ಹುಬ್ಬಳ್ಳಿ-ಶಿರಡಿ ಪ್ರಯಾಣಿಕರಿಗೆ ರಾಜರಥ ಎಸಿ ಸ್ಲೀಪರ್ ಬಸ್ ಸೇವೆ ಆರಂಭ
x

ಹುಬ್ಬಳ್ಳಿ-ಶಿರಡಿ ಪ್ರಯಾಣಿಕರಿಗೆ ರಾಜರಥ ಎಸಿ ಸ್ಲೀಪರ್ ಬಸ್ ಸೇವೆ ಆರಂಭ

NWKRTC ತನ್ನ ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಶಿರಡಿಗೆ ಪ್ರತಿದಿನ ಸಂಚರಿಸುವ ರಾಜರಥ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದೆ.


Click the Play button to hear this message in audio format

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನ ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇರಿಸಿದೆ. ಹುಬ್ಬಳ್ಳಿ ಮತ್ತು ಮಹಾರಾಷ್ಟ್ರದ ಪ್ರಮುಖ ಧಾರ್ಮಿಕ ಹಾಗೂ ವಾಣಿಜ್ಯ ಕೇಂದ್ರವಾದ ಶಿರಡಿ ನಡುವೆ ಪ್ರತಿದಿನ ಸಂಚರಿಸುವ ರಾಜರಥ ಎಸಿ ಸ್ಲೀಪರ್ ಬಸ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಲಾಗಿದೆ. ಈ ಸೇವೆಯು ಕೇವಲ ಭಕ್ತರಿಗೆ ಮಾತ್ರವಲ್ಲದೆ, ಉದ್ಯೋಗ, ವಿದ್ಯಾಭ್ಯಾಸ ಮತ್ತು ಪ್ರವಾಸಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳುವ ಸಾವಿರಾರು ಕನ್ನಡಿಗರಿಗೆ ವರದಾನವಾಗಿ ಪರಿಣಮಿಸಲಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ಸಂಬಂಧ ದಶಕಗಳಿಂದಲೂ ದೃಢವಾಗಿದೆ. ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ದರ್ಶನ ಪಡೆಯಲು ಹೋಗುವ ಭಕ್ತರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಲೇ ಇದೆ. ಇದರೊಂದಿಗೆ ಪುಣೆ, ಪಿಂಪ್ರಿ, ಅಹ್ಮದನಗರ ಮತ್ತು ನಾಸಿಕ್‌ಗಳು ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳ ನೆಚ್ಚಿನ ತಾಣಗಳಾಗಿವೆ. ಈ ಮಾರ್ಗದಲ್ಲಿ ಖಾಸಗಿ ಬಸ್ಸುಗಳ ಅವಲಂಬನೆ ಹೆಚ್ಚಾಗಿದ್ದನ್ನು ಮನಗಂಡ ಎನ್‌ಡಬ್ಯೂಕೆಆರ್‌ಟಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರೀ ಸ್ವಾಮ್ಯದ ಸುರಕ್ಷಿತ ಹಾಗೂ ಐಷಾರಾಮಿ ಸೇವೆಯನ್ನು ಒದಗಿಸುವ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕರ ಬೇಡಿಕೆಗೆ ಮನ್ನಣೆ ನೀಡಿ ಈ ಎರಡು ಹೊಸ ಎಸಿ ಸ್ಲೀಪರ್ ಬಸ್‌ಗಳನ್ನು ಸಂಚಾರಕ್ಕೆ ಅಣಿಗೊಳಿಸಲಾಗಿದೆ. ಇದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಮನೆಯಲ್ಲಿದ್ದಂತಹ ಅನುಭವ ನೀಡಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡ ಹೇಳಿದ್ದಾರೆ.

ಪ್ರಯಾಣದ ಮಾರ್ಗ, ವೇಳಾಪಟ್ಟಿ

ರಾಜರಥ ಬಸ್ಸುಗಳು ಹುಬ್ಬಳ್ಳಿಯಿಂದ ಹೊರಟು ಧಾರವಾಡ, ಬೆಳಗಾವಿ, ಕೊಲ್ಹಾಪುರ, ಪುಣೆ, ಪಿಂಪ್ರಿ ಮತ್ತು ಅಹ್ಮದನಗರದ ಮೂಲಕ ಶಿರಡಿಯನ್ನು ತಲುಪಲಿವೆ. ಈ ಮಾರ್ಗವು ವಾಣಿಜ್ಯಿಕವಾಗಿ ಮತ್ತು ಭೌಗೋಳಿಕವಾಗಿ ಅತಿ ಹೆಚ್ಚು ಜನಸಂಚಾರವಿರುವ ಮಾರ್ಗವಾಗಿದೆ. ಹುಬ್ಬಳ್ಳಿಯಿಂದ ಶಿರಡಿಗೆ ರಾತ್ರಿ 8 ಗಂಟೆಗೆ ಹೊರಡಲಿದ್ದು, ಹುಬ್ಬಳ್ಳಿ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ, ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣ, ಧಾರವಾಡ ಹೊಸ ಬಸ್ ನಿಲ್ದಾಣ, ಬೆಳಗಾವಿ ಕೇಂದ್ರ ಬಸ್ ನಿಲ್ದಾಣ, ಪುಣೆ ಸ್ವಾರ್‌ಗೇಟ್, ಅಹ್ಮದನಗರ ಮೂಲಕ ಶಿರಡಿ ತಲುಪಲಿದೆ. ಶಿರಡಿಯಿಂದ ಹುಬ್ಬಳ್ಳಿಗೆ ಸಂಜೆ 6:35 ಗಂಟೆಗೆ ಹೊರಡಲಿದ್ದು, ಅಹ್ಮದನಗರ, ಪುಣೆ ಸ್ವಾರ್‌ಗೇಟ್, ಬೆಳಗಾವಿ, ಧಾರವಾಡ, ಹುಬ್ಬಳ್ಳಿಗೆ ಆಗಮಿಸಲಿದೆ.

