ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರದೋಶ್ ಮಾಫಿ ಸಾಕ್ಷಿಯಿಂದ ದರ್ಶನ್‌ಗೆ ಸಂಕಷ್ಟ, ವಕೀಲ ಡಾ. ಅಪ್ತಬ್ ಹಸನ್ ನೀಡಿದ ಸ್ಪಷ್ಟನೆ
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣವು ಮಹತ್ವದ ಘಟ್ಟ ತಲುಪಿದ್ದು, ಪ್ರಕರಣದ 14ನೇ ಆರೋಪಿ (ಎ-14) ಪ್ರದೋಶ್ ಮಾಫಿ ಸಾಕ್ಷಿಯಾಗಲು ನಿರ್ಧರಿಸಿದ್ದಾರೆ. ಈ ಬೆಳವಣಿಗೆಯು ನಟ ದರ್ಶನ್ ಅವರಿಗೆ ಕಾನೂನು ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಪ್ರದೋಶ್ ಅವರ ಈ ನಿರ್ಧಾರದ ಕುರಿತು ಅವರ ಪರ ವಕೀಲ ಡಾ. ಅಪ್ತಪ್ ಹಸನ್ ಅವರು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿ, ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಪ್ರದೋಶ್ ಅವರು ಸ್ವತಃ ಮಾಫಿ ಸಾಕ್ಷಿಯಾಗುವ ನಿರ್ಧಾರ ಕೈಗೊಂಡು ತಮ್ಮನ್ನು ಸಂಪರ್ಕಿಸಿದಾಗ, ವಕೀಲರ ತಂಡವು ಅವರಿಗೆ ಇದರ ಹಿಂದಿರುವ ಸಂಪೂರ್ಣ ಕಾನೂನು ಪ್ರಕ್ರಿಯೆ ಮತ್ತು ಪರಿಣಾಮಗಳನ್ನು ವಿವರಿಸಿದೆ. ಆ ಬಳಿಕವಷ್ಟೇ ನ್ಯಾಯಾಲಯಕ್ಕೆ ಅಧಿಕೃತವಾಗಿ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನ್ಯಾಯಾಲಯವು ಬಹಳ ಎಚ್ಚರಿಕೆ ವಹಿಸುತ್ತದೆ. ಮಾಫಿ ಸಾಕ್ಷಿಯಾಗಲು ಬಯಸುವ ವ್ಯಕ್ತಿಯ ಹಿನ್ನೆಲೆಯನ್ನು ನ್ಯಾಯಾಲಯವು ನಿಖರವಾಗಿ ಪರಿಶೀಲಿಸುತ್ತದೆ. ಆತನಿಗೆ ಈ ಹಿಂದೆ ಯಾವುದಾದರೂ ಕ್ರಿಮಿನಲ್ ಹಿನ್ನೆಲೆ ಇದೆಯೇ ಎಂಬ ಬಗ್ಗೆ ಪೊಲೀಸರಿಂದ ವರದಿ ಪಡೆದ ನಂತರವಷ್ಟೇ ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಅನುಮತಿ ನೀಡಲಾಗುತ್ತದೆ ಎಂದು ವಕೀಲರು ತಿಳಿಸಿದ್ದಾರೆ.
ದರ್ಶನ್ ಪರ ವಕೀಲರ ಆಕ್ಷೇಪಣೆ ಮತ್ತು ನಿಯಮಗಳು
ಪ್ರದೋಶ್ ಅವರ ಈ ನಡೆಗೆ ನಟ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರದೋಶ್ ಸಲ್ಲಿಸಿದ ಅರ್ಜಿಯ ವಿರುದ್ಧ ದರ್ಶನ್ ಪರ ವಕೀಲರು ಎರಡು ಪ್ರತ್ಯೇಕ ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಈಗಾಗಲೇ ವಾದ ಮತ್ತು ಪ್ರತಿವಾದಗಳು ನಡೆದಿವೆ. ಕಾನೂನಿನ ಪ್ರಕಾರ, ಪ್ರಕರಣದಲ್ಲಿ ಅತ್ಯಂತ ಕಡಿಮೆ ಪಾತ್ರ ಹೊಂದಿರುವ ವ್ಯಕ್ತಿಯನ್ನು ಮಾತ್ರ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಸಾಧ್ಯ. ಎಲ್ಲ ಆರೋಪಿಗಳಿಗೂ ಈ ಅವಕಾಶ ಇರುವುದಿಲ್ಲ. ಅಲ್ಲದೆ, ಮಾಫಿ ಸಾಕ್ಷಿಯಾಗುವ ವ್ಯಕ್ತಿಯು ತನಗೆ ಗೊತ್ತಿರುವ ಪ್ರತಿಯೊಂದು ಸತ್ಯಾಂಶವನ್ನೂ ಮುಚ್ಚಿಡದೆ ನ್ಯಾಯಾಲಯದ ಮುಂದೆ ತೆರೆದಿಡಬೇಕಾಗುತ್ತದೆ ಎಂದು ಡಾ. ಅಪ್ತಪ್ ಹಸನ್ ವಿವರಿಸಿದ್ದಾರೆ.
ಪಾಟಿ ಸವಾಲು ಮತ್ತು ಪ್ರಕರಣಕ್ಕೊದಗಿದ ಬಲ
ಪ್ರದೋಶ್ ಅವರು ನ್ಯಾಯಾಲಯದ ಮುಂದೆ ಪೂರ್ಣ ಸತ್ಯಾಂಶವನ್ನು ವಿವರಿಸಿದ ಬಳಿಕ, ದರ್ಶನ್ ಪರ ವಕೀಲರಿಗೆ ಕ್ರಾಸ್ ಎಕ್ಸಾಮಿನೇಷನ್ (ಪಾಟಿ ಸವಾಲು) ಮಾಡಲು ಅವಕಾಶವಿರುತ್ತದೆ. ಇದು ಸುದೀರ್ಘ ಕಾನೂನು ಪ್ರಕ್ರಿಯೆಯಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಪ್ರದೋಶ್ ಅವರು ಮಾಫಿ ಸಾಕ್ಷಿ ನುಡಿಯಲು ಧೈರ್ಯದಿಂದ ಮುಂದಾಗಿದ್ದಾರೆ. ಪ್ರದೋಶ್ ಅವರ ಈ ನಿರ್ಧಾರವು ಇಡೀ ಪ್ರಕರಣಕ್ಕೆ ಹಾಗೂ ತನಿಖಾಧಿಕಾರಿಗಳಿಗೆ ದೊಡ್ಡ ಮಟ್ಟದ ಸಾಕ್ಷ್ಯಾಧಾರದ ಬಲವನ್ನು ತಂದುಕೊಟ್ಟಿದೆ ಎಂದು ವಕೀಲರು ಹೇಳಿದ್ದಾರೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

