Assembly Session | There is no data on small industries in the government: T.A. Sravana outrage
x

ವಿಧಾನಪರಿಷತ್‌ ಸದಸ್ಯ ಟಿ.ಎ. ಶರವಣ

Assembly Session| ಸಣ್ಣ ಕೈಗಾರಿಕೆಗಳ ಬಗ್ಗೆ ಸರ್ಕಾರದಲ್ಲೇ ದತ್ತಾಂಶವಿಲ್ಲ!

ಸಣ್ಣ ಕೈಗಾರಿಕೆ ಇಲಾಖೆ ಮತ್ತು ಅಭಿವೃದ್ಧಿ ನಿಗಮಗಳಿದ್ದರೂ, ಮುಚ್ಚಿಹೋದ ಕೈಗಾರಿಕೆಗಳ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಧಾನಪರಿಷತ್‌ ಸದಸ್ಯ ಟಿ.ಎ. ಶರವಣ ತಿಳಿಸಿದರು.


Click the Play button to hear this message in audio format

ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದ್ದರೂ ಅವುಗಳ ಬಗ್ಗೆ ದತ್ತಾಂಶವಿಲ್ಲ ಎಂಬುದಾಗಿ ಹೇಳುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು, ಇದೊಂದು ದಪ್ಪ ಚರ್ಮದ ಸರ್ಕಾರ ಎಂದು ವಿಧಾನ ಪರಿಷತ್ ಶಾಸಕ ಟಿ.ಎ. ಶರವಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ (ಮಾ.17) ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯ ಉದ್ದಿಮೆಗಳ ಇಲಾಖೆಗೆ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಮರ್ಪಕ ಮಾಹಿತಿ ನೀಡಿಲ್ಲ. ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದ್ದರೂ ಅವುಗಳ ಬಗ್ಗೆ ದತ್ತಾಂಶವಿಲ್ಲ. ರಾಜ್ಯದಲ್ಲಿ ಎಷ್ಟು ಕೈಗಾರಿಕೆಗಳು ಮುಚ್ಚಿವೆ ಎಂಬ ಪ್ರಶ್ನೆಗೆ ಸಚಿವರು 'ಮಾಹಿತಿ ಇಲ್ಲ' ಎಂದು ಉತ್ತರ ನೀಡಿದ್ದಾರೆ ಎಂದರು.

ಕೆಲಸ ಮಾಡದ ಸಚಿವರು ಹಾಗೂ ಇಲಾಖೆಗಳು ಏಕೆ ಕಾರ್ಯ ನಿರ್ವಹಿಸಬೇಕು. ಸಣ್ಣ ಕೈಗಾರಿಕೆ ಇಲಾಖೆ ಮತ್ತು ಅಭಿವೃದ್ಧಿ ನಿಗಮಗಳಿದ್ದರೂ, ಮುಚ್ಚಿಹೋದ ಕೈಗಾರಿಕೆಗಳ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಎಷ್ಟು ಕೈಗಾರಿಕೆಗಳು ಮುಚ್ಚಿವೆ ಮತ್ತು ಅದಕ್ಕೆ ಕಾರಣಗಳೇನು ಎಂಬ ಕನಿಷ್ಠ ಜ್ಞಾನವೂ ಇಲ್ಲದ ಮೇಲೆ ಇಲಾಖೆಯನ್ನು ಮುಚ್ಚಿಬಿಡಿ. ಸರ್ಕಾರದ ವೈಫಲ್ಯದಿಂದ ನುಣುಚಿಕೊಳ್ಳುವ ಇಂತಹ ಸಚಿವರಿಗೆ ಸಣ್ಣ ಕೈಗಾರಿಕೆ ಪೋರ್ಟ್‌ಫೋಲಿಯೋ ಕಿತ್ತು ಹಾಕಬೇಕು. ಇದಕ್ಕೆ ಸಚಿವಗಿರಿಯಾದರೂ ಏಕೆ ಬೇಕು ಎಂದು ಪ್ರಶ್ನಿಸಿದರು.