ಖಾಸಗಿ ಬಸ್ಸುಗಳ ದುಬಾರಿ ದರಕ್ಕೆ ಪರ್ಯಾಯವಾಗಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಅತ್ಯಂತ ಸಮಂಜಸವಾದ ದರವನ್ನು ನಿಗದಿಪಡಿಸಿದೆ. ಅಪಘಾತ ಪರಿಹಾರ ವಿಮೆ ಮತ್ತು ಟೋಲ್ ಶುಲ್ಕಗಳನ್ನು ಒಳಗೊಂಡಂತೆ ಹುಬ್ಬಳ್ಳಿಯಿಂದ ಪುಣೆಗೆ 1,223 ರೂ. ಮತ್ತು ಶಿರಡಿಗೆ 1,822 ರೂ. ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರನ್ನು ಉತ್ತೇಜಿಸಲು ವಿಶೇಷ ರಿಯಾಯಿತಿ ಯೋಜನೆಗಳನ್ನೂ ಘೋಷಿಸಲಾಗಿದೆ. ಒಂದೇ ಟಿಕೆಟ್‌ನಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಸೀಟುಗಳನ್ನು ಕಾಯ್ದಿರಿಸಿದರೆ ಟಿಕೆಟ್ ದರದ ಮೇಲೆ ಶೇಕಡಾ 5ರಷ್ಟು ರಿಯಾಯಿತಿ ಲಭ್ಯ ಇದ್ದು, ಹೋಗುವ ಮತ್ತು ಬರುವ ಪ್ರಯಾಣಕ್ಕಾಗಿ ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ, ವಾಪಸಾತಿ ಪ್ರಯಾಣ ದರದ ಮೇಲೆ ಶೇಕಡಾ 10ರಷ್ಟು ರಿಯಾಯಿತಿ ದೊರೆಯಲಿದೆ.

ಬುಕ್ಕಿಂಗ್ ಸೌಲಭ್ಯ

ಡಿಜಿಟಲ್ ಇಂಡಿಯಾ ಪರಿಕಲ್ಪನೆಯಂತೆ, ಟಿಕೆಟ್ ಕಾಯ್ದಿರಿಸುವಿಕೆಯನ್ನು ಸುಲಭಗೊಳಿಸಲಾಗಿದೆ. ಪ್ರಯಾಣಿಕರು www.ksrtc.in ವೆಬ್‌ಸೈಟ್ ಅಥವಾ KSRTC ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಪಡೆಯಬಹುದು. ಅಲ್ಲದೆ, ವಾಟ್ಸ್​ಆ್ಯಪ್ ಸಂಖ್ಯೆ: 6364940880 ಗೆ ಸಂದೇಶ ಕಳುಹಿಸುವ ಮೂಲಕವೂ ಮಾಹಿತಿಯನ್ನು ಪಡೆದು ಬುಕ್ ಮಾಡಬಹುದಾಗಿದೆ. ಇದಲ್ಲದೆ, ಹುಬ್ಬಳ್ಳಿ ಹಾಗೂ ಧಾರವಾಡದ ಪ್ರಮುಖ ಬಸ್ ನಿಲ್ದಾಣಗಳಲ್ಲಿರುವ ಕೌಂಟರ್‌ಗಳಲ್ಲಿ ನೇರವಾಗಿ ಟಿಕೆಟ್ ಪಡೆಯುವ ಸೌಲಭ್ಯವೂ ಇದೆ. ಎಚ್. ರಾಮನಗೌಡ ಹೇಳುವಂತೆ ಈ ಮಾರ್ಗಕ್ಕೆ ಸಿಗುವ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಗಮನಿಸಿ, ಭವಿಷ್ಯದಲ್ಲಿ ನೆರೆಯ ರಾಜ್ಯಗಳಾದ ಗೋವಾ, ಹೈದರಾಬಾದ್ ಮತ್ತು ಇತರ ಪ್ರಮುಖ ನಗರಗಳಿಗೆ ಕೂಡ ಇದೇ ರೀತಿಯ ಐಷಾರಾಮಿ ಬಸ್ ಸೇವೆಗಳನ್ನು ವಿಸ್ತರಿಸುವ ಚಿಂತನೆ ಇದೆ. ಜನರ ಅವಶ್ಯಕತೆಗಳನ್ನು ಪೂರೈಸುವುದು ನಮ್ಮ ಸಂಸ್ಥೆಯ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

Read More
Next Story