
ಕಡತಗಳ ವಿಲೇವಾರಿಯಲ್ಲಿ ಸಾಧನೆ: ರಾಜ್ಯದಲ್ಲಿ 73 ಸಾವಿರಕ್ಕೂ ಹೆಚ್ಚು ಪ್ರಕರಣಗಳಿಗೆ ಮುಕ್ತಿ
ಕಂದಾಯ ಇಲಾಖೆಯು ಅಕ್ಷರಶಃ ಆಡಳಿತಾತ್ಮಕ ಕ್ರಾಂತಿಯನ್ನು ಸಾಧಿಸಿದ್ದು, ಬಾಕಿ ಉಳಿದಿದ್ದ ಸಾವಿರಾರು ತಕರಾರು ಪ್ರಕರಣಗಳಿಗೆ ಮುಕ್ತಿ ನೀಡುವ ಮೂಲಕ ಜನಸಾಮಾನ್ಯರ ಓಡಾಟಕ್ಕೆ ಕಡಿವಾಣ ಹಾಕುವ ಕೆಲಸ ಮಾಡಲಾಗಿದೆ.
ದಶಕಗಳ ಕಾಲ ಕಂದಾಯ ಇಲಾಖೆಯಲ್ಲಿ ಕಡತಗಳ ವಿಲೇವಾರಿಯಾಗದಿರುವುದರಿಂದ ಸಂಕಷ್ಟ ಅನುಭವಿಸುತ್ತಿದ್ದ ಜನರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಹಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ (ಎಸಿ) ಜತೆ ನಡೆಸಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಇಲಾಖೆಯ ಸಾಧನೆಯನ್ನು ಪ್ರಕಟಿಸಿದ್ದಾರೆ. ಕಂದಾಯ ಇಲಾಖೆಯು ಅಕ್ಷರಶಃ ಆಡಳಿತಾತ್ಮಕ ಕ್ರಾಂತಿಯನ್ನು ಸಾಧಿಸಿದ್ದು, ಬಾಕಿ ಉಳಿದಿದ್ದ ಸಾವಿರಾರು ತಕರಾರು ಪ್ರಕರಣಗಳಿಗೆ ಮುಕ್ತಿ ನೀಡುವ ಮೂಲಕ ಜನಸಾಮಾನ್ಯರ ಓಡಾಟಕ್ಕೆ ಕಡಿವಾಣ ಹಾಕುವ ಕೆಲಸ ಮಾಡಲಾಗಿದೆ.
ಮೂರು ವರ್ಷಗಳ ಹಿಂದೆ ಸಚಿವರು ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗ, ರಾಜ್ಯಾದ್ಯಂತ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬರೋಬ್ಬರಿ 73,624 ಅವಧಿ ಮೀರಿದ ತಕರಾರು ಪ್ರಕರಣಗಳು ಬಾಕಿ ಇದ್ದವು. ಈ ಪ್ರಕರಣಗಳು ಕಡತಗಳಲ್ಲಿಯೇ ಕೊಳೆಯುತ್ತಿದ್ದುದರಿಂದ, ರೈತರು ಮತ್ತು ಜನಸಾಮಾನ್ಯರು ಕಚೇರಿಗಳ ಅಲೆದಾಟವನ್ನೇ ಬದುಕಿನ ಭಾಗವಾಗಿಸಿಕೊಂಡಿದ್ದರು. ಸಚಿವರ ನಿರ್ಧಾರ ಮತ್ತು ಅಧಿಕಾರಿಗಳ ಸಮರೋಪಾದಿಯ ಕೆಲಸದಿಂದಾಗಿ, ಈ ಸಂಖ್ಯೆಯು ಕೇವಲ 7,490ಕ್ಕೆ ಇಳಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಶೇ.90ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಕಂದಾಯ ಇಲಾಖೆಯು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಕೋರ್ಟ್ ಕೇಸ್‌ಗಳು, ಫೌತಿ ಖಾತೆ, ಪೋಡಿ ದುರಸ್ತಿ ಮತ್ತು ಆರ್.ಆರ್.ಟಿ ತಿದ್ದುಪಡಿಗಳಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ದೊರೆತಿದ್ದು, ಇದು ಸಾವಿರಾರು ಕುಟುಂಬಗಳಿಗೆ ನ್ಯಾಯ ಒದಗಿಸಿಕೊಟ್ಟಂತಾಗಿದೆ.
ಈ ವೇಳೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ, ಹತ್ತಾರು ವರ್ಷಗಳ ದುರಾಡಳಿತದ ಬಳುವಳಿಯಾಗಿದ್ದ ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯ ಬಾಕಿ ತಕರಾರು ಪ್ರಕರಣಗಳ ಪೈಕಿ ಶೇ.90ಕ್ಕೂ ಹೆಚ್ಚು ಪ್ರಕರಣಗಳನ್ನು ಕಳೆದ ಮೂರು ವರ್ಷಗಳಲ್ಲಿ ಇತ್ಯರ್ಥಪಡಿಸಲಾಗಿದೆ. ಮೂರು ವರ್ಷದ ಹಿಂದೆ ಕಂದಾಯ ಇಲಾಖೆ ಜವಾಬ್ದಾರಿ ಸ್ವೀಕರಿಸಿದ್ದಾಗ ರಾಜ್ಯಾದ್ಯಂತ ಸುಮಾರು 73,624 ಅವಧಿ ಮೀರಿದ ತಕರಾರು ಪ್ರಕರಣಗಳು ಬಾಕಿ ಇದ್ದವು. ಪರಿಣಾಮ ಜನ ಸಾಮಾನ್ಯರು ಅನಗತ್ಯವಾಗಿ ಸರ್ಕಾರಿ ಕಚೇರಿ ಅಲೆಯುವಂತಾಗಿತ್ತು. ಆದರೆ, ಆ ಸಂಖ್ಯೆಯನ್ನು ಇದೀಗ ಕೇವಲ 7,490ಕ್ಕೆ ಇಳಿಸಿದಂತಾಗಿದೆ. ಆ ಮೂಲಕ ಶೇ.90ಕ್ಕೂ ಹೆಚ್ಚು ಪ್ರಕರಣಗಳಿಗೆ ಮುಕ್ತಿ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣಗಳನ್ನೂ ಶೀಘ್ರ ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲಾಖೆಯ ಜವಾಬ್ದಾರಿ ಸ್ವೀಕರಿಸಿದ ಸಂದರ್ಭದಲ್ಲಿ, ಸರ್ಕಾರಿ ಕಚೇರಿಗಳಿಗೆ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ನೀಡುವ ಸಲುವಾಗಿಯೇ ಮೊದಲು ಈ ಎಲ್ಲಾ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡಲಾಗಿತ್ತು. ಅಧಿಕಾರಿಗಳ ಸಹಕಾರ ಇಲ್ಲದಿದ್ದರೆ ಈ ಕೆಲಸ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳಿಗೂ ಅಭಿನಂದನೆಗಳು ಎಂದರು.
