ಚುನಾವಣೆ ರಾಜಕೀಯದಿಂದ ಹಿಂದೆ ಸರಿ ಸಿದ್ದರಾಮಯ್ಯ; ಇದು ಹೊಸ ರಾಜಕೀಯ ತಂತ್ರವೇ?
ಅಹಿಂದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.

ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕಾರಣಕ್ಕೆ ವಿದಾಯ ಘೋಷಿಸಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಹೊಸ ರಾಜಕೀಯ ಬೆಳವಣಿಗೆಗಳಿಗೆ ನಾಂದಿ ಹಾಡಿದೆ. ಮೇ 28, 2026 ರಂದು ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಅವರ ಈ ಹೆಜ್ಜೆ ಕೇವಲ ಒಬ್ಬ ಹಿರಿಯ ನಾಯಕನ ವಿಶ್ರಾಂತಿಯಷ್ಟೇ ಅಲ್ಲ, ಬದಲಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಪರೋಕ್ಷ ಒತ್ತಡದ ಕೇಂದ್ರವಾಗಿ ಪರಿಣಮಿಸುವ ಸಾಧ್ಯತೆಗಳೇ ದಟ್ಟವಾಗಿವೆ.
ಚುನಾವಣೆಯಿಂದ ನಿವೃತ್ತಿ ಘೋಷಿಸಿದ ಮಾತ್ರಕ್ಕೆ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವ ಕಡಿಮೆಯಾಗಿದೆ ಎಂದು ವಿಶ್ಲೇಷಿಸುವುದು ವಾಸ್ತವಕ್ಕೆ ದೂರ. ಶಾಸಕರ ಬಲ, ಹೈಕಮಾಂಡ್ ನಾಯಕರೊಂದಿಗಿನ ಸಂಪರ್ಕ ಮತ್ತು 'ಅಹಿಂದ' ಮತಬ್ಯಾಂಕ್ ಮೇಲಿನ ಹಿಡಿತದ ಮೂಲಕ ಅವರು ರಾಜ್ಯ ರಾಜಕಾರಣದಲ್ಲಿ ಪಕ್ಷದ ಪ್ರಬಲ ಶಕ್ತಿಯಾಗಿಯೇ ಮುಂದುವರಿಯಲಿದ್ದಾರೆ.
ಹೈಕಮಾಂಡ್ ಮಟ್ಟದಲ್ಲಿ ತಗ್ಗದ ವರ್ಚಸ್ಸು
ಸಿದ್ದರಾಮಯ್ಯ ಅವರು ಮೂಲತಃ ಕಾಂಗ್ರೆಸ್ ಹಿನ್ನೆಲೆಯಿಂದ ಬಂದವರಲ್ಲದಿದ್ದರೂ, ಪಕ್ಷದ ಕೇಂದ್ರ ವಲಯದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ನೇರ ಸಂಪರ್ಕ ಹೊಂದಿರುವ ಅವರು, ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಪ್ರಮುಖ ನಾಯಕರಾಗಿ ಗುರ್ತಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲೂ (CWC) ಅವರಿಗೆ ಸ್ಥಾನ ನೀಡಲಾಗಿದೆ. ರಾಜ್ಯದಲ್ಲಿ ಅಭ್ಯರ್ಥಿಗಳ ಆಯ್ಕೆ, ಸಂಪುಟ ಪುನಾರಚನೆ ಹಾಗೂ ಸರ್ಕಾರದ ನೀತಿ ನಿರೂಪಣೆಗಳಲ್ಲಿ ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ಹೈಕಮಾಂಡ್ ಈಗಲೂ ಮನ್ನಣೆ ನೀಡುತ್ತಿದೆ.
