
ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಸಿಎಂಗೆ ನೈತಿಕತೆ ಇಲ್ಲ: ಎಚ್ಡಿಕೆ
ಡಿಸಿಎಂ ಡಿ.ಕೆ. ಶಿವಕುಮಾರ್ ಕುಟುಂಬದಲ್ಲಿ ಎಷ್ಟು ಜನ ಅಧಿಕಾರ ಪಡೆದಿದ್ದಾರೆ. ಅದು ಕೂಡ ಜನರಿಗೆ ಗೊತ್ತಿದೆ. ಹಾಗೆಯೇ ಎರಡು, ಮೂರು ಜನ ಶಾಸಕರಿರುವ ಕುಟುಂಬಗಳು ಸಾಕಷ್ಟಿವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ರಾಜ್ಯ ರಾಜಕೀಯದಲ್ಲಿ ಇದೀಗ ಕುಟುಂಬ ರಾಜಕಾರಣ ಮತ್ತೆ ಮುನ್ನೆಲೆಗೆ ಬಂದಿದೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಚಾರಗಳಲ್ಲಿ ಚರ್ಚೆಯಾಗಬೇಕಿತ್ತು. ಆದರೆ ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ನಡೆಸುವ ಮೂಲಕ ಪ್ರಚಾರ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಹಲವು ಚರ್ಚೆಗೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣದಲ್ಲಿ ಇತ್ತೀಚೆಗೆ ಮಾತನಾಡುತ್ತ, ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣವಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬವನ್ನು ಉದಾಹರಣೆ ನೀಡಿದ್ದರು. ಈ ಕುರಿತು ಶುಕ್ರವಾರ(ಏ.3) ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಅವರ ಮೊದಲ ಮಗ ಅಕಾಲಿಕವಾಗಿ ಮರಣ ಹೊಂದಿದರು. ಅದರ ಬಗ್ಗೆ ನನಗೆ ನೋವಿದೆ. ಇನ್ನೊಬ್ಬ ಮಗನನ್ನು ಅವರು ರಾಜಕಾರಣಕ್ಕೆ ಏಕೆ ಕರೆ ತಂದರು? ಸಮಾಜಸೇವೆ ಮಾಡಲಿಕ್ಕೆ ಅವರನ್ನು ಕರೆತಂದರಾ ಹೇಗೆ ಎಂಬ ಬಗ್ಗೆ ಅವರೇ ಉತ್ತರ ನೀಡಬೇಕಿದೆ ಎಂದು ಕುಟುಕಿದರು.
ಈಗ ರಾಜಕೀಯ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯನವರ ಮಗ ಏನು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಜನರ ಸಮಸ್ಯೆ ಪರಿಹಾರ ಮಾಡುವ ಕೆಲಸ ಮಾಡುತ್ತಿಲ್ಲ. ಬದಲಿಗೆ ರಾಜಕೀಯ ವಸೂಲಿ ಮಾಡಲು ಬಿಟ್ಟಿದ್ದಾರೆ. ಎಚ್.ಡಿ. ದೇವೇಗೌಡರ ಕುಟುಂಬವನ್ನು ದೂರುವ ಎಷ್ಟು ಜನ ನಾಯಕರು ತಮ್ಮ ಕುಟುಂಬದ ಸದಸ್ಯರನ್ನು ರಾಜಕೀಯಕ್ಕೆ ತಂದಿಲ್ಲ? ಆ ಬಗ್ಗೆ ಆರೋಪ ಮಾಡುವವರು ಉತ್ತರ ಕೊಡಬೇಕಲ್ಲವೇ ಎಂದು ಪ್ರಶ್ನಿಸಿದರು.
