ರೆಸಾರ್ಟ್ ರಾಜಕಾರಣದ ನಡುವೆ ಒಡಿಶಾ ಕೈ ಶಾಸಕರಿಂದ ಮೈಸೂರು ಪ್ರವಾಸ: ಭಾನುವಾರ ತವರಿಗೆ ವಾಪಸ್
x
ಮೈಸೂರಿನ ಅಂಭಾವಿಲಾಸ ಅರಮನೆಗೆ ಭೇಟಿ ನೀಡಿದ್ದ ಒಡಿಶಾ ಶಾಸಕರ ತಂಡ

ರೆಸಾರ್ಟ್ ರಾಜಕಾರಣದ ನಡುವೆ ಒಡಿಶಾ 'ಕೈ' ಶಾಸಕರಿಂದ ಮೈಸೂರು ಪ್ರವಾಸ: ಭಾನುವಾರ ತವರಿಗೆ ವಾಪಸ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿಯಿಂದ ಕರ್ನಾಟಕಕ್ಕೆ ಶಿಫ್ಟ್ ಆಗಿದ್ದ ಒಡಿಶಾದ ಕಾಂಗ್ರೆಸ್ ಶಾಸಕರು, ಶನಿವಾರ ಬಿಗಿ ಭದ್ರತೆಯಲ್ಲಿ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ರಿಲ್ಯಾಕ್ಸ್ ಆಗಿದ್ದಾರೆ.


Click the Play button to hear this message in audio format

ಒಡಿಶಾ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಹಾಗೂ 'ಆಪರೇಷನ್ ಕಮಲ'ದ ಭೀತಿಯಿಂದ ಕರ್ನಾಟಕಕ್ಕೆ ಶಿಫ್ಟ್ ಆಗಿರುವ ಒಡಿಶಾದ ಕಾಂಗ್ರೆಸ್ ಶಾಸಕರು, ಬಿಡದಿಯ ರೆಸಾರ್ಟ್ ವಾಸ್ತವ್ಯದ ನಡುವೆಯೇ ಶನಿವಾರ ಮೈಸೂರು ಪ್ರವಾಸ ಕೈಗೊಂಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆತಿಥ್ಯದಲ್ಲಿ ಬಿಡದಿಯ ವಂಡರ್‌ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಈ ಶಾಸಕರು, ಶನಿವಾರ ಬೆಳಗ್ಗೆ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಮುಖಮಾಡಿದ್ದು, ಪ್ರವಾಸ ಮುಗಿಸಿ ರಾತ್ರಿ ವೇಳೆಗೆ ರೆಸಾರ್ಟ್‌ಗೆ ವಾಪಸಾಗಲಿದ್ದಾರೆ. ಮೈಸೂರು ಪ್ರವಾಸದ ನೆಪದಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಶಾಸಕರು, ಸೋಮವಾರ ನಡೆಯಲಿರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಒಡಿಶಾಗೆ ಮರಳಲಿದ್ದಾರೆ.

ಶುಕ್ರವಾರವಷ್ಟೇ ರೆಸಾರ್ಟ್‌ಗೆ ಭೇಟಿ ನೀಡಿ ಒಡಿಶಾ ಶಾಸಕರೊಂದಿಗೆ ಚರ್ಚೆ ನಡೆಸಿದ್ದ ಡಿ.ಕೆ. ಶಿವಕುಮಾರ್ ಅವರು, ಶಾಸಕರು ಮೈಸೂರು ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು. ಅದರಂತೆಯೇ ಇಂದು ಬಿಗಿ ಭದ್ರತೆಯ ನಡುವೆ ಒಡಿಶಾದ ಎಂಟು ಮಂದಿ ಶಾಸಕರು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ತೆರಳಿದ್ದಾರೆ. ಈ ಮೂಲಕ ರೆಸಾರ್ಟ್ ರಾಜಕಾರಣವನ್ನು ಕೇವಲ 'ಪ್ರವಾಸ' ಹಾಗೂ 'ಆತಿಥ್ಯ' ಎಂದು ಬಿಂಬಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ದೇವಿ ದರ್ಶನ ಪಡೆದ ಒಡಿಶಾದ ಕಾಂಗ್ರೆಸ್‌ ಶಾಸಕರು

ಒಡಿಶಾ ಶಾಸಕರನ್ನು ಪೊಲೀಸ್ ಬೆಂಗಾವಲು ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರ ಕಣ್ಗಾವಲಿನಲ್ಲಿ ಐಷಾರಾಮಿ ಎಸಿ ಬಸ್‌ ಮೂಲಕ ಪ್ರವಾಸಕ್ಕೆ ಕರೆದೊಯ್ಯಲಾಗಿದ್ದು, ಮೊದಲಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ ಶಾಸಕರು ದೇವಿಯ ದರ್ಶನ ಪಡೆದಿದ್ದಾರೆ. ಬಳಿಕ ಅಂಬಾವಿಲಾಸ ಅರಮನೆಯ ಸೌಂದರ್ಯವನ್ನು ಕಣ್ತುಂಬಿಕೊಂಡ ಶಾಸಕರು, ಮೈಸೂರಿನ ಹೆಮ್ಮೆಯ ಕೆಎಸ್‌ಐಸಿ (KSIC) ಘಟಕದಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಕೆಲ ಶಾಸಕರು ಮೈಸೂರು ರೇಷ್ಮೆ ಸೀರೆ ಖರೀದಿಸಿದ್ದಾರೆ ಎನ್ನಲಾಗಿದೆ. ಬಿಡದಿ ಭಾಗದ ಸ್ಥಳೀಯ ಕಾಂಗ್ರೆಸ್‌ ಮುಖಂಡರೊಂದಿಗೆ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್‌ ನಟರಾಜ್‌ ನೇತೃತ್ವದಲ್ಲಿ ಪ್ರವಾಸ ನಡೆಯುತ್ತಿದೆ.

ಬಿಜೆಪಿಯ ಗಾಳಕ್ಕೆ ಸಿಲುಕದಂತೆ ಒಡಿಶಾ ಕಾಂಗ್ರೆಸ್ ಶಾಸಕರಾದ ರಾಜನ್ ಎಕ್ಕ, ಅಶೋಕ್ ದಾಸ್, ಅಪ್ಪಲ ಕುಮಾರ್ ಸ್ವಾಮಿ, ಮಂಗು ಕಿಲ್ಲೋ, ಪವಿತ್ರ ಸೌಂತಾ, ನೀಲಮಾಧವ್ ಹಿಕ್ಕ, ಪ್ರಫುಲ್ಲ ಪ್ರಧಾನ್ ಹಾಗೂ ಸತ್ಯಜಿತ್ ಗೋಮಂಗೋ ಅವರನ್ನು ಡಿ.ಕೆ. ಶಿವಕುಮಾರ್ ಅವರ ಉಸ್ತುವಾರಿಯಲ್ಲಿ ವಂಡರ್‌ಲಾ ರೆಸಾರ್ಟ್‌ನಲ್ಲಿರಿಸಲಾಗಿತ್ತು. ಶುಕ್ರವಾರ ಸಂಜೆ ರೆಸಾರ್ಟ್‌ಗೆ ತೆರಳಿದ್ದ ಡಿಕೆಶಿ, ಎಐಸಿಸಿ ಕಾರ್ಯದರ್ಶಿ ಮಯೂರ್ ಜೈಕುಮಾರ್, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಸಿ.ಪಿ. ಯೋಗೇಶ್ವರ್ ಹಾಗೂ ಒಡಿಶಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರೊಂದಿಗೆ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

Read More
Next Story