ಸರ್ಕಾರದ ಮೇಲೆ ನಿರಂತರ ಒತ್ತಡದ ಕೇಂದ್ರ
ಚುನಾವಣಾ ಕಣದಿಂದ ಹಿಂದೆ ಸರಿದಿರುವುದರಿಂದ ಗೆಲುವು-ಸೋಲಿನ ಲೆಕ್ಕಾಚಾರಗಳಿಂದ ಸಿದ್ದರಾಮಯ್ಯ ಮುಕ್ತರಾಗಿದ್ದಾರೆ. ಇದು ಅವರು ಸರ್ಕಾರ ಮತ್ತು ಪಕ್ಷದ ನಿರ್ಧಾರಗಳ ಮೇಲೆ ಹೆಚ್ಚು ಮುಕ್ತವಾಗಿ ಪ್ರಭಾವ ಬೀರಲು ಅವಕಾಶ ಮಾಡಿಕೊಡಲಿದೆ. ಸಂಪುಟ ಪುನಾರಚನೆ ಸೇರಿ ಪ್ರಮುಖ ನಿರ್ಧಾರಗಳಲ್ಲಿ ತಮ್ಮ ಬೆಂಬಲಿಗರ ಹಿತಾಸಕ್ತಿ ಕಾಪಾಡುವಲ್ಲಿ ಮುಂದಾಗಲಿದ್ದಾರೆ.
ಅದೇ ವೇಳೆ, ಆಡಳಿತಾತ್ಮಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವಲ್ಲಿ ಅವರು ಅಳೆದು ತೂಗಿ ಹೆಜ್ಜೆ ಇಡುತ್ತಿದ್ದಾರೆ ಎಂಬುದಕ್ಕೆ ಬಿಡದಿ ಟೌನ್‌ಶಿಪ್ ವಿವಾದ ಸ್ಪಷ್ಟ ನಿದರ್ಶನ. ಈ ಯೋಜನೆ ಕುರಿತು ಎಚ್.ಡಿ. ದೇವೇಗೌಡರು ಪತ್ರಿಕಾಗೋಷ್ಠಿ ನಡೆಸಿದಾಗ, ಸ್ವತಃ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಧ್ಯಪ್ರವೇಶಿಸುವಂತೆ ಕೋರಿದ್ದರು. ಆದರೆ, ಸಿದ್ದರಾಮಯ್ಯ ಅವರು ವಿವಾದದಿಂದ ಅಂತರ ಕಾಯ್ದುಕೊಳ್ಳುವ ಮೂಲಕ, ಡಿ.ಕೆ. ಶಿವಕುಮಾರ್ ಅವರ ಪ್ರತಿಷ್ಠೆಯ ವಿಚಾರಗಳಲ್ಲಿ ತಲೆಹಾಕುವುದಿಲ್ಲ ಎಂಬ ಸಂದೇಶ ರವಾನಿಸಿದ್ದರು.
ಅಹಿಂದ ಮತಬ್ಯಾಂಕ್ ಮತ್ತು ಎಚ್ಚರಿಕೆ
ಸಿದ್ದರಾಮಯ್ಯ ಅವರ ರಾಜಕೀಯ ಬಲದ ಪ್ರಮುಖ ಅಸ್ತ್ರ 'ಅಹಿಂದ' (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳು. ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದಾಗ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದರು. ಆದರೂ, ಅವರ ನಿವೃತ್ತಿ ನಿರ್ಧಾರ ಅಹಿಂದ ವರ್ಗದಲ್ಲಿ ಆತಂಕ ಮೂಡಿಸಿದೆ.
ಮುಂದಿನ ಆರು ತಿಂಗಳಲ್ಲಿ ಆಡಳಿತಾರೂಢ ಸರ್ಕಾರ ಹಾಗೂ ಪಕ್ಷದೊಳಗೆ ಸಿದ್ದರಾಮಯ್ಯ ಅವರನ್ನು ನಡೆಸಿಕೊಳ್ಳುವ ರೀತಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅಹಿಂದ ಮುಖಂಡರು ಕಾಂಗ್ರೆಸ್ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸರ್ಕಾರದ ಮೊದಲ ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಿತ್ತು. ಇದೀಗ ಮುಂಬರುವ ಸಂಪುಟ ಪುನಾರಚನೆಯಲ್ಲೂ ತಮ್ಮ ಆಪ್ತರಿಗೆ ಸ್ಥಾನ ಕಲ್ಪಿಸಲು ಅವರು ತಂತ್ರಗಾರಿಕೆ ಮುಂದುವರಿಸಿದ್ದಾರೆ.