ಸಿಎಂಗೆ ನೈತಿಕತೆ ಇಲ್ಲ
ಡಿಸಿಎಂ ಡಿ.ಕೆ. ಶಿವಕುಮಾರ್ ಕುಟುಂಬದಲ್ಲಿ ಎಷ್ಟು ಜನ ಅಧಿಕಾರ ಪಡೆದಿದ್ದಾರೆ. ಅದು ಕೂಡ ಜನರಿಗೆ ಗೊತ್ತಿದೆ. ಹಾಗೆಯೇ ಎರಡು, ಮೂರು ಜನ ಶಾಸಕರಿರುವ ಕುಟುಂಬಗಳು ಸಾಕಷ್ಟಿವೆ. ಇದೆಲ್ಲವೂ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದ ವಿಷಯವಲ್ಲ. ರಾಜಕೀಯಕ್ಕಾಗಿ ಇದೆಲ್ಲವನ್ನು ಮಾತನಾಡುವ ಕೆಲಸ ಮಾಡುತ್ತಿದ್ದಾರೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಎಳ್ಳಷ್ಟು ನೈತಿಕತೆ, ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಟೀಕಿಸಿದರು.
ಮುಂದಿನ ಚುನಾವಣೆವರೆಗೂ ಕಾದು ನೋಡಬೇಕು. 2028ಕ್ಕೆ ಕೂಡ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕೊನೆ ಉಸಿರಿರುವವರೆಗೂ ರಾಜಕೀಯ ಮಾಡುತ್ತೇನೆ ಎಂದಿದ್ದಾರೆ. 2013ರ ವಿಧಾನಸಭೆ ಪ್ರಚಾರ ಸಂದರ್ಭದಲ್ಲಿ ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದರು. ಅಧಿಕಾರದ ರುಚಿ ನೋಡಿದ ಮೇಲೆ ನಾನೇ ಪರ್ಮನೆಂಟ್ ಸಿಎಂ ಎನ್ನುತ್ತಿದ್ದಾರೆ. ಮುಂದೆ ಜನರೇ ತೀರ್ಮಾನ ಮಾಡುತ್ತಾರೆ ಎಂದರು.
ಕಾಂಗ್ರೆಸ್ನಿಂದ ʼಗ್ಯಾಸ್ʼ ರಾಜಕೀಯ
ಕೊಲ್ಲಿ ಯುದ್ಧದ ಪರಿಣಾಮ ಇಡೀ ಜಗತ್ತಿನ ಮೇಲಾಗಿದೆ. ಅನೇಕ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಭಾರತ ಮಾತ್ರ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಕೆಲ ದೇಶಗಳಲ್ಲಿ ಲಾಕ್ಡೌನ್ ಪರಿಸ್ಥಿತಿ ಸೃಷ್ಟಿಯಾಗಿದೆ. ಭಾರತದಲ್ಲಿ ಇಂಥಹ ಪರಿಸ್ಥಿತಿ ಇಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಉತ್ತಮವಾಗಿ ಕೆಲಸ ಮಾಡುತ್ತಿದೆ. ಭಾರತ ಮತ್ತು ಜಾಗತಿಕ ಸಂಬಂಧಗಳು ಗಣನೀಯವಾಗಿ ಸುಧಾರಿಸಿವೆ. ಕಳೆದ 11 ವರ್ಷಗಳಲ್ಲಿ ಅನೇಕ ದೇಶಗಳ ಜೊತೆ ಭಾರತವು ಅತ್ಯುತ್ತಮ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಸಾಧಿಸಿದೆ. ಸುಖಾ ಸುಮ್ಮನೆ ಕಾಂಗ್ರೆಸ್ ಪಕ್ಷವು ಅಡುಗೆ ಅನಿಲ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ತಿಳಿಸಿದರು.
ಈ ಹಿಂದೆ ಶಾಸಕರಿಗೆ ಒಂದು ಟಿಕೆಟ್ ಮತ್ತು ಮಂತ್ರಿಗಳಿಗೆ ಎರಡು ಟಿಕೆಟ್ಗಳನ್ನು ಕಳಿಸುವ ಪರಿಪಾಠವನ್ನು ರಾಜ್ಯ ಕ್ರಿಕೆಟ್ ಮಂಡಳಿ ಹೊಂದಿತ್ತು. ಆದರೆ ಈಗಿನ ಶಾಸಕರು ನಮಗೆ ಟಿಕೆಟ್ಗಳು ಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ. ಇಂತಹ ವಿಷಯವನ್ನು ಮುಂದಕ್ಕೆ ತಂದು ಶಾಸಕರು ನಗಪಾಟಲಿಗೆ ಈಡಾಗಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು.
