ಆರ್‌ಎಸ್‌ಎಸ್ ಅಸ್ತಿತ್ವದ ಸವಾಲು : ಮೋಹನ್‌ ಭಾಗವತ್‌ಗೆ ಪ್ರಿಯಾಂಕ್‌ ಖರ್ಗೆ ಪತ್ರ ?
x

ಆರ್‌ಎಸ್‌ಎಸ್ ಅಸ್ತಿತ್ವದ ಸವಾಲು : ಮೋಹನ್‌ ಭಾಗವತ್‌ಗೆ ಪ್ರಿಯಾಂಕ್‌ ಖರ್ಗೆ ಪತ್ರ ?

ಸಚಿವ ಪ್ರಿಯಾಂಕ್ ಖರ್ಗೆ ಬರೆಯುವ ಪತ್ರವು ಕೇವಲ ರಾಜಕೀಯ ಟೀಕೆಯಾಗಿ ಉಳಿಯದೆ, ಸಂಘಟನೆಯನ್ನು ಪ್ರಶ್ನಿಸುವ ಪ್ರಯತ್ನವಾಗಿದೆ. ಪತ್ರದಲ್ಲಿ ಅವರು ಕೆಲವೊಂದು ಅಂಶಗಳನ್ನು ಮುಂದಿಟ್ಟಿದ್ದಾರೆ


Click the Play button to hear this message in audio format

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಸ್ತಿತ್ವ ಮತ್ತು ಕಾರ್ಯವೈಖರಿಯ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತುವ ಮೂಲಕ ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಸಂಘಟನೆಯು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ಸಚಿವರು, ಈ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್ ಅವರಿಗೆ ಅಧಿಕೃತವಾಗಿ ಪತ್ರ ಬರೆಯಲು ಮುಂದಾಗಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆಯುವ ಪತ್ರವು ಕೇವಲ ರಾಜಕೀಯ ಟೀಕೆಯಾಗಿ ಉಳಿಯದೆ, ಆಡಳಿತಾತ್ಮಕ ಮತ್ತು ಸಾಂವಿಧಾನಿಕ ಚೌಕಟ್ಟಿನೊಳಗೆ ಸಂಘಟನೆಯನ್ನು ಪ್ರಶ್ನಿಸುವ ಪ್ರಯತ್ನವಾಗಿದೆ. ಪತ್ರದಲ್ಲಿ ಅವರು ಕೆಲವೊಂದು ಅಂಶಗಳನ್ನು ಮುಂದಿಟ್ಟಿದ್ದಾರೆ. ದೇಶದಲ್ಲಿ ಯಾವುದೇ ಎನ್‌ಜಿಒ ಅಥವಾ ಸಾರ್ವಜನಿಕ ಸಂಸ್ಥೆಯು ಅಸ್ತಿತ್ವದಲ್ಲಿರಬೇಕಾದರೆ ಅದು ಸರ್ಕಾರದ ನಿಯಮಗಳಡಿ ನೋಂದಣಿಯಾಗಬೇಕು. ಆರ್‌ಎಸ್‌ಎಸ್ ಅಂತಹ ಯಾವುದೇ ನೋಂದಣಿ ಹೊಂದಿಲ್ಲದಿರುವುದು ಕಾನೂನಿನ ದೃಷ್ಟಿಯಲ್ಲಿ ಸಂಶಯಾಸ್ಪದವಾಗಿದೆ ಎಂದಿದ್ದಾರೆ. ಆರ್‌ಎಸ್‌ಎಸ್‌ಗೆ ಲಭಿಸುವ ಅಪಾರ ಪ್ರಮಾಣದ ಗುರುದಕ್ಷಿಣೆ ಹಾಗೂ ವಿದೇಶಿ ದೇಣಿಗೆಗಳ ಮೂಲದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಇಷ್ಟೊಂದು ದೊಡ್ಡ ಮಟ್ಟದ ಹಣಕಾಸಿನ ವಹಿವಾಟು ನಡೆಯುತ್ತಿದ್ದರೂ, ಅದು ಯಾವ ನಿಯಮದಡಿ ಬರುತ್ತದೆ ಎಂಬುದು ಅಸ್ಪಷ್ಟ. ಇದನ್ನು ಅಕ್ರಮ ಹಣ ವರ್ಗಾವಣೆ ಎಂದು ಸಂಶಯಿಸಬೇಕಾಗುತ್ತದೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ಹೇಳಿದ್ದಾರೆ.

