
ಕಾಂಗ್ರೆಸ್ ಭವನಕ್ಕೆ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿರುವ ಸ್ಥಳೀಯ ಸಂಸ್ಥೆಗಳು
ಕಾಂಗ್ರೆಸ್ ಭವನಗಳಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಜಮೀನು: ಬಿಜೆಪಿ ದಾಖಲೆ ಬಿಡುಗಡೆ
ನಗರ ಸ್ಥಳೀಯ ಸಂಸ್ಥೆಗಳು ಸರ್ಕಾರ ಪ್ರಸ್ತಾವನೆಗೆ ಸಲ್ಲಿಸಿರುವ ಮಾಹಿತಿ ಬಹಿರಂಗವಾಗಿದ್ದು, ಮಾರುಕಟ್ಟೆ ಮೌಲ್ಯ ಹಾಗೂ ರಿಯಾಯಿತಿದರದಲ್ಲಿ ನೀಡಿರುವ ಮೊತ್ತವನ್ನು ಉಲ್ಲೇಖಿಸಿ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ರಾಜ್ಯದಲ್ಲಿ ನೂರು ಕಾಂಗ್ರೆಸ್ ಭವನಗಳನ್ನು ನಿರ್ಮಿಸಲು ಪಣ ತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರನ್ನು ಕರೆಸಿ ಉದ್ಘಾಟಿಸುವ ಉತ್ಸಾಹದಲ್ಲಿದ್ದಾರೆ. ಆದರೆ ಸರ್ಕಾರವೇ ಕೋಟ್ಯಂತರ ರೂ. ಬೆಲೆ ಬಾಳುವ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಕಚೇರಿಗಳಿಗೆ ಕಡಿಮೆ ಬೆಲೆಗೆ ನೀಡಿದೆ ಎಂದು ದಾಖಲೆ ಸಮೇತ ಬಿಜೆಪಿ ಆರೋಪಿಸಿದೆ.
ಇತ್ತೀಚೆಗೆ ಮುಕ್ತಾಯವಾದ ವಿಶೇಷ ಅಧಿವೇಶನದಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, ನಗರ ಸ್ಥಳೀಯ ಸಂಸ್ಥೆಗಳು ಸರ್ಕಾರ ಪ್ರಸ್ತಾವನೆಗೆ ಸಲ್ಲಿಸಿರುವ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಮಾರುಕಟ್ಟೆ ಮೌಲ್ಯ ಹಾಗೂ ರಿಯಾಯಿತಿದರದಲ್ಲಿ ನೀಡಿರುವ ಮೊತ್ತವನ್ನು ಉಲ್ಲೇಖಿಸಿದೆ.
ಎಲ್ಲೆಲ್ಲಿ ಮಂಜೂರಿಗೆ ಪ್ರಸ್ತಾವನೆ ?
* ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣ ಪಂಚಾಯಿತಿಯ 400.63 ಚ. ಮೀಟರ್ ವಿಸ್ತೀರ್ಣದ 21,03 ಲಕ್ಷ ರೂ, ಮೌಲ್ಯದ ಜಮೀನನ್ನು 1,05 ಲಕ್ಷ ರೂ. ಗೆ.
* ಧಾರವಾಡ ಜಿಲ್ಲೆ ನವಲಗುಂದ ಪುರಸಭೆಯ 1,287.77 ಚ. ಮೀಟರ್ ವಿಸ್ತೀರ್ಣದ 38,60 ಲಕ್ಷ ರೂ. ಮೌಲ್ಯದ ಜಮೀನನ್ನು 1,93 ಲಕ್ಷ ರೂ, ಅಣ್ಣಿಗೇರಿ ಪುರಸಭೆಯ 1,668.80 ಚ. ಮೀಟರ್ ವಿಸ್ತೀರ್ಣದ 31,70 ಲಕ್ಷ ರೂ. ಮೌಲ್ಯದ ಜಾಗವನ್ನು 1,58 ಲಕ್ಷ ರೂ. ಗೆ.
* ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪುರಸಭೆಯ 4,200 ಚ. ಮೀಟರ್ ವಿಸ್ತಿರ್ಣದ 40,98 ಲಕ್ಷ ರೂ. ಮೌಲ್ಯ ಜಮೀನನ್ನು 2,04 ಲಕ್ಷ ರೂ. ಗೆ.
