ರಾಜ್ಯದಲ್ಲಿ ಶೇ. 42 ಮಳೆ ಕೊರತೆ, ಕುಡಿಯುವ ನೀರಿಗೆ ಆದ್ಯತೆ : ಸಚಿವ ಈಶ್ವರ್‌ ಖಂಡ್ರೆ
x

ರಾಜ್ಯದಲ್ಲಿ ಶೇ. 42 ಮಳೆ ಕೊರತೆ, ಕುಡಿಯುವ ನೀರಿಗೆ ಆದ್ಯತೆ : ಸಚಿವ ಈಶ್ವರ್‌ ಖಂಡ್ರೆ

ನೀರು ಪೂರೈಕೆಗೆ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ. ನೀರಿನ ಸಮಸ್ಯೆ ಇರುವ ಪ್ರತಿ ಗ್ರಾಮಕ್ಕೂ ತಕ್ಷಣ ಸ್ಪಂದಿಸಲು ಸಿಇಒಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ ಎಂದು ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಎಲ್ ನಿನೋ ಪರಿಣಾಮದಿಂದಾಗಿ ಈ ಬಾರಿ ಶೇ.42ರಷ್ಟು ಮಳೆಯ ಕೊರತೆ ಉಂಟಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದು ನಿಜ. ಆದರೆ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಹೊನ್ನಾಳಿಯಲ್ಲಿ ನಡೆದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ 91ನೇ ಜಯಂತ್ಯುತ್ಸವ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ನೀರು ಪೂರೈಕೆಗೆ ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ. ನೀರಿನ ಸಮಸ್ಯೆ ಇರುವ ಪ್ರತಿಯೊಂದು ಗ್ರಾಮಕ್ಕೂ ತಕ್ಷಣ ಸ್ಪಂದಿಸಲು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ. ಯಾವುದೇ ಗ್ರಾಮದಲ್ಲಿ ಸಮಸ್ಯೆ ಕಂಡುಬಂದರೆ 24 ಗಂಟೆಯೊಳಗೆ ಪರಿಹಾರ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.

ನರೇಗಾ ಯೋಜನೆಯ ಪರಿವರ್ತಿತ ರೂಪವಾದ ವಿಬಿಜಿ ರಾಮ್‌ಜಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ಹಿಂದೆ ಈ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು 90:10 ಇತ್ತು. ಆದರೆ, ಈಗ ಅದನ್ನು 60:40ಕ್ಕೆ ಬದಲಾಯಿಸಿರುವುದು ರಾಜ್ಯ ಸರ್ಕಾರಗಳ ಮೇಲೆ ದೊಡ್ಡ ಆರ್ಥಿಕ ಹೊರೆ ಹಾಕಿದೆ. ಕೇಂದ್ರದ ಈ ನಡೆಯಿಂದ ಗ್ರಾಮೀಣಾಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಠ-ಮಾನ್ಯಗಳ ಸಾಮಾಜಿಕ ಜವಾಬ್ದಾರಿ

ಕರುನಾಡಿನ ಇತಿಹಾಸದಲ್ಲಿ ವೀರಶೈವ ಲಿಂಗಾಯತ ಮಠಗಳ ಪಾತ್ರ ಅವಿಸ್ಮರಣೀಯ. ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ಜ್ಞಾನದ ದೀವಿಗೆಗಳು. ಎಲ್ಲ ಜಾತಿ, ಧರ್ಮದವರಿಗೂ ಅನ್ನ, ಅಕ್ಷರ ಮತ್ತು ಆಶ್ರಯ ನೀಡುವ ಮೂಲಕ ಮಠಗಳು ಸಮಾಜವನ್ನು ಮುನ್ನಡೆಸುತ್ತಿವೆ. ಚಂದ್ರಶೇಖರ ಶಿವಾಚಾರ್ಯರಂತಹ ಮಹಾಪುರುಷರು ಈ ಭಾಗದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ್ದಾರೆ. ಸಮಾಜದ ಇಂದಿನ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ಯುವಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ಯುವಶಕ್ತಿ ಅಣುಶಕ್ತಿಗಿಂತ ಮಿಗಿಲಾದುದು. ಆದರೆ, ಇಂದು ಶೇ.30ರಷ್ಟು ಯುವಕರು ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇನ್ನು ಕೆಲವರು ಸ್ಮಾರ್ಟ್ ಫೋನ್‌ಗಳ ದಾಸರಾಗಿ ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಯುವಜನತೆ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರು ಮತ್ತು ಮಠಾಧೀಶರ ಮೇಲಿದೆ ಎಂದರು.

ಇದೇ ವೇಳೆ ಹೊನ್ನಾಳಿಯಲ್ಲಿ ನಿರ್ಮಾಣವಾಗಿರುವ ಹೈಟೆಕ್ ಆಸ್ಪತ್ರೆಯ ಫಲಕ ಅನಾವರಣಗೊಳಿಸಿ ಮಾತನಾಡಿದ ಸಚಿವರು, ಆರೋಗ್ಯವೇ ಭಾಗ್ಯ. ಆರೋಗ್ಯ ಇಲ್ಲದ ಬದುಕು ದುಸ್ತರ. ಇಂದಿನ ಧಾವಂತದ ಬದುಕಿನಲ್ಲಿ ಯೋಗ, ನಡಿಗೆಯಂತಹ ಆರೋಗ್ಯಪೂರ್ಣ ಜೀವನಕ್ರಮವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ವೈದ್ಯರನ್ನು ನಾವು ದೇವರಿಗೆ ಸಮಾನವಾಗಿ ಕಾಣುತ್ತೇವೆ. ಇಂತಹ ಆಸ್ಪತ್ರೆಗಳು ಗ್ರಾಮೀಣ ಜನರಿಗೆ ವರದಾನವಾಗಲಿ ಎಂದು ಆಶಿಸಿದರು.

ಈ ನಡುವೆ, ಪತ್ರಿಕಾ ದಿನಾಚರಣೆಯ ಪ್ರಯುಕ್ತ ಪತ್ರಕರ್ತರನ್ನು ಅಭಿನಂದಿಸಿದ ಸಚಿವರು, ಸಮಾಜದ ತಪ್ಪುಗಳನ್ನು ತಿದ್ದುವ ಮತ್ತು ಜನಾಭಿಪ್ರಾಯ ಮೂಡಿಸುವ ಮೂಲಕ ಮಾಧ್ಯಮಗಳು ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಮಾಜದ ಕನ್ನಡಿಯಾಗಿರುವ ಪತ್ರಕರ್ತರು ಈ ಸಮಾಜಕ್ಕೆ ದೊಡ್ಡ ಆಸ್ತಿ ಎಂದರು.

Read More
Next Story