ಯುವಕರ ಭವಿಷ್ಯದ ಜತೆ ಚೆಲ್ಲಾಟ

ಸರ್ಕಾರವು ಉತ್ತರ ಕೊಡಲಾಗದೆ ಕೇವಲ ರಿಸರ್ವ್ ಬ್ಯಾಂಕ್ ಗೈಡ್‌ಲೈನ್ಸ್‌ಗಳನ್ನು ಕಳುಹಿಸಿ ಕೈತೊಳೆದುಕೊಳ್ಳುತ್ತಿದೆ. ಆ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು, ಇದಕ್ಕಾಗಿ ಸರ್ಕಾರವೇ ಬೇಕಿಲ್ಲ. ಸಣ್ಣ ಕೈಗಾರಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಪಾಲಿಸಿ ಏನೆಂಬುದು ಈವರೆಗೆ ಬಹಿರಂಗಗೊಂಡಿಲ್ಲ. ಯಾವುದೇ ದೂರದೃಷ್ಟಿ ಇಲ್ಲದ ಸರ್ಕಾರ ಯುವಕರ ಭವಿಷ್ಯದ ಜೊತೆ ಆಟವಾಡುತ್ತಿದೆ. ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ನೆರವು ಸಿಗದ ಕಾರಣ ಹುಬ್ಬಳ್ಳಿಯಲ್ಲಿ ಯುವಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಸರ್ಕಾರದ ವೈಫಲ್ಯಕ್ಕೆ ಸಿಕ್ಕ ಎಚ್ಚರಿಕೆಯ ಸಂದೇಶ ಎಂದರು.

ವಿದ್ಯುತ್‌ ರಿಯಾಯಿತಿ, ಬಡ್ಡಿ ರಹಿತ ಸಾಲ ನೀಡಲಿ

ಸಣ್ಣ ಕೈಗಾರಿಕೆಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಸರ್ಕಾರಿ ನೌಕರಿ ಮೇಲಿನ ಒತ್ತಡ ಕಡಿಮೆ ಮಾಡುತ್ತಿದ್ದವು. ಆದರೆ ಇಂದು ಸಹಾಯ ನೀಡದೆ ಅವುಗಳನ್ನು ವಿನಾಶದ ಅಂಚಿಗೆ ತಂದು ಉದ್ಯೋಗ ಸೃಷ್ಟಿಗೆ ಕಲ್ಲು ಹಾಕಲಾಗುತ್ತಿದೆ. ಜಿಲ್ಲಾ ಮಟ್ಟದ ಆರ್ಥಿಕ ಸ್ಥಿತಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಬುಡಮೇಲು ಮಾಡುತ್ತಿರುವ ಈ ಸರ್ಕಾರಕ್ಕೆ ಯುವಕರಿಗೆ ಘನತೆಯ ಬದುಕು ಕೊಡುವ ಇಚ್ಛಾಶಕ್ತಿಯಿಲ್ಲ. ಸಣ್ಣ ಕೈಗಾರಿಕೆಗಳು ಕೇವಲ ವ್ಯಾಪಾರವಲ್ಲ, ಅವು ಲಕ್ಷಾಂತರ ಗ್ರಾಮೀಣ ಯುವಕರ ವೃತ್ತಿಜೀವನ ಮತ್ತು ಘನತೆಯ ಪ್ರಶ್ನೆ. ಸರ್ಕಾರವು ಕೈಗಾರಿಕೆಗಳಿಗೆ ಅಗತ್ಯವಾದ ವಿದ್ಯುತ್ ರಿಯಾಯಿತಿ, ಬಡ್ಡಿ ರಹಿತ ಸಾಲ ಮತ್ತು ಮಾರುಕಟ್ಟೆ ಸೌಲಭ್ಯ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ಬೇಜವಾಬ್ದಾರಿ ನೀತಿಯಿಂದಾಗಿ ಉದ್ಯಮಿಗಳು ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವರ ಸಮರ್ಥನೆ

ಸಣ್ಣ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪೂರ್ ಪ್ರತಿಕ್ರಿಯಿಸಿ, "ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನೋಂದಣಿ ಕೇಂದ್ರ ಸರ್ಕಾರದ 'ಉದ್ಯಮ್' ತಂತ್ರಾಂಶದಲ್ಲಿ ನಡೆಯುವುದರಿಂದ, ಮುಚ್ಚಲ್ಪಟ್ಟ ಘಟಕಗಳ ನಿಖರ ಮಾಹಿತಿ ಪಡೆಯುವ ವ್ಯವಸ್ಥೆ ಇಲಾಖೆಯಲ್ಲಿ ಸದ್ಯಕ್ಕೆ ಲಭ್ಯವಿಲ್ಲ. ಆದರೆ ಕೈಗಾರಿಕೆಗಳು ಜಾಗತಿಕ ಪೈಪೋಟಿ ಮತ್ತು ಬಂಡವಾಳದ ಕೊರತೆಯಿಂದ ಮುಚ್ಚುತ್ತಿರಬಹುದು. ಈ ಘಟಕಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಾಯಬಲ್ ಪ್ರೋಗ್ರಾಂ (Viable Program) ರೂಪಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಲಾಗುವುದು," ಎಂದರು.

Read More
Next Story