ಶೀಘ್ರವೇ ಎಆರ್ಎಐ ಕೇಂದ್ರ ಸ್ಥಾಪನೆ
ಮಂಡ್ಯ ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರಕ್ಕೆ ಮೇ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸುತ್ತೇವೆ. ರಾಜ್ಯ ಸರ್ಕಾರ ನೀಡಲು ಉದ್ದೇಶಿಸಿರುವ ಸ್ಥಳಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳು ವರದಿ ನೀಡುವುದು ಬಾಕಿ ಇದ್ದು, ಇನ್ನೊಂದು ವಾರದಲ್ಲಿ ವರದಿ ನೀಡುವ ಸಾಧ್ಯತೆ ಇದೆ ಎಂದರು.
ಸರ್ಕಾರ ಎಷ್ಟು ದಿನಗಳಲ್ಲಿ ಸ್ಥಳವನ್ನು ಅಭಿವೃದ್ಧಿಪಡಿಸಿ ನೀಡಲಿದೆ ಎಂಬುದು ಹೇಳಬೇಕು. ಇಂತಹ ಪರೀಕ್ಷಾ ಕೇಂದ್ರವು ಕರ್ನಾಟಕಕ್ಕೆ ಪ್ರಪ್ರಥಮವಾಗಿ ಬರುತ್ತಿದೆ. ಮಂಡ್ಯದಲ್ಲಿ ಈ ಪರೀಕ್ಷಾ ಕೇಂದ್ರ ಸ್ಥಾಪನೆಯಾದರೆ ಮಂಡ್ಯ ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳ ಅಭಿವೃದ್ಧಿ ಮತ್ತು ಇಡೀ ರಾಜ್ಯದಲ್ಲಿ ಆಟೋಮೊಬೈಲ್ ಕ್ಷೇತ್ರ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಎಆರ್ಎಐ ಪರೀಕ್ಷಾ ಕೇಂದ್ರ ಸ್ಥಾಪನೆಯಿಂದ ರಾಜ್ಯದಲ್ಲಿ ಮಂಡ್ಯ ಪ್ರಮುಖ ನಗರವಾಗಿ ಬೆಳೆಯುತ್ತದೆ. ಈ ರೀತಿಯ ಯೋಜನೆಗಳನ್ನು ತರಬೇಕಾದರೆ ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಹಕಾರವು ಮುಖ್ಯ ಎಂದು ತಿಳಿಸಿದರು.
ರಾಜ್ಯದಲ್ಲೇ ಮೊದಲ ಕೇಂದ್ರ
ದೇಶದಲ್ಲಿ ಪುಣೆ, ಚೆನ್ನೈ, ಮಾನೇಸರ್ನಲ್ಲಿ ಮಾತ್ರ ಎಆರ್ಎಐ ಕೇಂದ್ರಗಳಿವೆ. ಈ ಪರೀಕ್ಷೆ ಕೇಂದ್ರಗಳು ನಮ್ಮ ರಾಜ್ಯಕ್ಕೂ ಬರಲಿ ಎಂದು ಅನೇಕ ರಾಜ್ಯಗಳು ಪೈಪೋಟಿ ನಡೆಸುತ್ತಿವೆ. ಆದ್ದರಿಂದ ಇಂತಹ ಒಳ್ಳೆಯ ಅವಕಾಶವನ್ನು ನಾವು ಕೈ ಚೆಲ್ಲುವುದು ಬೇಡ. ಮಂಡ್ಯ ಮತ್ತು ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಯೋಜನೆಯು ಕಾರ್ಯಗತವಾಗಬೇಕು. ಆಟೋಮೊಬೈಲ್ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿ ರಾಜ್ಯವಾಗಿ ಬೆಳೆಯಬೇಕು ಎಂಬುದೇ ನನ್ನ ಆಶಯವಾಗಿದೆ ಎಂದು ಹೇಳಿದರು.
