
ನೀಟ್ ವಿರೋಧಿ ಪ್ರತಿಭಟನೆಯಲ್ಲಿ, ಯುವ ಜನಾಂಗವು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕೆಂದು ಪ್ರಕಾಶ್ ರಾಜ್ ಕರೆ ನೀಡಿದರು.
ನಮ್ಮನ್ನು ಪಾಕಿಸ್ತಾನಿಗಳು ಎಂದು ಕರೆದ್ರೂ ಹೆದರಲ್ಲ: ನಟ ಪ್ರಕಾಶ್ ರಾಜ್ ಆಕ್ರೋಶ
ಬೆಂಗಳೂರಿನ ನೀಟ್ ಪ್ರತಿಭಟನೆಯಲ್ಲಿ ಸೋನಮ್ ವಾಂಗ್ಚುಕ್ ಜೊತೆಗೂಡಿದ ನಟ ಪ್ರಕಾಶ್ ರಾಜ್, ನಮ್ಮನ್ನು ಪಾಕಿಸ್ತಾನಿಗಳು ಎಂದರೂ ಹೆದರಲ್ಲ ಎಂದು ಆಡಳಿತಾರೂಢ ನಾಯಕರ ವಿರುದ್ಧ ಕಿಡಿಕಾರಿದರು.
ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಿಬಿಎಸ್‌ಇ ಆನ್‌ಸ್ಕ್ರೀನ್ ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಸಿಜೆಪಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಖ್ಯಾತ ಪರಿಸರವಾದಿ ಸೋನಮ್ ವಾಂಗ್ಚುಕ್ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಭಾಗವಹಿಸಿದ್ದರು.
ಭಾರಿ ಮಳೆಯ ನಡುವೆಯೂ ನಡೆದ ಈ ರ್ಯಾಲಿಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರಾಜ್, ಸಾರ್ವಜನಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಜನಪರ ಹೋರಾಟಗಾರರನ್ನು ದೇಶದ್ರೋಹಿಗಳು, ಉಗ್ರಗಾಮಿಗಳು ಅಥವಾ ಪಾಕಿಸ್ತಾನಿಗಳು ಎಂದು ಹಣೆಪಟ್ಟಿ ಕಟ್ಟುವ ಮೂಲಕ ಅವರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಆಡಳಿತಾರೂಢ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಮ್ಮನ್ನು ಪಾಕಿಸ್ತಾನಿಗಳು ಎಂದರೂ ನಾವು ಹೆದರುವುದಿಲ್ಲ ಎಂದು ಸಿಡಿದ ಪಟ್ಟ ಅವರು, ಯುವ ಜನಾಂಗವು ತಮ್ಮ ಹಕ್ಕುಗಳಿಗಾಗಿ ಮತ್ತು ಸುಂದರ ಭವಿಷ್ಯಕ್ಕಾಗಿ ಒಗ್ಗಟ್ಟಿನಿಂದ ಹೋರಾಡಬೇಕಾದ ಸಮಯ ಬಂದಿದೆ ಎಂದು ಕರೆ ನೀಡಿದರು.
ದೇಶವನ್ನು ಮುನ್ನಡೆಸುತ್ತಿರುವ ರಾಜಕಾರಣಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಕಾಶ್ ರಾಜ್, ಜನಪ್ರತಿನಿಧಿಗಳು ದೇಶದ ಯುವಜನರ ಉದ್ಯೋಗದ ಬಗ್ಗೆ ಯೋಚಿಸುವುದನ್ನು ಬಿಟ್ಟು ಕೇವಲ ರಾಜಕೀಯ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು. ನಿವೃತ್ತಿಯ ವಯಸ್ಸು ದಾಟಿದ ಹಿರಿಯರು ದೇಶವನ್ನು ಆಳುತ್ತಾ ಯುವಕರ ಕನಸುಗಳನ್ನು ತುಳಿಯುತ್ತಿದ್ದಾರೆ, ಆದ್ದರಿಂದ ಅವರು ಈಗ ಯುವ ಜನಾಂಗಕ್ಕೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ದೇಶದ ಯುವಕರು ಇಂದು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ಇದೇ ವೇಳೆ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ, ನೀಟ್ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು. ಅಲ್ಲದೆ, ಜೂನ್ 20 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಶಾಂತಿಯುತ ಪ್ರತಿಭಟನೆಯಲ್ಲಿ ದೇಶದಾದ್ಯಂತ ಇರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

