ಮೂರ್ಖರಾಗಬೇಡಿ, ಬುದ್ಧಿವಂತರಾಗಿ: ಏ.1ರಂದೇ ʼಪ್ರಜಾಕೀಯʼಕ್ಕೆ  ಹೊಸ ಅರ್ಥ ಕೊಟ್ಟರೇ ಉಪೇಂದ್ರ?
x

ಮೂರ್ಖರಾಗಬೇಡಿ, ಬುದ್ಧಿವಂತರಾಗಿ: ಏ.1ರಂದೇ ʼಪ್ರಜಾಕೀಯʼಕ್ಕೆ ಹೊಸ ಅರ್ಥ ಕೊಟ್ಟರೇ ಉಪೇಂದ್ರ?

ಉಪೇಂದ್ರ ತಮ್ಮ ವೆಬ್‌ಸೈಟ್, ಆ್ಯಪ್‌ನಲ್ಲಿ ಜನರಿಗೆ 'ನೋ ಎಂಟ್ರಿ' ಬೋರ್ಡ್ ಹಾಕಿದ್ದಾರೆ. "ಇಲ್ಲಿ ಏನೂ ಬದಲಾಗಲ್ಲ, ಎಲ್ಲವೂ ಇಷ್ಟೇ" ಎಂದು ಹಣೆಬರಹ ನಂಬಿ ಕುಳಿತವರಿಗೆ ಸ್ಥಾನವಿಲ್ಲ ಎಂದಿದ್ದಾರೆ.


Click the Play button to hear this message in audio format

ಕನ್ನಡ ಚಿತ್ರರಂಗದ 'ರಿಯಲ್ ಸ್ಟಾರ್' ಉಪೇಂದ್ರ ಎಂದರೆ ಅಲ್ಲಿ ಯಾವಾಗಲೂ ಒಂದು ಹೊಸತನ, ವಿಭಿನ್ನ ಆಲೋಚನೆ ಮತ್ತು ಸಮಾಜದ ಸ್ಥಿತಿಗತಿಗಳ ಮೇಲೆ ನಡೆಸುವ ತೀಕ್ಷ್ಣವಾದ ಮಾತುಗಳು ಇರುತ್ತದೆ. ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪೇಂದ್ರ ಕೇವಲ ಒಬ್ಬ ನಟನಾಗಿರದೆ, ಒಬ್ಬ ರಾಜಕೀಯದಲ್ಲಿ ಬದಲಾವಣೆ ತರುವಂತೆ ಕಾಣಿಸಿಕೊಂಡರು. ಅವರು ಮಂಡಿಸಿದ ವಿಷಯಗಳು ಕೇವಲ ಸುದ್ದಿಯಲ್ಲ, ಬದಲಾಗಿ ವ್ಯವಸ್ಥೆಯ ಆಲೋಚನೆಗಳಾಗಿದ್ದವು. "ಪ್ರಜಾಕೀಯ" ಎಂಬ ಸಿದ್ಧಾಂತವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿರುವ ಉಪ್ಪಿ, ಈ ಬಾರಿ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದ್ದಾರೆ.


ಏಪ್ರಿಲ್ 1: ಮೂರ್ಖರ ದಿನವಲ್ಲ, ಇನ್ಮುಂದೆ 'ಬುದ್ಧಿವಂತರ ದಿನ'

