ಬೆಂಗಳೂರಲ್ಲಿ ರೈಸ್ ಕಾನ್‌ಕ್ಲೇವ್ 2026: ಜೂ.13, 14ಕ್ಕೆ ವಿಜ್ಞಾನ-ಉದ್ಯಮಶೀಲತೆಯ ಬೃಹತ್ ಸಮಾವೇಶ
x

ಬೆಂಗಳೂರಲ್ಲಿ ರೈಸ್ ಕಾನ್‌ಕ್ಲೇವ್ 2026: ಜೂ.13, 14ಕ್ಕೆ ವಿಜ್ಞಾನ-ಉದ್ಯಮಶೀಲತೆಯ ಬೃಹತ್ ಸಮಾವೇಶ

ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ವಲಯ ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಅವುಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವುದು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ.


Click the Play button to hear this message in audio format

ದೇಶದ ಭವಿಷ್ಯದ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಯ ದಿಕ್ಸೂಚಿಯಾಗಿರುವ 'ರೈಸ್ ಕಾನ್‌ಕ್ಲೇವ್ 2026' ರ ಆರನೇ ಆವೃತ್ತಿಯು ಜೂ.13 ಮತ್ತು 14 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಆಶ್ರಯದಲ್ಲಿ, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಈ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಈ ಸಮಾವೇಶಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಸಿಎಸ್‌ಐಆರ್-ಎನ್‌ಎಎಲ್ ಸಭಾಂಗಣದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಡಾ. ಅಭಯ್ ಎ. ಪಶೀಲ್ಕರ್ ಅವರು, ಈ ಸಮಾವೇಶದ ಮಹತ್ವವನ್ನು ವಿವರಿಸಿದರು. ವಿಕಸಿತ ಭಾರತ @ 2047 ಗುರಿಯನ್ನು ತಲುಪಲು ಕೇಂದ್ರ ಸರ್ಕಾರ ರೂಪಿಸಿರುವ 'ಹೋಲ್-ಆಫ್-ಸೈನ್ಸ್ ಅಂಡ್ ಇನ್ನೋವೇಶನ್' ದೂರದೃಷ್ಟಿಗೆ ಪೂರಕವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ವಲಯ ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಅವುಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವುದು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಬಾರಿಯ ಬೆಂಗಳೂರು ಆವೃತ್ತಿಯು ವಿಕಸಿತ ಭಾರತ 2047 ಕ್ಕಾಗಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಆಧಾರಿತ ಬೆಳವಣಿಗೆ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜನೆಗೊಂಡಿದೆ. ಕೇವಲ ಸಂಶೋಧನೆಗಳಿಗೆ ಸೀಮಿತವಾಗದೆ, ಆ ಸಂಶೋಧನೆಗಳು ಮಾರುಕಟ್ಟೆಗೆ ಹೇಗೆ ತಲುಪಬೇಕು ಮತ್ತು ಆ ಮೂಲಕ ದೇಶದ ಅಭಿವೃದ್ಧಿಗೆ ಹೇಗೆ ವೇಗ ನೀಡಬೇಕು ಎಂಬ ದೃಷ್ಟಿಕೋನವನ್ನು ಈ ಸಮಾವೇಶ ಹೊಂದಿದೆ ಎಂದು ಹೇಳಿದರು.

ಗಂಭೀರ ಚರ್ಚೆಯ ಮೂರು ಆಯಾಮಗಳು

ಸಮಾವೇಶವು ಮೂರು ನಿರ್ಣಾಯಕ ಕ್ಷೇತ್ರಗಳ ಮೇಲೆ ಗಂಭೀರ ಚರ್ಚೆಗಳನ್ನು ನಡೆಸಲಿದೆ. ಭಾರತದ ಬಾಹ್ಯಾಕಾಶ ಮತ್ತು ವೈಮಾನಿಕ ವಲಯದಲ್ಲಿ ನಡೆಯುತ್ತಿರುವ ಕ್ರಾಂತಿಕಾರಿ ಬದಲಾವಣೆಗಳು ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನಗಳ ಅಳವಡಿಕೆ. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವು ಸಮಾಜದ ಮೇಲೆ ಬೀರುವ ಪ್ರಭಾವ, ಅದರ ನೈತಿಕ ಹೊಣೆಗಾರಿಕೆಗಳು ಮತ್ತು ತಂತ್ರಜ್ಞಾನವನ್ನು ಎಲ್ಲರಿಗೂ ತಲುಪಿಸುವ ವಿಧಾನಗಳು ಮತ್ತು ಕೃಷಿ ಉತ್ಪಾದನೆ ಮತ್ತು ಆಹಾರ ಸಂಸ್ಕರಣಾ ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸುವ ಬಗೆ ಚರ್ಚೆಗಳು ನಡೆಯಲಿವೆ.

