ಶಾಮನೂರು ಶಿವಶಂಕರಪ್ಪ ‘ಗರಡಿ’ಯ ಹೊಸ ಕುಡಿ : ತಾತನ ಹಾದಿಯಲ್ಲಿ ʼಸಮರ್ಥʼ ರಾಜಕೀಯದ ಗುರಿ
x

ಶಾಮನೂರು ಶಿವಶಂಕರಪ್ಪ ‘ಗರಡಿ’ಯ ಹೊಸ ಕುಡಿ : ತಾತನ ಹಾದಿಯಲ್ಲಿ ʼಸಮರ್ಥʼ ರಾಜಕೀಯದ ಗುರಿ

ತಮಿಳುನಾಡಿನ ಕೊಡೈಕೆನಲ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿದ ಸಮರ್ಥ್‌, ಉನ್ನತ ವ್ಯಾಸಂಗವನ್ನು ಬ್ರಿಟನ್‌ನ ಎಕ್ಸೆಟರ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದಾರೆ.


Click the Play button to hear this message in audio format

ರಾಜ್ಯ ರಾಜಕೀಯದಲ್ಲಿ ‘ದಾವಣಗೆರೆಯ ಧಣಿಗಳು’ ಎಂದೇ ಖ್ಯಾತರಾದ ಶಾಮನೂರು ಕುಟುಂಬದಿಂದ ಈಗ ಮೂರನೇ ತಲೆಮಾರಿನ ನಾಯಕನ ಉದಯವಾಗುತ್ತಿದೆ.

ಹಿರಿಯ ರಾಜಕೀಯ ನಾಯಕ ಡಾ. ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್‌ ಮಲ್ಲಿಕಾರ್ಜುನ ಶಾಮನೂರು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ರಾಜಕಾರಣಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್‌ ಇನ್ನೂ ತನ್ನ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿಲ್ಲವಾದರೂ, ತಾನೇ ಮುಂದಾಗಿ ನಾಮಪತ್ರ ಸಲ್ಲಿಸುವ ಮೂಲಕ ʼಒತ್ತಡ ರಾಜಕಾರಣʼ ತಂತ್ರಗಾರಿಕೆ ಮೂಲಕ ರಾಜಕೀಯದಲ್ಲಿ ತನ್ನ ಪಾತ್ರವೂ ಇದೆ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ.

ನೋಡಲು ತಾತನಂತೆ ಕಾಣುವ ಅವರು ಕೇವಲ ರಾಜಕೀಯ ಕುಟುಂಬದ ಕುಡಿಯಾಗಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದ ಉನ್ನತ ಶಿಕ್ಷಣ ಪಡೆದ ಯುವ ನಾಯಕನಾಗಿ ಸಮರ್ಥ್‌ ದಾವಣಗೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಬದುಕಿದ್ದಾಗ ಅತ್ಯಂತ ಪ್ರೀತಿಯಿಂದ ಬಳಸುತ್ತಿದ್ದ ಇನ್ನೋವಾ ಕಾರಿನಲ್ಲೇ ಸಮರ್ಥ್ ಚುನಾವಣಾ ಕಚೇರಿಗೆ ಆಗಮಿಸಿ, ಶಾಮನೂರು ಶಿವಶಂಕರಪ್ಪ ಅವರ ವಾರಸುದಾರ ಎಂಬುದನ್ನು ಸಾಂಕೇತಿಕವಾಗಿ ತೋರಿಸಿಕೊಟ್ಟಿದ್ದಾರೆ.

ವಿದೇಶಿ ಶಿಕ್ಷಣ, ಸ್ವದೇಶಿ ಸಂಕಲ್ಪ

ಸಮರ್ಥ್‌ ಅವರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಪಿಯುಸಿ ತಮಿಳುನಾಡಿನ ಸುಪ್ರಸಿದ್ಧ ಕೊಡೈಕನಾಲ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಮುಗಿದಿದೆ. ಈ ಶಾಲೆ ದೇಶದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಅಲ್ಲಿನ ಶಿಸ್ತು ಮತ್ತು ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ವಾತಾವರಣವು ಸಮರ್ಥ್‌ ಅವರ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಂತರ ಅವರು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದರು. ಬ್ರಿಟನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಎಕ್ಸೆಟರ್ ವಿಶ್ವವಿದ್ಯಾಲಯ(University of Exeter)ದಲ್ಲಿ ಪದವಿ ಪಡೆದರು. ವ್ಯವಹಾರ ಮತ್ತು ನಿರ್ವಹಣೆ ವಿಷಯದಲ್ಲಿ ಅಧ್ಯಯನ ನಡೆಸಿದ್ದಾರೆ.