ನೂರಾರು ವರ್ಷಗಳಿಂದ ಏ.1ನೇ ತಾರೀಖನ್ನು ಒಬ್ಬರನ್ನೊಬ್ಬರು ಕಾಲೆಳೆಯುವ, ಸುಳ್ಳು ಹೇಳಿ ವಂಚಿಸುವ 'ಮೂರ್ಖರ ದಿನ'ವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಆದರೆ ಉಪೇಂದ್ರ ಈ ಪರಿಕಲ್ಪನೆಯನ್ನೇ ಬದಲಿಸಿದ್ದಾರೆ. "ಏಕೆ ನಾವು ಒಬ್ಬರ ಕಾಲು ಎಳೆಯಬೇಕು? ಬದಲಿಗೆ ಒಬ್ಬರ ಕೈ ಹಿಡಿದು ಮೇಲೆತ್ತುವ ಕೆಲಸ ಏಕೆ ಮಾಡಬಾರದು?" ಎಂಬ ಪ್ರಶ್ನೆಯನ್ನು ಅವರು ಸಮಾಜದ ಮುಂದಿಟ್ಟಿದ್ದಾರೆ. ಇನ್ಮುಂದೆ ಏ.1 ಅನ್ನು 'ಬುದ್ಧಿವಂತರ ದಿನ'ವನ್ನಾಗಿ ಆಚರಿಸೋಣ ಎಂದು ಕರೆ ನೀಡುವ ಮೂಲಕ, ಸಕಾರಾತ್ಮಕತೆಯ ಭಾವನೆ ಮೂಡಿಸಿದರು. ಇದು ಕೇವಲ ದಿನಾಂಕದ ಬದಲಾವಣೆಯಲ್ಲ, ಬದಲಾಗಿ ಮನುಷ್ಯನ ಆಲೋಚನಾ ಕ್ರಮದಲ್ಲಿ ಬರಬೇಕಾದ ಬದಲಾವಣೆಯ ಸಂಕೇತವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಎಡವೂ ಅಲ್ಲ, ಬಲವೂ ಅಲ್ಲ; ನಾವು 'ಮಧ್ಯದವರು'!

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಪ್ರತಿಯೊಂದನ್ನೂ 'ಲೆಫ್ಟ್' (ಎಡಪಂಥೀಯ) ಅಥವಾ 'ರೈಟ್' (ಬಲಪಂಥೀಯ) ಎಂದು ವಿಂಗಡಿಸುವ ಚಾಳಿ ಹೆಚ್ಚಾಗಿದೆ. ಈ ಬಗ್ಗೆ ಕಿಡಿಕಾರಿದ ಉಪೇಂದ್ರ, "ನಾವು ಏನೇ ಮಾತಾಡಿದರೂ ಅದನ್ನು ಯಾವುದೋ ಒಂದು ಬಣ್ಣಕ್ಕೆ ಪೇಂಟ್ ಮಾಡಲಾಗುತ್ತದೆ. ಅದಕ್ಕೇ ನಾನು ಈ ವೇದಿಕೆಯ ಮಧ್ಯದಲ್ಲಿ ನಿಂತಿದ್ದೇನೆ ಎನ್ನುವ ಮೂಲಕ ತಮಗೆ ಯಾವುದೇ ಪಂಥಗಳ ಹಂಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಅವರ ಪಾಲಿಗೆ ಪ್ರಜೆಗಳ ಹಿತಾಸಕ್ತಿಯೇ ಮುಖ್ಯವೇ ಹೊರತು, ಸಿದ್ಧಾಂತಗಳ ಸಂಕೋಲೆಯಲ್ಲ ಎಂಬ ಸಂದೇಶ ಸಾರಿದಿರು.

ಸಂವಿಧಾನ ತಿದ್ದುಪಡಿ - 'ರಿಯಲ್ ಪ್ರಜಾಕೀಯ'

