
ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
Siddaramaiah|"ಹಬ್ಬದ ದಿನವೂ ಮಾಂಸ ತಿನ್ನುತ್ತೇನೆ... ರಾಹುಕಾಲದಲ್ಲೇ ಬಜೆಟ್ ಮಂಡಿಸಿದ್ದೇನೆ"
ಈ ಬಾರಿಯ ಬಜೆಟ್ ಚರ್ಚೆಯಲ್ಲಿ ಒಟ್ಟು 50 ಸದಸ್ಯರು ಪಾಲ್ಗೊಂಡಿದ್ದು ಒಂದು ದಾಖಲೆಯಾಗಿದೆ. ವಿರೋಧ ಪಕ್ಷದ 21 ಸದಸ್ಯರು ಒಟ್ಟು 12 ಗಂಟೆ 49 ನಿಮಿಷ ಮಾತನಾಡಿದ್ದಾರೆ.
"ನಾನು ಯಾವತ್ತೂ ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ನೋಡಿಕೊಂಡು ಬಜೆಟ್ ಮಂಡಿಸಿದವನಲ್ಲ, ಈ ಹಿಂದೆ ಹಲವು ಬಾರಿ ರಾಹುಕಾಲದಲ್ಲೇ ಬಜೆಟ್ ಮಂಡನೆ ಮಾಡಿದ್ದೇನೆ. ಈ ಬಾರಿ ನಮ್ಮ ಅಧಿಕಾರಿಗಳು, ಮನೆಯವರ ಮಾತು ಕೇಳಿ ರಾಹುಕಾಲದ ಬಳಿಕ ಬಜೆಟ್ ಮಂಡಿಸಿದ್ದೇನೆ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, "ನನಗೆ ಯಾವುದರಲ್ಲೂ ನಂಬಿಕೆ ಇಲ್ಲ. ಯುಗಾದಿ, ಶಿವರಾತ್ರಿ ಹಬ್ಬದ ದಿನ ಯಾರೂ ಮಾಂಸ ತಿನ್ನುವುದಿಲ್ಲ. ಆದರೆ, ನಾನು ತಿನ್ನುತ್ತೇನೆ. ಎಲ್ಲವೂ ಅವರವರ ನಂಬಿಕೆ. ದೇವಸ್ಥಾನದೊಳಗೆ ಮಾತ್ರ ದೇವರು ಇಲ್ಲ, ಎಲ್ಲೆಡೆ ಇದ್ದಾನೆ ಎಂಬುದು ನನ್ನ ನಂಬಿಕೆ. ನಮ್ಮ ಬಜೆಟ್ ಖಾಲಿ ಚೊಂಬಲ್ಲ, ಅದು ಜನರಿಗೆ ಶಕ್ತಿ ತುಂಬುವ ತುಂಬಿದ ಕೊಡ" ಎಂದು ಆರ್ಥಿಕ ಶಿಸ್ತಿನ ಬಗ್ಗೆ ವಿಪಕ್ಷಗಳಿಗೆ ಪಾಠ ಮಾಡಿದರು.
ಚರ್ಚೆಯಲ್ಲಿ 50 ಸದಸ್ಯರ ಭಾಗಿ
ಈ ಬಾರಿಯ ಬಜೆಟ್ ಚರ್ಚೆಯಲ್ಲಿ ಒಟ್ಟು 50 ಸದಸ್ಯರು ಪಾಲ್ಗೊಂಡಿದ್ದು ಒಂದು ದಾಖಲೆಯಾಗಿದೆ. ವಿರೋಧ ಪಕ್ಷದ 21 ಸದಸ್ಯರು ಒಟ್ಟು 12 ಗಂಟೆ 49 ನಿಮಿಷ ಮಾತನಾಡಿದ್ದು, ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರೇ 3 ಗಂಟೆ 6 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದ್ದಾರೆ. ಆಡಳಿತ ಪಕ್ಷದವರು 8 ಗಂಟೆ 43 ನಿಮಿಷ ಹಾಗೂ ಜೆಡಿಎಸ್ ಸದಸ್ಯರು 2 ಗಂಟೆ 55 ನಿಮಿಷ ಮಾತನಾಡಿದ್ದಾರೆ. ಒಟ್ಟಾರೆ 24 ಗಂಟೆ 45 ನಿಮಿಷಗಳ ಕಾಲ ನಡೆದ ಸುದೀರ್ಘ ಚರ್ಚೆ ನಡೆದಿದೆ ಎಂದರು.