ಅಧಿಕಾರಿಗಳಿಗೆ ಕಿವಿಮಾತು
ಸಭೆಯಲ್ಲಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರಾದರೂ, ಕರ್ತವ್ಯಲೋಪದ ಬಗ್ಗೆ ಕಠಿಣ ನಿಲುವನ್ನೂ ವ್ಯಕ್ತಪಡಿಸಿದರು. ತುಮಕೂರು, ದೊಡ್ಡಬಳ್ಳಾಪುರ, ತರೀಕೆರೆ ಮತ್ತು ಕೋಲಾರ ಸೇರಿದಂತೆ ರಾಜ್ಯದ ಅನೇಕ ಎಸಿ ವಲಯಗಳಲ್ಲಿ ಅಧಿಕಾರಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಭಿನಂದಿಸಿದರು. ಆದರೆ, ಬೆಂಗಳೂರು ಉತ್ತರ ಜಿಲ್ಲೆಯ ಪ್ರಗತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ಜಿಲ್ಲೆಯ ವಿಶೇಷ ಉಪ ವಿಭಾಗಾಧಿಕಾರಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಅದೇ ಜಿಲ್ಲೆಯ ಉಪ ವಿಭಾಗಾಧಿಕಾರಿ ಕಿರಣ್ ಅವರ ಕಾರ್ಯವೈಖರಿಯ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆದೇಶಕ್ಕಾಗಿ ಕಾಯ್ದಿರಿಸಿದ ಪ್ರಕರಣಗಳನ್ನು ಸಹ ವಿಲೇವಾರಿ ಮಾಡದಿರುವುದು ದುರದೃಷ್ಟಕರ. ಜನರ ಸಮಸ್ಯೆ ಪರಿಹಾರವಾಗದ ಕಾರಣ ಅವರು ನನ್ನ ಗೃಹ ಕಚೇರಿಯ ಮುಂದೆ ಬಂದು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಒಬ್ಬ ಅಧಿಕಾರಿಯ ಸೋಮಾರಿತನದಿಂದಾಗಿ ಜನಸಾಮಾನ್ಯರ ಎದುರು ನಾನು ತಲೆ ತಗ್ಗಿಸುವಂತಾಗಿದೆ. ಉತ್ತಮ ಕೆಲಸ ಮಾಡುವ ಅಧಿಕಾರಿಗಳಿಗೂ ಇಂತಹವರಿಂದ ಕೆಟ್ಟ ಹೆಸರು ಬರುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ತಂತ್ರಜ್ಞಾನ ಹಾಗೂ ಜನಪರ ಆಡಳಿತದ ಸಮ್ಮಿಲನ
ಕಂದಾಯ ಇಲಾಖೆಯನ್ನು ಸಂಪೂರ್ಣವಾಗಿ ಹೈ-ಟೆಕ್ ಮಾಡುವ ನಿಟ್ಟಿನಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಕೈಗೊಂಡಿರುವ ಕ್ರಮಗಳು ಫಲ ನೀಡುತ್ತಿವೆ. ಆಧಾರ್ ಸೀಡಿಂಗ್, ಇ-ಆಫೀಸ್ ಮತ್ತು ಆನ್‌ಲೈನ್ ಪೋಡಿ ವ್ಯವಸ್ಥೆಯು ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ವಿಳಂಬ ನೀತಿಗೆ ತಡೆ ಹಾಕಿದೆ. ಕಡತಗಳನ್ನು ಕೈಯಿಂದ ಬರೆಯುವ ಮತ್ತು ಕಡತಗಳೇ ನಾಪತ್ತೆಯಾಗುವ ಸಂಸ್ಕೃತಿಯಿಂದ ಡಿಜಿಟಲ್ ಯುಗಕ್ಕೆ ಇಲಾಖೆ ದಾಪುಗಾಲು ಹಾಕಿದೆ. ನಮ್ಮ ಆದ್ಯತೆ ಜನಸಾಮಾನ್ಯರ ಸಮಸ್ಯೆಗಳ ಪರಿಹಾರ. ಕಡತಗಳು ಕೇವಲ ಸಂಖ್ಯೆಗಳಲ್ಲ, ಅವು ಜನರ ಬದುಕಿನ ಭಾಗ. ಅಧಿಕಾರಿಗಳು ತಮ್ಮ ಮೈಮರೆವು ಬಿಟ್ಟು ಜನಪರವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

