Siddaramaiah | AICC maze around CM; High command breaks by targeting close associates?
x

ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌

Siddaramaiah vs DK Shivakumar| ಸಿಎಂ ಸುತ್ತ ಎಐಸಿಸಿ ಚಕ್ರವ್ಯೂಹ; ಆಪ್ತರನ್ನೇ ಗುರಿಯಾಗಿಸಿ ಹೈಕಮಾಂಡ್ ಬ್ರೇಕ್?

ಸಂಪುಟ ಪುನಾರಚನೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆಯಂತೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಭೇಟಿ ಮಾಡಿದ್ದರೂ, ಇಲ್ಲಿಯವರೆಗೆ ಯಾವುದೇ ‘ಗ್ರೀನ್ ಸಿಗ್ನಲ್’ ಸಿಕ್ಕಿಲ್ಲ.


Click the Play button to hear this message in audio format

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಮೂಲಕ ಕಟ್ಟಿ ಹಾಕುವ ತಂತ್ರಗಾರಿಕೆ ನಡೆಯುತ್ತಿದೆಯೇ? ಎಐಸಿಸಿ ಅಂಗಳದಲ್ಲಿ ಸಿದ್ದರಾಮಯ್ಯ ಆಪ್ತರನ್ನೇ ಗುರಿಯಾಗಿಸಿಕೊಂಡು ಒಂದೊಂದೇ ದಾಳ ಉರುಳಿಸಲಾಗುತ್ತಿದೆಯೇ?

ರಾಜ್ಯ ರಾಜಕೀಯದ ಅಂಗಳದಲ್ಲಿ ಈ ಹೊಸ ಚರ್ಚೆ ಕಾಳ್ಗಿಚ್ಚಿನಂತೆ ಹಬ್ಬಿದೆ ಹಾಗೂ ಚರ್ಚೆಗೆ ಕಾರಣವಾಗಿದೆ.

ಸಚಿವ ಸಂಪುಟ ಪುನಾರಚನೆಯ ನೆಪದಲ್ಲಿ ಸಿದ್ದರಾಮಯ್ಯ ಅವರ ಆಪ್ತ ಬಳಗವನ್ನೇ ಕೆಳಗಿಳಿಸುವ ಯೋಜನೆ ತಯಾರಾಗಿದೆಯಾ ಎಂಬ ಮಾತುಗಳು ಕೇಳಿಬರುತ್ತಿದೆ. ಕಳೆದ ಕೆಲವು ದಿನಗಳಿಂದ ದೆಹಲಿ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ.

ಕೆ.ಎನ್‌. ರಾಜಣ್ಣ, ಗೋವಿಂದರಾಜ್‌ಗೆ ‘ನೋ ಎಂಟ್ರಿ’

ಮಾಜಿ ಸಚಿವ ಕೆ.ಎನ್ ರಾಜಣ್ಣ ಹಾಗೂ ಈ ಹಿಂದೆ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಗೋವಿಂದರಾಜು ಹಾಗೂ ನಸೀರ್‌ ಅಹಮದ್‌ ಅವರಂತಹ ಆಪ್ತರ ವಿರುದ್ಧ ಹೈಕಮಾಂಡ್ ಶಿಸ್ತು ಕ್ರಮ ತೆಗೆದುಕೊಂಡಾಗ, ಸ್ವತಃ ಸಿಎಂ ವಿವರಣೆ ನೀಡಲು ಮುಂದಾದರೂ ಎಐಸಿಸಿ ನಾಯಕರು ಕಾಲಾವಕಾಶ ನೀಡದೆ, ವಜಾಗೊಳಿಸುವಂತೆ ಸೂಚಿಸಿದ್ದರು. ಇದೀಗ ಮತ್ತೆ ಸಚಿವ ಸಂಪುಟ ವಿಸ್ತರಣೆಯಾದರೆ ಮತ್ತೆ ಇವರಿಗೆ ಸ್ಥಾನಮಾನ ಸಿಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಖರ್ಗೆ-ಸಿದ್ದು ಭೇಟಿಯಲ್ಲೂ ಸಿಗದ ಸ್ಪಷ್ಟನೆ

ಸಂಪುಟ ಪುನಾರಚನೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆಯಂತೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಭೇಟಿ ಮಾಡಿದ್ದರೂ, ಇಲ್ಲಿಯವರೆಗೆ ಯಾವುದೇ ‘ಗ್ರೀನ್ ಸಿಗ್ನಲ್’ ಸಿಕ್ಕಿಲ್ಲ. ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿದ್ದರೂ ಹೈಕಮಾಂಡ್‌ನ ಈ ಮೌನ ಸಿದ್ದರಾಮಯ್ಯ ಪಾಳಯದಲ್ಲಿ ಆತಂಕ ಮೂಡಿಸಿದೆ. ಆದ್ದರಿಂದಲೇ ಸಿಎಂ ಆಪ್ತ ವಲಯದ ನಾಯಕರು ಸಮಯ ಸಿಕ್ಕಾಗಲೆಲ್ಲಾ, ನಾಯಕತ್ವ ಬದಲಾವಣೆ ಬೇಡ, ಸಚಿವ ಸಂಪುಟ ಪುನರ್‌ ರಚನೆಯಾಗಲಿ ಎಂದು ಹೇಳುತ್ತಿದ್ದಾರೆ.

