
ಪುಣೆ ಹತ್ಯೆ ಬೆನ್ನಲ್ಲೇ ವಲಸೆ ಕಾರ್ಮಿಕರ ಸುರಕ್ಷತೆ ಆತಂಕ, ರಾಜ್ಯದಲ್ಲಿ ಮಾತ್ರ ನಿರಾತಂಕ
ಕೆಲಸ ಹುಡುಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವೆಡೆ ಸ್ಥಳೀಯರೊಂದಿಗೆ ಸಣ್ಣಪುಟ್ಟ ಜಗಳವಾಗಿರುವ ಘಟನೆಗಳು ನಡೆದಿವೆ. ಆದರೂ ವಲಸೆ ಕಾರ್ಮಿಕರು ತಮ್ಮ ಪಾಡಿಗೆ ಜೀವನ ಸಾಗಿಸುತ್ತಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಬಂಗಾಳಿ ವಲಸೆ ಕಾರ್ಮಿಕನೊಬ್ಬನ ಹತ್ಯೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದನ್ನು ಭಾಷಾ ದ್ವೇಷದ ಕೊಲೆ ಎಂದರೆ, ಪುಣೆ ಪೊಲೀಸರು ಇದನ್ನು ಕುಡಿತದ ಅಮಲಿನಲ್ಲಿ ನಡೆದ ಜಗಳ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ. ಘಟನೆಯು ಕರ್ನಾಟಕ ಸೇರಿದಂತೆ ದೇಶದಾದ್ಯಂತ ಇರುವ ಲಕ್ಷಾಂತರ ವಲಸೆ ಕಾರ್ಮಿಕರ ಅಭದ್ರತೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಲಸೆ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ಮೊದಲು ಬೆಂಗಳೂರು, ಮೈಸೂರುಗಳಂತಹ ನಗರಗಳಿಗೆ ಸಿಮೀತವಾಗಿದ್ದ ವಲಸೆ ಕಾರ್ಮಿಕರು ಇದೀಗ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿನ ಸಣ್ಣ ಪ್ರದೇಶಗಳಲ್ಲಿಗೂ ತೆರಳುತ್ತಿದ್ದು, ಕೆಲಸ ಹುಡುಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವೆಡೆ ಸ್ಥಳೀಯರೊಂದಿಗೆ ಸಣ್ಣಪುಟ್ಟ ಜಗಳವಾಗಿರುವ ಘಟನೆಗಳು ನಡೆದಿವೆ.
ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ ರಾಜ್ಯಗಳಿಂದ ವಲಸೆ ಬಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಬೆಂಗಳೂರಿನ ಗಗನಚುಂಬಿ ಕಟ್ಟಡಗಳ ನಿರ್ಮಾಣ, ಮೆಟ್ರೋ ಕಾಮಗಾರಿ, ಮನೆಗೆಲಸ, ಸೆಕ್ಯೂರಿಟಿ ಗಾರ್ಡ್, ಸ್ವಿಗ್ಗಿ-ಜೊಮಾಟೊ ಡೆಲಿವರಿ ಬಾಯ್ಸ್ ಆಗಿ ಮತ್ತು ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಹೆಚ್ಚಾಗಿ ದುಡಿಯುತ್ತಿದ್ದಾರೆ. ಅಷ್ಟೇ ಅಲ್ಲದೇ, ಐಟಿ ಕಂಪನಿಗಳಲ್ಲಿಯೂ ಎಂಜಿನಿಯರ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ದುಡಿದು ಜೀವನ ಕಟ್ಟಿಕೊಂಡಿದ್ದಾರೆ. ಕಾರ್ಮಿಕರು ದಿನಕ್ಕೆ 400 ರಿಂದ 1000 ರೂಪಾಯಿಗಳವರೆಗೆ ದುಡಿಯುವ ಇವರು, ತಿಂಗಳಿಗೆ 12 ದಿಂದ 18 ಸಾವಿರ ರೂ. ಗಳಿಸುತ್ತಾರೆ. ಇದರಲ್ಲಿ ಅರ್ಧದಷ್ಟು ಹಣವನ್ನು ತಮ್ಮ ಊರಿನಲ್ಲಿರುವ ಕುಟುಂಬಕ್ಕೆ ಕಳುಹಿಸುತ್ತಾರೆ.
