
ರಿಂಗ್ ರೋಡ್ ಶುಭಾ ಪ್ರಕರಣದ ಮಾದರಿಯಲ್ಲೇ ಕೊಲೆ, ಮದುವೆಗೆ ಮುನ್ನವೇ ಭಾವಿ ಪತಿಯನ್ನೇ ಬಲಿ ಪಡೆದ ಶ್ರೀಮಂತ ವಧು
ಜೈಪುರದ ಪ್ರತಿಷ್ಠಿತ ಕುಟುಂಬಗಳಿಗೆ ಸೇರಿದ ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಅವರ ವಿವಾಹವು ಮುಂಬರುವ ಜುಲೈ ತಿಂಗಳಲ್ಲಿ ನಡೆಯಲು ನಿಶ್ಚಯವಾಗಿತ್ತು. ಆದರೆ, ಕೇತನ್ ಇದೀಗ ಮೃತಪಟ್ಟಿದ್ದಾರೆ.
ಪುಣೆಯ ಐತಿಹಾಸಿಕ ಲೋಹಗಢ ಕೋಟೆಯ ತುದಿಯಲ್ಲಿ ಫೋಟೊಶೂಟ್ ನಡೆಯುತ್ತಿದ್ದಾಗ ಕಾಲು ಜಾರಿ 350 ಅಡಿ ಆಳದ ಪ್ರಪಾತಕ್ಕೆ ಬಿದ್ದು ಯುವಕನೊಬ್ಬ ಮೃತಪಟ್ಟಿದ್ದ ಘಟನೆ, ತನಿಖೆಯ ನಂತರ ಇದೀಗ ರಾಜ್ಯವನ್ನೇ ಬೆಚ್ಚಿಬೀಳಿಸುವ ಕೊಲೆ ಪ್ರಕರಣವಾಗಿ ಹೊರಹೊಮ್ಮಿದೆ. ಈ ಘಟನೆ ಬೆಂಗಳೂನ ವಿವೇಕನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ೨೦೦೩ರಲ್ಲಿ ನಡೆದ ರಿಂಗ್ ರೋಡ್ ಶುಭಾ ಕೊಲೆ ಪ್ರಕರಣವನ್ನು ಸ್ಮರಿಸುವಂತಿದೆ. ಭಾವಿ ಪತಿಯನ್ನೇ ಕೊಂದಿರುವ ಈ ಪ್ರಕರಣ ಇದೀಗ ಸಂಚಲನ ಮೂಡಿಸಿದೆ.
ಜೂನ್ 19ರಂದು ಸಂಭವಿಸಿದ ಈ ಘಟನೆಯಲ್ಲಿ ಜೈಪುರದ ಕೇತನ್ ವಿಶಾಲ್ ಅಗರ್ವಾಲ್ (25) ಬಲಿಯಾಗಿದ್ದಾನೆ. ಈ ಘಟನೆಯು ಆಕಸ್ಮಿಕವಾಗಿ ನಡೆದಿದ್ದಲ್ಲ, ಬದಲಾಗಿ ಆತನ ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (22) ಸೇರಿ ರೂಪಿಸಿದ ಪಕ್ಕಾ ಸಂಚಿನ ಫಲ ಎಂಬುದು ಪುಣೆ ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.
ಜೈಪುರದ ಪ್ರತಿಷ್ಠಿತ ಕುಟುಂಬಗಳಿಗೆ ಸೇರಿದ ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಅವರ ವಿವಾಹವು ಮುಂಬರುವ ಜುಲೈ ತಿಂಗಳಲ್ಲಿ ನಡೆಯಲು ನಿಶ್ಚಯವಾಗಿತ್ತು. ಇದಕ್ಕಾಗಿ ಜೈಪುರದ ಅರಮನೆಯೊಂದನ್ನು ಕಾಯ್ದಿರಿಸಿ ಭವ್ಯವಾದ ವಿವಾಹಕ್ಕೆ ತಯಾರಿ ನಡೆಸಲಾಗಿತ್ತು. ಆದರೆ, ಸಿಯಾ ಗೋಯಲ್‌ಗೆ ಈ ಮದುವೆ ಇಷ್ಟವಿರಲಿಲ್ಲ. ಆಕೆ ಚೇತನ್ ಚೌಧರಿ ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ತನ್ನ ಮದುವೆಗೆ ಕೇತನ್ ಅಡ್ಡಿಯಾಗುತ್ತಿದ್ದಾನೆ ಮತ್ತು ಆತನನ್ನು ಕೊನೆಗಾಣಿಸಿದರೆ ಮಾತ್ರ ತನ್ನ ಪ್ರೇಮ ಜೀವನ ಸುಗಮವಾಗುತ್ತದೆ ಎಂದು ಭಾವಿಸಿದ ಸಿಯಾ, ಪ್ರಿಯಕರನೊಂದಿಗೆ ಸೇರಿ ಈ ಹತ್ಯೆಯ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ಬಾರಿ ವಿಫಲವಾದ ಪ್ರಯತ್ನಗಳು
