
ಕೊಡಗು-ವೀರಾಜಪೇಟೆಯಲ್ಲಿ ಭೀತಿ ಹುಟ್ಟಿಸಿದ್ದ ʼಕಾಫಿ ನಾಡಿನʼ ಪುಂಡಾನೆ ಕೊನೆಗೂ ಸೆರೆ !
ಕಾಡಾನೆಗಳ ದಾಳಿಯಿಂದಾಗಿ ಈ ವರ್ಷವೇ ಐದು ಮಂದಿ ಪ್ರಾಣ ಕಳೆದುಕೊಂಡಿದ್ದು, ಇದೀಗ ಅರವಳಿಕೆ ಮದ್ದು ನೀಡಿ ಈ ಪುಂಡಾನೆಯನ್ನು ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಿರುವುದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ತಾಲೂಕಿನ ಚೆಂಬೆಬೆಳ್ಳೂರು ಹಾಗೂ ಅದರ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ರಾಜಾರೋಷವಾಗಿ ತಿರುಗಾಡುತ್ತಿದ್ದ ಕಾಫಿನಾಡಿನ ಈ ಒಂಟಿ ಸಲಗ ಇದೀಗ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದ್ದು, ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಈ ಆನೆಯ ನಿರಂತರ ಹಾವಳಿಯಿಂದಾಗಿ ಜನರು ಕತ್ತಲಾಗುತ್ತಿದ್ದಂತೆಯೇ ಮನೆಯಿಂದ ಹೊರಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿತ್ತು.
ಕೇವಲ 10 ದಿನಗಳ ಅಂತರದಲ್ಲಿ ಮತ್ತೊಂದು ಕಾಡಾನೆಯನ್ನು ವಿರಾಜಪೇಟೆ ತಾಲೂಕಿನಲ್ಲಿ ಸೆರೆಹಿಡಿಯಲಾಗಿದ್ದು, ಮಾರ್ಚ್ ತಿಂಗಳ 22 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೂವರು ಮೃತಪಟ್ಟಿದ್ದರೆ, ಎರಡು ಕಾಡಾನೆಗಳು ಸೆರೆಯಾಗಿವೆ.
ಗ್ರಾಮಕ್ಕೆ ಸೀಮಿತವಾಗಿರಲಿಲ್ಲ
ಈ ಕಾಡಾನೆಯು ಕೇವಲ ಒಂದು ಗ್ರಾಮಕ್ಕೆ ಸೀಮಿತವಾಗದೆ ಚೆಂಬೆಬೆಳ್ಳೂರು, ದೇವಣಗೇರಿ, ಬೆಳ್ಳರಿಮಾಡು, ಕುಕ್ಲೂರು, ಪೊದಕೋಟೆ, ಐಮಂಗಲ, ಮೈತಾಡಿ, ಕದನೂರು, ಬಿಳುಗುಂದ, ಹಾಲುಗುಂದ ಹಾಗೂ ಅಮ್ಮತ್ತಿ ಸೇರಿದಂತೆ ಹತ್ತಾರು ಗ್ರಾಮಗಳ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿತ್ತು. ರೈತರು ಕಷ್ಟಪಟ್ಟು ಬೆಳೆದಿದ್ದ ಕಾಫಿ, ಮೆಣಸು ಸೇರಿದಂತೆ ಅಪಾರ ಪ್ರಮಾಣದ ಕೃಷಿ ಫಸಲನ್ನು ತುಳಿದು ನಾಶಪಡಿಸಿತ್ತು. ಅಷ್ಟೇ ಅಲ್ಲದೆ, ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಾಗೂ ಸ್ಥಳೀಯರ ಮೇಲೂ ಏಕಾಏಕಿ ದಾಳಿಗೆ ಯತ್ನಿಸಿ ಪ್ರಾಣಭಯ ಸೃಷ್ಟಿಸಿತ್ತು. ದಿನೇದಿನೇ ಆನೆಯ ದಾಂಧಲೆ ಮಿತಿಮೀರಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ತಕ್ಷಣವೇ ಆನೆಯನ್ನು ಸೆರೆಹಿಡಿಯುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕರ ಈ ಒತ್ತಾಯಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು, ವಿಳಂಬ ಮಾಡದೆ ಕಾಡಾನೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದರು.
ಸೆರೆ ಸಿಕ್ಕ ಆನೆ.
