
ದಿಢೀರ್ ಆಲಿಕಲ್ಲು ಮಳೆಗೆ ಕಾರಣವೇನು?; ಹವಾಮಾನ ತಜ್ಞರ ವಿವರಣೆ ಇಲ್ಲಿದೆ
ಮುಂದಿನ ಎರಡು ದಿನಗಳ ಕಾಲ ರಾಜ್ಯಾದ್ಯಂತ ಗುಡುಗು ಹಾಗೂ ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿದ್ದಾರೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ದಿಢೀರನೆ ಆಲಿಕಲ್ಲು ಮಳೆಯಾಗುತ್ತಿದ್ದು, ಜನರಲ್ಲಿ ತೀವ್ರ ಅಚ್ಚರಿ ಹಾಗೂ ಆತಂಕ ಮೂಡಿಸಿದೆ. ಬೇಸಿಗೆಯ ಆರಂಭದಲ್ಲಿಯೇ ಈ ರೀತಿಯ ಹವಾಮಾನ ವೈಪರೀತ್ಯಕ್ಕೆ ಕಾರಣವೇನು ಎಂಬುದರ ಕುರಿತು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿ ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉಷ್ಣಾಂಶದ ಏರಿಕೆಯೇ ಆಲಿಕಲ್ಲು ಮಳೆಗೆ ಕಾರಣ
ವಾತಾವರಣದಲ್ಲಿ ಉಷ್ಣಾಂಶವು ವಿಪರೀತವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಈ ರೀತಿಯ ಗುಡುಗು ಹಾಗೂ ಭಾರಿ ಆಲಿಕಲ್ಲು ಮಳೆಯಾಗುತ್ತದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಬೇಸಿಗೆಯ ಪೂರ್ವ ಮುಂಗಾರು ಮಳೆಯಾಗುವುದು ಸಾಮಾನ್ಯ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ, ಈ ಬಾರಿ ವಾತಾವರಣದಲ್ಲಿನ ತೀವ್ರ ಬಿಸಿಲಿನಿಂದಾಗಿ ಮೋಡಗಳ ಚಲನೆಯಲ್ಲಿ ಬದಲಾವಣೆಯಾಗಿ, ವಾಡಿಕೆಗಿಂತ ಅತಿ ಹೆಚ್ಚು ಮಳೆ ಹಾಗೂ ಆಲಿಕಲ್ಲು ಬೀಳುತ್ತಿದೆ ಎಂದು ಸಿ.ಎಸ್. ಪಾಟೀಲ್ ವಿವರಿಸಿದ್ದಾರೆ.
ಮರದ ಕೆಳಗೆ ನಿಲ್ಲದಂತೆ ಕಟ್ಟುನಿಟ್ಟಿನ ಎಚ್ಚರಿಕೆ
ಮುಂದಿನ ಎರಡು ದಿನಗಳ ಕಾಲ ರಾಜ್ಯಾದ್ಯಂತ ಗುಡುಗು ಹಾಗೂ ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯಿದ್ದು, ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಈಗಾಗಲೇ ಅತಿ ಹೆಚ್ಚು ಪ್ರಮಾಣದ ಆಲಿಕಲ್ಲು ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ರಭಸದ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಭಾರಿ ಆಲಿಕಲ್ಲು ಹಾಗೂ ಬಿರುಗಾಳಿ ಬೀಸುವ ಸಂಭವವಿರುವುದರಿಂದ, ಮಳೆಯ ಸಮಯದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರಬಾರದು ಹಾಗೂ ಯಾವುದೇ ಕಾರಣಕ್ಕೂ ಮರದ ಕೆಳಗಡೆ ಆಶ್ರಯ ಪಡೆಯಬಾರದು ಎಂದು ಹವಾಮಾನ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ತಾಪಮಾನ ಅಲೆಗಳ ಹೆಚ್ಚಳದ ಆತಂಕ
ಈ ಅಕಾಲಿಕ ಮಳೆಯ ನಡುವೆಯೂ ಪ್ರಸಕ್ತ ಬೇಸಿಗೆಯಲ್ಲಿ ತಾಪಮಾನವು ಗಣನೀಯವಾಗಿ ಏರಿಕೆಯಾಗುವ ಆತಂಕವನ್ನು ಇಲಾಖೆ ವ್ಯಕ್ತಪಡಿಸಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತ ಅತಿ ಹೆಚ್ಚು ಉಷ್ಣಾಂಶ ದಾಖಲಾಗುವ ನಿರೀಕ್ಷೆಯಿದೆ. ಈ ಪ್ರದೇಶಗಳಲ್ಲಿ ತಾಪಮಾನದ ಅಲೆಗಳು (Heatwaves) ತೀವ್ರವಾಗಿರಲಿದ್ದು, ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಎಚ್ಚರಿಸಲಾಗಿದೆ.