ಈ ಸಮಾವೇಶವು ಉದ್ಯಮ ವಲಯದ ದೈತ್ಯ ಕಂಪನಿಗಳಾದ ಬಾಷ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಏರ್‌ಬಸ್, ಎಲ್‌ ಅಂಡ್ ಟಿ, ಬಿಇಎಂಎಲ್, ಷ್ನೇಡರ್, ಐಬಿಎಂ, ಲೀಶಿಯಸ್ ಮತ್ತು ಹ್ಯಾಪಿಲೋನಂತಹ ಸಂಸ್ಥೆಗಳ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ತರಲಿದೆ. ಇದರೊಂದಿಗೆ ಇಸ್ರೋ, ಐಐಎಸ್‌ಸಿ, ಐಐಎಂ-ಬೆಂಗಳೂರು, ಐಐಎಂ-ನಾಗ್ಪುರ ಮತ್ತು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ 25ಕ್ಕೂ ಹೆಚ್ಚು ಖ್ಯಾತ ತಜ್ಞರು ಮತ್ತು ಶಿಕ್ಷಣ ತಜ್ಞರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ ಎಂದರು.

ಯುವ ಸಂಶೋಧಕರಿಗೆ ಸುವರ್ಣಾವಕಾಶ

ಸಮ್ಮೇಳನದಲ್ಲಿ ಸುಮಾರು 800ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಯುವ ಉದ್ಯಮಿಗಳು ಮತ್ತು ಸಂಶೋಧಕರಿಗೆ ಇದು ವರದಾನವಾಗಲಿದೆ. ಸಮಾವೇಶದಲ್ಲಿ ನವೋದ್ಯಮಗಳ ಹೊಸ ಆವಿಷ್ಕಾರಗಳ ಪ್ರದರ್ಶನ ನಡೆಯಲಿದ್ದು, ಇದು ಉದ್ಯಮಶೀಲತೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.

'ವಿಜ್ಞಾನ ಮತ್ತು ತಂತ್ರಜ್ಞಾನ ಪೆವಿಲಿಯನ್' ಆಕರ್ಷಕ ವಿಷಯವಾಗಿದ್ದು, ಇದರಲ್ಲಿ ಸಿಎಸ್‌ಐಆರ್‌, ಐಸಿಎಆರ್‌, ಐಸಿಎಂಆರ್‌ ಮತ್ತು ಇಸ್ರೋದಂತಹ ಪ್ರತಿಷ್ಠಿತ ಸಂಸ್ಥೆಗಳು ತಮ್ಮ ವೈಜ್ಞಾನಿಕ ಸಾಧನೆಗಳನ್ನು ಮತ್ತು ಭವಿಷ್ಯದ ಯೋಜನೆಗಳನ್ನು ಪ್ರದರ್ಶಿಸಲಿವೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡಲು ಮತ್ತು ವಿಜ್ಞಾನದಲ್ಲಿನ ವೃತ್ತಿ ಅವಕಾಶಗಳ ಬಗ್ಗೆ ತಿಳಿಸಲು ಈ ಪೆವಿಲಿಯನ್ ಸಹಕಾರಿಯಾಗಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಿಎಸ್‌ಐಆರ್ - ಸಿಎಫ್‌ಟಿಆರ್‌ಐ ನಿರ್ದೇಶಕ ಡಾ. ಗಿರಿಧರ್ ಪರ್ವತಂ ಮತ್ತು ಸಿಎಸ್‌ಐಆರ್ - 4ಪಿಐ ನಿರ್ದೇಶಕ ಡಾ. ಜಿ. ಕೆ. ಪಾತ್ರ ಅವರು ಉಪಸ್ಥಿತರಿದ್ದರು.

Read More
Next Story