ಕುಮ್ಕಿ ಆನೆಗಳ ಬಳಕೆ
ಶಾಸಕರ ಸೂಚನೆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಹಾಗೂ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರ ಮಾರ್ಗದರ್ಶನದಲ್ಲಿ ಬೃಹತ್ ಕಾರ್ಯಾಚರಣೆಯೊಂದನ್ನು ರೂಪಿಸಿದರು. ಕಾಡಾನೆಯನ್ನು ಮಣಿಸಲು ದುಬಾರೆ ಹಾಗೂ ಮತ್ತಿಗೋಡು ಆನೆ ಶಿಬಿರಗಳ ಕುಮ್ಕಿ ಆನೆಗಳಾದ (ಸಾಕಾನೆಗಳು) ಅಭಿಮನ್ಯು, ಮಹೇಂದ್ರ, ರಂಜನ್, ಭೀಮಾ, ಸುಗ್ರೀವ ಹಾಗೂ ಹರ್ಷ ಎಂಬ ಆರು ಬಲಿಷ್ಠ ಆನೆಗಳನ್ನು ಕಣಕ್ಕಿಳಿಸಿದರು. ಚೆಂಬೆಬೆಳ್ಳೂರು ಗ್ರಾಮದ ಕಾಫಿ ತೋಟವೊಂದರ ಬಳಿ ಕಾಡಾನೆಯ ಚಲನವಲನಗಳನ್ನು ಪತ್ತೆಹಚ್ಚಿದ ಅರಣ್ಯ ಸಿಬ್ಬಂದಿ ಹಾಗೂ ಸಾಕಾನೆಗಳ ಪಡೆ, ಸತತ ಐದು ಗಂಟೆಗಳ ಕಾಲ ಅರಣ್ಯದೊಳಗೆ ಜಿದ್ದಾಜಿದ್ದಿನ ಮತ್ತು ಅತ್ಯಂತ ಸವಾಲಿನ ಕಾರ್ಯಾಚರಣೆ ನಡೆಸಿತು.
ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಹಾಗೂ ಕುಶಾಲನಗರ ಉಪ ಅರಣ್ಯಾಧಿಕಾರಿ ಮತ್ತು ನುರಿತ ಶಾರ್ಪ್ ಶೂಟರ್ ಕನ್ನಂಡ ರಂಜನ್ ಅವರು ಪ್ರಮುಖ ಪಾತ್ರ ವಹಿಸಿದರು. ಕಾಡಾನೆಯು ಗುರಿಗೆ ಸಿಗುತ್ತಿದ್ದಂತೆಯೇ, ಅತ್ಯಂತ ಎಚ್ಚರಿಕೆಯಿಂದ ಬಂದೂಕಿನ ಮೂಲಕ ಡಾರ್ಟ್ ಮಾಡಿ ಅರವಳಿಕೆ ಮದ್ದನ್ನು ಯಶಸ್ವಿಯಾಗಿ ನೀಡಿದರು. ಅರವಳಿಕೆ ಮದ್ದಿನ ಪ್ರಭಾವದಿಂದ ಆನೆ ತೂರಾಡತೊಡಗಿದಾಗ, ಸುತ್ತುವರೆದ ಆರು ಸಾಕಾನೆಗಳು ಅದನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡವು. ಬಳಿಕ ಸೆರೆಯಾದ ಕಾಡಾನೆಯನ್ನು ಸಾಕಾನೆಗಳ ಬಿಗಿ ಭದ್ರತೆಯಲ್ಲಿ ಲಾರಿಗೆ ಹತ್ತಿಸಿ, ಮತ್ತಿಗೋಡು ಆನೆ ಶಿಬಿರಕ್ಕೆ ಅತ್ಯಂತ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಅರಣ್ಯ ಇಲಾಖೆಯ ಈ ದಿಟ್ಟ ಹಾಗೂ ಯಶಸ್ವಿ ಕಾರ್ಯಾಚರಣೆಯಿಂದಾಗಿ ವಿರಾಜಪೇಟೆ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಇದೀಗ ಮರಳಿ ಶಾಂತಿ ನೆಲೆಸಿದ್ದು, ರೈತರು ನಿರ್ಭೀತಿಯಿಂದ ತೋಟದ ಕೆಲಸಗಳಿಗೆ ಮರಳುವಂತಾಗಿದೆ.
ಜನವರಿಯಿಂದ ಐದು ಮಂದಿ ಸಾವು
ಕಾಡಾನೆಗಳು ಇತ್ತೀಚೆಗೆ ಜನರ ಮೇಲೆ ಏಕಾಏಕಿ ದಾಳಿ ಮಾಡಲು ಶುರು ಮಾಡಿದ್ದವು. ಕೆಲವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಜೊತೆಗೆ, ಅಪಾರ ಪ್ರಮಾಣದ ಫಸಲು ಕೂಡ ನಾಶವಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದಾಗಿ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಮಾರ್ಚ್ ತಿಂಗಳೊಂದರಲ್ಲೇ 3 ಮಂದಿ ಮೃತಪಟ್ಟಿದ್ದಾರೆ. ಈ ಸಾವು-ನೋವುಗಳು ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದ್ದವು.