ಪುಣೆಯ ಘಟನೆಯಂತೆ ಕರ್ನಾಟಕದಲ್ಲೂ ವಲಸೆ ಕಾರ್ಮಿಕರು ಕೆಲವೊಮ್ಮೆ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ನಮ್ಮ ಉದ್ಯೋಗಗಳನ್ನು ಇವರು ಕಿತ್ತುಕೊಳ್ಳುತ್ತಿದ್ದಾರೆ ಎಂಬ ಭಾವನೆ ಸ್ಥಳೀಯರಲ್ಲಿ ಮನೆಮಾಡಿದೆ. ಭಾಷೆಯ ವಿಷಯಕ್ಕೆ ಬಂದರೆ, ಉತ್ತರ ಭಾರತದ ಕಾರ್ಮಿಕರು ಕನ್ನಡ ಕಲಿಯಲು ಆಸಕ್ತಿ ತೋರುವುದಿಲ್ಲ ಎಂಬ ದೂರುಗಳಿವೆ. ಇದು ಸಂವಹನ ಕೊರತೆಗೆ ಕಾರಣವಾಗಿ, ಸಣ್ಣ ಜಗಳಗಳು ದೊಡ್ಡದಾಗಿ ಬೆಳೆಯುತ್ತವೆ.
ಬಹುತೇಕರು ಶೆಡ್‌ಗಳ ಬದುಕು
ನಗರದ ಹೊರವಲಯಗಳಲ್ಲಿ ಮತ್ತು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ಶೆಡ್‌ಗಳೇ ಇವರ ಅರಮನೆಗಳು. ಒಂದು ಸಣ್ಣ ಕೊಠಡಿಯಲ್ಲಿ 4-5 ಜನರು ವಾಸಿಸುತ್ತಾರೆ. ಶುದ್ಧ ಕುಡಿಯುವ ನೀರು, ಸರಿಯಾದ ಶೌಚಾಲಯ ವ್ಯವಸ್ಥೆ ಇವರಿಗೆ ಮರೀಚಿಕೆ. ಮಳೆಗಾಲದಲ್ಲಂತೂ ಇವರ ಸ್ಥಿತಿ ಶೋಚನೀಯ. ಸಾಂಕ್ರಾಮಿಕ ರೋಗಗಳ ಭೀತಿಯ ನಡುವೆಯೇ ಇವರು ಬದುಕಬೇಕಿದೆ. ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪೋಷಕರು ಕೆಲಸಕ್ಕಾಗಿ ಸ್ಥಳಾಂತರವಾಗುತ್ತಲೇ ಇರುವುದರಿಂದ ಮಕ್ಕಳ ಶಾಲಾ ದಾಖಲಾತಿ ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರವು ಸಂಚಾರಿ ಶಾಲೆಗಳಂತಹ ಯೋಜನೆಗಳನ್ನು ತಂದಿದ್ದರೂ, ಅವುಗಳ ತಲುಪುವಿಕೆ ಬಹಳ ಕಡಿಮೆ.