ನಾನು ಆರ್‌ಎಸ್‌ಎಸ್ ಅನ್ನು ನಿಷೇಧಿಸುವಂತೆ ಕೇಳುತ್ತಿಲ್ಲ, ಆದರೆ ಸಂಘಟನೆಯು ದೇಶದ ಸಂವಿಧಾನ ಮತ್ತು ಕಾನೂನಿನ ಅಡಿಯಲ್ಲಿ ಏಕೆ ಬರುವುದಿಲ್ಲ ಎಂಬುದನ್ನು ಉತ್ತರಿಸಬೇಕು. ಆರ್‌ಎಸ್‌ಎಸ್ ಬಳಿ ನೋಂದಣಿ ದಾಖಲೆಗಳಿದ್ದರೆ ಅಥವಾ ಅವುಗಳನ್ನು ಪ್ರದರ್ಶಿಸಲು ಸಾಧ್ಯವಿಲ್ಲದಿದ್ದರೆ, ಅದಕ್ಕೆ ಕಾರಣವನ್ನು ವಿವರಿಸಲು ತಾವು ಸಿದ್ಧರಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ಸಾಧ್ಯತೆ

ಸಚಿವ ಪ್ರಿಯಾಂಕ್‌ ಖರ್ಗೆ ನೀಡಿರುವ ಹೇಳಿಕೆಗಳಿಗೆ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರಲ್ಲಿ ತೀವ್ರ ಆಕ್ರೋಶವನ್ನು ಮೂಡಿಸಿದೆ. ಇದೀಗ ಪತ್ರವು ಸಹ ಮತ್ತಷ್ಟು ಸಮರಕ್ಕೆ ಸಾಕ್ಷಿಯಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಪ್ರಿಯಾಂಕ್ ಖರ್ಗೆ ಆರೋಪಗಳಿಗೆ ಬಿಜೆಪಿ ತಿರುಗೇಟು ನೀಡಲಿದ್ದು, ರಾಜಕೀಯವಾಗಿ ಟೀಕಾಪ್ರಹಾರ ನಡೆಯಲಿದೆ. ರಾಜ್ಯ ಕಾಂಗ್ರೆಸ್ಸಿಗರು ಖರ್ಗೆಯವರ ಬೆನ್ನಿಗೆ ಯಾವ ರೀತಿಯಲ್ಲಿ ನಿಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಬಿಜೆಪಿಯ ಹಲವು ಮುಖಂಡರು, ಆರ್‌ಎಸ್‌ಎಸ್ ಮೇಲೆ ಈ ಹಿಂದೆಯೇ ನೆಹರು ಮತ್ತು ಇಂದಿರಾ ಗಾಂಧಿಯಂತಹ ಪ್ರಬಲ ಪ್ರಧಾನಿಗಳು ನಿಷೇಧ ಹೇರಲು ಯತ್ನಿಸಿದ್ದರು, ಆದರೆ ಸಂಘಟನೆಯ ಮೌಲ್ಯಗಳು ಮತ್ತು ದೇಶಸೇವೆಯ ಮುಂದೆ ಅವರ ಪ್ರಯತ್ನಗಳು ವಿಫಲವಾದವು. ಈಗ ಖರ್ಗೆ ಅಂತಹವರು ಸಂಘವನ್ನು ಪ್ರಶ್ನಿಸುವುದು ಹಾಸ್ಯಾಸ್ಪದ ಎಂದು ಈ ಹಿಂದೆಯೂ ಟೀಕಿಸಿದ್ದರು. ಆರ್‌ಎಸ್‌ಎಸ್ ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಯಾಗಿದ್ದು, ಇದಕ್ಕೆ ಯಾವುದೇ ಸರ್ಕಾರಿ ನೋಂದಣಿಯ ಅವಶ್ಯಕತೆ ಇಲ್ಲ ಎಂಬುದು ಸಂಘದ ಬೆಂಬಲಿಗರ ವಾದವಾಗಿದೆ.