* ಕಲಬುರಗಿ ಜಿಲ್ಲೆಯ ಅಫಜಲಪೂರ ಪುರಸಭೆಯ 1,120 ಚ. ಮೀಟರ್ ವಿಸ್ತಿರ್ಣದ 50,42 ಲಕ್ಷ ರೂ. ಮೌಲ್ಯದ ಜಾಗವನ್ನು 2,52 ಲಕ್ಷ ರೂ. ಗೆ.
* ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪುರಸಭೆಯ 11,50 ಲಕ್ಷ ರೂ. ಮೌಲ್ಯದ ಜಾಗವನ್ನು 57,500 ರೂ. ಗೆ. ಆನವಟ್ಟಿ ಪಟ್ಟಣ ಪಂಚಾಯಿತಿಯ 390.13 ಚ. ಮೀಟರ್ ವಿಸ್ತೀರ್ಣದ 21,45 ಲಕ್ಷ ರೂ. ಮೌಲ್ಯದ ಜಾಗವನ್ನು 1,07 ಲಕ್ಷ ರೂ. ಗೆ.
* ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪುರಸಭೆಯ 7,200 ಚ. ಮೀಟರ್ ವಿಸ್ತೀರ್ಣದ 32,77 ಲಕ್ಷ ರೂ. ಮೌಲ್ಯದ ಜಾಗವನ್ನು 1,63 ಲಕ್ಷ ರೂ. ಗೆ.
* ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಪುರಸಭೆಯ 420.00 ಚ. ಮೀಟರ್ ವಿಸ್ತೀರ್ಣದ 17,32 ಲಕ್ಷ ರೂ. ಮೌಲ್ಯದ ಜಾಗವನ್ನು 86,625 ರೂ. ಗೆ
* ರಾಯಚೂರು ಜಿಲ್ಲೆ ಮಾನವಿ ಪುರಸಭೆಯ 303 ಚ. ಮೀಟರ್ ವಿಸ್ತೀರ್ಣದ 16,05 ಲಕ್ಷ ರೂ. ಮೌಲ್ಯದ ಜಾಗವನ್ನು 80,295 ರೂ. ಗೆ.
* ಯಾದಗಿರಿ ಜಿಲ್ಲೆ ಶಹಾಪುರ ನಗರಸಭೆಯ 2,175 ಚ. ಮೀಟರ್ ವಿಸ್ತೀರ್ಣದ 95,82 ಲಕ್ಷ ರೂ. ಮೌಲ್ಯದ ಜಾಗವನ್ನು 4,79 ಲಕ್ಷ ರೂ. ಗೆ
* ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರಸಭೆಯ 1,816 ಚ. ಮೀಟರ್ ವಿಸ್ತೀರ್ಣದ 1,08 ಕೋಟಿ. ರೂ. ಮೌಲ್ಯದ ಜಾಗವನ್ನು 5,44 ಲಕ್ಷ ರೂ. ಗೆ ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದೆ.
ಕಾಂಗ್ರೆಸ್ ಟ್ರಸ್ಟ್‌ಗೆ ಈಗಾಗಲೇ ವರ್ಗಾಯಿಸಿರುವ ಜಾಗ
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ವಿವೇಕಾನಂದ ನಗರ ಬಡಾವಣೆಯಲ್ಲಿ 1,457.8 ಚ.ಮೀ ವಿಸ್ತೀರ್ಣದ ಭೂಮಿ ಮಂಜೂರು ಮಾಡಲಾಗಿದ್ದು, ಇದರ ಮೌಲ್ಯ 1.45 ಕೋಟಿ ರೂ. ಮಾನವಿ ನಗರ ಯೋಜನಾ ಪ್ರಾಧಿಕಾರದಿಂದ 707.47 ಚ. ಮೀ ಭೂಮಿ ಮಂಜೂರು ಮಾಡಲಾಗಿದೆ. ರಾಯಚೂರಿನ ಲಿಂಗಸಗೂರು ನಗರ ಯೋಜನಾ ಪ್ರಾಧಿಕಾರದಿಂದ 1068 ಚ.ಮೀ ಭೂಮಿ ಮಂಜೂರು ಮಾಡಲಾಗಿದ್ದು, ಇದರ ಮೌಲ್ಯ 46.99 ಲಕ್ಷ ರೂಪಾಯಿ. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಇದರ ಮೌಲ್ಯ ಎಕರೆಗೆ 1.70 ಕೋಟಿ ರೂ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಒಡೆತನದಲ್ಲಿದ್ದ ಹುಬ್ಬಳ್ಳಿ ತಾಲ್ಲೂಕು ಸಿಟಿಎಸ್ ನಂ. 4553/ಬಿ ಆಸ್ತಿಯನ್ನು ಮಂಜೂರು ಮಾಡಲಾಗಿದೆ. ಇದರ ವಿಸ್ತೀರ್ಣ 2988.29 ಚ.ಮೀ ಆಗಿದ್ದು, ಇದರ ಮೌಲ್ಯದ ಬಗ್ಗೆ ಮಾಹಿತಿ ನೀಡಲಾಗಿಲ್ಲ.