ಜಿಡಿಪಿ ಪ್ರಗತಿಯಲ್ಲಿ ರಾಜ್ಯವೇ ಮೊದಲು
ಕೇಂದ್ರ ಸರ್ಕಾರ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹೋಲಿಸಿ, ದೇಶದ ಜಿಡಿಪಿ ಪ್ರಗತಿ ಶೇ. 7.4 ಇದ್ದರೆ, ಕರ್ನಾಟಕದ ಜಿಡಿಪಿ ಶೇ. 8.1 ಕ್ಕೆ ಏರಿಕೆಯಾಗಿದೆ. ಕೇಂದ್ರದ ಬಜೆಟ್‌ನಲ್ಲಿ ಶೇ. 5.6 ಪ್ರಗತಿ ಇದ್ದರೆ, ನಮ್ಮ ರಾಜ್ಯದ್ದು ಶೇ. 9.4 ರಷ್ಟಿದೆ. ವಿತ್ತೀಯ ಕೊರತೆಯನ್ನು ಶೇ. 3 ಒಳಗೆ ಇಡಬೇಕೆಂಬ ನಿಯಮವಿದ್ದರೂ, ನಾವು ಅದನ್ನು ಶೇ. 2.95 ನಲ್ಲಿ ಕಾಯ್ದುಕೊಂಡಿದ್ದೇವೆ. ಸಾಲದ ಪ್ರಮಾಣವೂ ಜಿಡಿಪಿಯ ಶೇ. 25 ಮಿತಿಯೊಳಗೇ ಶೇ. 24.94 ಇದೆ. 2026-27ರ ವೇಳೆಗೆ ಕರ್ನಾಟಕದ ಜಿಡಿಪಿ 33,05,500 ಕೋಟಿ ರೂ. ಆಗಲಿದೆ ಎಂದು ಭವಿಷ್ಯ ನುಡಿದರು.
ಮಾವಿನ ಹಣ್ಣು ಬೇವಿನ ಹಣ್ಣಾಗಲ್ಲ
"ಮಾವಿನ ಹಣ್ಣನ್ನು ಟೀಕೆ ಮಾಡಿದ ತಕ್ಷಣ ಅದು ಬೇವಿನ ಹಣ್ಣಾಗಲು ಸಾಧ್ಯವಿಲ್ಲ. ಜನ ಬುದ್ಧಿವಂತರಿದ್ದಾರೆ, ಅವರಿಗೆ ಮಾವು ಯಾವುದು, ಬೇವು ಯಾವುದು ಎಂದು ತಿಳಿದಿದೆ" ಎಂದರು. ಇದಕ್ಕೆ ತಕ್ಷಣವೇ ಎದ್ದು ನಿಂತ ಪ್ರತಿಪಕ್ಷದ ನಾಯಕ ಆರ್. ಅಶೋಕ್, "ನಾನು ಮಾವಿನ ಹಣ್ಣು ಅಂತಲೇ ಹೇಳಿದ್ದೇನೆ, ಆದರೆ ಅದು ಯಾಕೋ ಈ ಬಾರಿ ಹುಳಿಯಾಗಿದೆ ಅಂದಿದ್ದೀನಿ ಅಷ್ಟೆ" ಎಂದು ಕಾಲೆಳೆದರು.
ಯಾರನ್ನು ದಾರಿ ತಪ್ಪಿಸಿಲ್ಲ
ಆರ್. ಅಶೋಕ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರೆತ್ತದೆ, "ನಿಮ್ಮ ಪಕ್ಕದಲ್ಲಿದ್ದವರನ್ನು ದಾರಿ ತಪ್ಪಿಸಿ ಅಡ್ರೆಸ್ ಇಲ್ಲದಂತೆ ಮಾಡಿದ್ದೀರಿ, ಅವರು ದೇವಸ್ಥಾನ ಸುತ್ತುತ್ತಿದ್ದಾರೆ" ಎಂದು ಕಿಚಾಯಿಸಿದರು. ಇದಕ್ಕೆ ಉತ್ತರಿಸಿದ ಸಿಎಂ, "ಅವರು ನನ್ನ ಸಹೋದ್ಯೋಗಿ, ಪಕ್ಷದ ವಿಚಾರಗಳನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾನು ಯಾರನ್ನೂ ದಾರಿ ತಪ್ಪಿಸಿಲ್ಲ, ವಿರೋಧ ಪಕ್ಷದವರಿಗೆ ರಾಜಕೀಯ ನೀರು ಕುಡಿಸುತ್ತಲೇ ಇರುತ್ತೇನೆ" ಎಂದು ಚಾಟಿ ಬೀಸಿದರು.