ತಮ್ಮ ತಾಯಿ ಮತ್ತು ಸಂಸದೆ ಪ್ರಭಾ ಮಲ್ಲಿಕಾರ್ಜುನ ಜತೆ ಆಗಮಿಸಿದ ಸಮರ್ಥ್, ಮೂರು ಸೆಟ್ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಶಾಮನೂರು ಗರಡಿಯಲ್ಲಿ ಪಳಗಿದ ಸಮರ್ಥ್‌

ಸಮರ್ಥ್‌ ಅವರಿಗೆ ರಾಜಕೀಯ ಕೇವಲ ರಕ್ತಗತವಾಗಿ ಬಂದಿದ್ದಲ್ಲ, ಅದು ನಿರಂತರ ತರಬೇತಿಯ ಫಲ. ಅವರ ತಾತ ಶಾಮನೂರು ಶಿವಶಂಕರಪ್ಪ ಹದಿಹರೆದಲ್ಲಿಯೂ ಕುಗ್ಗದ ಉತ್ಸಾಹದೊಂದಿಗೆ ರಾಜಕೀಯ ಮಾಡಿದವರು. ಶಾಮನೂರು ಶಿವಶಂಕರಪ್ಪ ಅವರೇ ಸಮರ್ಥ್‌ಗೆ ಮೊದಲ ಗುರು. ಪಕ್ಷವನ್ನು ಕಟ್ಟುವುದು ಹೇಗೆ, ಕಾರ್ಯಕರ್ತರನ್ನು ಪ್ರೀತಿಸುವುದು ಹೇಗೆ ಎಂಬುದನ್ನು ತಾತನಿಂದ ಕಲಿತರೆ, ಆಡಳಿತಾತ್ಮಕ ಚತುರತೆ ಮತ್ತು ಅಭಿವೃದ್ಧಿಯ ದೂರದೃಷ್ಟಿಯನ್ನು ತಂದೆ ಎಸ್.ಎಸ್. ಮಲ್ಲಿಕಾರ್ಜುನ ಅವರಿಂದ ಮೈಗೂಡಿಸಿಕೊಂಡಿದ್ದಾರೆ. ಅಲ್ಲದೇ, ತಾಯಿ ಪ್ರಭಾ ಮಲ್ಲಿಕಾರ್ಜುನ್‌ ಅವರ ಪ್ರಭಾವವು ಸಹ ಇದೆ ಎಂಬುದು ಅವರ ಕುಟುಂಬಸ್ಥರ ಮಾತು.

ಶಾಮನೂರು ಗರಡಿ

ದಾವಣಗೆರೆಯ ‘ಶಾಮನೂರು ಗರಡಿ’ ಎಂದರೆ ಅದು ರಾಜಕೀಯ ಮುತ್ಸದ್ದಿತನದ ಪಾಠಶಾಲೆ. ಇಲ್ಲಿ ಕೇವಲ ಭಾಷಣ ಮಾತ್ರವಲ್ಲ, ಜನರೊಂದಿಗೆ ಬೆರೆಯುವ ಕಲೆ ಮತ್ತು ಕೆಲಸ ಮಾಡುವ ಛಲವನ್ನು ಸಮರ್ಥ್‌ ಕಲಿತಿದ್ದಾರೆ. ವಿದ್ಯಾಭಾಸ ಮುಗಿದ ಮೇಲೆ ಸ್ವದೇಶಕ್ಕೆ ಮರಳಿ ಕುಟುಂಬ ವ್ಯವಹಾರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ತಳಮಟ್ಟದ ಕಾರ್ಯಕರ್ತರ ಹೆಸರನ್ನು ಹಿಡಿದು ಕರೆಯುವಷ್ಟರ ಮಟ್ಟಿಗೆ ಬೆರೆತುಹೋಗಿದ್ದಾರೆ ಎನ್ನಲಾಗಿದೆ.

ಪರಂಪರೆಯ ವಾರಸುದಾರ

ತಾಯಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ ಜತೆಗೂಡಿ ನಾಮಪತ್ರ ಸಲ್ಲಿಸಿದಾಗ ಅಲ್ಲಿ ರಾಜಕೀಯಕ್ಕಿಂತ ಹೆಚ್ಚಾಗಿ ಒಂದು ಕುಟುಂಬದ ಬಾಂಧವ್ಯ ಎದ್ದು ಕಂಡಿದೆ. ತಾತ ಶಾಮನೂರು ಶಿವಶಂಕರಪ್ಪ ಬಳಸುತ್ತಿದ್ದ KA 51 MR 0555 ಸಂಖ್ಯೆಯ ಐಷಾರಾಮಿ ಇನ್ನೋವಾ ಕಾರಿನಲ್ಲಿ ಆಗಮಿಸಿದ್ದು, ತಾವು ಪರಂಪರೆಯ ವಾರಸುದಾರ ಎಂಬುದನ್ನು ಸಾರಿತು. ಅಲ್ಲದೇ, ಅಭಿಮಾನಿಗಳಿಗೆ ತಾತ ಸ್ವರೂಪ ಕಂಡು ಬಂದಿದೆ. ಸಮರ್ಥ್‌ ಶಾಮನೂರು ಅವರ ರಾಜಕೀಯ ಪ್ರವೇಶದಿಂದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಯುವಜನತೆಯ ಬೆಂಬಲ ಹೆಚ್ಚಾಗಿದೆ.