ಹೈಕೋರ್ಟ್ ವಿನ್ಯಾಸದ ಶಾಲೆ
ಹೈಕೋರ್ಟ್ ವಿನ್ಯಾಸದಲ್ಲಿ ಶಾಲೆ
ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರ ನೇತೃತ್ವದಲ್ಲಿ ಶಾಲೆಯ ಅಭಿವೃದ್ಧಿ ಕೆಲಸಗಳು ಉತ್ತಮವಾಗಿ ನಡೆಯುತ್ತಿವೆ. ಪಾಂಡವಪುರ ತಾಲೂಕಿನ ಟಿ.ಎಸ್. ಛತ್ರ ಗ್ರಾಮದ ಶಾಲೆಯ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದಾಗ ನನಗೆ ಬಹಳ ಸಂತೋಷವಾಯಿತು. ಅಲ್ಲದೆ ಈ ಶಾಲೆಯು ಭಾರತೀಯ ನ್ಯಾಯಾಂಗ ಕ್ಷೇತ್ರಕ್ಕೆ ದಿಗ್ಗಜರನ್ನು ನೀಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದ ಇ.ಎಸ್. ವೆಂಕಟರಾಮಯ್ಯ, ಹಾಲಿ ನ್ಯಾಯಾಧೀಶರಾದ ಬಿ.ವಿ. ನಾಗರತ್ನ ಅವರು, ರಾಜ್ಯ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಇಂದ್ರೇಶ್ ಅವರು ಈ ಗ್ರಾಮದವರು. ಈ ಶಾಲೆಗೆ ಜಸ್ಟೀಸ್ ಇ.ಎಸ್. ವೆಂಕಟರಾಮಯ್ಯ ಅವರ ಹೆಸರಿಡಬೇಕು ಎಂದು ಗ್ರಾಮಸ್ಥರು ಬಯಸಿದ್ದಾರೆ. ಜನರ ಇಚ್ಚೆಗೆ ಅನುಗುಣವಾಗಿ ಅವರ ಹೆಸರನ್ನೇ ಶಾಲೆಗೆ ಇಡಲು ಉದ್ದೇಶಿಸಲಾಗಿದೆ. ಈ ಶಾಲೆ ವಿಶೇಷವೆಂದರೆ, ಕಟ್ಟಡವನ್ನು ಹೈಕೋರ್ಟ್ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಕೇವಲ ವಿನ್ಯಾಸ ಮಾತ್ರವಲ್ಲದೆ ಭವಿಷ್ಯದಲ್ಲಿ ಈ ಶಾಲೆಯಿಂದ ಅನೇಕ ದಿಗ್ಗಜರು, ಮಹನೀಯರು ಹೊರಬಂದು ದೇಶ ಕಟ್ಟುವ ಕೆಲಸ ಮಾಡಬೇಕೆನ್ನುವುದು ನಮ್ಮ ಸದುದ್ದೇಶವಾಗಿದೆ ಎಂದರು.
ಐತಿಹಾಸಿಕ ಶಾಲೆಯ ಅಭಿವೃದ್ಧಿಗೆ ಕ್ರಮ ವಹಿಸಲಾಗಿದ್ದು, ಅಗತ್ಯವಿರುವ ಹಣಕಾಸು ನೆರವನ್ನು ನೀಡುವ ಭರವಸೆ ನೀಡಿದ್ದೇನೆ. ಅಲ್ಲದೆ, ಈ ಶಾಲೆಯನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದನಾಗಿ ದತ್ತು ಸ್ವೀಕರಿಸಿ ಅತ್ಯಂತ ಉತ್ತಮ ಸೌಲಭ್ಯಗಳೊಂದಿಗೆ ಮಾದರಿ ಶಾಲೆಯನ್ನಾಗಿ ರೂಪಿಸಲು ತೀರ್ಮಾನಿಸಿದ್ದೇನೆ ಎಂದು ಹೇಳಿದರು.