ಉಪೇಂದ್ರರ ಈ ಬಾರಿಯ ಪತ್ರಿಕಾಗೋಷ್ಠಿಯ ಹೈಲೈಟ್ ಎಂದರೆ 'ಸಂವಿಧಾನ ತಿದ್ದುಪಡಿ'ಯ ಬಗ್ಗೆ ಅವರು ಹಂಚಿಕೊಂಡ ವಿಚಾರಗಳು. ಕೇವಲ ವ್ಯಕ್ತಿಗಳು ಬದಲಾದರೆ ವ್ಯವಸ್ಥೆ ಬದಲಾಗದು, ವ್ಯವಸ್ಥೆ ಬದಲಾಗಬೇಕಾದರೆ ನಿಯಮಗಳು ಬದಲಾಗಬೇಕು ಎಂಬುದು ಅವರ ಬಲವಾದ ಮಾತುಗಳಾಗಿದ್ದವು. "ರಿಯಲ್ ಪ್ರಜಾಕೀಯ" ಎಂದರೆ ಕೇವಲ ಚುನಾವಣೆ ಎದುರಿಸುವುದಲ್ಲ, ಅದು ಪ್ರಜೆಗಳ ಕೈಗೆ ನಿಜವಾದ ಅಧಿಕಾರವನ್ನು ನೀಡುವುದು. ಇದಕ್ಕಾಗಿ ಸಂವಿಧಾನದಲ್ಲಿ ಅಗತ್ಯ ಬದಲಾವಣೆಗಳಾಗಬೇಕು ಎಂದರು.

'ನೋ ಎಂಟ್ರಿ': ಯಾರಿಗೆ ಇಲ್ಲಿ ಜಾಗವಿಲ್ಲ?

ಉಪೇಂದ್ರ ತಮ್ಮ ವೆಬ್‌ಸೈಟ್ ಮತ್ತು ಆ್ಯಪ್‌ನಲ್ಲಿ ಎರಡು ವರ್ಗದ ಜನರಿಗೆ ಕಟ್ಟುನಿಟ್ಟಾದ 'ನೋ ಎಂಟ್ರಿ' ಬೋರ್ಡ್ ಹಾಕಿದ್ದಾರೆ. ಒಂದು ಹೋಪ್‌ಲೆಸ್ (ಭರವಸೆ ಇಲ್ಲದವರು) ಎಂಬ ಪದ ಬಳಕೆ ಮಾಡಿದ್ದಾರೆ. "ಇಲ್ಲಿ ಏನೂ ಬದಲಾಗಲ್ಲ, ಎಲ್ಲವೂ ಇಷ್ಟೇ" ಎಂದು ಹಣೆಬರಹದ ಮೇಲೆ ನಂಬಿಕೆ ಇಟ್ಟು ಕುಳಿತವರಿಗೆ ಪ್ರಜಾಕೀಯದಲ್ಲಿ ಸ್ಥಾನವಿಲ್ಲ. ಮತ್ತೊಂದು ವರ್ಗ ಪೊಸೆಸ್ಡ್ (ವ್ಯಕ್ತಿ ಆರಾಧಕರು) ಎಂದಿದ್ದಾರೆ. "ನನ್ನ ನಾಯಕನೇ ಎಲ್ಲವನ್ನೂ ಸರಿ ಮಾಡುತ್ತಾನೆ, ಅವನು ದೈವಾಂಶ ಸಂಭೂತ" ಎಂದು ಕುರುಡಾಗಿ ನಂಬುವ ಫಾಲೋವರ್‌ಗಳಿಗೆ ಇಲ್ಲಿ ಜಾಗವಿಲ್ಲ. ಯಾರಲ್ಲಿ ಪ್ರಶ್ನಿಸುವ ಮನೋಭಾವವಿಲ್ಲವೋ, ಯಾರು ಕೇವಲ ಗುಲಾಮರಂತೆ ಬದುಕಲು ಬಯಸುತ್ತಾರೋ ಅಂತಹವರು ಪ್ರಜಾಕೀಯದಿಂದ ದೂರವಿರುವುದೇ ಲೇಸು ಎಂಬುದನ್ನು ತಿಳಿಸಿದ್ದಾರೆ.

ಸ್ವಾಗತ ಕೋರಿದ್ದು 'ಮಾಲೀಕರಿಗೆ' ಮಾತ್ರ!

