RSS registration; Minister Priyank Kharge writes open letter to Mohan Bhagwat demanding transparency
x

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌

ಆರ್​ಎಸ್​​ಎಸ್​ ನೋಂದಣಿ; ಪಾರದರ್ಶಕತೆಗೆ ಆಗ್ರಹಿಸಿ ಮೋಹನ್ ಭಾಗವತ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗ ಪತ್ರ

ಆರ್‌ಎಸ್‌ಎಸ್ ತನ್ನ ನೂರನೇ ವರ್ಷದ ಸಂಭ್ರಮವನ್ನು ಕೇವಲ ಆಚರಣೆಯಾಗಿ ಸೀಮಿತಗೊಳಿಸದೆ, ಇದನ್ನು ಆತ್ಮಾವಲೋಕನದ ಉತ್ತಮ ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿವಿಮಾತು ಹೇಳಿದ್ದಾರೆ.


Click the Play button to hear this message in audio format

ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ತನ್ನ ನೂರನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಹೊತ್ತಲ್ಲೇ, ಸಂಘದ ಪಾರದರ್ಶಕತೆ ಹಾಗೂ ಸಂವಿಧಾನಾತ್ಮಕ ಹೊಣೆಗಾರಿಕೆಯ ಕುರಿತು ಪ್ರಶ್ನಿಸಿ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರವೊಂದನ್ನು ರವಾನಿಸಿದ್ದಾರೆ.

ಶತಮಾನೋತ್ಸವದ ಶುಭಾಶಯಗಳೊಂದಿಗೆ ಆರಂಭವಾಗಿರುವ ಈ ಪತ್ರದಲ್ಲಿ, ದೇಶ-ವಿದೇಶಗಳಲ್ಲಿ ಸಾವಿರಾರು ಶಾಖೆಗಳು ಹಾಗೂ ಕೋಟ್ಯಂತರ ಸ್ವಯಂಸೇವಕರ ಬೃಹತ್ ಜಾಲವನ್ನು ಹೊಂದಿರುವ ಸಂಘಟನೆಯು ಸಾರ್ವಜನಿಕ ಜೀವನದಲ್ಲಿ ಭಾರಿ ಪ್ರಭಾವ ಬೀರುತ್ತಿದೆ. ಹೀಗಾಗಿ, ತನ್ನ ಕಾನೂನುಬದ್ಧ ಸ್ಥಾನಮಾನ ಹಾಗೂ ಆರ್ಥಿಕ ಮೂಲಗಳ ಕುರಿತು ದೇಶದ ಜನತೆಗೆ ಸಂಘ ಸ್ಪಷ್ಟನೆ ನೀಡಬೇಕು ಎಂದು ತೀವ್ರವಾಗಿ ಒತ್ತಾಯಿಸಲಾಗಿದೆ.


ಅಂಕಿ-ಅಂಶಗಳ ಉಲ್ಲೇಖ

ಅಖಿಲ ಭಾರತೀಯ ಪ್ರತಿನಿಧಿ ಸಭಾದ 2025-26ನೇ ಸಾಲಿನ ಕರ್ನಾಟಕದ ವರದಿಯನ್ನು ಉಲ್ಲೇಖಿಸಿರುವ ಸಚಿವರು, ರಾಜ್ಯದಲ್ಲಿ ಆರ್‌ಎಸ್‌ಎಸ್ ಹೊಂದಿರುವ ಬೃಹತ್ ಪ್ರಭಾವವನ್ನು ವಿವರಿಸಿದ್ದಾರೆ. ವರದಿಯ ಪ್ರಕಾರ, ಕೇವಲ ಕರ್ನಾಟಕದಲ್ಲಿಯೇ ಆರ್‌ಎಸ್‌ಎಸ್ 4,127 ದೈನಂದಿನ ಶಾಖೆಗಳು, 1,389 ಸಾಪ್ತಾಹಿಕ ಮಿಲನ್‌ಗಳು ಹಾಗೂ 60 ಮಾಸಿಕ ಮಂಡಳಿಗಳನ್ನು ನಿರಂತರವಾಗಿ ನಡೆಸುತ್ತಿದೆ. ಇದರ ಜೊತೆಗೆ ಬರೋಬ್ಬರಿ 19.61 ಲಕ್ಷ ಜನರು ಭಾಗವಹಿಸಿದ್ದ 2,194 ಸಮಾಜೋತ್ಸವಗಳು ಮತ್ತು 2.22 ಲಕ್ಷ ಗಣವೇಷಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದ 562 ಪಥಸಂಚಲನಗಳನ್ನು ಆಯೋಜಿಸಲಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಪ್ರಭಾವ ಹಾಗೂ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೊಂದಿರುವ ಸಂಘಟನೆಯನ್ನು ಕೇವಲ ಖಾಸಗಿ ಅಥವಾ ಅನೌಪಚಾರಿಕ ಗುಂಪು ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಂಘಟನೆಯು ತನ್ನ ಚಟುವಟಿಕೆಗಳ ಬಗ್ಗೆ ಕಾನೂನುಬದ್ಧ ಪಾರದರ್ಶಕತೆ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.

