
"ಕಾಂಗ್ರೆಸ್ ಸರ್ಕಾರದ್ದು ತಾಲಿಬಾನ್ ಮನಸ್ಥಿತಿ": ಆರ್. ಅಶೋಕ್ ಆಕ್ರೋಶ
ಮಸೀದಿಗಳ ಮುಂದೆ ಮೆರವಣಿಗೆ ಮಾಡಬಾರದು ಎನ್ನುವವರು, ಕೋರ್ಟ್ ಆದೇಶವಿದ್ದರೂ ಡೆಸಿಬಲ್ ಮಿತಿ ಉಲ್ಲಂಘಿಸುವವರ ವಿರುದ್ಧ ಯಾಕೆ ಕ್ರಮ ಇಲ್ಲ ಎಂದು ಪ್ರತಿಪಕ್ಷ ಆರ್.ಅಶೋಕ್ ಕಿಡಿಕಾರಿದ್ದಾರೆ.
ಗಣೇಶೋತ್ಸವದ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಿರ್ಬಂಧ ಹೇರುತ್ತಿರುವ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ಹಿಂದೂಗಳಿಗೆ ಬೆದರಿಕೆ ಹಾಕುವಂತೆ ಮುಸ್ಲಿಮರಿಗೂ ಎಚ್ಚರಿಕೆ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಮದ್ದೂರಿನಲ್ಲಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಪಟ ಧೋರಣೆ ಮತ್ತು ಕಾನೂನು ಸುವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಟಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವರ್ತನೆಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ದಲಿತರ ಮೇಲೆ ಹಲ್ಲೆ ಮತ್ತು ಮಹಿಳೆಯೊಬ್ಬರ ಬದುಕು ಹಾಳು ಮಾಡಿದ ಚರಿತ್ರೆ ಇರುವ ಇನ್ಸ್‌ಪೆಕ್ಟರ್ ಪರವಾಗಿ ಸಿಎಂ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕ್ರಿಮಿನಲ್ ಹಿನ್ನೆಲೆ ಇರುವ ಅಧಿಕಾರಿಯನ್ನು ಮುಖ್ಯಮಂತ್ರಿಗಳೇ ಸಮರ್ಥಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ. ಹಿಂದೂಗಳಿಗೆ ಅವಾಚ್ಯವಾಗಿ ಮಾತನಾಡುವ ಇನ್ಸ್‌ಪೆಕ್ಟರ್‌ಗಳನ್ನು ಬೆಂಬಲಿಸುವುದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ ಎಂದು ಕಿಡಿಕಾರಿದರು.
ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡಲಾಗುತ್ತಿದೆ
ಕಾಂಗ್ರೆಸ್ ಸರ್ಕಾರ ಬ್ರಿಟಿಷರಿಗಿಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಮಸೀದಿಗಳ ಮುಂದೆ ಮೆರವಣಿಗೆ ಮಾಡಬಾರದು ಎನ್ನುವವರು, ಮಸೀದಿಯಲ್ಲಿ ದಿನಕ್ಕೆ ಐದು ಬಾರಿ ಕೂಗುವ ಆಜಾನ್ ಬಗ್ಗೆ ಏಕೆ ಮೌನವಾಗಿದ್ದಾರೆ? ಕೋರ್ಟ್ ಆದೇಶವಿದ್ದರೂ ಡೆಸಿಬಲ್ ಮಿತಿಯನ್ನು ಉಲ್ಲಂಘಿಸುವವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಮತ ಬ್ಯಾಂಕ್‌ಗಾಗಿ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಕಾಣುವುದು ಕಾಂಗ್ರೆಸ್ ರಕ್ತದಲ್ಲೇ ಬಂದಿದೆ ಎಂದು ಹರಿಹಾಯ್ದರು. ಮದ್ದೂರಿನಲ್ಲಿ ಕಲ್ಲು ತೂರಾಟ ನಡೆಸಿದವರನ್ನು ಕರೆದು ಎಚ್ಚರಿಕೆ ನೀಡುವ ಧೈರ್ಯ ಸರ್ಕಾರಕ್ಕಿಲ್ಲ. ಬದಲಿಗೆ ಶಾಂತಿಯುತವಾಗಿ ಗಣೇಶೋತ್ಸವ ಆಚರಿಸುವ ಹಿಂದೂ ಮುಖಂಡರಿಗೆ ನೋಟಿಸ್ ನೀಡಲಾಗುತ್ತಿದೆ. ನಾನು ಅಲ್ಲಿಗೆ ಹೋಗಿ ಹಿಂದೂಗಳ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದರು.
