x

ಬದನವಾಳು ಗಾಂಧಿ ಆಶ್ರಮ ನೆಲಸಮ-ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು: ಪ್ರಸನ್ನ ಹೆಗ್ಗೋಡು

ರಂಗಕರ್ಮಿ ಹಾಗೂ ಗಾಂಧಿವಾದಿ ಪ್ರಸನ್ನ ಹೆಗ್ಗೋಡು ಅವರು 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿ ಖಾದಿ, ಗ್ರಾಮೋದ್ಯೋಗ, ಪರಿಸರ ಮತ್ತು ರಾಜಕೀಯ ದ್ವಂದ್ವಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊನ್ನೆಸರದಲ್ಲಿ 1994ರಲ್ಲಿ ಆರಂಭವಾದ ʼಚರಕʼ ಸಂಸ್ಥೆ ಕಳೆದ 40 ವರ್ಷಗಳಿಂದ ಲಾಭದಾಯಕವಾಗಿ ನಡೆದುಕೊಂಡು ಬಂದಿದೆ. ಆ ಮೂಲಕ ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಟ್ಟಿದೆ.

ಖ್ಯಾತ ರಂಗಕರ್ಮಿ ಹಾಗೂ 'ಚರಕ' ಸಂಸ್ಥೆಯ ಸ್ಥಾಪಕ ಪ್ರಸನ್ನ ಹೆಗ್ಗೋಡು ಅವರು 'ದ ಫೆಡರಲ್ ಕರ್ನಾಟಕ' ಸಂಪಾದಕ ನವೀನ್ ಅಮ್ಮೆಂಬಳ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಖಾದಿ, ಗ್ರಾಮೋದ್ಯೋಗ, ಪರಿಸರ ಕಾಳಜಿ ಮತ್ತು ರಾಜಕೀಯ ಪಕ್ಷಗಳ ದ್ವಂದ್ವ ನೀತಿಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಸಣ್ಣ ಕೈಗಾರಿಕೆಗಳನ್ನು 'ಸನ್ಸೆಟ್ ಇಂಡಸ್ಟ್ರಿ' ಅಥವಾ ಸಾಯುತ್ತಿರುವ ಕೈಗಾರಿಕೆ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಆದರೆ, ಸರಿಯಾಗಿ ನಡೆಸಿದರೆ ಇದು ಜೀರೋ ಕಾರ್ಬನ್ ಇಂಡಸ್ಟ್ರಿಯಾಗಿ, ಮನುಕುಲಕ್ಕೆ ಅತ್ಯಂತ ಆರೋಗ್ಯಕರವಾದ ಪರ್ಯಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಪಕ್ಷಗಳ ವಿರುದ್ಧ ಅಸಮಾಧಾನ

ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಉಳಿಸುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ವಿಫಲವಾಗಿವೆ. ಎರಡೂ ಪಕ್ಷಗಳೂ ತಕ್ಷಣದ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿವೆ ಎಂದು ಪ್ರಸನ್ನ ಹೆಗ್ಗೋಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಾಂಧೀಜಿಯವರ ಅಪ್ರತಿಮ ಸಂಕೇತವಾಗಿದ್ದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಖಾದಿ ಕೇಂದ್ರದ ಆಶ್ರಮದ ಭಾಗವನ್ನು ಕಾಂಗ್ರೆಸ್ ಸರ್ಕಾರ ನೆಲಸಮ ಮಾಡಿದೆ ಎಂದು ಆರೋಪಿಸಿದ್ದಾರೆ.

ಪಶ್ಚಿಮಘಟ್ಟ ಮತ್ತು ಪರಿಸರ ಉಳಿಸಲು ಶ್ರಮಿಸಿದ ವಿಜ್ಞಾನಿ ಮಾಧವ ಗಾಡ್ಗಿಲ್ ಅವರನ್ನು ರಾಜಕೀಯ ಪಕ್ಷಗಳು ಹಳ್ಳಿಗರ ಎದುರು 'ಕಳ್ಳ'ನಂತೆ ಬಿಂಬಿಸಿವೆ ಎಂದು ಆರೋಪಿಸಿದ ಅವರು, ಗಾಂಧಿವಾದ ಮತ್ತು ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಯಂತ್ರಗಳನ್ನು ಕಳಚಿ, ಕೈಕಸುಬುಗಳಿಗೆ ಹಾಗೂ ಸರಳ ಬದುಕಿಗೆ ಹಿಂತಿರುಗಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದ್ದಾರೆ.

Read More
Next Story