White letter to MPs urging the Centre to conduct railway exams in Kannada
x

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಬರೆದಿರುವ ಪತ್ರ

ರೈಲ್ವೆ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸುವಂತೆ ಕೇಂದ್ರವನ್ನು ಒತ್ತಾಯಿಸಿ: ಸಂಸದರಿಗೆ ಬಿಳಿಮಲೆ ಪತ್ರ

ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಕನ್ನಡಿಗರ ಭಾಷಾ ಹಕ್ಕುಗಳನ್ನು ರಕ್ಷಿಸಿದರೆ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯುವವರಿಗೆ ಅನುಕೂಲವಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.


Click the Play button to hear this message in audio format

ಭಾರತೀಯ ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಮತ್ತು ಪದೋನ್ನತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ರಾಜ್ಯ ಸಂಸದರನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮಂಗಳವಾರ (ಮಾ.17) ಪತ್ರ ಬರೆದಿರುವ ಅವರು, "ಪ್ರಸ್ತುತ ರೈಲ್ವೆ ನೇಮಕಾತಿ ಹಾಗೂ ಪದೋನ್ನತಿ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿ ಲಭ್ಯವಿಲ್ಲದಿರುವುದರಿಂದ ಕನ್ನಡ ಭಾಷಾಭಿಮಾನಿಗಳಲ್ಲಿ ಹಾಗೂ ಅಭ್ಯರ್ಥಿಗಳಲ್ಲಿ ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ. ರಾಜ್ಯ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶವು ಅಭ್ಯರ್ಥಿಗಳ ಮೂಲಭೂತ ಸಾಂವಿಧಾನಿಕ ಹಕ್ಕಾಗಿದ್ದು, ಇದು ಸಮಾನ ಅವಕಾಶಗಳ ಸಿದ್ಧಾಂತಕ್ಕೆ ಅನುಗುಣವಾಗಿದೆ" ಎಂದಿದ್ದಾರೆ.

ಸಂಸತ್‌ ಅಧಿವೇಶನದಲ್ಲಿ ಪ್ರಸ್ತಾಪಕ್ಕೆ ಮನವಿ

ಇತ್ತೀಚೆಗೆ ರೈಲ್ವೆ ಇಲಾಖೆಯು ಕರ್ನಾಟಕದಲ್ಲಿ ನಡೆಸುತ್ತಿದ್ದ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ದೊರಕದೇ ಇರುವ ಕುರಿತು ತೀವ್ರ ಪ್ರತಿಭಟನೆ ಬಂದ ಕಾರಣ ರೈಲ್ವೆ ಇಲಾಖೆಯು ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದು ಕನ್ನಡಿಗರ ತಾತ್ಕಾಲಿಕ ಗೆಲುವಾದರೂ, ಇದನ್ನು ಶಾಶ್ವತ ಪರಿಹಾರವೆಂದು ಭಾವಿಸಲು ಸಾಧ್ಯವಿಲ್ಲ. ರಾಜ್ಯದ ಎಲ್ಲ ಸಂಸದರು ಒಗ್ಗಟಾಗಿ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಸಚಿವಾಲಯದ ಗಮನಕ್ಕೆ ತರುವುದು ಅತ್ಯಂತ ಅವಶ್ಯಕವಾಗಿದೆ. ನಿಮ್ಮ ಈ ನಡೆ ಕನ್ನಡಿಗರ ಭಾಷಾ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದಿದ್ದಾರೆ.


ಏನಿದು ವಿವಾದ ?

ಭಾರತೀಯ ರೈಲ್ವೆ ಇಲಾಖೆಯು ಗೂಡ್ಸ್ ರೈಲ್ವೆ ಮ್ಯಾನೇಜರ್ ಹಾಗೂ ಎಲ್‌ಡಿಸಿಇ ಹುದ್ದೆಗಳ ಮುಂಬಡ್ತಿಗೆ ಪರೀಕ್ಷೆ ನಡೆಸಲು ಉದ್ದೇಶಿಸಿತ್ತು. ಆದರೆ ಈ ಪರೀಕ್ಷೆಯು ಪ್ರಾದೇಶಿಕ ಭಾಷೆಗಳಲ್ಲಿರದೇ ಕೇವಲ ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗಲಿದೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಹೋರಾಟದ ಎಚ್ಚರಿಕೆಯನ್ನು ನೀಡಿದ್ದವು. ಇದರಿಂದ ಎಚ್ಚೆತ್ತ ರೈಲ್ವೆ ಇಲಾಖೆ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಆದೇಶಿಸಿದೆ.

ಕೇಂದ್ರ ಸಚಿವರ ರಾಜೀನಾಮೆಗೆ ಕರವೇ ಆಗ್ರಹ

ಮುಂಬಡ್ತಿ ನೀಡಲು ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲು ಉದ್ದೇಶಿಸಿದ್ದ ರೈಲ್ವೆ ಇಲಾಖೆ ವಿರುದ್ಧ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೋಮವಾರ (ಮಾ.16) ಪ್ರತಿಕ್ರಿಯಿಸಿದ್ದರು. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಕೇಂದ್ರ ಸಚಿವರುಗಳಾದ ವಿ. ಸೋಮಣ್ಣ, ಪ್ರಲ್ಹಾದ್‌ ಜೋಶಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ಎಸೆದು ಹೊರಬರಬೇಕು ಎಂದು ಆಗ್ರಹಿಸಿದ್ದರು.

"ನೀವೆಲ್ಲರೂ ದೊಡ್ಡ ಹುದ್ದೆಗಳನ್ನು ನಿಭಾಯಿಸಿದ ಹಿರಿಯರು. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಆ ಸ್ಥಾನದಲ್ಲಿ ಮುಂದುವರಿಯುವುದು ಒಳಿತಲ್ಲ. ನಿಮಗೆ ಅಧಿಕಾರ ಕೊಟ್ಟಿದ್ದು ಇದೇ ಕನ್ನಡಿಗರು, ಮೊದಲು ಅವರ ಋಣ ತೀರಿಸಿ. ನೀವು ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ಸಾಮೂಹಿಕ ರಾಜೀನಾಮೆ ನೀಡಿದರೆ ಮಾತ್ರ ದೆಹಲಿಯಲ್ಲಿ ಕುಳಿತಿರುವ ಹಿಂದಿವಾಲಾಗಳು ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ. ತಮಿಳುನಾಡಿಗೆ ಹೀಗಾಗಿದ್ದರೆ ಅಲ್ಲಿನ ಸಂಸದರು ಸುಮ್ಮನೆ ಕೂರುತ್ತಿದ್ದರೆ?" ಎಂದು ಪ್ರಶ್ನಿಸಿದ್ದರು.

Read More
Next Story