
ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಬಿಎಂಆರ್‌ಸಿಎಲ್ ಈ ಬಾರಿ ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಐಪಿಎಲ್ ಪಂದ್ಯದ ಟಿಕೆಟ್‌ಗಳೇ ಮೆಟ್ರೋ ಟ್ರಾವೆಲ್ ಪಾಸ್‌ಗಳಾಗಿ ಕಾರ್ಯನಿರ್ವಹಿಸಲಿವೆ.
ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಹಳಿಗೆ ಜಿಗಿದ ಮಹಿಳೆಯ ರಕ್ಷಣೆ; 10 ನಿಮಿಷ ಮೆಟ್ರೊ ಸಂಚಾರ ಸ್ಥಗಿತ
ನಮ್ಮ ಮೆಟ್ರೊ ಹಸಿರು ಮಾರ್ಗದ ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಶನಿವಾರ ಮಧ್ಯಾಹ್ನ ಮೆಟ್ರೊ ಹಳಿಗೆ ಜಿಗಿದ ಘಟನೆ ನಡೆದಿದ್ದು, ಮೆಟ್ರೊ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಯಾವುದೇ ಅನಾಹುತ ಸಂಭವಿಸದೆ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಘಟನೆಯಿಂದ ಸುಮಾರು 10 ನಿಮಿಷಗಳ ಕಾಲ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, ಹೂವಿನ ವ್ಯಾಪಾರ ಮಾಡುತ್ತಿರುವ ಲೀಲಾವತಿ (50) ಅವರು ಮಧ್ಯಾಹ್ನ 12.25ರ ಸುಮಾರಿಗೆ ಹಳಿಗೆ ಜಿಗಿದಿದ್ದರು. ಘಟನೆ ಗಮನಿಸಿದ ತಕ್ಷಣ ನಿಲ್ದಾಣ ನಿಯಂತ್ರಕರು ಹಾಗೂ ಭದ್ರತಾ ಸಿಬ್ಬಂದಿ ತುರ್ತು ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದು, ಮಹಿಳೆಯನ್ನು ಯಾವುದೇ ಗಾಯಗಳಾಗದಂತೆ ಸುರಕ್ಷಿತವಾಗಿ ಮೇಲಕ್ಕೆತ್ತಿದರು.
ಘಟನೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಕೆಲಕಾಲ ಮೆಟ್ರೊ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಪರಿಸ್ಥಿತಿಯನ್ನು ಪರಿಶೀಲಿಸಿದ ಅಧಿಕಾರಿಗಳು ಮಧ್ಯಾಹ್ನ 12.34ಕ್ಕೆ ಮೆಟ್ರೊ ಸೇವೆಯನ್ನು ಪುನರಾರಂಭಿಸಿದರು.
ಮಹಿಳೆ ಯಾವ ಕಾರಣಕ್ಕೆ ಮೆಟ್ರೊ ಹಳಿಗೆ ಜಿಗಿದಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಗತ್ಯ ತನಿಖೆ ಮುಂದುವರಿದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

