ಪೆನ್‌ಡ್ರೈವ್ ಪ್ರಕರಣ|13,712 ಪುಟಗಳ ಆರೋಪಪಟ್ಟಿ ಸಲ್ಲಿಕೆ; 39 ಮಂದಿ ವಿರುದ್ಧ ದೋಷಾರೋಪ
x

ಪೆನ್‌ಡ್ರೈವ್ ಪ್ರಕರಣ|13,712 ಪುಟಗಳ ಆರೋಪಪಟ್ಟಿ ಸಲ್ಲಿಕೆ; 39 ಮಂದಿ ವಿರುದ್ಧ ದೋಷಾರೋಪ

ಪ್ರಕರಣದಲ್ಲಿ ವೈಯಕ್ತಿಕ ದ್ವೇಷ ಮಾತ್ರವಲ್ಲದೆ ರಾಜಕೀಯ ಲಾಭದ ಉದ್ದೇಶವೂ ಎದ್ದು ಕಾಣುತ್ತಿದೆ. ಆರೋಪ ಪಟ್ಟಿಯಲ್ಲಿ ಹೆಸರಿಸಲಾದ 39 ಆರೋಪಿಗಳಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರೂ ಇದ್ದಾರೆ.


ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಹಾಸನದಲ್ಲೇ 70 ಪೆನ್‌ಡ್ರೈವ್‌ಗಳನ್ನು ಖರೀದಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಪೆನ್‌ಡ್ರೈವ್ ಹಂಚಿಕೆ ಮತ್ತು ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಿದ್ಧಪಡಿಸಿರುವ ಆರೋಪಪಟ್ಟಿಯಲ್ಲಿ ಹಲವು ಮಾಹಿತಿಗಳನ್ನು ಹಂಚಿಕೆ ಮಾಡಲಾಗಿದೆ.

ತನಿಖಾಧಿಕಾರಿಗಳು ನಡೆಸಿದ ತನಿಖೆ, ಸಾಕ್ಷಿಗಳ ವಿಚಾರಣೆ ಮತ್ತು ವೈಜ್ಞಾನಿಕ ಪುರಾವೆಗಳನ್ನು ಈ ದೋಷಾರೋಪ ಪಟ್ಟಿಯಲ್ಲಿ ಕ್ರೋಢೀಕರಿಸಲಾಗಿದೆ. ದೋಷಾರೋಪ ಪಟ್ಟಿಯಲ್ಲಿ ಒಟ್ಟು 52 ಜನರ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಈ ಪೈಕಿ 39 ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ. ಈ 39 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

70 ಪೆನ್‌ಡ್ರೈವ್‌ಗಳ ರಹಸ್ಯ

2024ರ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಹಾಸನ ಜಿಲ್ಲೆಯಲ್ಲಿ ನೂರಾರು ಪೆನ್‌ಡ್ರೈವ್‌ಗಳು ಪತ್ತೆಯಾಗಿದ್ದವು. ಈ ಪೆನ್‌ಡ್ರೈವ್‌ಗಳಲ್ಲಿ ಮಾಜಿ ಸಂಸದ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ನೂರಾರು ಅಶ್ಲೀಲ ವೀಡಿಯೋಗಳಿದ್ದವು. ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಂಚಿಕೆಯಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು. ಈ ಬಗ್ಗೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಯಿತು.

ತನಿಖೆಯ ವೇಳೆ ಬಯಲಾದ ಅತ್ಯಂತ ಅಚ್ಚರಿಯ ಸಂಗತಿಯೆಂದರೆ, ಆರೋಪಿಗಳು ಈ ವೀಡಿಯೋಗಳನ್ನು ಹಂಚಲೆಂದೇ ಹಾಸನದ ಸ್ಥಳೀಯ ಅಂಗಡಿಗಳಲ್ಲಿ ಸುಮಾರು 70 ಪೆನ್‌ಡ್ರೈವ್‌ಗಳನ್ನು ಖರೀದಿಸಿದ್ದರು. ಯೋಜಿತವಾಗಿ ಈ ವೀಡಿಯೋಗಳನ್ನು ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ ಕೇವಲ ವೈಯಕ್ತಿಕ ದ್ವೇಷ ಮಾತ್ರವಲ್ಲದೆ, ರಾಜಕೀಯ ಲಾಭದ ಉದ್ದೇಶವೂ ಎದ್ದು ಕಾಣುತ್ತಿದೆ. ಎಸ್‌ಐಟಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾದ 39 ಆರೋಪಿಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಕಾರ್ಯಕರ್ತರಿದ್ದಾರೆ.