ʼಇದು ಇಟಲಿ ಕಾಂಗ್ರೆಸ್ʼ
ಬಿಜೆಪಿ ನಾಯಕರ ಎದೆ ಸೀಳಿದರೆ ರಾಮ-ಆಂಜನೇಯ ಕಾಣುತ್ತಾರೆ, ಆದರೆ ಕಾಂಗ್ರೆಸ್ ನಾಯಕರ ಎದೆ ಸೀಳಿದರೆ ಅಲ್ಲಾ ಮಾತ್ರ ಕಾಣುತ್ತಾನೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೃಷ್ಟಿಗೆ ಕಾರಣರಾದವರು, ಜಮ್ಮು-ಕಾಶ್ಮೀರವನ್ನು ಅಶಾಂತಿಯ ತಾಣವಾಗಿಸಿದವರು ಕಾಂಗ್ರೆಸ್ಸಿಗರು. ಉಗ್ರರಿಗೆ 'ಬ್ರದರ್' ಎನ್ನುವವರಿಗೆ ದೇಶಭಕ್ತಿಯ ಪಾಠ ಮಾಡುವ ನೈತಿಕ ಹಕ್ಕಿಲ್ಲ. ಇದು ಗಾಂಧಿಯವರ ಕಾಂಗ್ರೆಸ್ ಅಲ್ಲ, ಸೋನಿಯಾ ಗಾಂಧಿಯವರ ಇಟಲಿ ಕಾಂಗ್ರೆಸ್. ಸರ್ಕಾರವು ವೈಯಕ್ತಿಕ ವಿಷಯಗಳಿಗೆ ಇಳಿದಿದೆ. ಸಿಎಂ ನಾಮ ಹಾಕಿಕೊಂಡು ನಾಟಕ ಮಾಡಿದರೆ ಯಾರೂ ನಂಬುವುದಿಲ್ಲ, ಅದು ಕಪಟ ಹಿಂದುತ್ವ ಎಂದು ಟೀಕಿಸಿದರು. ಗಣೇಶೋತ್ಸವಕ್ಕೆ ವಿಧಿಸಲಾಗಿರುವ ವಿಪರೀತ ನಿರ್ಬಂಧಗಳನ್ನು ಟೀಕಿಸಿದ ಅಶೋಕ್, "ಇದು ಹಿಂದೂಗಳ ಗಣೇಶೋತ್ಸವ ಅಲ್ಲ, ಪೊಲೀಸರ ಗಣೇಶೋತ್ಸವವಾಗಿದೆ. ಪೊಲೀಸರು ಪ್ರತಿ ಹೆಜ್ಜೆಯಲ್ಲೂ ಬೆದರಿಕೆ ಹಾಕುತ್ತಿದ್ದಾರೆ. ಚುನಾವಣೆ ಬಂದಾಗ ಹಿಂದೂಗಳಾಗುವ ಕಾಂಗ್ರೆಸ್ಸಿಗರು, ಅಧಿಕಾರಕ್ಕೆ ಬಂದ ತಕ್ಷಣ ಮುಸ್ಲಿಮರ ಪರವಾಗಿ ಕೆಲಸ ಮಾಡುತ್ತಾರೆ. ಈ ರೀತಿಯ ತಾರತಮ್ಯದ ಧೋರಣೆಯಿಂದಲೇ ಕಾಂಗ್ರೆಸ್ ದೇಶಾದ್ಯಂತ ಅಧಿಕಾರ ಕಳೆದುಕೊಳ್ಳುತ್ತಿದೆ ಎಂದು ಎಚ್ಚರಿಸಿದರು.
ಸರ್ಕಾರಕ್ಕೆ ತಾಕತ್ತಿದ್ದರೆ, ಮುಸಲ್ಮಾನರಿಗೂ ಹಿಂದೂಗಳಷ್ಟೇ ಕಠಿಣ ನಿಯಮಗಳನ್ನು ಅನ್ವಯಿಸಲಿ, ಮುಸ್ಲಿಮರು ಹಿಂದೂ ದೇವಾಲಯಗಳ ಮುಂದೆ ಹೋಗಬಾರದು ಎಂದು ಆದೇಶ ಮಾಡುವ ಧೈರ್ಯ ಸರ್ಕಾರಕ್ಕಿದೆಯೇ? ತಾರತಮ್ಯ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

