‌ಗಳಿಗೆ ಕೆಪಿಟಿಸಿಎಲ್‌ನ ಹಾಲಿ ಬಲಿಷ್ಠ ಜಾಲದಿಂದಲೇ ಪೂರಕ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಾರ್ಯಾಚರಣಾ ಸಿದ್ಧತೆ: ಡಾ. ವಿ. ರಾಮ್ ಪ್ರಸಾತ್ ಮನೋಹರ್

ಯೋಜನೆಯ ಕಾರ್ಯಾಚರಣೆಯ ಸಿದ್ಧತೆಯ ಕುರಿತು ಮಾತನಾಡಿದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್, ರೈಲು ಸಂಚಾರ ಆರಂಭವಾದ ನಂತರವೂ ಯಾವುದೇ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದಿದ್ದಾರೆ. "ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರದ ಹಿನ್ನೆಲೆಯಲ್ಲಿ ಎಲ್ಲಾ 12 ಆರ್‌ಟಿಎಸ್‌ಎಸ್ ಕೇಂದ್ರಗಳು ಹಾಗೂ ಸಂಬಂಧಿತ ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ ಹಿರಿಯ ಎಂಜಿನಿಯರ್‌ಗಳು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಕ್ಷಣಾರ್ಧದಲ್ಲಿ ನಿಭಾಯಿಸಲು 24x7 ರಿಯಲ್-ಟೈಮ್ ಮಾನಿಟರಿಂಗ್ ಹಾಗೂ ಎಮರ್ಜೆನ್ಸಿ ರೆಸ್ಪಾನ್ಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ನಮ್ಮ ಗ್ರಿಡ್ ಸಂಪೂರ್ಣ ಸನ್ನದ್ಧವಾಗಿದೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಆಯಾಮ

ಬೆಂಗಳೂರು–ಮಂಗಳೂರು–ಮಡಗಾಂವ್ ನಡುವಿನ ಈ ವಂದೇ ಭಾರತ್ ರೈಲು ಕೇವಲ ಪ್ರಯಾಣಿಕರ ಓಡಾಟಕ್ಕೆ ಸೀಮಿತವಾಗಿರದೆ, ರಾಜ್ಯದ ಆರ್ಥಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರಿ ಉತ್ತೇಜನ ನೀಡಲಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಧಾರ್ಮಿಕ ಮತ್ತು ಪ್ರವಾಸಿ ತಾಣಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರಿನ ಕಡಲತೀರಗಳು, ಉಡುಪಿಯ ಶ್ರೀಕೃಷ್ಣ ಮಠ, ಮುರುಡೇಶ್ವರ, ಗೋಕರ್ಣ ಹಾಗೂ ಗೋವಾಗಳಿಗೆ ರಾಜಧಾನಿ ಬೆಂಗಳೂರಿನಿಂದ ವೇಗದ ಹಾಗೂ ಆರಾಮದಾಯಕ ಸಂಪರ್ಕ ದೊರೆಯಲಿದೆ. ಕರಾವಳಿಯ ಆತಿಥ್ಯ ಕ್ಷೇತ್ರ (ಹೋಟೆಲ್, ಹೋಂಸ್ಟೇ), ಸಾರಿಗೆ ಮತ್ತು ವ್ಯಾಪಾರ ವಹಿವಾಟುಗಳಿಗೆ ಹೊಸ ಚೈತನ್ಯ ಬರಲಿದ್ದು, ಸ್ಥಳೀಯ ಉದ್ಯೋಗಾವಕಾಶಗಳು ಹೆಚ್ಚಲಿವೆ. ಬೆಂಗಳೂರು ಮತ್ತು ಮಂಗಳೂರಿನ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ತಗ್ಗುವುದರಿಂದ ವಾಣಿಜ್ಯ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ.

Read More
Next Story