ವಿಷಯದ ಗಂಭೀರತೆ

ಪ್ರಿಯಾಂಕ್ ಖರ್ಗೆ ಅವರ ಪತ್ರವು ಕಾನೂನು ಬದ್ಧವಾಗಿ ನೋಡಿದಾಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಲಿದೆ. ದೇಶದ ಪ್ರತಿಯೊಂದು ಸಾರ್ವಜನಿಕ ಸಂಘಟನೆಯೂ ಪಾರದರ್ಶಕವಾಗಿರಬೇಕು ಎಂಬುದು ಪ್ರಜಾಪ್ರಭುತ್ವದ ಆಶಯ. ಆದರೆ, ಆರ್‌ಎಸ್‌ಎಸ್ ಒಂದು ನಿರ್ದಿಷ್ಟ ನೋಂದಣಿ ಹೊಂದಿದ ಸಂಘಟನೆಯಾಗಿರದಿದ್ದರೂ, ಅದು ದೇಶಾದ್ಯಂತ ಶಾಖೆಗಳ ಮೂಲಕ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿದೆ. ಆರ್‌ಎಸ್‌ಎಸ್‌ 20 ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಹೊಂದಿದ್ದು, ಸಾವಿರಾರು ಶಾಖೆಗಳನ್ನು ಹೊಂದಿವೆ ಎಂದು ಮೋಹನ್‌ ಭಾಗವತ್‌ ಹೇಳಿಕೆ ನೀಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಪ್ರಿಯಾಂಕ್‌ ಖರ್ಗೆ ಸ್ಪಷ್ಟನೆ ಕೋರಿದ್ದಾರೆ ಎನ್ನಲಾಗಿದೆ. ಅಲ್ಲದೇ, ಇದು ಆರ್‌ಎಸ್‌ಎಸ್‌ಗೆ ಮುಜುಗರವನ್ನುಂಟು ಮಾಡಿದೆ ಎನ್ನಲಾಗಿದೆ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಮೋಹನ್ ಭಾಗವತ್ ಅವರಿಗೆ ಬರೆಯುವ ಪತ್ರವು ಕೇವಲ ಆಡಳಿತಾತ್ಮಕ ಪತ್ರವಾಗಿ ಉಳಿಯದೆ, ಮುಂಬರುವ ದಿನಗಳಲ್ಲಿ ಸೈದ್ಧಾಂತಿಕ ಮತ್ತು ರಾಜಕೀಯ ಸಮರಕ್ಕೆ ಮುನ್ನುಡಿಯಾಗಿದೆ. ಒಂದು ಕಡೆ ದೇಶದ ಕಾನೂನು ಎಲ್ಲರಿಗೂ ಸಮಾನ ಎಂಬ ವಾದವಿದ್ದರೆ, ಇನ್ನೊಂದು ಕಡೆ 'ಸಾಂಸ್ಕೃತಿಕ ಸಂಘಟನೆಯ ಸ್ವಾಯತ್ತತೆ ಎಂಬ ವಾದವಿದೆ. ಸಾರ್ವಜನಿಕ ದೇಣಿಗೆಯನ್ನು ಸಂಗ್ರಹಿಸುವ ಯಾವುದೇ ಸಂಸ್ಥೆಯು ಪಾರದರ್ಶಕವಾಗಿರಬೇಕು ಎಂಬ ಸಚಿವರ ಆಗ್ರಹಕ್ಕೆ, ಆರ್‌ಎಸ್‌ಎಸ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಮೋಹನ್ ಭಾಗವತ್ ಅವರು ಈ ಪತ್ರಕ್ಕೆ ಉತ್ತರಿಸುತ್ತಾರೆಯೇ ಅಥವಾ ಈ ಸವಾಲನ್ನು ನಿರ್ಲಕ್ಷಿಸುತ್ತಾರೆಯೇ ಎಂಬುದು ರಾಜಕೀಯವಾಗಿ ಬಹಳ ಮಹತ್ವದ್ದಾಗಿದೆ.

Read More
Next Story