ಮುಂದುವರಿದು, ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದಿಂದ 3,404.26 ಚ.ಮೀ ವಿಸ್ತೀರ್ಣದ ಜಮೀನು ಮಂಜೂರು ಮಾಡಲಾಗಿದ್ದು, ಇದರ ಮೌಲ್ಯ 4.8 ಕೋಟಿ ರೂ. ಬಾದಾಮಿ ನಗರ ಯೋಜನಾ ಪ್ರಾಧಿಕಾರದಿಂದ ಬಾದಾಮಿ ಪಟ್ಟಣದಲ್ಲಿ 613 ಚ.ಮೀ ವಿಸ್ತೀರ್ಣದ ಜಮೀನು ಮಂಜೂರು ಮಾಡಲಾಗಿದ್ದು, ಇದರ ಮೌಲ್ಯ 24.52 ಲಕ್ಷ ರೂ. ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದಿಂದ ಕೊಪ್ಪಳದಲ್ಲಿ 3,749.85 ಚ.ಮೀ ವಿಸ್ತೀರ್ಣದ ಜಮೀನು ಮಂಜೂರು ಮಾಡಲಾಗಿದೆ. ಇದರ ಮೌಲ್ಯ 1.31 ಕೋಟಿ ರೂ. ಚನ್ನರಾಯಪಟ್ಟಣ ನಗರ ಯೋಜನಾ ಪ್ರಾಧಿಕಾರದಿಂದ 210 ಚ.ಮೀ ಭೂಮಿ ಮಂಜೂರು ಮಾಡಲಾಗಿದ್ದು, ಇದರ ಮೌಲ್ಯ 27.20 ಲಕ್ಷ ರೂ. ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲಾಗಿದೆ ಎಂದು ಬಿಜೆಪಿ ಬಿಡುಗಡೆ ಮಾಡಿರುವ ದಾಖಲೆ ತಿಳಿಸಿದೆ.
ಹಿನ್ನೆಲೆ
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಆವರಣದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಭವನ ನಿರ್ಮಿಸುವುದು ಮಾತ್ರವಲ್ಲದೇ, ರಾಜ್ಯದ ವಿವಿಧೆಡೆ ಒಟ್ಟು ನೂರು ಭವನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಕೆಲಸಗಳು ನಡೆಯುತ್ತಿವೆ. ಕೆಲ ಶಾಸಕರು ಸ್ವಂತ ಖರ್ಚಿನಲ್ಲಿ ನಿವೇಶನಗಳನ್ನು ಖರೀದಿಸಿ, ಕಾಂಗ್ರೆಸ್ ಭವನ ನಿರ್ಮಾಣಕ್ಕೆ ನೀಡಿದ್ದಾರೆ. ಇನ್ನೊಂದಷ್ಟು ಕಡೆಗಳಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರಕಾರಿ ಭೂಮಿಯನ್ನು ಕಡಿಮೆ ಬೆಲೆಗೆ ಸರಕಾರಿ ಸಂಸ್ಥೆಗಳು ಹಸ್ತಾಂತರಿಸಿವೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆಗೆ ಸ್ಥಳೀಯ ಶಾಸಕರುಗಳು ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದು, ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಮತ್ತೊಂದೆಡೆ ಈ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ದೇಣಿಗೆ ರೂಪದಲ್ಲಿ ಸಾರ್ವಜನಿಕರಿಂದ ಮಾತ್ರವಲ್ಲದೇ ಪಕ್ಷದ ಕಾರ್ಯಕರ್ತರು, ಶಾಸಕರು, ಸಚಿವರಿಂದಲೂ ಹಣ ಸಂಗ್ರಹಿಸಲಾಗುತ್ತಿದೆ.
ದೇಣಿಗೆ ಸಂಗ್ರಹ ಹೇಗೆ?
