
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಸಿದ್ದರಾಮಾನಂದಪುರಿ ಸ್ವಾಮೀಜಿಯೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ( ಸಂಗ್ರಹ ಚಿತ್ರ)
ಸಿದ್ದರಾಮಯ್ಯ ರಾಜೀನಾಮೆ ಮೊದಲೇ 71 ಕೋಟಿ ಬಿಡುಗಡೆ ! 89 ಕುರುಬ ಸಂಸ್ಥೆಗಳಿಗೆ ಭರ್ಜರಿ ಕೊಡುಗೆ!
'ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್'ಗೆ ಬರೋಬ್ಬರಿ 50 ಲಕ್ಷ ರೂ. ಅನುದಾನ ಬಿಡುಗಡೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಟಿ. ನರಸೀಪುರ ತಾಲೂಕಿಗೆ 13 ಸಮುದಾಯ ಭವನ ಮಂಜೂರು ಮಾಡಲಾಗಿದೆ.
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಹೈಡ್ರಾಮಾ ಮುಕ್ತಾಯಗೊಂಡು ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮುಂಚಿತವಾಗಿ, ನಿರ್ಗಮಿತ ಸಿಎಂ ಸಿದ್ದರಾಮಯ್ಯ ಭಾರಿ ಪ್ರಮಾಣದ ಅನುದಾನ ಬಿಡುಗಡೆ ಮಾಡಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿದೆಯೇ ಎಂಬ ಗಂಭೀರ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
71.85 ಕೋಟಿ ರೂ. ಮಂಜೂರು!
ನೂತನ ಸಿಎಂ ಗದ್ದುಗೆ ಏರುವ ಕೆಲವೇ ಗಂಟೆಗಳ ಮೊದಲು ಆರ್ಥಿಕ ಇಲಾಖೆಯಿಂದ ದಿಢೀರ್ ಪ್ರಸ್ತಾವನೆಯೊಂದು ಸಲ್ಲಿಕೆಯಾಗಿದ್ದು, ಅದರಂತೆ 155 ವಿವಿಧ ಸಂಸ್ಥೆಗಳಿಗೆ ಒಟ್ಟು 71.85 ಕೋಟಿ ರೂ. ಅನುದಾನವನ್ನು ತರಾತುರಿಯಲ್ಲಿ ಮಂಜೂರು ಮಾಡಲಾಗಿದೆ. 2026-27ರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ವಿವಿಧ ಹಿಂದುಳಿದ ಸಮುದಾಯಗಳ ಸಮುದಾಯ ಭವನ ಹಾಗೂ ಹಾಸ್ಟೆಲ್ ನಿರ್ಮಾಣಕ್ಕಾಗಿ ಸರ್ಕಾರ ಒಟ್ಟು 136 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ, ಈ ಒಟ್ಟು ಬಜೆಟ್‌ನ ಬರೋಬ್ಬರಿ ಶೇ. 52 ರಷ್ಟು ಸಿಂಹಪಾಲು ಅನುದಾನ ಕೆಲವೇ ಕೆಲವು ನಿರ್ದಿಷ್ಟ ಸಮುದಾಯಗಳ ಸಂಸ್ಥೆಗಳ ಪಾಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಒಂದೇ ಸಮುದಾಯದ 89 ಸಂಸ್ಥೆಗಳಿಗೆ ಮನ್ನಣೆ!
ಮಂಜೂರಾದ ಒಟ್ಟು 155 ಸಂಸ್ಥೆಗಳ ಪೈಕಿ 89 ಸಂಸ್ಥೆಗಳು ಕೇವಲ ಕುರುಬ ಸಮುದಾಯಕ್ಕೆ ಸೇರಿವೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಜಾತಿ ಪ್ರೇಮವೇ ಇದಕ್ಕೆ ಕಾರಣ ಎಂಬ ಟೀಕೆಗಳು ಕೇಳಿಬರುತ್ತಿದ್ದು, ಉಳಿದ ಸಮುದಾಯಗಳಿಗೆ ಕೇವಲ ಅಲ್ಪ ಪ್ರಮಾಣದ ಹಂಚಿಕೆ ಮಾಡಲಾಗಿದೆ. ಕುರುಬ ಸಮುದಾಯದ ಸಂಸ್ಥೆಗಳು 89, ಮಡಿವಾಳ ಸಮುದಾಯದ ಸಂಘಗಳು 8, ಯಾದವ ಸಮುದಾಯದ ಸಂಘಗಳು 2, ಹೆಳವ ಸಮುದಾಯದ ಹಾಗೂ ಸವಿತಾ ಸಮಾಜದ ತಲಾ ಒಂದು ಸಂಘಕ್ಕೆ ಅನುದಾನ ನೀಡಲಾಗಿದೆ.
ಇಷ್ಟೇ ಅಲ್ಲದೆ, ಗದಗದ 'ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್'ಗೆ ಬರೋಬ್ಬರಿ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಜೊತೆಗೆ ಟಿ. ನರಸೀಪುರ ಒಂದೇ ತಾಲೂಕಿಗೆ ದಾಖಲೆಯ 13 ಸಮುದಾಯ ಭವನಗಳನ್ನು ಮಂಜೂರು ಮಾಡಲಾಗಿದೆ.
ಸಾಮಾಜಿಕ ನ್ಯಾಯ ಎಲ್ಲಿದೆ?
"ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸಾವಿರಕ್ಕೂ ಹೆಚ್ಚು ಜಾತಿಗಳಿವೆ. ಕೇವಲ ಪ್ರವರ್ಗ 1ರಲ್ಲೇ 147 ಅತ್ಯಂತ ಹಿಂದುಳಿದ ಜಾತಿಗಳಿವೆ. ಹೀಗಿದ್ದರೂ ಎಲ್ಲರನ್ನೂ ಕಡೆಗಣಿಸಿ, ಸಿದ್ದರಾಮಯ್ಯನವರು ಅಧಿಕಾರದಿಂದ ಇಳಿಯುವ ಕೊನೆಯ ಕ್ಷಣದಲ್ಲಿ ಕೇವಲ ತಮ್ಮದೇ ಸಮುದಾಯಕ್ಕೆ ಕೋಟ್ಯಂತರ ರೂಪಾಯಿ ಕೊಡುಗೆ ನೀಡಿರುವುದು ಯಾವ ರೀತಿಯ ಸಾಮಾಜಿಕ ನ್ಯಾಯ?" ಎಂದು ಇತರ ಹಿಂದುಳಿದ ವರ್ಗಗಳ ಮುಖಂಡರು ಪ್ರಶ್ನಿಸುತ್ತಿದ್ದಾರೆ. ಅಧಿಕಾರ ಹಸ್ತಾಂತರದ ಧಾವಂತದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಅನುದಾನವನ್ನು ತರಾತುರಿಯಲ್ಲಿ ಹಂಚಿಕೆ ಮಾಡಿದ್ದು ಏಕೆ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