ಡಿಸಿಎಂ ಡಿಕೆಶಿ ತಂತ್ರಗಾರಿಕೆ?

ರಾಜ್ಯ ಕಾಂಗ್ರೆಸ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರೋಕ್ಷ ತಂತ್ರಗಾರಿಕೆ ಇದೆ ಎಂಬ ಚರ್ಚೆ ಜೋರಾಗಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಅವರ ಆಪ್ತರನ್ನು ಸ್ಥಾನಮಾನಗಳಿಂದ ದೂರವಿಡುವುದು, ಮತ್ತೊಂದೆಡೆ ಹೈಕಮಾಂಡ್ ಮೂಲಕ ಸಿಎಂ ಅಧಿಕಾರಕ್ಕೆ ಮಿತಿ ಹೇರುವುದು - ಇದು ಡಿಕೆಶಿ ಅವರ ಮಾಸ್ಟರ್ ಪ್ಲಾನ್ ಇರಬಹುದಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.

ಮುಂದಿನ ಗುರಿ ಜಮೀರ್ ಅಹಮದ್?

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಇದಕ್ಕೆ ಕಾರಣರಾದವರನ್ನು ಪಟ್ಟಿ ಮಾಡುತ್ತಿದೆ. ಈಗಾಗಲೇ ಹಲವು ನಾಯಕರು ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಈ ಬಿಕ್ಕಟ್ಟಿನ ಬಿಸಿ ವಸತಿ ಸಚಿವ ಜಮೀರ್ ಅಹಮದ್ ಅವರಿಗೂ ತಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.

"ದಾವಣಗೆರೆ ಉಪಚುನಾವಣೆ ವಿಚಾರದಲ್ಲಿ ಅಸಮಾಧಾನ ಇದ್ದಿದ್ದು ನಿಜ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಸ್ವಲ್ಪ ಗೊಂದಲವಿತ್ತು. ಆದರೆ ಈಗ ಎಲ್ಲವೂ ಸರಿಹೋಗಿದೆ. ನಮ್ಮ ಪಕ್ಷದ ಅಭ್ಯರ್ಥಿಗೆ ಸಮುದಾಯದ ಬೆಂಬಲವಿದ್ದು, ಭಾರಿ ಬಹುಮತದಿಂದ ಗೆಲ್ಲುತ್ತೇವೆ," ಎಂದು ಸಚಿವ ಜಮೀರ್‌ ಅಹಮದ್‌ ಇತ್ತೀಚೆಗೆ ತಿಳಿಸಿದ್ದರು.

ಅಲ್ಪಸಂಖ್ಯಾತ ಘಟಕವೇ ವಿಸರ್ಜನೆ

ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡಬೇಕು ಎಂದು ಅಲ್ಪಸಂಖ್ಯಾತ ನಾಯಕರು ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದರು. ಹಲವು ಸುತ್ತಿನ ಮಾತುಕತೆಗಳ ನಂತರ ಅಂತಿಮವಾಗಿ ದಿವಂಗತ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ್‌ ಮಲ್ಲಿಕಾರ್ಜುನ್‌ಗೆ ಟಿಕೆಟ್‌ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಮುಸ್ಲಿಂ ಸಮುದಾಯದ ನಾಯಕರು ನಿರೀಕ್ಷಿತ ಪ್ರಮಾಣದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ತಮ್ಮದೇ ಪಕ್ಷದ ಶಾಸಕ ರಿಜ್ವಾನ್‌ ಅರ್ಷದ್‌ ಹಾಗೂ ಎಂಎಲ್‌ಸಿ ಸಲೀಂ ಅಹಮದ್‌ ದೂರಿದ್ದರು.

ಮತದಾನದ ಪ್ರಕ್ರಿಯೆ ನಂತರ ಈ ಅಸಮಾಧಾನ ಸ್ಫೋಟಗೊಂಡಿದ್ದು, ಆರಂಭದಲ್ಲಿ ಎಂಎಲ್‌ಸಿ ಅಬ್ದುಲ್‌ ಜಬ್ಬಾರ್‌ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರಿಗೆ ಬೆಂಬಲವೆಂಬಂತೆ ದಾವಣಗೆರೆ ಅಲ್ಪಸಂಖ್ಯಾತ ನಾಯಕರೂ ರಾಜೀನಾಮೆ ಸಲ್ಲಿಸಿದ್ದರು. ಈ ಬೆಳವಣಿಗೆ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಹೊಸ ಅಲ್ಪಸಂಖ್ಯಾತ ಘಟಕ ರಚಿಸುವುದಾಗಿ ತಿಳಿಸಿ, ಇಡೀ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿ ಆದೇಶಿಸಿದ್ದರು.

Read More
Next Story