D.K. Shivakumar is dividing Muslims; SDPI state president Abdul Majeed attacks
x

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ಡಿ.ಕೆ. ಶಿವಕುಮಾರ್ ಮುಸ್ಲಿಮರನ್ನು ಒಡೆದಾಳುತ್ತಿದ್ದಾರೆ; ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ವಾಗ್ದಾಳಿ

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರೇ ನೇರ ಕಾರಣರಾಗಲಿದ್ದಾರೆ ಎಂದು ಮಜೀದ್ ಎಚ್ಚರಿಸಿದ್ದಾರೆ.


Click the Play button to hear this message in audio format

ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಸ್ಲಿಂ ನಾಯಕರನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಎಸ್‌ಡಿಪಿಐ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ‘ದ ಫೆಡರಲ್ ಕರ್ನಾಟಕ’ದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌ನ ಕೆಲವು ಮುಸ್ಲಿಂ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ವಜಾಗೊಂಡಿರುವ ಕಾಂಗ್ರೆಸ್ ನಾಯಕ ಅಬ್ದುಲ್ ಜಬ್ಬಾರ್ ಅವರು ದಾವಣಗೆರೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಗೆ ಹಣಕಾಸಿನ ನೆರವು ನೀಡಿದ್ದಾರೆ ಮತ್ತು ಇದಕ್ಕೆ ದಾಖಲೆ ಇದೆ ಎಂದು ಆರೋಪಿಸಿದ್ದರು. ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅಬ್ದುಲ್ ಮಜೀದ್, "ಅಬ್ದುಲ್ ಜಬ್ಬಾರ್ ಅವರು ಎಸ್‌ಡಿಪಿಐ ಅಭ್ಯರ್ಥಿಗೆ ಯಾವುದೇ ಹಣದ ಸಹಾಯ ಮಾಡಿಲ್ಲ. ಈ ರೀತಿ ಆರೋಪ ಮಾಡಿದವರಿಗೆ ತಾಕತ್ತಿದ್ದರೆ ದಾಖಲೆ ಬಿಡುಗಡೆ ಮಾಡಲಿ" ಎಂದು ಸವಾಲೆಸೆದಿದ್ದಾರೆ.

ಸೋಲಿಗೆ ಡಿಕೆಶಿ ಹಾಗೂ ಸುರ್ಜೆವಾಲಾ ಕಾರಣ

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರೇ ನೇರ ಕಾರಣರಾಗಲಿದ್ದಾರೆ ಎಂದು ಮಜೀದ್ ಎಚ್ಚರಿಸಿದ್ದಾರೆ. ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮುಸ್ಲಿಂ ಧರ್ಮಗುರುಗಳಿಗೆ ಅವಮಾನ ಮಾಡಿದ್ದಾರೆ, ಇದರಿಂದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಆಕ್ರೋಶಗೊಂಡಿದೆ. ಈ ಬಾರಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿರುವ ಮುಸ್ಲಿಮರು, "ಬಿಜೆಪಿ ಬಂದರೂ ಪರವಾಗಿಲ್ಲ, ಆದರೆ ಕಾಂಗ್ರೆಸ್ ಗೆಲ್ಲಬಾರದು" ಎಂಬ ಮಟ್ಟಿಗೆ ರೊಚ್ಚಿಗೆದ್ದಿದ್ದಾರೆ ಎಂದಿದ್ದಾರೆ.

ಟಿಕೆಟ್ ನೀಡಿದ್ದರೆ ಅಭ್ಯರ್ಥಿ ಹಾಕುತ್ತಿರಲಿಲ್ಲ

"ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರೆ, ಎಸ್‌ಡಿಪಿಐ ಖಂಡಿತವಾಗಿಯೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರಲಿಲ್ಲ. ಆದರೆ, ಕಾಂಗ್ರೆಸ್ ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಬಿಜೆಪಿಯ ಗುಮ್ಮ (ಭಯ) ತೋರಿಸಿ ಮುಸ್ಲಿಮರಿಗೆ ನಿರಂತರವಾಗಿ ಮೋಸ ಮಾಡಲಾಗುತ್ತಿದೆ" ಎಂದು ಕಿಡಿಕಾರಿದ್ದಾರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಹರಿಹಾಯ್ದಿರುವ ಮಜೀದ್, "ಸಿದ್ದರಾಮಯ್ಯ ಅವರು ಸಹ ಮುಸ್ಲಿಮರಿಗೆ ಮೋಸ ಮಾಡಿದ್ದಾರೆ. ಈ ಹಿಂದೆ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ ಮುಸ್ಲಿಂ ಅಭ್ಯರ್ಥಿಯನ್ನು ಸೋಲಿಸಿದ್ದರು. ಆಗ ಅವರ ವಿರುದ್ಧ ಯಾಕೆ ಶಿಸ್ತುಕ್ರಮ ಆಗಲಿಲ್ಲ? ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕರು ಬಿಜೆಪಿಗೆ ಹೋಗಿ ಸರ್ಕಾರ ಉರುಳಲು ಸಿದ್ದರಾಮಯ್ಯನವರೇ ಕಾರಣರಾಗಿದ್ದರು" ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಮುಂದೆ ಕಾಂಗ್ರೆಸ್‌ಗೆ ಬೆಂಬಲವಿಲ್ಲ

ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶದಿಂದ ಎಸ್‌ಡಿಪಿಐ ಹಲವೆಡೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು. ಕಾಂಗ್ರೆಸ್ ಕೂಡ ಎಸ್‌ಡಿಪಿಐನ ಸಹಾಯ ಪಡೆದುಕೊಂಡಿತ್ತು. ಆದರೆ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಎಸ್‌ಡಿಪಿಐ ಕಾಂಗ್ರೆಸ್‌ಗೆ ಸಹಾಯ ಮಾಡುವುದಿಲ್ಲ, ಮುಂದಿನ ದಿನಗಳಲ್ಲಿ ಎಲ್ಲ ಕಡೆಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಅಬ್ದುಲ್ ಮಜೀದ್ ಸ್ಪಷ್ಟಪಡಿಸಿದ್ದಾರೆ.

ಕೊನೆಯದಾಗಿ, "ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕರಿಗೆ ಬೆಲೆ ಇಲ್ಲ, ಬೆಲೆ ಇಲ್ಲದ ಜಾಗದಲ್ಲಿ ಇರಬೇಡಿ, ಕಾಂಗ್ರೆಸ್ ಬಿಟ್ಟು ಬನ್ನಿ" ಎಂದು ಕಾಂಗ್ರೆಸ್‌ನ ಮುಸ್ಲಿಂ ನಾಯಕರಿಗೆ ಮಜೀದ್ ಕರೆ ನೀಡಿದ್ದಾರೆ.

Read More
Next Story