
ಬಿಎಸ್‌ವೈಗೆ 13 ಪ್ರಶ್ನೆ ಕೇಳಿದ ಉಚ್ಚಾಟಿತ ಶಾಸಕ; ಸಂಚಲನ ಸೃಷ್ಟಿಸಿದ ಎಸ್.ಟಿ.ಸೋಮಶೇಖರ್ ಪತ್ರ
ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಚಿಹ್ನೆಯಡಿ ಗೆಲುವು ಸಾಧಿಸಿದ್ದರು.
ರಾಜ್ಯ ಬಿಜೆಪಿಯಿಂದ ಉಚ್ಛಾಟಿತರಾಗಿರುವ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಧೋರಣೆ ಪ್ರಶ್ನಿಸಿರುವುದು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.
ಕಾಂಗ್ರೆಸ್ ನಾಯಕರೊಂದಿಗೆ ಗುರುತಿಸಿಕೊಳ್ಳುವ ಮೂಲಕ ಎಸ್.ಟಿ.ಸೋಮಶೇಖರ್ ಅವರು ಹಲವು ವದಂತಿಗಳಿಗೆ ಕಾರಣರಾಗಿದ್ದರು. ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಹಿನ್ನೆಲೆ ಇತ್ತೀಚೆಗೆ ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಎಸ್.ಟಿ. ಸೋಮಶೇಖರ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದವು. ಇದೀಗ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಪಕ್ಷದೊಳಗಿನ ಬೆಳವಣಿಗೆಗಳ ಬಗ್ಗೆ ಅಸಮಾಧಾನ ಹೊರಹಾಕಿ, ಬಿಎಸ್‌ವೈಗೆ ಪತ್ರ ಬರೆದಿರುವುದು ಕುತೂಹಲ ಕೆರಳಿಸಿದೆ.
ಬಿಎಸ್‌ವೈಗೆ ಬರೆದ ಪತ್ರದಲ್ಲಿ ಏನಿದೆ?
"ನೀವು ಸಿಎಂ ಆಗುತ್ತೀರಾ ಎಂಬ ಕಾರಣದಿಂದ ನಾವು ಯಾವುದೇ ಆಪೇಕ್ಷೆ ಇಲ್ಲದೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂದಿದ್ದೆವು. ನೀವು ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದರಿಂದ ನಿಮ್ಮ ಬಗ್ಗೆ ಅಪಾರ ಗೌರವ ಇಂದಿಗೂ ಇದೆ. ಕ್ಷೇತ್ರದಲ್ಲಿ ಸಮಸ್ಯೆಯಾದಾಗ ನನ್ನ ಮಗ ರಾಜ್ಯಾಧ್ಯಕ್ಷನಾಗುತ್ತಾನೆ. ಆಗ ಸರಿಪಡಿಸುತ್ತಾನೆ, ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡಿ ಎಂದು ಬುದ್ದಿಮಾತು ಹೇಳಿದ್ದಿರಿ. ಆದರೆ, ಈಗ ಪಕ್ಷದಿಂದ ಉಚ್ಚಾಟನೆ ಮಾಡಿದರೂ ಇಂದಿಗೂ ವಾಪಸ್ ಕರೆಸಿಕೊಂಡಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ (ಏ.1) ಪತ್ರ ಬರೆದಿರುವ ಅವರು, ಯಶವಂತಪುರ ಕ್ಷೇತ್ರಕ್ಕೆ ಮುಂದಿನ ಚುನಾವಣೆಯಲ್ಲಿ ಎಂ.ರುದ್ರೇಶ್ ಅವರಿಗೆ ಟಿಕೆಟ್ ನೀಡುವ ಕುರಿತು ಮಾತನಾಡಿದ್ದೀರಿ. ವಿಧಾನಸಭೆಯಲ್ಲಿ ನೈಸ್ ರಸ್ತೆ ವಿಷಯದ ಕುರಿತು ಮಾತನಾಡಿದ್ದಕ್ಕೆ ನನ್ನ ಬಗ್ಗೆ ಟೀಕಿಸಿ, "ಬಿಜೆಪಿಯಲ್ಲಿ ಯಾರ ಬೂಟ್ ನೆಕ್ಕಲು ಬಂದಿದ್ದೀಯಾ?" ಎಂದು ಪ್ರಶ್ನಿಸಿದ್ದಾರೆ. ಇದೆಲ್ಲಾ ನಿಮ್ಮ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟು, ಉತ್ತರಿಸುವಂತೆ ಮನವಿ ಮಾಡಿದ್ದಾರೆ.
