'ನಾನು ಧರ್ಮಸ್ಥಳಕ್ಕೆ ಹೋಗಿಲ್ಲ, ಸಾಕ್ಷ್ಯ ನೀಡಿದ್ದಷ್ಟೇ ': ಸ್ಪಷ್ಟನೆ ನೀಡಿದ ಪ್ರಕಾಶ್ ರೈ
ನಾನು ಸಾಮಾಜಿಕ ಕಾರ್ಯಕರ್ತನಾಗಿ, ಧರ್ಮಸ್ಥಳ ಪವಿತ್ರ ಕ್ಷೇತ್ರ ಮತ್ತು ಅಲ್ಲಿನ ಭಕ್ತರಿಗೆ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಸತ್ಯ ಹೊರಬರಬೇಕು ಎಂದು ಬಯಸಿದ್ದೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ಧರ್ಮಸ್ಥಳದ ಸರಣಿ ಸಾವುಗಳ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ನಟ ಪ್ರಕಾಶ್ ರೈ ಅವರ ಹೆಸರು ಕೇಳಿಬಂದಿದ್ದು ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದಲ್ಲಿ ತಮ್ಮ ಮೇಲೆ ಹೊರಿಸಲಾದ ಆರೋಪಗಳಿಗೆ ಸ್ಪಷ್ಟನೆ ನೀಡಲು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಪ್ರಕಾಶ್ ರೈ, ತಾವೆಂದೂ ಧರ್ಮಸ್ಥಳಕ್ಕೆ ಹೋಗಿಲ್ಲ, ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯ ಕೋರ್ಟ್‌ನಲ್ಲಿ ಹೇಳಿಕೆ ನೀಡುವಾಗ, ಪ್ರಕಾಶ್ ರೈ ಅವರು ತನಗೆ ಕರೆ ಮಾಡಿ, ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಪೊಲೀಸರ ಮುಂದೆ ಉತ್ತರ ನೀಡುವಂತೆ ಸೂಚಿಸಿದ್ದರು ಎಂದು ಉಲ್ಲೇಖಿಸಿದ್ದ. ಅಲ್ಲದೆ, ಕೇರಳದಿಂದ ಧರ್ಮಸ್ಥಳದ ಹೆಸರನ್ನು ಹಾಳು ಮಾಡಲು 200 ಕೋಟಿ ರೂ. ಹೂಡಿಕೆ ಮಾಡಲಾಗಿದ್ದು, ಅದರಲ್ಲಿ ಪ್ರಕಾಶ್ ರೈ ಅವರ ಹೆಸರು ಥಳುಕು ಹಾಕಿಕೊಂಡಿದೆ ಎಂಬಂತಹ ವರದಿಗಳು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದವು. ಈ ಎಲ್ಲಾ ಆರೋಪಗಳನ್ನು ಪ್ರಕಾಶ್ ರೈ ಸುಳ್ಳೆಂದು ಜರಿದಿದ್ದಾರೆ.
"ನಾನು ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿಲ್ಲ, ಗಿರೀಶ್ ಮಟ್ಟಣ್ಣನವರನ್ನು ಭೇಟಿ ಮಾಡಿಲ್ಲ. ಆದರೆ ಧರ್ಮಸ್ಥಳದಲ್ಲಿ ನಡೆದ ಸರಣಿ ಸಾವುಗಳ ಸುದ್ದಿಯಿಂದ ಆತಂಕಗೊಂಡಿದ್ದಂತೂ ಸತ್ಯ. ನಾನು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ, ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರ ಮತ್ತು ಅಲ್ಲಿನ ಭಕ್ತರಿಗೆ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಸತ್ಯ ಹೊರಬರಬೇಕು ಎಂದು ಬಯಸಿದ್ದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದೆವು ಎಂದು ವಿವರಿಸಿದರು.
ಎಸ್‌ಐಟಿ ಮುಖ್ಯಸ್ಥರಾಗಿ ಹಿರಿಯ ಪೊಲೀಸ್ ಅಧಿಕಾರಿ ಪ್ರಣವ್ ಮೊಹಂತಿ ನೇಮಕವಾದಾಗ ತಾವು ಸಂತಸ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡ ರೈ, ತಮಗೆ ಚಿನ್ನಯ್ಯನಿಂದ ಕರೆ ಬಂದಿದ್ದರ ಹಿಂದಿನ ಸತ್ಯವನ್ನು ಬಿಚ್ಚಿಟ್ಟರು. ಒಂದು ದಿನ ಗಿರೀಶ್ ಮಟ್ಟಣ್ಣನವರಿಂದ ಕರೆ ಬಂತು. ಅತ್ತ ಕಡೆ ಒಬ್ಬ ವ್ಯಕ್ತಿ ಇದ್ದಾನೆ, ನಿಮ್ಮ ಜತೆ ಮಾತನಾಡಬೇಕಂತೆ ಎಂದರು. ಚಿನ್ನಯ್ಯ ತಮಿಳಿನಲ್ಲಿ ಮಾತನಾಡಿದ. ಆತ ನನ್ನನ್ನು ಭೇಟಿ ಮಾಡಬೇಕೆಂದಿದ್ದ. ನಾನು ಅದನ್ನು ನಿರಾಕರಿಸಿದೆ. ನೀನು ಏನಾದರೂ ಮಾಹಿತಿ ಹೇಳಬೇಕಿದ್ದರೆ ರೆಕಾರ್ಡ್ ಮಾಡಿ ಕಳುಹಿಸು ಎಂದು ಹೇಳಿದ್ದೆ ಎಂದರು.
