
ಸಾಂದರ್ಭಿಕ ಚಿತ್ರ
ಜನರಿಗೆ ಕುಡಿಯುವ ನೀರಿಲ್ಲ, ಕಾಂಗ್ರೆಸ್ಸಿಗರಿಗೆ ಅಧಿಕಾರದ ಹಪಾಹಪಿ; ಬಿಜೆಪಿ ಆಕ್ರೋಶ
ರಾಜ್ಯಾದ್ಯಂತ ಕೆರೆ-ಕುಂಟೆಗಳು ಸಂಪೂರ್ಣವಾಗಿ ಬತ್ತಿ ಹೋಗುತ್ತಿವೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಜನ ಮೈಲುಗಟ್ಟಲೆ ಅಲೆಯುವಂತಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಜಳ ಏರುತ್ತಿದ್ದಂತೆ ಜಲಮೂಲಗಳು ಬತ್ತಿ ಹೋಗುತ್ತಿದ್ದು, ಜನ ಮತ್ತು ಜಾನುವಾರುಗಳು ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಜನರ ಬವಣೆಯನ್ನು ನೀಗಿಸುವ ಬದಲು ಆಂತರಿಕ ಅಧಿಕಾರ ಹಂಚಿಕೆಯ ಕಿತ್ತಾಟದಲ್ಲಿ ಮುಳುಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಈ ಕುರಿತು ವಿಧಾನಸಬೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, "ರಾಜ್ಯಾದ್ಯಂತ ಕೆರೆ-ಕುಂಟೆಗಳು ಸಂಪೂರ್ಣವಾಗಿ ಬತ್ತಿ ಹೋಗುತ್ತಿವೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಜನ ಮೈಲುಗಟ್ಟಲೆ ಅಲೆಯುವಂತಾಗಿದೆ. ಅರಣ್ಯ ಪ್ರದೇಶಗಳಲ್ಲಿ ನೀರಿನ ಮೂಲಗಳು ಒಣಗುತ್ತಿರುವುದರಿಂದ ಕಾಡು ಪ್ರಾಣಿಗಳು ನೀರಿಗಾಗಿ ನಾಡಿನತ್ತ ಬರುತ್ತಿದ್ದು, ಪ್ರಾಣಿ ಸಂಕುಲವೂ ಭೀಕರ ಸಂಕಷ್ಟಕ್ಕೆ ಸಿಲುಕಿದೆ ಆದರೆ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ" ಎಂದಿದ್ದಾರೆ.
ಸಚಿವ ಸ್ಥಾನಕ್ಕೆ ಜಗಳ
ಸರ್ಕಾರವು ಬರ ನಿರ್ವಹಣೆ ಮಾಡಬೇಕಾದ ಈ ಸಮಯದಲ್ಲಿ, ಕಾಂಗ್ರೆಸ್ ನಾಯಕರು ಮಾತ್ರ 'ಮುಖ್ಯಮಂತ್ರಿ ಕುರ್ಚಿ' ಬದಲಾವಣೆ ಮತ್ತು 'ಸಚಿವ ಸ್ಥಾನ'ಗಳಿಗಾಗಿ ಲಾಬಿ ನಡೆಸುವುದರಲ್ಲಿ ತಲೀನರಾಗಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಈ ಅಧಿಕಾರದ ಜಗಳವು ಆಡಳಿತ ಯಂತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಕಿಡಿಕಾರಿದ್ದಾರೆ.
ಭ್ರಷ್ಟಾಚಾರ ಹೆಚ್ಚಳ
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ದುರಾಡಳಿತದಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಈಗ ಜನರನ್ನು ಕುಡಿಯುವ ನೀರಿಗಾಗಿಯೂ ಕಣ್ಣೀರು ಹಾಕುವಂತೆ ಮಾಡಲಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸಚಿವರು ತಮ್ಮ ಹುದ್ದೆಗಳನ್ನು ಉಳಿಸಿಕೊಳ್ಳುಲು. ಶಾಸಕರು ಮಂತ್ರಿ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವ ಹಪಾಹಪಿಯಲ್ಲಿದ್ದರೆ ಹೊರತು, ಬಾಯಾರಿದ ಜನರಿಗೆ ನೀರು ಕೊಡುವ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