ಎಸ್.ಟಿ.ಸೋಮಶೇಖರ್ ಪ್ರಶ್ನೆಗಳೇನು ?
* ಯಾವುದೇ ವ್ಯಕ್ತಿ ಬಿಜೆಪಿಗೆ ಬರಬೇಕೆಂದರೆ ಬೂಟ್ ನೆಕ್ಕಿ ಬರಬೇಕಾ?
* ಬೂಟ್ ನೆಕ್ಕುವ ಸಂಸ್ಕೃತಿ ಬಿಜೆಪಿ ಒಳಗೆ ಇದೆಯಾ?
* ಬಿಜೆಪಿಯಲ್ಲಿ ಹಾಗಾದರೆ ಬೂಟ್ ನೆಕ್ಕುವವರಿಗೆ ಮಾತ್ರ ಅವಕಾಶವೇ?
* ನಾನು ಯಾರ ಬೂಟನ್ನೂ ನೆಕ್ಕಿಲ್ಲ ಎನ್ನುವ ಕಾರಣಕ್ಕೆ ನನ್ನನ್ನು ಅಮಾನತು ಮಾಡಲಾಯಿತಾ?
* ನಾನು ಒಂದು ವೇಳೆ ಬಿಜೆಪಿಗೆ ಮರಳಬೇಕು ಎಂದರೆ ನಿಮ್ಮ ಬೂಟ್ ನೆಕ್ಕಬೇಕಾ?
* ನಿಮ್ಮ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಬೂಟ್ ನೆಕ್ಕಬೇಕಾ?
* ನೈಸ್'ನ ದತ್ತು ಪುತ್ರ ರುದ್ರೇಶ್'ಗೆ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಪಾರ್ಟಿಯ ಸಂಪೂರ್ಣ ಜವಾಬ್ದಾರಿ ನೀಡಿದ್ದಾರಾ?
* ಕರ್ನಾಟಕ ಬಿಜೆಪಿಯನ್ನು ಮುನ್ನಡೆಸುತ್ತಿರೋದು ವಿಜಯೇಂದ್ರ ಅವರಾ ಅಥವಾ ನೈಸ್ ದತ್ತು ಪುತ್ರನೊ?
* ನೈಸ್ ಇಂದ ಆದ ಸಮಸ್ಯೆ ಬಗ್ಗೆ ಸದನದಲ್ಲಿ ನಾನು ರೈತರ ಪರ ಪ್ರಶ್ನೆ ಮಾಡಿದರೆ ರುದ್ರೇಶ್ ಎನ್ನುವ ಕ್ಷುದ್ರಗ್ರಹಕ್ಕೆ ಏಕೆ ಅಸಮಾಧಾನ?
* ಇಂತಹ ಕ್ಷುದ್ರಗ್ರಹನನ್ನು ನೀವು ಬೆನ್ನಿಗೆ ಕಟ್ಟಿಕೊಂಡು ಓಡಾಡುತ್ತೀರಾ ಎನ್ನುವುದೊಂದೆ ಆತನ ಐಡೆಂಟಿಟಿ.
* ಹಾಗಾದರೆ ಆತನ ಹೇಳಿಕೆಗೆ ನಿಮ್ಮ ಸಹಮತ ಇದೆಯೆ?
* ಬೂಟ್ ನೆಕ್ಕಬೇಕು ಎಂದು ನೀವು ಮತ್ತು ವಿಜಯೇಂದ್ರ ಬಯಸುತ್ತಿದ್ದೀರಾ?
* ಕರ್ನಾಟಕದ ಯಾವುದೇ ವ್ಯಕ್ತಿ ಬಿಜೆಪಿಯಲ್ಲಿ ಬೆಳೆಯಬೇಕು ಎಂದರೆ ಯಾರ ಬೂಟ್ ನೆಕ್ಕಬೇಕು?
ಹೀಗೆ, ಸಾಲು ಸಾಲು ಪ್ರಶ್ನೆಗಳನ್ನು ಎತ್ತಿರುವ ಎಸ್.ಟಿ. ಸೋಮಶೇಖರ್ ಅವರು, ಪಕ್ಷದಲ್ಲಿ ಪ್ರಭಾವಿಗಳಾಗಿರುವ ನೀವು ಇದಕ್ಕೆ ಉತ್ತರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಪತ್ರದ ಬಗ್ಗೆ ಈವರೆಗೆ ಯಾವುದೇ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