ಆರ್ಥಿಕ ಮೂಲಗಳ ಬಹಿರಂಗಕ್ಕೆ ಪಟ್ಟು

ಸಮಾಜದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಸಾರ್ವಜನಿಕ ಚಟುವಟಿಕೆಗಳನ್ನು ನಿರ್ವಹಿಸುವ ಸಂಘವು, ತನ್ನ ಅಧಿಕೃತ ನೋಂದಣಿ ಪ್ರಕ್ರಿಯೆ, ಸಾಂಸ್ಥಿಕ ರಚನೆ ಹಾಗೂ ಪ್ರಮುಖ ಪದಾಧಿಕಾರಿಗಳ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಇದಲ್ಲದೆ, ದೇಣಿಗೆ, ಕಾಣಿಕೆ ಹಾಗೂ ಆದಾಯದ ಮೂಲಗಳ ಮಾಹಿತಿ, ಸಂಘದ ವೆಚ್ಚಗಳು, ಹೊಂದಿರುವ ಆಸ್ತಿಗಳ ವಿವರ ಹಾಗೂ ತೆರಿಗೆ ಪಾವತಿಯ ನಿಖರತೆಯ ಬಗ್ಗೆಯೂ ಪತ್ರದಲ್ಲಿ ಪ್ರಶ್ನಿಸಲಾಗಿದೆ. ಸಾರ್ವಜನಿಕ ಸಭೆಗಳು, ಸಮಾವೇಶಗಳು ಹಾಗೂ ಪಥಸಂಚಲನ ಸೇರಿದಂತೆ ವಿವಿಧ ಬೃಹತ್ ಕಾರ್ಯಕ್ರಮಗಳಿಗೆ ಪಡೆಯುತ್ತಿರುವ ಅನುಮತಿಗಳು ಮತ್ತು ಯಾವುದೇ ಅಧಿಕೃತ ನೋಂದಣಿಯಿಲ್ಲದೆ ಸಾರ್ವಜನಿಕವಾಗಿ ಕಾರ್ಯನಿರ್ವಹಿಸಲು ಇರುವ ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ಆಧಾರಗಳೇನು ಎಂಬ ಬಗ್ಗೆ ಸ್ಪಷ್ಟೀಕರಣವನ್ನು ಕೋರಲಾಗಿದೆ.

ಎಲ್ಲರಿಗೂ ಇರುವ ಕಾನೂನು ಆರ್‌ಎಸ್‌ಎಸ್‌ಗೆ ಏಕಿಲ್ಲ ಎಂಬ ಪ್ರಶ್ನೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಕಾನೂನಿಗಿಂತ ಮೇಲಲ್ಲ ಎಂಬುದನ್ನು ಸಚಿವರು ನೆನಪಿಸಿದ್ದಾರೆ. ದೇಶದ ಸಾಮಾನ್ಯ ನಾಗರಿಕರು, ಸಣ್ಣ ಸಂಘಟನೆಗಳು, ಎನ್‌ಜಿಒಗಳು, ಟ್ರಸ್ಟ್‌ಗಳು, ದೇವಾಲಯಗಳು ಹಾಗೂ ಕಾರ್ಪೊರೇಟ್ ಕಂಪನಿಗಳು ಕಾನೂನಿನ ಚೌಕಟ್ಟಿನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿ, ತಮ್ಮ ಆದಾಯ-ವೆಚ್ಚಗಳನ್ನು ಬಹಿರಂಗಪಡಿಸಿ ತೆರಿಗೆ ಪಾವತಿಸುತ್ತವೆ. ಹೀಗಿರುವಾಗ, ರಾಷ್ಟ್ರೀಯತೆ, ಶಿಸ್ತು ಹಾಗೂ ಕರ್ತವ್ಯದ ಬಗ್ಗೆ ಸದಾ ಮಾತನಾಡುವ ಆರ್‌ಎಸ್‌ಎಸ್‌ಗೆ ಮಾತ್ರ ಈ ಕಾನೂನುಗಳಿಂದ ವಿನಾಯಿತಿ ಏಕೆ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಸಾಮಾನ್ಯ ಸಂಘಟನೆಗಳು ಕಾನೂನು ಪಾಲಿಸುವಾಗ, ಆರ್‌ಎಸ್‌ಎಸ್ ಕೂಡ ಅದೇ ಮಾನದಂಡಗಳಿಗೆ ಒಳಪಡಬೇಕು ಎಂದು ವಾದಿಸಿದ್ದಾರೆ.

ಆತ್ಮಾವಲೋಕನವಾಗಲಿ ಎಂದ ಪ್ರಿಯಾಂಕ್​

ಆರ್‌ಎಸ್‌ಎಸ್ ತನ್ನ ನೂರನೇ ವರ್ಷದ ಸಂಭ್ರಮವನ್ನು ಕೇವಲ ಆಚರಣೆಯಾಗಿ ಸೀಮಿತಗೊಳಿಸದೆ, ಇದನ್ನು ಆತ್ಮಾವಲೋಕನದ ಉತ್ತಮ ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಕಿವಿಮಾತು ಹೇಳಿದ್ದಾರೆ. ತನ್ನನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳುವುದು, ಆರ್ಥಿಕ ಹಾಗೂ ಸಾಂಸ್ಥಿಕ ಚಟುವಟಿಕೆಗಳ ವಿವರಗಳನ್ನು ಬಹಿರಂಗಪಡಿಸುವುದು, ಅನ್ವಯವಾಗುವ ತೆರಿಗೆಗಳನ್ನು ಪಾವತಿಸುವುದು ಮತ್ತು ಭಾರತೀಯ ಕಾನೂನುಗಳ ಚೌಕಟ್ಟಿನೊಳಗೆ ಉತ್ತರದಾಯಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಮೂಲಕ ಸಂವಿಧಾನದ ಮೇಲಿನ ಗೌರವವನ್ನು ಸಾಬೀತುಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಎಲ್ಲಾ ಗಂಭೀರ ವಿಷಯಗಳ ಕುರಿತು ಶೀಘ್ರದಲ್ಲೇ ಆರ್‌ಎಸ್‌ಎಸ್‌ನಿಂದ ಅಧಿಕೃತ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿರುವುದಾಗಿ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Read More
Next Story