ಆರೋಪಿಗಳು ಈ ಹತ್ಯೆಯನ್ನು ಬಹಳ ಯೋಜನಾಬದ್ಧವಾಗಿ ನಡೆಸಿದ್ದಾರೆ. ಮೊದಲಿಗೆ ಮೇ 31 ರಂದು ಇಬ್ಬರೂ ಲೋಹಗಢ ಕೋಟೆಗೆ ಚಾರಣಕ್ಕೆ ಹೋಗಿದ್ದಾಗ ಕೇತನ್‌ನನ್ನು ಪ್ರಪಾತಕ್ಕೆ ತಳ್ಳಲು ಪ್ರಯತ್ನ ನಡೆಸಲಾಗಿತ್ತು, ಆದರೆ ಅದು ವಿಫಲವಾಯಿತು. ನಂತರ ಜೂನ್ 14 ರಂದು ಮತ್ತೆ ಕೋಟೆಗೆ ಕರೆದೊಯ್ದು, ಹಾವಿನ ಭಯ ಹುಟ್ಟಿಸಿ ಕಂದಕಕ್ಕೆ ತಳ್ಳಲು ಪ್ರಯತ್ನಿಸಿದರು. ಆ ಪ್ರಯತ್ನವೂ ಕೈಗೂಡಲಿಲ್ಲ. ಕೊನೆಯದಾಗಿ, ಸಿಯಾಳ ಜನ್ಮದಿನವಾದ ಜೂನ್ 19 ರಂದು ಮಹಾಬಲೇಶ್ವರದ ಐಷಾರಾಮಿ ರೆಸಾರ್ಟ್‌ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಆಯೋಜಿಸಿ, ಅದೇ ನೆಪದಲ್ಲಿ ಲೋಹಗಢ ಕೋಟೆಗೆ ಕರೆದೊಯ್ದು ಹತ್ಯೆಯನ್ನು ಯಶಸ್ವಿಗೊಳಿಸಿದರು.
ದಾರಿ ತಪ್ಪಿಸಲು ನಡೆದ ನಾಟಕಗಳು
ಮದುವೆಗೆ ಮುನ್ನ ಬಾಲಿ ಪ್ರವಾಸಕ್ಕೆ ಹೋಗಲು ಕೇತನ್ ಮತ್ತು ಸಿಯಾ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಆ ಪ್ರವಾಸವನ್ನು ರದ್ದುಗೊಳಿಸಲು ಸಿಯಾ ತಾನೇ ತನ್ನ ಪಾಸ್‌ಪೋರ್ಟ್ ಅನ್ನು ಶೌಚಾಲಯದಲ್ಲಿ ಹರಿದು ಹಾಕಿ, ಅದು ಕಳೆದುಹೋಗಿದೆ ಎಂದು ಸುಳ್ಳು ಹೇಳಿದ್ದಳು. ಈ ಮೂಲಕ ತನ್ನ ನಿಜವಾದ ಉದ್ದೇಶವನ್ನು ಮುಚ್ಚಿಡಲು ಅವಳು ನಿರಂತರವಾಗಿ ಯತ್ನಿಸಿದ್ದಳು. ಘಟನೆಯ ದಿನದಂದು ಕೂಡ, ಕೇತನ್ ಫೋಟೊಗೆ ಪೋಸ್ ಕೊಡುತ್ತಿದ್ದಾಗ, ಸಿಯಾ ನೀಡಿದ ಸಂಕೇತದ ಮೇರೆಗೆ ಚೇತನ್ ಹಿಂದಿನಿಂದ ಬಂದು ಕೇತನ್‌ನನ್ನು ನೂಕಿದ್ದಾನೆ.
ಪೊಲೀಸ್ ತನಿಖೆ ಮತ್ತು ಸಾಕ್ಷ್ಯಾಧಾರಗಳು
ಆರಂಭದಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಭಾವಿಸಿದ್ದ ಪೊಲೀಸರಿಗೆ, ಘಟನೆಯ ಬಳಿಕ ಸಿಯಾ ಪದೇ ಪದೇ ಹೇಳಿಕೆಗಳನ್ನು ಬದಲಿಸುತ್ತಿದ್ದುದು ಅನುಮಾನಕ್ಕೆ ಕಾರಣವಾಯಿತು. ತಕ್ಷಣವೇ ಸಿಯಾಳ ಮೊಬೈಲ್ ಕರೆಗಳ ವಿವರ, ಸಾಮಾಜಿಕ ಜಾಲತಾಣಗಳ ಚಟುವಟಿಕೆ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಆಕೆಯು ನಿರಂತರವಾಗಿ ಚೇತನ್ ಚೌಧರಿಯೊಂದಿಗೆ ಸಂಪರ್ಕದಲ್ಲಿದ್ದದ್ದು ಸಾಬೀತಾಯಿತು. ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮದುವೆಯ ಸಂಭ್ರಮದಲ್ಲಿರಬೇಕಿದ್ದ ಕುಟುಂಬವು ಇದೀಗ ಈ ಆಘಾತಕಾರಿ ಸುದ್ದಿಯಿಂದ ತೀವ್ರ ದುಃಖದಲ್ಲಿದೆ.