ವಲಸೆ ಕಾರ್ಮಿಕರ ಅತಿದೊಡ್ಡ ದುರಂತವೆಂದರೆ ಅವರ ರಾಜಕೀಯ ಅಸ್ತಿತ್ವ. ಇವರು ತಮ್ಮ ಸ್ವಂತ ಊರಿನ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡಿರುತ್ತಾರೆ. ಇತ್ತ ಕೆಲಸ ಮಾಡುವ ನಗರದಲ್ಲೂ ಇವರಿಗೆ ಮತದಾನದ ಹಕ್ಕು ಇರುವುದಿಲ್ಲ. ಇದರಿಂದಾಗಿ ಇವರು ಯಾವುದೇ ರಾಜಕೀಯ ಪಕ್ಷಗಳಿಗೆ ಮತಬ್ಯಾಂಕ್ ಆಗಿ ಕಾಣುವುದಿಲ್ಲ. ಪರಿಣಾಮವಾಗಿ, ಇವರ ಪರವಾಗಿ ಧ್ವನಿ ಎತ್ತುವವರು ಯಾರೂ ಇಲ್ಲ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಇವರು ಸಾವಿರಾರು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದ್ದೇ ಇದಕ್ಕೆ ಸಾಕ್ಷಿ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ
ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಪಶ್ಚಿಮ ಬಂಗಾಳದ ಸುನೀಲ್ ಶರ್ಮಾ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿ, ಕಳೆದ ಐದು ವರ್ಷಗಳಿಂದ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದೇನೆ. ಸ್ಥಳೀಯರೊಂದಿಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಸ್ಥಳೀಯರೊಂದಿಗೆ ನಾವು ಯಾವ ರೀತಿಯಲ್ಲಿ ವರ್ತಿಸುತ್ತೇವೆ ಎಂಬುದರ ಮೇಲೆ ಅವರ ಪ್ರತಿಕ್ರಿಯೆ ಇರುತ್ತದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಸ್ಥಳೀಯ ಭಾಷೆಯನ್ನು ಗೌರವಿಸಿದರೆ ಖಂಡಿತವಾಗಿಯೂ ಅವರು ಸಹ ನಮ್ಮ ಭಾಷೆಯನ್ನು ಗೌರವಿಸುತ್ತಾರೆ. ಇದು ನನ್ನ ಅನುಭವದ ಮಾತಾಗಿದೆ. ಕೆಲವು ಕಿಡಿಗೇಡಿಗಳು ನಡೆದುಕೊಳ್ಳುವ ರೀತಿ ಮತ್ತು ಕುಡಿದು ಮಾಡುವ ಗಲಾಟೆಯಿಂದ ವಲಸೆ ಕಾರ್ಮಿಕರ ಬಗ್ಗೆ ಸ್ಥಳೀಯರಲ್ಲಿ ಕೆಟ್ಟ ಭಾವನೆ ಮೂಡಲು ಕಾರಣವಾಗುತ್ತದೆ ಎಂಬುದು ನನ್ನ ಅನಿಸಿಕೆ ಎಂದು ಹೇಳಿದರು.
ಬಿಹಾರದ ಯೋಗೇಂದ್ರ ಮಾತನಾಡಿ, ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದೇನೆ. ಈವರೆವಿಗೂ ಕನ್ನಡಿಗರಿಂದ ಸಮಸ್ಯೆಯಾಗಿಲ್ಲ. ಬಹುಶಃ ನಾವು ನಡೆದುಕೊಳ್ಳುವುದರ ಮೇಲೆ ಅವರ ವರ್ತನೆ ಇರುತ್ತದೆ ಎಂದು ಭಾವಿಸುತ್ತೇನೆ. ಕೆಲವು ಸ್ಥಳೀಯರು ಕನ್ನಡದಲ್ಲಿ ಮಾತಾಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದುಂಟು. ಆದರೆ, ಅವರಿಗೆ ಅರ್ಥ ಮಾಡಿಸುವ ಕೆಲಸ ಮಾಡಿದ್ದೇನೆ. ಕನ್ನಡ ಕಲಿಯುವ ಭರವಸೆ ನೀಡಿದ್ದೇನೆ. ಇನ್ನು ಕೆಲವರು ಬೇಕು ಅಂತಾನೇ ತಗಾದೆ ತೆಗೆದಿರುವಂತಹ ಘಟನೆಗಳನ್ನು ಸಹ ಎದುರಿಸಿದ್ದೇನೆ. ದುಡಿಯಲು ಬೆಂಗಳೂರಿಗೆ ಬಂದಿದ್ದು, ಇಂತಹ ಪರಿಸ್ಥಿತಿಯನ್ನು ಕೆಲವು ಸಂದರ್ಭದಲ್ಲಿ ಎದುರಿಸಬೇಕಾಗುತ್ತದೆ. ಹಾಗಂತ ಯಾವಾಗಲೂ ಕನ್ನಡಿಗರದ್ದೇ ತಪ್ಪು ಅಥವಾ ವಲಸೆ ಕಾರ್ಮಿಕರದ್ದೇ ತಪ್ಪು ಎಂದು ಹೇಳಲಾಗುವುದಿಲ್ಲ. ಎರಡೂ ಕಡೆಯೂ ತಪ್ಪುಗಳಿರುತ್ತವೆ ಎಂದು ತಿಳಿಸಿದರು.