ಪ್ರಜಾಕೀಯದ ಅಡಿಪಾಯವೇ 'ಮಾಲೀಕತ್ವ'. "ಇದು ನನ್ನ ದೇಶ, ನನ್ನ ತೆರಿಗೆ ಹಣದಲ್ಲಿ ಸರ್ಕಾರ ನಡೆಯುತ್ತಿದೆ, ನಾನು ಫಾಲೋವರ್ ಅಲ್ಲ, ನಾನು ಈ ವ್ಯವಸ್ಥೆಯ ಮಾಲೀಕ" ಎಂದು ಯಾರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೋ, ಅಂತಹ ಜಾಗೃತ ಜನರಿಗೆ ಮಾತ್ರ ಇಲ್ಲಿ ಕೆಂಪು ಹಾಸಿನ ಸ್ವಾಗತವಿದೆ. ಪ್ರಜೆಗಳು ತಮ್ಮನ್ನು ತಾವು ಮತದಾರರು ಎಂದು ಭಾವಿಸದೆ, ಸರ್ಕಾರದ ಮಾಲೀಕರು ಎಂದು ಭಾವಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂಬುದು ಅವರ ನಿಲುವು ಆಗಿದೆ.

ಪ್ರಜಾಕೀಯದ ಪ್ರತಿಜ್ಞೆ, ಕೆಲಸಗಾರನ ಆಯ್ಕೆ

ಪ್ರಜಾಕೀಯದ ನೋಂದಣಿ ಪೇಜ್‌ನಲ್ಲಿ ಒಂದು ವಿಶಿಷ್ಟ ಅಂಶವಿದೆ. ಅಲ್ಲಿ ಯಾವುದೇ ನಾಯಕನಿಗೆ ಜೈಕಾರ ಹಾಕುವಂತಿಲ್ಲ. ಬದಲಿಗೆ, "ನಾನು ಯಾವುದೇ ಪಕ್ಷ, ಹಣ, ಭರವಸೆ ಅಥವಾ ಪಬ್ಲಿಸಿಟಿಯಿಂದ ಪ್ರಭಾವಿತನಾಗುವುದಿಲ್ಲ. ನನಗೆ ಬೇಕಿರುವುದು ನನ್ನ ಬೇಡಿಕೆಗಳನ್ನು ಈಡೇರಿಸುವ ಒಬ್ಬ ಕೆಲಸಗಾರ" ಎಂದು ಬರೆಯಲಾಗಿದೆ. ಸಂವಿಧಾನದಲ್ಲಿ ಬದಲಾವಣೆ ತರುವವರೆಗೆ ವಿಶ್ರಮಿಸುವುದಿಲ್ಲ ಎಂಬ ಪ್ರತಿಜ್ಞೆ ಕೂಡ ಅಲ್ಲಿ ಅಡಕವಾಗಿದೆ.

ಉಪೇಂದ್ರ ಅವರ ಈ ನಡೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಅವರು ಕೇವಲ ಗ್ಲಾಮರ್ ಆಧಾರಿತ ರಾಜಕೀಯ ಮಾಡುತ್ತಿಲ್ಲ, ಬದಲಿಗೆ ಜನರಲ್ಲಿ ಜಾಗೃತಿ ಮೂಡಿಸುವ 'ಬೌದ್ಧಿಕ ಕ್ರಾಂತಿ'ಗೆ ನಾಂದಿ ಹಾಡಿದ್ದಾರೆ. ಫಾಲೋವರ್‌ಗಳನ್ನಲ್ಲ, ನಾಯಕರನ್ನು ಸೃಷ್ಟಿಸುವುದೇ ಪ್ರಜಾಕೀಯದ ಮೂಲ ಉದ್ದೇಶ. ಏಪ್ರಿಲ್ 1ರಂದು ಮೂರ್ಖರಾಗುವ ಬದಲು, ಬುದ್ಧಿವಂತರಾಗಿ ಆಲೋಚಿಸಲು ಕರೆ ನೀಡುವ ಮೂಲಕ ಉಪ್ಪಿ ಮತ್ತೊಮ್ಮೆ ಸಮಾಜದ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.

Read More
Next Story