ಸಮರ್ಥ್‌ ಬಳಿ ಇರುವ ಆಸ್ತಿಯ ವಿವರ

ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್‌ ಸಲ್ಲಿಕೆ ಮಾಡಿರುವ ನಾಮಪತ್ರದ ಜತೆಗೆ ಆಸ್ತಿವಿವರದ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಸಮರ್ಥ್‌ ಬಳಿ ಸುಮಾರು 4.25 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಇದೆ. 8,35,540 ರೂ. ನಗದು ಹೊಂದಿದ್ದು, ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು 9,89,217 ರೂ. ಠೇವಣಿ ಇರಿಸಿದ್ದಾರೆ. ಸಮರ್ಥ್‌ ಅವರು ತಮ್ಮ ಚರಾಸ್ತಿಯ ಅರ್ಧದಷ್ಟು ಭಾಗವನ್ನು ವಿಮೆ ಮತ್ತು ಅಂಚೆ ಉಳಿತಾಯ ಯೋಜನೆಗಳಲ್ಲಿ ತೊಡಗಿಸಿದ್ದಾರೆ. ಹಣಕಾಸು ಸಂಸ್ಥೆಗಳಲ್ಲಿ ಒಟ್ಟು 1.04 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಇದು ಅವರ ಒಟ್ಟು ಚರಾಸ್ತಿಯಲ್ಲಿ ಅತ್ಯಂತ ದೊಡ್ಡ ಮೊತ್ತದ ಹೂಡಿಕೆಯಾಗಿದೆ. ಷೇರುಗಳು, ಡಿಬೆಂಚರ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ 30 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.

ಸ್ವಂತ ಕಾರು ಇಲ್ಲ

ದಾವಣಗೆರೆಯ ಶ್ರೀಮಂತ ಕುಟುಂಬದಿಂದ ಬಂದವರಾದರೂ, ಸಮರ್ಥ್‌ ಶಾಮನೂರು ಅವರ ಹೆಸರಿನಲ್ಲಿ ಯಾವುದೇ ಸ್ವಂತ ಕಾರು ಅಥವಾ ವಾಹನಗಳಿಲ್ಲ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಸಮರ್ಥ್‌ ಬಳಿ ಒಟ್ಟು 14,45,800 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ಅಮೂಲ್ಯ ವಸ್ತುಗಳಿವೆ. ಸಮರ್ಥ್‌ ವಿವಿಧ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ 14,77,412 ರೂ. ಸಾಲವಾಗಿ ನೀಡಿದ್ದಾರೆ. ಅವರು ಇತರರಿಗೆ ಸಾಲ ನೀಡಿದರೂ ದೊಡ್ಡ ಮೊತ್ತದ ಸಾಲವೂ ಇದೆ. ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸುಮಾರು 3.52 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.

ಪಿತ್ರಾರ್ಜಿತ ಆಸ್ತಿ ಹೊಂದಿಲ್ಲ

ಬ್ಯಾಂಕ್ ಠೇವಣಿ, ನಗದು ಸೇರಿದಂತೆ ಒಟ್ಟು 2.17 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, ಸ್ಥಿರಾಸ್ತಿಯ ಮೌಲ್ಯ ಸುಮಾರು 2.08 ಕೋಟಿ ರೂ. ಇದೆ ಎಂದು ಆಸ್ತಿಯ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಿಶೇಷವೆಂದರೆ, ಸಮರ್ಥ್‌ ಅವರು ತಮ್ಮ ಅಫಿಡವಿಟ್‌ನಲ್ಲಿ ತಮಗೆ ಯಾವುದೇ ಪಿತ್ರಾರ್ಜಿತ ಆಸ್ತಿ ಬಂದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಸದ್ಯ ಅವರು ಘೋಷಿಸಿರುವ ಎಲ್ಲಾ ಸ್ಥಿರಾಸ್ತಿಗಳು ಅವರೇ ಸ್ವಯಾರ್ಜಿತವಾಗಿ ಖರೀದಿಸಿದ್ದಾಗಿವೆ.

Read More
Next Story