ಎಸ್ಐಟಿಗೆ ಸಾಕ್ಷ್ಯ ಒದಗಿಸಿದ್ದು ಸತ್ಯ
ಚಿನ್ನಯ್ಯನಿಂದ ಬಂದಿದ್ದ ಧ್ವನಿ ಮುದ್ರಿಕೆಯನ್ನು ತಕ್ಷಣವೇ ತಾವು ತನಿಖಾಧಿಕಾರಿಗಳಿಗೆ ಒಪ್ಪಿಸಿದ್ದಾಗಿ ಪ್ರಕಾಶ್ ರೈ ತಿಳಿಸಿದರು. ಆತ ರೆಕಾರ್ಡ್ ಕಳುಹಿಸಿದ್ದ. ನಾನು ನನ್ನ ವಕೀಲರ ಜತೆ ಚರ್ಚಿಸಿ, ಈ ಕೂಡಲೇ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ಮಾಹಿತಿ ನೀಡಿದೆ. ಸ್ವತಃ ಅವರನ್ನೇ ಭೇಟಿಯಾಗಿ ಆ ರೆಕಾರ್ಡ್‌ಗಳನ್ನು ನೀಡಿದ್ದೇನೆ. ಅವರು ನನಗೆ ಧನ್ಯವಾದ ಸಲ್ಲಿಸಿದ್ದರು. ಒಬ್ಬ ನಾಗರಿಕನಾಗಿ ಸತ್ಯಾಸತ್ಯತೆಯನ್ನು ಅಧಿಕಾರಿಗಳ ಗಮನಕ್ಕೆ ತರುವುದು ನನ್ನ ಕರ್ತವ್ಯ. ಅದನ್ನು ನಾನು ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.
ನಂತರದ ದಿನಗಳಲ್ಲಿ ಮೊಹಂತಿ ಅವರು ತಮಗೆ ಕರೆ ಮಾಡಿ, ಪ್ರಕಾಶ್, ಇನ್ನು ಮುಂದೆ ಆ ವ್ಯಕ್ತಿಯ ಕರೆಗಳನ್ನು ಸ್ವೀಕರಿಸಬೇಡಿ. ಆತ ಈಗ ತನ್ನ ಹೇಳಿಕೆಯನ್ನು ಬದಲಿಸುತ್ತಿದ್ದಾನೆ ಎಂದು ತಿಳಿಸಿದ್ದರು. ಆ ಬಳಿಕ ತಾವು ಈ ವಿಷಯದಲ್ಲಿ ತಲೆಹಾಕಿಲ್ಲ ಎಂದು ರೈ ತಿಳಿಸಿದರು.
ರಾಜಕೀಯ ಪ್ರೇರಿತ ಆರೋಪಗಳಾ?
ತಮ್ಮ ವಿರುದ್ಧದ ಆರೋಪಗಳನ್ನು ಕಲ್ಪಿತ ಎಂದು ಟೀಕಿಸಿರುವ ಪ್ರಕಾಶ್ ರೈ, ಧರ್ಮಸ್ಥಳ ಎಂದರೆ ಕೋಟ್ಯಂತರ ಭಕ್ತರು ಬರುವ ಸ್ಥಳ. ಅಲ್ಲಿ ಅನ್ಯಾಯ ನಡೆಯಬಾರದು ಎಂಬುದು ನನ್ನ ಕಾಳಜಿ. ಆದರೆ, ಯಾರೋ ರಾಜಕೀಯ ಉದ್ದೇಶಕ್ಕೆ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ. ನಾನು ಯಾವುದೇ ಹೋರಾಟಕ್ಕೆ ನೇತೃತ್ವ ವಹಿಸಿಲ್ಲ, ಯಾರ ಜತೆಗೂ ಕುಳಿತುಕೊಂಡು ಸಂಚು ರೂಪಿಸಿಲ್ಲ. ಸೌಜನ್ಯಳಂತಹ ಹೆಣ್ಣುಮಕ್ಕಳು ಸಾವನ್ನಪ್ಪಿದಾಗ ಸತ್ಯ ಹೊರಬರಬೇಕು ಎಂದು ಕೇಳುವುದು ಅಪರಾಧವೇ? ಎಂದು ಪ್ರಶ್ನಿಸಿದರು. ಮಾಧ್ಯಮಗಳ ಒಂದು ವರ್ಗವು ಸಂಪೂರ್ಣ ವಿಚಾರ ತಿಳಿಯದೆ ತಮ್ಮನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿ 'ಜಡ್ಜ್‌ಮೆಂಟ್' ಕೊಟ್ಟಿದ್ದು ಸರಿಯಲ್ಲ. ತಮ್ಮ ಬದುಕು ತೆರೆದ ಪುಸ್ತಕವಾಗಿದ್ದು, ಯಾವುದೇ ತನಿಖೆಗೂ ತಾವು ಸಿದ್ಧ ಎಂದು ಅವರು ಸವಾಲು ಹಾಕಿದರು.

