ಅಕ್ಕಿ ಬೆಲೆ ಮತ್ತೆ ಏರಿಕೆ: ಸತತ 4ನೇ ಬಾರಿಗೆ ದರ ಹೆಚ್ಚಳ
x

ಸೋನಾ ಮಸೂರಿ ಅಕ್ಕಿಯ ದರ ಕೂಡ ಕೆಜಿಗೆ 100 ರೂ. ಗಡಿ ತಲುಪಿದೆ. ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ 25 ಕೆಜಿ ಚೀಲದ ಬೆಲೆ 1,430 ರೂ.ನಿಂದ 1,820 ರೂ.ಗೆ ಏರಿಕೆಯಾಗಿದೆ.

ಅಕ್ಕಿ ಬೆಲೆ ಮತ್ತೆ ಏರಿಕೆ: ಸತತ 4ನೇ ಬಾರಿಗೆ ದರ ಹೆಚ್ಚಳ

ಕೋಲಂ ಅಕ್ಕಿಯ ಬೆಲೆ ಕೆಜಿಗೆ 75 ರೂ.ನಿಂದ 110 ರೂ.ಗೆ ಏರಿಕೆಯಾಗಿದೆ. ಬಾಸುಮತಿ ಅಕ್ಕಿ 105 ರೂ.ನಿಂದ 120 ರೂ.ಗೆ, ಜೀರಾ ರೈಸ್ 115 ರೂ.ನಿಂದ 125 ರೂ.ಗೆ ಮತ್ತು ರಾಜಮುಡಿ ಅಕ್ಕಿ 125 ರೂ.ನಿಂದ 150 ರೂ.ಗೆ ಹೆಚ್ಚಳವಾಗಿದೆ.


Click the Play button to hear this message in audio format

ರಾಜ್ಯದ ಜನತೆಗೆ ಒಂದಾದ ಮೇಲೊಂದು ಬೆಲೆ ಏರಿಕೆಯ ಬರೆ ಬೀಳುತ್ತಿರುವ ನಡುವೆಯೇ ಅಕ್ಕಿ ದರವೂ ಮತ್ತೆ ಹೆಚ್ಚಳವಾಗಿದೆ. ಸತತ ನಾಲ್ಕು ತಿಂಗಳಲ್ಲಿ ನಾಲ್ಕನೇ ಬಾರಿಗೆ ಅಕ್ಕಿ ಬೆಲೆ ಏರಿಕೆಯಾಗಿದ್ದು, ಇದರಿಂದ ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಅಕ್ಟೋಬರ್ 6ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆ ಹಾಗೂ ಸರ್ಕಾರಿ ಬಸ್‌ಗಳ ಟಿಕೆಟ್ ದರ ಪರಿಷ್ಕರಣೆ ಕುರಿತು ನಿರ್ಧಾರವಾಗಿರುವ ಬೆನ್ನಲ್ಲೇ ಅಕ್ಕಿ ದರ ಹೆಚ್ಚಳ ಗ್ರಾಹಕರಿಗೆ ಮತ್ತೊಂದು ಆಘಾತ ನೀಡಿದೆ.

ಕೋಲಂ ಅಕ್ಕಿಯ ಬೆಲೆ ಕೆಜಿಗೆ 75 ರೂ.ನಿಂದ 110 ರೂ.ಗೆ ಏರಿಕೆಯಾಗಿದೆ. ಬಾಸುಮತಿ ಅಕ್ಕಿ 105 ರೂ.ನಿಂದ 120 ರೂ.ಗೆ, ಜೀರಾ ರೈಸ್ 115 ರೂ.ನಿಂದ 125 ರೂ.ಗೆ ಮತ್ತು ರಾಜಮುಡಿ ಅಕ್ಕಿ 125 ರೂ.ನಿಂದ 150 ರೂ.ಗೆ ಹೆಚ್ಚಳವಾಗಿದೆ. ಸ್ಟೀಮ್ ಅಕ್ಕಿಯ ದರವೂ ಕೆಜಿಗೆ 60 ರೂ.ನಿಂದ 88 ರೂ.ಗೆ ಏರಿಕೆಯಾಗಿದೆ.

100 ರೂ. ಗಡಿ ತಲುಪಿದ ಸೋನಾ ಮಸೂರಿ

ಸೋನಾ ಮಸೂರಿ ಅಕ್ಕಿಯ ದರ ಕೂಡ ಕೆಜಿಗೆ 100 ರೂ. ಗಡಿ ತಲುಪಿದೆ. ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ 25 ಕೆಜಿ ಚೀಲದ ಬೆಲೆ 1,430 ರೂ.ನಿಂದ 1,820 ರೂ.ಗೆ ಏರಿಕೆಯಾಗಿದೆ. ಅಂದರೆ ಚೀಲಕ್ಕೆ ಸುಮಾರು 400 ರೂ.ನಷ್ಟು ಹೆಚ್ಚಳವಾಗಿದೆ. ಕಳೆದ ಎರಡು ತಿಂಗಳಲ್ಲಿ ಸೋನಾ ಮಸೂರಿ ಅಕ್ಕಿಯ ದರ 390ರಿಂದ 400 ರೂ.ವರೆಗೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಬೆಲೆ ಕೆಜಿಗೆ ಸುಮಾರು 90 ರೂ. ತಲುಪಿದೆ.

ದರ ಕೇಳಿಯೇ ಗ್ರಾಹಕರು ಹಿಂದಿರುಗುವ ಸ್ಥಿತಿ

ಅಕ್ಕಿಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಹಾಗೂ ಖರೀದಿ ಪ್ರಮಾಣದ ಮೇಲೂ ಪರಿಣಾಮ ಬೀರುತ್ತಿದೆ. ಅಕ್ಕಿಯ ದರ ಕೇಳಿದ ಬಳಿಕವೇ ಕೆಲ ಗ್ರಾಹಕರು ಖರೀದಿ ಮಾಡದೆ ಹಿಂದಿರುಗುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಪೂರೈಕೆ ಕೊರತೆಯಿಂದ ಬೆಲೆ ಏರಿಕೆ

ಬೇಡಿಕೆಗೆ ಅನುಗುಣವಾಗಿ ಅಕ್ಕಿ ಪೂರೈಕೆಯಾಗದಿರುವುದೇ ಸತತ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ರಾಯಚೂರು, ಸಿಂಧನೂರು, ಸಿರಗುಪ್ಪ ಹಾಗೂ ಭದ್ರಾವತಿ ಭಾಗಗಳಲ್ಲಿ ಭತ್ತದ ಉತ್ಪಾದನೆ ಕುಂಠಿತವಾಗಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಅಕ್ಕಿ ಇಳುವರಿ ಸುಮಾರು ಶೇ.50ರಷ್ಟೇ ಬಂದಿರುವುದರಿಂದ ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದ ಮಾರುಕಟ್ಟೆಯಲ್ಲಿ ಅಕ್ಕಿ ದರ ಸತತವಾಗಿ ಏರಿಕೆಯಾಗುತ್ತಿದೆ.

Read More
Next Story