ಐದು ದಶಕಗಳ ರಾಜಕೀಯ ಹಾದಿ
ಆಗಸ್ಟ್ 12, 1948 ರಂದು ಜನಿಸಿದ ಸಿದ್ದರಾಮಯ್ಯ, ಕಾನೂನು ಪದವೀಧರರಾಗಿ ವಕೀಲ ವೃತ್ತಿಯಲ್ಲಿದ್ದವರು. ಡಾ. ರಾಮ್ ಮನೋಹರ್ ಲೋಹಿಯಾ ಸಿದ್ಧಾಂತಗಳಿಂದ ಪ್ರೇರಿತರಾಗಿ ರೈತ ಚಳವಳಿಯ ಮೂಲಕ ಸಾರ್ವಜನಿಕ ಬದುಕು ಪ್ರವೇಶಿಸಿದರು. 1978ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ಆರಂಭವಾದ ಅವರ ರಾಜಕೀಯ, 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಹಂತಕ್ಕೆ ಬೆಳೆಯಿತು. ಪಶುಸಂಗೋಪನೆ, ಸಾರಿಗೆ, ಹಣಕಾಸು ಸಚಿವರಾಗಿ, ಬಳಿಕ 1996ರಲ್ಲಿ ಉಪಮುಖ್ಯಮಂತ್ರಿಯಾಗಿ ಅನುಭವ ಹೊಂದಿರುವ ಅವರು 2005ರಲ್ಲಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡರು.
2006ರಲ್ಲಿ ಕಾಂಗ್ರೆಸ್ ಸೇರಿ, ಉಪಚುನಾವಣೆಯಲ್ಲಿ 257 ಮತಗಳ ಅಂತರದಿಂದ ರೋಚಕ ಜಯ ಸಾಧಿಸಿದ್ದರು. 2008 ರಿಂದ 2013ರವರೆಗೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, 2013ರಲ್ಲಿ ಮೊದಲ ಬಾರಿಗೆ ಪೂರ್ಣಾವಧಿ ಮುಖ್ಯಮಂತ್ರಿಯಾದರು. ಬಳಿಕ 2023 ರಿಂದ 2026ರ ಮೇ ವರೆಗೆ ಎರಡನೇ ಬಾರಿಗೆ ಸಿಎಂ ಆಗಿ ಕಾರ್ಯನಿರ್ವಹಿಸಿದರು. ರಾಜ್ಯದಲ್ಲಿ 8 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸಿದ, ಅತ್ಯಂತ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಅವರದ್ದಾಗಿದೆ. ಒಟ್ಟು 12 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ 9 ಬಾರಿ ಗೆಲುವು, ದಾಖಲೆಯ 13 ಬಜೆಟ್ ಮಂಡನೆ ಅವರ ಸಾಧನೆಯಾಗಿದೆ.
ಸಿದ್ದರಾಮಯ್ಯ ಅವರು ಕೇವಲ ಅಧಿಕಾರ ಕೇಂದ್ರಿತ ನಾಯಕರಾಗಿ ಉಳಿಯದೆ ಹಿಂದುಳಿದ ವರ್ಗಗಳ ಹಕ್ಕುಗಳ ಪರ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಚುನಾವಣಾ ರಾಜಕಾರಣದಿಂದ ದೂರ ಸರಿದರೂ, ಪಕ್ಷದೊಳಗಿನ ಅವರ ಪ್ರಭಾವವು ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಬೆಂಬಲದ ಜೊತೆಗೆ ಆಡಳಿತಾತ್ಮಕ ಎಚ್ಚರಿಕೆಯ ಹೆಜ್ಜೆಯಾಗಿಯೂ ಕೆಲಸ ಮಾಡಲಿದೆ.