ಕಾಂಗ್ರೆಸ್ ಪಕ್ಷವು ಡಿಜಿಟಲ್ ಪಾವತಿ ಮತ್ತು ಚೆಕ್ ಮೂಲಕ ದೇಣಿಗೆ ಸ್ವೀಕರಿಸುತ್ತಿದ್ದು, ಪಕ್ಷದ ಅಧಿಕೃತ ಕ್ಯೂಆರ್ ಕೋಡ್ ಬಳಸುವ ಮೂಲಕ ಸಣ್ಣ ಮೊತ್ತದಿಂದ ದೊಡ್ಡ ಮೊತ್ತದವರೆಗೆ ದೇಣಿಗೆ ನೀಡಬಹುದು. ಕೆಪಿಸಿಸಿಯ ಅಧಿಕೃತ ವೆಬ್‌ಸೈಟ್ ಮೂಲಕವೂ ಹಣ ಪಾವತಿಸಲು ಅವಕಾಶವಿದೆ. ಹೆಚ್ಚಿನ ಮೊತ್ತದ ದೇಣಿಗೆಯನ್ನು ಚೆಕ್ ಅಥವಾ ಡಿಡಿ ಮೂಲಕ ನೀಡಲು ಸೂಚಿಸಲಾಗಿದೆ.
ಕೋಟಿಗಟ್ಟಲೆ ಹಣ ಸಂಗ್ರಹ?
ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಅರ್ಜಿ ಖರೀದಿಗೆ ಬರೊಬ್ಬರಿ 2 ಲಕ್ಷ ರೂ.ಗಳ ಮೊತ್ತ ನಿಗದಿಪಡಿಸಿದ್ದ ಡಿ.ಕೆ.ಶಿವಕುಮಾರ್ , ಈ ಹಣವನ್ನು ಕಾಂಗ್ರೆಸ್ ಪಕ್ಷದ ಭವನ ನಿರ್ಮಾಣಕ್ಕೆ ಬಳಸಿಕೊಳ್ಳುವುದಾಗಿ ಹೇಳಿದ್ದರು.
ರಾಮನಗರದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸುವ ವೇಳೆ ವೇದಿಕೆಯಲ್ಲಿಯೇ ಸಚಿವರು, ಶಾಸಕರುಗಳು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಲಕ್ಷದಿಂದ ಕೋಟಿಗಟ್ಟಲೆ ವರೆಗೂ ಹಣ ನೀಡುವುದಾಗಿ ಹೇಳಿಕೆ ನೀಡಿದ್ದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ಬರೊಬ್ಬರಿ ಒಂದು ಕೋಟಿ ಹಣ ನೀಡುವುದಾಗಿ ಹೇಳಿದ್ದರು. ಈ ಬೆನ್ನಲೆ ಶಾಸಕರಾದ ಸಿ.ಪಿ.ಯೋಗೇಶ್ವರ್, ಎಚ್.ಸಿ.ಬಾಲಕೃಷ್ಣ ತಲಾ 25 ಲಕ್ಷ ಹಣ ನೀಡುವುದಾಗಿ ಘೋಷಿಸಿಕೊಂಡರು. ಗ್ಯಾರಂಟಿ ಯೋಜನೆಗಳ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ 10 ಲಕ್ಷ, ಎಂಎಲ್ಸಿ ಎಸ್.ರವಿ 5 ಲಕ್ಷ ರೂಗಳನ್ನು ನೀಡುವುದಾಗಿ ಒಪ್ಪಿಕೊಂಡರು.
ಜತೆಗೆ ಮಾಗಡಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಡಿ.ಕೆ.ಶಿವಕುಮಾರ್ ಒಂದು ಕೋಟಿ ನೀಡಲಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ಇದೇ ಮಾದರಿಯಲ್ಲಿ ಒಂದಷ್ಟು ಶಾಸಕರುಗಳು ಭವನ ನಿರ್ಮಾಣಕ್ಕೆ ಭೂಮಿ ಮಾತ್ರವಲ್ಲದೇ, ಕೋಟಿಗಟ್ಟಲೆ ಹಣ ನೀಡುವುದಾಗಿ ಘೋಷಿಸಿಕೊಂಡು, ಈಗಾಗಲೇ ಬಹುತೇಕ ಹಣ ಪಾವತಿಸಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ದೇಣಿಗೆ ಸಂಗ್ರಹ ನಡೆದಿದೆ.