ನವೀನ್ ಗೌಡ ಪ್ರಕರಣದ ಮೊದಲ ಆರೋಪಿಯಾಗಿದ್ದು, ಕಾರ್ತಿಕ್.ಎನ್ ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ವೀಡಿಯೋಗಳನ್ನು ಸಂಗ್ರಹಿಸಿ ಹೊರಹಾಕಿದ ಪ್ರಮುಖ ಸೂತ್ರಧಾರಿ ಎನ್ನಲಾಗಿದೆ. ಮೂರನೇ ಆರೋಪಿ ಚೇತನ್.ಬಿ.ಸಿ, ನಾಲ್ಕನೇ ಆರೋಪಿ ಚೇತನ್.ವೈ.ಎಸ್, ಐದನೇ ಆರೋಪಿ ಲಿಖಿತ್ ಗೌಡ ವೀಡಿಯೋಗಳನ್ನು ವೈರಲ್ ಮಾಡಿದ್ದರು ಎಂದು ಹೇಳಲಾಗಿದೆ. ಮಹಿಳೆಯರ ಸಮ್ಮತಿಯಿಲ್ಲದೆ ಚಿತ್ರೀಕರಿಸಲಾದ ವೀಡಿಯೋಗಳನ್ನು ಡಿಜಿಟಲ್ ರೂಪದಲ್ಲಿ ಹಂಚಿಕೆ ಮಾಡುವುದು ಗಂಭೀರ ಅಪರಾಧವಾಗಿದೆ. ಕೆಲವು ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳ ಮೂಲಕ ವಾಟ್ಸಾಪ್ ಮತ್ತು ಇತರ ಆಪ್‌ಗಳಲ್ಲಿ ಈ ವೀಡಿಯೋಗಳನ್ನು ವ್ಯಾಪಕವಾಗಿ ಹಂಚಿಕೊಂಡಿರುವುದು ತಾಂತ್ರಿಕವಾಗಿ ದೃಢಪಟ್ಟಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

277 ಸಾಕ್ಷಿಗಳ ಹೇಳಿಕೆ ದಾಖಲು

ತನಿಖಾ ತಂಡವು ಈ ಪ್ರಕರಣವನ್ನು ಅತ್ಯಂತ ವೈಜ್ಞಾನಿಕವಾಗಿ ತನಿಖೆ ಮಾಡಿದೆ. ಒಟ್ಟು 277 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ ಸಂತ್ರಸ್ತ ಮಹಿಳೆಯರು, ಪೆನ್‌ಡ್ರೈವ್ ಮಾರಾಟ ಮಾಡಿದ ಅಂಗಡಿ ಮಾಲೀಕರು ಮತ್ತು ವೀಡಿಯೋಗಳನ್ನು ಮೊದಲು ನೋಡಿದ ವ್ಯಕ್ತಿಗಳು ಸೇರಿದ್ದಾರೆ.

ಅಷ್ಟೇ ಅಲ್ಲದೆ, ಮೊಬೈಲ್ ಫೋನ್‌ಗಳು ಮತ್ತು ಪೆನ್‌ಡ್ರೈವ್‌ಗಳನ್ನು ಹೈದರಾಬಾದ್‌ನ ಫೋರೆನ್ಸಿಕ್ ಸೈನ್ಸ್ ಲ್ಯಾಬ್ ಗೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದ ವರದಿಗಳು ಆರೋಪಿಗಳ ವಿರುದ್ಧ ತಾಂತ್ರಿಕ ಪುರಾವೆಗಳನ್ನು ಒದಗಿಸಿವೆ. ವೀಡಿಯೋಗಳು ಯಾವ ಮೊಬೈಲ್‌ನಿಂದ ಸೃಷ್ಟಿಯಾದವು ಮತ್ತು ಯಾವ ಐಪಿ ವಿಳಾಸದ ಮೂಲಕ ಹಂಚಿಕೆಯಾದವು ಎಂಬುದನ್ನು ಎಸ್‌ಐಟಿ ಪತ್ತೆಹಚ್ಚಿದೆ.

ಪ್ರೀತಂಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ರಿಲೀಫ್

ಈ ಪ್ರಕರಣದಲ್ಲಿ ಆರಂಭದಿಂದಲೂ ಕೇಳಿಬರುತ್ತಿದ್ದ ಕೆಲವು ಪ್ರಮುಖ ಹೆಸರುಗಳಿಗೆ ಈಗ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿದೆ. ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತರಾದ ಶರತ್ ಮತ್ತು ಕಿರಣ್, ಹಾಗೆಯೇ ಸಂಸದ ಶ್ರೇಯಸ್ ಪಟೇಲ್ ಅವರ ಆಪ್ತ ಪುಟ್ಟರಾಜು ಅವರನ್ನು ಈ ಪ್ರಕರಣದಿಂದ ಕೈಬಿಡಲಾಗಿದೆ.

ಆರಂಭದಲ್ಲಿ ಇವರು ಪೆನ್‌ಡ್ರೈವ್ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಎಸ್‌ಐಟಿ ನಡೆಸಿದ ಆಳವಾದ ತನಿಖೆಯಲ್ಲಿ ಇವರು ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಬಲವಾದ ಸಾಕ್ಷ್ಯಗಳು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ 13,712 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಇವರ ಹೆಸರುಗಳನ್ನು ಕೈಬಿಡಲಾಗಿದ್ದು, ಇವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಇದು ಹಾಸನದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Read More
Next Story